ಕುಂದಾಪುರ: ಮಾಜಿ ಸೈನಿಕ, ಲೇಖಕ ಬೈಂದೂರು ಚಂದ್ರಶೇಖರ ನಾವಡ ಅವರ ‘ಮಹಾನ್ ಸೇನಾನಿ ಜನರಲ್ ಬಿಪಿನ್ ರಾವತ್’ ಕೃತಿ ಲೋಕಾರ್ಪಣೆ ಸಮಾರಂಭ ಉಪ್ಪುಂದ ರೈತಸಿರಿ ಸಭಾಭವನದಲ್ಲಿ ನಡೆಯಿತು.
ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ನಿ, ಕನ್ನಡ ಸಾಹಿತ್ಯ ಪರಿಷತ್ತು ಬೈಂದೂರು ತಾಲೂಕು ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ‘ಮಹಾನ್ ಸೇನಾನಿ ಜನರಲ್ ಬಿಪಿನ್ ರಾವತ್’ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಇವತ್ತಿನ ವಿದ್ಯಾರ್ಥಿಗಳು ಕಲೆ, ಸಾಹಿತ್ಯ ದೇಶ ಪ್ರೇಮದ ಶಿಕ್ಷಣದ ಬದಲು ಬರೇ ದುಡ್ಡು ಮಾಡುವ ವೃತ್ತಿ ಶಿಕ್ಷಣದ ಮೊರೆ ಹೋಗುತ್ತಿರುವುದು ವಿಷಾದನೀಯ ಎಂದರು. ಹಾಗೆ ದೇಶದ ಇಷ್ಟೊಂದು ಬಲಿಷ್ಠ ತಂತ್ರಜ್ಞಾನ, ರಕ್ಷಣಾ ವ್ಯವಸ್ಥೆಯಿದ್ದು ಜನರಲ್ ಬಿಪಿನ್ ರಾವತ್ರವರನ್ನು ಉಳಿಸಿಕೊಳ್ಳೋದಕ್ಕೆ ಆಗಲಿಲ್ಲ ಎನ್ನುವುದು ಬಹಳ ನೋವಿನ ವಿಚಾರ ಎಂದು ಹೇಳಿದರು.
ಉಕ್ರೇನಿನ ಯುದ್ಧದ ಪರಿಸ್ಥಿತಿಯನ್ನು ಗಮನಿಸಿದಾಗ ನಮ್ಮಲಿ ಎಷ್ಟೇ ಶ್ರೀಮಂತಿಕೆ ಇದ್ದರೂ ಕೂಡ ದೇಶದಲ್ಲಿ ಬಲಿಷ್ಠವಾದ ಸೇನೆ ಇಲ್ಲದೆ ಇದ್ದರೆ ಬದುಕಲಿಕ್ಕೆ ಸಾಧ್ಯವಿಲ್ಲ ಎಂದರು.
ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಉಮೇಶ್ ಪುತ್ರನ್ ಕೃತಿ ಪರಿಚಯಿಸಿ ಮಾತನಾಡುತ್ತಾ, ದೇಶಕ್ಕಾಗಿ ಮಡಿದ ವೀರ ಯೋಧರ ಹೆಸರು ಜನರ ಮನದಲ್ಲಿ ಶಾಶ್ವತವಾಗಿ ಉಳಿಯುವಂತಾಗಬೇಕು. ಅಂತಹ ಒಂದು ಕೆಲಸವನ್ನು ಬೈಂದೂರು ಚಂದ್ರಶೇಖರ ನಾವಡರು ತಮ್ಮ ಕೃತಿಯ ಮೂಲಕ ಮಾಡುತ್ತಿರುವುದು ಸಂತೋಷದ ಸಂಗತಿ ಎಂದರು.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಪುಂಡಲೀಕ ನಾಯಕ್ ನಾಯ್ಕನಕಟ್ಟೆ, ರೋಟರಿ ಕ್ಲಬ್ ಬೈಂದೂರು ಇದರ ಅಧ್ಯಕ್ಷ ಡಾ. ಪ್ರವೀಣ್ ಶೆಟ್ಟಿ ಹಾಗೂ ಕೃತಿಯ ಲೇಖಕ ಬೈಂದೂರು ಚಂದ್ರಶೇಖರ ನಾವಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಂಗಳೂರು ‘ಅವನಿ ಪ್ರಕಾಶನ’ ಇದರ ಮುಖ್ಯಸ್ಥರಾದ ಶ್ರೀಪತಿ ಆಚಾರ್ಯ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಲಾವಣ್ಯ ರಿ ಬೈಂದೂರು ಇದರ ಅಧ್ಯಕ್ಷ ಹರೆಗೋಡು ಉದಯ ಆಚಾರ್ಯ ಪ್ರಾರ್ಥನೆಗೈದರು, ಬೈಂದೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಘು ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬೈಂದೂರು ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಮೀನಾಕ್ಷಿ ಕಾರ್ಯಕ್ರಮ ನಿರೂಪಿಸಿದರು.
ವರದಿ:- ರವಿರಾಜ್ ಬೈಂದೂರು