ಕೆಮ್ಮಣ್ಣು: ಸರಕಾರಿ ಪದವಿಪೂರ್ವ ಕಾಲೇಜು ಕೆಮ್ಮಣ್ಣು ಹಾಗೂ ಹಳೆ ವಿದ್ಯಾರ್ಥಿ ಸಂಘ ಇವರ ನೇತೃತ್ವದಲ್ಲಿ ತೋನ್ಸೆ ಗ್ರಾಮ ಪಂಚಾಯತ್ ಕೆಮ್ಮಣ್ಣು, ಗಣಪತಿ ಕೋ ಆಪರೇಟಿವ್ ಸೊಸೈಟಿ, ನಿರ್ಮಲ ತೋನ್ಸೆ, ಧರ್ಮಸ್ಥಳ ಸ್ವಸಹಾಯ ಸಂಘಗಳ ಒಕ್ಕೂಟ, ಲಯನ್ಸ್ ಕ್ಲಬ್ ಕಲ್ಯಾಣಪುರ, ಲಯನ್ಸ್ ಕ್ಲಬ್ ಸಂತೆಕಟ್ಟೆ, ಲಯನ್ಸ್ ಕ್ಲಬ್ ಇಂದ್ರಾಳಿ, ಲಯನ್ಸ್ ಕ್ಲಬ್ ಚೇತನ, ಸ್ವಚ್ಛ ಭಾರತ್ ಫ್ರೆಂಡ್ಸ್, ಕೆಮ್ಮಣ್ಣು ಕ್ರಿಕೆಟರ್ಸ್, ಹಂಪನಕಟ್ಟೆ ಫ್ರೆಂಡ್ಸ್, ಕುದ್ರು ಯುವಕ ಮಂಡಲ, ಕಂಡಾಳ ಫ್ರೆಂಡ್ಸ್, ಕ್ಯಾಥೊಲಿಕ್ ಸಭಾ ಮೌಂಟ್ ರೋಸರಿ ಚರ್ಚ್ ಯೂನಿಟ್ ಜಂಟಿ ಆಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ನಿರ್ಮಲ್ ತೋನ್ಸೆ ಇದರ ಸ್ಥಾಪಕಾಧ್ಯಕ್ಷರು ಈಗಿನ ಗೌರವಾಧ್ಯಕ್ಷರು ಹಾಗೂ ತೋನ್ಸೆ ಹೆಲ್ತ್ ಸೆಂಟರ್ ಇದರ ಚೇರ್ಮೆನ್ ಆಗಿರುವ ಬಿ.ಎಂ. ಜಾಫರ್ ಚಾಲನೆ ನೀಡಿದರು. ಉಪನ್ಯಾಸಕ ಗಣೇಶ್ ಪ್ರಸಾದ್ ಜಿ. ನಾಯಕ್ ಮಾತನಾಡುತ್ತಾ, ಗಾಂಧಿಜಿ ಸ್ವಚ್ಛತೆಗೆ ವಿಶೇಷ ಒತ್ತನ್ನು ನೀಡಿದ್ದರು. ಲಾಲ್ ಬಹಾದ್ದೂರ್ ಶಾಸ್ತ್ರೀ ಕ್ಷೀರ ಕ್ರಾಂತಿಯ ಮೂಲಕ ರೈತರ ಬದುಕನ್ನು ಹಸನಗೊಳಿಸಿ ಕೃಷಿಯ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಿದರು. ಅವರಿಬ್ಬರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡರೆ ವೈಯಕ್ತಿಯ ಅಭಿವೃದ್ಧಿಯ ಜತೆಗೆ ಸಾಮಾಜಿಕ ಅಭಿವೃದ್ಧಿಯ ಪರಿಕಲ್ಪನೆ ಸಾಕಾರಗೊಳ್ಳುವುದು ಎಂದರು.
ವಿದ್ಯಾರ್ಥಿಗಳು ಸರ್ವಧರ್ಮ ಪ್ರಾರ್ಥನೆ ನಡೆಸಿದರು. ಸಭಾ ಕಾರ್ಯಕ್ರಮದ ನಂತರ ಕಾಲೇಜಿನ ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು.
ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿರುವ ಸತೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎಸ್.ಡಿ.ಎಮ್.ಸಿ ಇದರ ನಂದಕಿಶೋರ್ ಗೌರವ ಸ್ಮರಣಿಕೆ ಹಾಗೂ ಪ್ರಮಾಣಪತ್ರ ವಿತರಿಸಿದರು. ಪಂಚಾಯತ್ ಕಾರ್ಯದರ್ಶಿ ದಿನಕರ್ ಬೆಂಗ್ರೆ, ಸದಸ್ಯರಾದ ಸಂಧ್ಯಾ, ಪ್ರಶಾಂತ್ ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಕ್ಸೇವಿಯರ್ ಸ್ವಾಗತಿಸಿ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ವಂದನ ವಂದನಾರ್ಪಣೆಗೈದರು. ಉಪನ್ಯಾಸಕ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.