ಉಡುಪಿ: ಮಕ್ಕಳು, ಯುವಜನಾಂಗವನ್ನು ಅಂತಾರಾಷ್ಟ್ರೀಯ ಸ್ಪರ್ಧೆ ಎದುರಿಸಲು ಅಣಿಗೊಳಿಸುವ ನಿಟ್ಟಿನಲ್ಲಿ ನೂತನ ಶಿಕ್ಷಣ ನೀತಿ ಜಾರಿ ಮೂಲಕ ಸುಶಿಕ್ಷಿತ, ಸುರಕ್ಷಿತ, ಸಮೃದ್ಧ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸು ನನಸು ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಇಂದು ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಸಂಸ್ಥೆಗಳ ವತಿಯಿಂದ ಪೂರ್ಣಪ್ರಜ್ಞ ಕಾಲೇಜಿನ ನೂತನ ವಿಜ್ಞಾನ ಸಮುಚ್ಚಯದ ಯೋಜನೆಗೆ ಶಿಲಾನ್ಯಾಸ ಹಾಗೂ ಪೂರ್ಣಪ್ರಜ್ಞ ಪ.ಪೂ.ಕಾಲೇಜಿನ ಗಣಕ ವಿಜ್ಞಾನ ಪ್ರಯೋಗಾಲಯ ಉದ್ಘಾಟಿಸಿ ಪೂರ್ಣಪ್ರಜ್ಞ ಅಡಿಟೋರಿಯಂನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದರು.
ಇಂದಿನ ದಿನಗಳಲ್ಲಿ ತರಗತಿ ಕೋಣೆಗಳ ಶಿಕ್ಷಣ ಹಾಗೂ ಆನ್ ಲೈನ್, ಕಂಪ್ಯೂಟರ್, ಆ್ಯಪ್ ಗಳ ನಡುವೆ ಸ್ಪರ್ಧೆ ತಲೆದೋರಿದ್ದು, ತಂತ್ರಜ್ಞಾನವು ಮನುಷ್ಯನನ್ನು ಓವರ್ ಟೇಕ್ ಮಾಡುತ್ತಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ನಿಂತ ನೀರಾಗದೆ ಹೊಸತನಕ್ಕೆ ತೆರೆದುಕೊಂಡು ಡಿಜಿಟಲ್ ಕಂಪ್ಯೂಟರ್ ಯುಗದಲ್ಲಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಬೇಕು ಎಂದರು.
ಹಿಂದಿನ ಮೆಕಾಲೆ ಶಿಕ್ಷಣ ಪದ್ದತಿಯಲ್ಲಿ ಮಕ್ಕಳ ವಿಕಸನಕ್ಕೆ ಅವಕಾಶ ವಿರಳವಾಗಿದ್ದು 21ನೇ ಶತಮಾನಕ್ಕೆ ಮಕ್ಕಳ ತಯಾರಿಗೆ ಜಾರಿಗೊಳಿಸಿದ ರಾಷ್ಟ್ರೀಯ ಶಿಕ್ಷಣ ನೀತಿಯ ಅವಕಾಶದ ಲಾಭವನ್ನು ಪಡೆದುಕೊಳ್ಳಬೇಕು ಎಂದರು. ಹಣ ಮತ್ತು ಭೂಮಿಗಿಂತ ಜ್ಞಾನಕ್ಕೆ ಮಹತ್ವವಿದೆ. ಈ ಜಗತ್ತಿನಲ್ಲಿ ಪ್ರಜ್ಞೆಯ ಕೊರತೆ ಉಳ್ಳವರಿಗೆ ಜ್ಞಾನವುಳ್ಳವರು ಪ್ರಜ್ಞೆ ಮೂಡಿಸಬೇಕು ಎಂದು ಮುಖ್ಯಮಂತ್ರಿ ಹೇಳಿದರು.
ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ರಾಜ್ಯದ ಇಂಧನ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ವಿ. ಸುನೀಲ್‌ಕುಮಾರ್, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕೆ. ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಪೂರ್ಣಪ್ರಜ್ಞ ಪ.ಪೂ.ಕಾಲೇಜು ಪ್ರಾಂಶುಪಾಲೆ ಪ್ರತಿಮಾ ಬಾಳಿಗಾ, ಪೂರ್ಣಪ್ರಜ್ಞ ಪ.ಪೂ.ಕಾಲೇಜು ಆಡಳಿತ ಸಮಿತಿ ಗೌರವ ಕಾರ್ಯದರ್ಶಿ ಹಾಗೂ ನ್ಯಾಯವಾದಿ ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.
ಪೂರ್ಣಪ್ರಜ್ಞ ಕಾಲೇಜು ಆಡಳಿತ ಸಮಿತಿ ಗೌರವ ಕಾರ್ಯದರ್ಶಿ ಡಾ.ಜಿ.ಎಸ್.ಚಂದ್ರಶೇಖರ್ ಸ್ವಾಗತಿಸಿ, ಪೂರ್ಣಪ್ರಜ್ಞ ಕಾಲೇಜು ಪ್ರಾಂಶುಪಾಲ ಡಾ.ರಾಘವೇಂದ್ರ ಎ ವಂದಿಸಿದರು. ರಮಾನಂದ ರಾವ್ ನಿರೂಪಿಸಿದರು.