Sunday, January 19, 2025
Sunday, January 19, 2025

ಹವ್ಯಕ ಕನ್ನಡದಲ್ಲಿ ಛಂದೋಬದ್ಧ ಯಕ್ಷಗಾನ ಪ್ರಸಂಗ ರಚನೆ

ಹವ್ಯಕ ಕನ್ನಡದಲ್ಲಿ ಛಂದೋಬದ್ಧ ಯಕ್ಷಗಾನ ಪ್ರಸಂಗ ರಚನೆ

Date:

ಉಡುಪಿ: ಉಡುಪಿ ಶ್ರೀ ಅದಮಾರು ಮಠದ ಆಶ್ರಯದಲ್ಲಿ, ತಾಮರಸ ಕೂಟ ಬಾರಕೂರು ಹಾಗೂ ಯಕ್ಷಕುಟೀರ ಟ್ರಸ್ಟ್(ರಿ) ಸಹಯೋಗದಲ್ಲಿ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ಉಪನ್ಯಾಸಕರಾದ ಶಿವಕುಮಾರ ಅಳಗೋಡು ಇವರು ಹವ್ಯಕ ಕನ್ನಡ ಭಾಷೆಯಲ್ಲಿ ರಚಿಸಿದ ‘ಬಾಣದ್ ಸೇತ್ವೆ’ ಯಕ್ಷಗಾನ ಪ್ರಸಂಗ ಕೃತಿಯನ್ನು ಉಡುಪಿ ಶ್ರೀ ಅದಮಾರು ಮಠದ ಹಿರಿಯ ಯತಿಗಳಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಅನಾವರಣಗೊಳಿಸಿದರು.

‘ಶರಸೇತು ಬಂಧನದ ಕಥೆ ಮಹಾಭಾರತದಲ್ಲಿ ಇದೆಯೋ ಇಲ್ಲವೋ ಬೇರೆ ವಿಚಾರ. ಆದರೆ ಈ ಕಥೆಯಲ್ಲಿ, ನಮಗಿಂತ ಕಿರಿಯರನ್ನು ಎತ್ತರಕ್ಕೆ ತರುವಾಗ ಹಿರಿಯರು ತ್ಯಾಗ ಮಾಡಬೇಕೆಂಬ ಬಹಳ ಉತ್ತಮವಾದ ಸಂದೇಶವಿದೆ. ಆಂಜನೇಯ, ಅರ್ಜುನನಿಗಿಂತ ದೊಡ್ಡ ಭಕ್ತ. ಆದರೂ ಕೃಷ್ಣ, ಅರ್ಜುನನ್ನು ಎತ್ತರಕ್ಕೆ ಏರಿಸುವ ಸಂದರ್ಭದಲ್ಲಿ ಆತನಿಗಿಂತಲೂ ಎತ್ತರದಲ್ಲಿರುವ ಆಂಜನೇಯ ತನ್ನ ಗೆಲುವನ್ನು ತ್ಯಾಗ ಮಾಡಿದ ಎಂಬುದು ಇಲ್ಲಿಯ ಸಂದೇಶ. ಹಳೆಯ ಸೇತು ಬಂಧನಕ್ಕೆ ವಯಸ್ಸಾಗುತ್ತ ಬಂತು, ಈಗ ಅದೇ ಸೇತುವೆ ಬಾಣದ ಸೇತುವೆಯಾಗಿ ಮತ್ತೆ ಕಾಣಿಸಿಕೊಂಡಿದೆ.

ಶಿವಕುಮಾರ ಬರೆದ ‘ಬಾಣದ ಸೇತುವೆ’ ಎಂದಿಗೂ ‘ಬಾಡದ ಸೇತುವೆ’ ಆಗಲಿ. ಚಿಕ್ಕ ವಯಸ್ಸಿನಲ್ಲಿಯೇ ಈತ ಬರೆದ ಪುಸ್ತಕಕ್ಕೆ ಸರಕಾರ ದೊಡ್ಡ ಪ್ರಶಸ್ತಿ ನೀಡಿದ್ದು, ಅಂತಹ ವ್ಯಕ್ತಿ ನಮ್ಮ ಸಂಸ್ಥೆಯ ಅಧ್ಯಾಪಕನಾಗಿರುವುದು ಹೆಮ್ಮೆಯ ವಿಷಯ’ ಎಂದು ಶ್ರೀಗಳು ಹರಸಿದರು.

