ಮಲ್ಪೆ: ಉಡುಪಿ ಚೈಲ್ಡ್ ಲೈನ್ -1098 ವತಿಯಿಂದ ಲಕ್ಷ್ಮೀನಗರ ಅಂಗನವಾಡಿ ಕೇಂದ್ರದಲ್ಲಿ ಹದಿಹರೆಯದ ಹೆಣ್ಣು ಮಕ್ಕಳಿಗೆ ಮಕ್ಕಳ ರಕ್ಷಣಾ ವ್ಯವಸ್ಥೆಗಳು, ಪೋಕ್ಸೋ ಇನ್ನಿತರ ಕಾಯಿದೆಗಳು ಮತ್ತು ಹದಿಹರೆಯದ ಮಕ್ಕಳ ಸಮಸ್ಯೆಗಳ ಕುರಿತು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಚೈಲ್ಡ್ ಲೈನ್ -1098 ಆಪ್ತಸಮಾಲೋಚಕಿ ಜ್ಯೋತಿಯವರು ಚೈಲ್ಡ್ ಲೈನ್-1098 ಸೇವೆಗಳ ಕುರಿತು ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕರಾವಳಿ ಕಾವಲು ಪಡೆಯ ಎಸ್.ಐ. ಮುಕ್ತಾಬಾಯಿ ಮಾತನಾಡುತ್ತಾ, ಹೆಣ್ಣು ಮಕ್ಕಳು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸುವ ಸಂದರ್ಭದಲ್ಲಿ ಅಡ್ಡ ದಾರಿಯನ್ನು ತುಳಿಯಬಾರದು. ಅಲ್ಲದೇ ಅವಶ್ಯಕತೆಗಿಂತ ಹೆಚ್ಚಿನ ಮೊಬೈಲ್ ಬಳಕೆಯಿಂದ ಆಗುವ ತೊಂದರೆಗಳ ಕುರಿತು ಮಾಹಿತಿ ನೀಡಿದರು. ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಕೂಡ ಮಿತಿಯನ್ನು ಹಾಕುವಂತೆ ಅವರು ಸಲಹೆ ನೀಡಿದರು. ಕಲಿಯುವ ಸಂದರ್ಭದಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಮಾರಕವಾಗಿರುವ ವಿಚಾರಗಳಿಂದ ದೂರವಿರುವಂತೆ ತಿಳಿಸಿದರು. ಯಾವುದೇ ರೀತಿಯಾದ ಸಮಸ್ಯೆಯಾದಲ್ಲಿ ಪೊಲೀಸ್ ಅಥವಾ ಚೈಲ್ಡ್ ