ಉಡುಪಿ: ಸ್ವಾತಂತ್ರ್ಯದಿನದಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನ್ಮದಿನೋತ್ಸವವನ್ನು ಸರಕಾರಿ ಶಾಲಾ ಕಾಲೇಜು ಮತ್ತು ಸರಕಾರಿ ಕಚೇರಿಗಳಲ್ಲಿ ಆಚರಿಸುವ ಕುರಿತು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ರೂವಾರಿಯಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಗಸ್ಟ್ 15, 1796ರಲ್ಲಿ ಜನಿಸಿ ಜನವರಿ 26, 1831ರಂದು ಗಲ್ಲು ಶಿಕ್ಷೆಗೆ ಗುರಿಯಾಗಿದ್ದರು. ಈ ಎರಡು ದಿನಗಳು ಭಾರತದ ಇತಿಹಾಸ ಪುಟದಲ್ಲಿ ಪ್ರಮುಖ ದಿನಗಳು. ಒಂದು ಸ್ವಾತಂತ್ರ್ಯ ದಿನಾಚರಣೆಯಾದರೆ ಮತ್ತೊಂದು ಗಣರಾಜ್ಯೋತ್ಸವ ದಿನ.
ಇಂತಹ ಅಪ್ರತಿಮ ಹೋರಾಟಗಾರನನ್ನು ರಾಜ್ಯ ಸರಕಾರವಾಗಲಿ, ಕೇಂದ್ರ ಸರಕಾರವಾಗಲಿ ನೆನಯದೇ ಸ್ವಾತಂತ್ರ್ಯ ಹೋರಾಟಗಾರನಿಗೆ ಅಪಮಾನ ವೆಸಗುತ್ತಿದ್ದಾರೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನ್ಮದಿನವಾದ ಅಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ಹಾಗೂ ರಾಯಣ್ಣ ಜನ್ಮದಿನೋತ್ಸವವನ್ನಾಗಿ ಸರಕಾರಿ ಶಾಲಾ ಕಾಲೇಜು ಮತ್ತು ಸರಕಾರಿ ಕಚೇರಿಗಳಲ್ಲಿ ಆಚರಿಸಿ ರಾಯಣ್ಣನ ಭಾವಚಿತ್ರವನ್ನು ಕಡ್ಡಾಯವಾಗಿ ಹಾಕುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಬೇಕೆಂದು ಮನವಿ ಮೂಲಕ ಬೇಡಿಕೆ ಇಡಲಾಗಿದೆ.
ಮಲ್ಪೆ ಸರ್ಕಲ್ ಇನ್ಸ್ಪೆಕ್ಟರ್ ಶರಣ್ ಗೌಡ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಉಡುಪಿ ಜಿಲ್ಲಾಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ಗೌರವ ಸಲಹೆಗಾರ ಜನಾರ್ದನ್ ಕೊಡವೂರು, ಕುಮಾರ್ ಪ್ರಸಾದ್, ಸಿದ್ದು ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ನೋಟಗಾರ್ ಉಪಸ್ಥಿತರಿದ್ದರು.