ಉಡುಪಿ: (ಉಡುಪಿ ಬುಲೆಟಿನ್ ವರದಿ) ಉಡುಪಿ ಜಿಲ್ಲೆಯ ಜನರ ಹೃದಯವೈಶಾಲ್ಯತೆಯನ್ನು ಮೆಚ್ಚಿದ್ದೇನೆ. ಅವರ ಪ್ರೀತಿ, ಅಭಿವೃದ್ಧಿಪರ ಚಿಂತನೆ, ಸಂವೇದನಾಶೀಲತೆ ಶ್ಲಾಘನೀಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಗುರುವಾರ, ಉಡುಪಿ ಜಿಲ್ಲಾಸ್ಪತ್ರೆಯ ನೂತನ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ತಮ್ಮ ಮಾತಿನುದ್ಧಕ್ಕೂ ಉಡುಪಿಯ ಜನರ ಗುಣಗಾನವನ್ನು ಮಾಡಿದರು.
ಜಿಲ್ಲಾ ಉಸ್ತುವಾರಿಯಾಗಿದ್ದ ಸಂದರ್ಭದಲ್ಲಿ ಇಲ್ಲಿಯ ಜನತೆ ನೀಡಿದ ಪ್ರೀತಿ ಮರೆಯಲು ಸಾಧ್ಯವಿಲ್ಲ. ಎಲ್ಲಾ ಶಾಸಕರುಗಳು ಸಹಕರಿಸಿದರು. ಜನರು ಅವರ ವಯಕ್ತಿಕ ವಿಚಾರಕ್ಕಿಂತ ಬೇರೆಯವರ ಒಳಿತನ್ನೇ ಸದಾ ಬಯಸುವ ಜಿಲ್ಲೆಯಾವುದಾದರೂ ಇದ್ದರೆ ಅದು ಉಡುಪಿ ಜಿಲ್ಲೆ ಮಾತ್ರ. ಇಂತಹ ಜಿಲ್ಲೆಯ ಉಸ್ತುವಾರಿ ಸಚಿವನಾಗಿದ್ದು ನನ್ನ ಸೌಭಾಗ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬದುಕಿನ ದಿಕ್ಕು ಬದಲಿಸಿದ ಕೋವಿಡ್:
ಕೋವಿಡ್ 1ನೇ ಮತ್ತು 2ನೇ ಅಲೆ ಬದುಕಿನ ದಿಕ್ಕನ್ನೇ ಬದಲಾಯಿಸಿದೆ. ಆದರೂ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಆರೋಗ್ಯ ಮೂಲಸೌಕರ್ಯದಲ್ಲಿ ಗಣನೀಯ ಪ್ರಮಾಣದಲ್ಲಿ ಅಭಿವೃದ್ಧಿಯಾಗಿದೆ. ಸ್ವಾತಂತ್ರ್ಯ ನಂತರ ನಮ್ಮ ಆರೋಗ್ಯ ಮೂಲಸೌಕರ್ಯದಲ್ಲಿ ಹೇಳುವಷ್ಟು ಅಭಿವೃದ್ಧಿ ಆಗಿರಲಿಲ್ಲ. ಆದರೆ ಕೋವಿಡ್ ಆಗಮನದ ನಂತರದ ದಿನಗಳಲ್ಲಿ ದೇಶಾದ್ಯಂತ ಹೆಲ್ತ್ ಇನ್ಫ್ರಾಸ್ಟ್ರಕ್ಚರ್ ಕ್ಷೇತ್ರದಲ್ಲಿ ಬಹಳಷ್ಟು ಸುಧಾರಣೆಗಳಾಗಿವೆ. ವ್ಯಕ್ತಿಯ ನೈಜ ಸಾಮರ್ಥ್ಯ ಅನಾವರಣ ಆಗುವುದು ಕಷ್ಟದ ಸಮಯದಲ್ಲಿ ಮಾತ್ರ. ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕಾರ್ಯ ಶ್ಲಾಘನೀಯ:
ಕೋವಿಡ್ 1 ಮತ್ತು 2ನೇ ಅಲೆಯ ಸವಾಲನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಮರ್ಥವಾಗಿ ಎದುರಿಸಿದ ಕಾರಣ ಈಗ ಕೋವಿಡ್ ಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗಿದೆ. ಅವರು ರಚಿಸಿದ ಟಾಸ್ಕ್ ಫೋರ್ಸ್ ಗಳಿಂದ ಸೋಂಕನ್ನು ತಡೆಯಲು ಸಾಧ್ಯವಾಯಿತು. ಇದರಲ್ಲಿ ಅಂದಿನ ಮತ್ತು ಇಂದಿನ ಆರೋಗ್ಯ ಸಚಿವ ಡಾ. ಸುಧಾಕರ್ ಪಾತ್ರವೂ ಶ್ಲಾಘನೀಯ. ಕೊರೊನಾ ಸೇನಾನಿಗಳು ಕೂಡ ಸೋಂಕು ತಡೆಯುವಲ್ಲಿ ಕ್ರಿಯಾಶೀಲ ಪ್ರಯತ್ನ ನಡೆಸಿದ್ದಾರೆ ಎಂದರು.
