ಮಂಗಳೂರು: ಕೊಣಾಜೆಯ ಮಂಗಳ ಗಂಗೋತ್ರಿಯಲ್ಲಿ ಎಂಪಿಎಂಎಲ್ಲೆ ನ್ಯೂಸ್ ಪತ್ರಿಕೆಯ 12ನೇ ‘ಸೌಹಾರ್ದ ಸಂಗಮ’ ಕಾರ್ಯಕ್ರಮದ ಅಂಗವಾಗಿ ‘ಬೆಸ್ಟ್ ಇಂಜಿನಿಯರ್’ ಪ್ರಶಸ್ತಿಯನ್ನು ಮಂಗಳೂರಿನ ಲೋಕೋಪಯೋಗಿ ಇಲಾಖೆಯ ನಂ. 1 ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೆ.ಟಿ. ಚಂದ್ರಶೇಖರಯ್ಯ ಅವರಿಗೆ ಮಂಗಳೂರಿನ ವಿಶ್ವವಿದ್ಯಾನಿಲಯದಲ್ಲಿ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ| ಪಿ.ಎಸ್. ಎಡಪಡಿತ್ತಾಯರವರು ಸರಳ ಸಮಾರಂಭದಲ್ಲಿ ಪ್ರದಾನ ಮಾಡಿದರು.
ಈ ಸಂದರ್ಭ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ| ಪಿ.ಎಸ್. ಎಡಪಡಿತ್ತಾಯರವರು ಮಾತನಾಡುತ್ತಾ, ಎಂಪಿಎಂಎಲ್ಲೆ ನ್ಯೂಸ್ ಪತ್ರಿಕೆ ಕಳೆದ ಹಲವಾರು ವರ್ಷಗಳಿಂದ ಸೌಹಾರ್ದ ಸಂಗಮ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಈ ಸಂದರ್ಭದಲ್ಲಿ ಸಮಾಜದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಆಯ್ದ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಸಂತೋಷದ ವಿಷಯ. ಹಲವಾರು ಅರ್ಹ ವ್ಯಕ್ತಿಗಳು ಸಮಾಜದಲ್ಲಿ ಅತ್ಯುತ್ತಮ ಸಮಾಜ ಸೇವೆಗಳನ್ನು ನಡೆಸುತ್ತಾ ಹಲವಾರು ಜನೋಪಯೋಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂತಹ ಎಳೆಮರೆಯ ಕಾಯಿಗಳನ್ನು ಗುರುತಿಸಿ ಸನ್ಮಾನಿಸುತ್ತಿರುವುದು, ಮುನ್ನಲೆಗೆ ತರುತ್ತಿರುವುದು ನಿಜಕ್ಕೂ ಒಂದು ಶ್ಲಾಘನೀಯ ಕೆಲಸವಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಸೇವೆಗಳು ಇನ್ನಷ್ಟು ಮುಂದುವರಿಯಲಿ ಎಂದು ಆಶಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕಸಾಪದ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರುರವರು ಎಂಪಿಎಂಎಲ್ಲೆ ನ್ಯೂಸ್ ಪತ್ರಿಕೆಯ ಸಂಪಾದಕರಾದ ಡಾ| ಅಶೋಕ್ ಶೆಟ್ಟಿ ಬಿ.ಎನ್. ಇವರು ಹಲವಾರು ವರ್ಷಗಳಿಂದ ಪತ್ರಿಕೆ ನಡೆಸುತ್ತಿದ್ದು, ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವ ಆಯ್ದ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡುವ ಮೂಲಕ ಹಲವು ವ್ಯಕ್ತಿಗಳನ್ನು ಸಮಾಜಕ್ಕೆ ಪರಿಚಯಿಸುತ್ತಿದ್ದಾರೆ. ಇದೊಂದು ಉತ್ತಮ ಕಾರ್ಯ ಎಂದರು.
ಕಾರ್ಯಕ್ರಮದಲ್ಲಿ ಯೋಗಶಿಕ್ಷಕಿ ಪ್ರಭಾ ಚಂದ್ರಶೇಖರ್, ಪತ್ರಿಕೆಯ ಸಂಪಾದಕ ಡಾ| ಅಶೋಕ್ ಶೆಟ್ಟಿ ಬಿ.ಎನ್. ಅವರು ಉಪಸ್ಥಿತರಿದ್ದರು. ಪತ್ರಿಕೆಯ ೧೨ನೇ ಸೌಹಾರ್ದ ಸಂಗಮವನ್ನು ಕೋವಿಡ್-19 ಸೋಂಕು ಹಿನ್ನಲೆಯಲ್ಲಿ ಸರಳವಾಗಿ ಆಯೋಜಿಸಲಾಗಿತ್ತು. ವಿದ್ಯಾಧರ್ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.