ಹಿರಿಯ ವಿದ್ವಾಂಸರಾದ ಡಾ. ಪಾದೇಕಲ್ಲು ವಿಷ್ಣು ಭಟ್ಟರು ಕೃತಿಯ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ, ‘ಶಿವಕುಮಾರ ಅಳಗೋಡು ಅವರು ಹವ್ಯಕ ಕನ್ನಡ ಭಾಷೆಯಲ್ಲಿ ರಚಿಸಿರುವ ‘ಬಾಣದ್ ಸೇತ್ವೆ’ ಎಂಬ ಪ್ರಸಂಗಕ್ಕೆ, ಕ್ರಿ.ಶ. ೧೭೯೪-೧೮೫೪ರ ಅವಧಿಯಲ್ಲಿ ಜೀವಿಸಿದ್ದ ಹಟ್ಟಿಯಂಗಡಿ ರಾಮಭಟ್ಟರು ಬರೆದ ಸುಭದ್ರಾ ಕಲ್ಯಾಣ ಪ್ರಸಂಗದೊಳಗಿನ ‘ಶರಸೇತು ಬಂಧನ’ ಪ್ರಸಂಗವು ಮೂಲ ಆಕರವಾಗಿದೆ. ಮೂಲ ಮಹಾಭಾರತದಲ್ಲಿ ಇಲ್ಲದ, ಅರ್ಜುನನ ತೀರ್ಥಯಾತ್ರೆಯ ಸಂದರ್ಭದ ಕಥೆ ಇದಾಗಿದ್ದು, ಮೂಲ ಕವಿಯು ಬಳಸಿದ ಯಕ್ಷಗಾನದ ಛಂದಸ್ಸುಗಳನ್ನೇ ಬಳಸಿಕೊಂಡು ಕೆಲವು ಹೊಸ ಮಟ್ಟುಗಳನ್ನೂ ಬಳಸಿ ಮೂಲದ ನಡೆ, ಪದ್ಯಗಳ ಶೈಲಿಯಲ್ಲಿಯೇ ಈ ಪ್ರಸಂಗವನ್ನು ರಚಿಸಿದ್ದು ಕವಿಯ ಪ್ರತಿಭಾ ಸಾಮರ್ಥ್ಯವನ್ನು ಬಿಂಬಿಸುತ್ತದೆ.

ಸಾಗರ, ಶಿವಮೊಗ್ಗ, ಸಿದ್ಧಾಪುರ, ಯಲ್ಲಾಪುರ ಭಾಗದ ಹವ್ಯಕ ಕನ್ನಡ ಭಾಷೆಯನ್ನು ವಿವಿಧ ಛಂದೋಬದ್ಧವಾದ ಪದ್ಯಕ್ಕೆ ಹೊಂದಿಸಿ ಆದಿ, ಅಂತ್ಯ ಪ್ರಾಸಗಳನ್ನಿರಿಸಿಕೊಂಡು ಪದ್ಯಗಳನ್ನು ರಚಿಸುವುದು ಬಹಳ ಕಷ್ಟದ ಕೆಲಸವಾಗಿದ್ದರೂ, ಆ ಕೆಲಸವನ್ನು ಕನ್ನಡದ ಉಪಭಾಷೆಯಲ್ಲಿ ಸುಲಲಿತವಾಗಿ ನಿರ್ವಹಿಸಿದ್ದು ಶ್ಲಾಘನೀಯ. ಇವರ ‘ದೇವಸೇನಾ ಪರಿಣಯ’ ಪ್ರಸಂಗವು ಅಖಿಲ ಕರ್ನಾಟಕ ಯಕ್ಷಗಾನ ಪ್ರಸಂಗ ರಚನಾ ಸ್ರ‍್ಧೆಯಲ್ಲಿ ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡಿದ್ದು ಮತ್ತೊಂದು ಮಹತ್ವವಾದ ಸಂಗತಿಯಾಗಿದೆ ಎಂದರು.

ಉಡುಪಿಯ ಖ್ಯಾತ ನ್ಯಾಯವಾದಿಗಳಾದ ಪ್ರದೀಪ್ ಕುಮಾರ್, ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಡಾ. ರಾಘವೇಂದ್ರ ಎ. ಕರ‍್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕೃತಿಕಾರ ಶಿವಕುಮಾರ ಅಳಗೋಡು ಸ್ವಾಗತಿಸಿ, ಸುಹಾಸ್ ಭಟ್, ಜಟ್ಟೀಮನೆ ನಿರೂಪಿಸಿದರು. ಕೃತಿ ಅನಾವರಣದ ಬಳಿಕ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಆಶ್ರಯದಲ್ಲಿ ಪ್ರಸಿದ್ಧ ಕಲಾವಿದರಾದ ಕೊಂಡದಕುಳಿ ರಾಮಚಂದ್ರ ಹೆಗಡೆ, ಕ್ಯಾದಗಿ ಮಹಾಬಲೇಶ್ವರ ಭಟ್, ಲಂಬೋದರ ಹೆಗಡೆ, ಶ್ರೀನಿವಾಸ ಪ್ರಭು, ರವಿ ಮೋತಿಗುಡ್ಡೆ, ಬಂಗಾರಮಕ್ಕಿ ರಾಮಚಂದ್ರ ಭಟ್, ಆದಿತ್ಯ ಹೆಗಡೆ, ಕಿರಣ್ ಹಾಡಿಕೈಯವರಿಂದ ಸಂಪೂರ್ಣ ಹವ್ಯಕ ಕನ್ನಡ ಭಾಷೆಯಲ್ಲಿಯೇ ‘ಬಾಣದ್ ಸೇತ್ವೆ’ ಪ್ರಸಂಗದ ತಾಳಮದ್ದಳೆ ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!