ಉಡುಪಿಯ ಶ್ರೀಕೃಷ್ಣನ ಅನುಗ್ರಹ:
ಶಾಸಕ ಕೆ. ರಘುಪತಿ ಭಟ್ ರವರು ನಾನು ಉಸ್ತುವಾರಿ ಸಚಿವನಾಗಿದ್ದಾಗ ಜಿಲ್ಲಾಸ್ಪತ್ರೆಯ ವಿಚಾರ ಗಮನಕ್ಕೆ ತಂದಿದ್ದರು. ಅಂದಿನಿಂದ ನಾವೆಲ್ಲರೂ ಬಹಳಷ್ಟು ಪ್ರಯತ್ನಿಸಿದ್ದೆವು. ಇದೀಗ ನಾನು ಮುಖ್ಯಮಂತ್ರಿಯಾಗಿ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡುತ್ತಿರುವುದು ಉಡುಪಿಯ ಶ್ರೀ ಕೃಷ್ಣನ ಅನುಗ್ರಹ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಉಡುಪಿಗೆ ವೈದ್ಯಕೀಯ ಕಾಲೇಜು:
ಎಲ್ಲಾ ವಿಷಯಗಳಲ್ಲೂ ಮುಂದಿರುವ ಉಡುಪಿಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲದಿದ್ದರೆ ಹೇಗೆ? ಪಿಪಿಪಿ ಮಾದರಿಯಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜುಗಳನ್ನು ಮಂಜೂರು ಮಾಡುವ ಮೊದಲ ಪಟ್ಟಿಯಲ್ಲಿ ಉಡುಪಿ ಜಿಲ್ಲೆಯ ಹೆಸರು ಇರಲಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು. ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಸಂಪೂರ್ಣವಾಗಿ ಸರ್ಕಾರವೇ ನಿರ್ವಹಿಸುವ ಕುರಿತು ಮುಂದಿನ ದಿನಗಳಲ್ಲಿ ಆದೇಶ ಹೊರಡಿಸಲಾಗುವುದು ಎಂದರು.
ಉಡುಪಿಯ ಜನರು ಸಹಾನುಭೂತಿಯನ್ನು ತೋರಿಸುತ್ತಾರೆ. ತುಂಬಾ ತಾಳ್ಮೆಯ ವರು. ಮಣಿಪಾಲ ಪರ್ಕಲದ ರಸ್ತೆ ಮದ್ಯ ಸಾವಿರಾರು ಹೊಂಡಗಳಿದ್ದು ಮನುಷ್ಯರು ನರಕಯಾತನೆ ಪಡುತಿದ್ದಾರೆ. ಕೇಂದ್ರ,ರಾಜ್ಯ,ಪಂಚಾಯತ್, ಮುನ್ಸಿಪಾಲಿಟಿ, ರಾಷ್ಟ್ರೀಯ ರಸ್ತೆ ನಿಗಮ yaa ದೇಶದ ಇತರ 130 ಕೋಟಿ ಜನರು ಯಾರೂ ಇದನ್ನು ಸರಿಮಾದಲಿಲ್ಲ. ಉಡುಪಿ ಜನರು ತುಂಬಾ ಸಹಾನುಭೂತಿ ಗಳು. ಹೊಸ ರಸ್ತೆ ಮೆಲ್ಲ ಆಗಲಿ. ಇದ್ದ ರಸ್ತೆ ಯಲ್ಲಿರುವ ಹೊಂದ ತುಂಬಿಸುವವರು ಇಡೀ ದೇಶದಲ್ಲಿ ಯಾರೂ ಇಲ್ಲದಿದ್ದುದೆ ಒಂದು ಬೇಸರ. ಮುಂದಿನ ಚುನಾವಣೆ ಹೊತ್ತಿಗೆ ಹೊಂಡಗಳನ್ನು ಮಣ್ಣು ತುಂಬಿಸಿ ಒಂದೆರಡು ದಿನಗಳಿಗೆ ಸರಿಮಾಡಬಹುದು.