ಉಡುಪಿ: ಇಂದು ಶೈಕ್ಷಣಿಕ ಕ್ಷೇತ್ರದಲ್ಲಿ ವಿಫುಲ ಅವಕಾಶವಿದ್ದು ಅದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು. ಒಳ್ಳೆಯ ಉದ್ಯೋಗವನ್ನು ಪಡೆಯಲು ಕೌಶಲ್ಯಗಳು ಅತಿ ಅಗತ್ಯ. ಅದರಲ್ಲೂ ಸಂವಹನ ಕೌಶಲ್ಯ ಮತ್ತು ಭಾಷಾ ಕೌಶಲ್ಯ ಬಹುಮುಖ್ಯ ಎಂದು ಉಡುಪಿಯ ಪ್ರೈಮ್ ಸಂಸ್ಥೆಯ ಸ್ಥಾಪಕರಾದ ರತ್ನಕುಮಾರ್ ಹೇಳಿದರು.
ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರಿನಲ್ಲಿ ನಡೆದ ಕ್ಯಾಂಪಸ್ ಆಯ್ಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ. ಗಣನಾಥ ಎಕ್ಕಾರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ದಿಯಾ ಸಿಸ್ಟಮ್ ಕಂಪನಿಯ ಮಾನವ ಸಂಪನ್ಮೂಲ ನಿರ್ವಹಣಾಧಿಕಾರಿ ಶ್ರೀನಿವಾಸ ಭಟ್ ಅವರು ತಮ್ಮ ಕಂಪೆನಿಯ ಹಿನ್ನಲೆ ಉದ್ಯೋಗ ಸಾಧ್ಯತೆ ಮತ್ತು ಅವಕಾಶಗಳನ್ನು ವಿವರಿಸಿದರು.
ಕಾಲೇಜಿನ ಐ.ಕ್ಯೂ.ಎ.ಸಿ. ಸಂಯೋಜಕರಾದ ಡಾ. ಸುರೇಶ್ ರೈ ಕೆ. ಉಪಸ್ಥಿತರಿದ್ದರು. ಕಾಲೇಜಿನ ಉದ್ಯೋಗ ಮಾಹಿತಿ ವಿಭಾಗ ಸಂಚಾಲಕರಾದ ಉಮೇಶ್ ಪೈ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಕನ್ನಡ ವಿಭಾಗದ ಪ್ರಾಧ್ಯಾಪಕರ ಪ್ರೊ. ರಾಧಾಕೃಷ್ಣ ನಿರೂಪಿಸಿದರು. ೨೦೦ ರಷ್ಟು ಉದ್ಯೋಗಕಾಂಕ್ಷಿಗಳು ಕ್ಯಾಂಪಸ್ ಆಯ್ಕೆಯಲ್ಲಿ ಭಾಗವಹಿಸಿದರು.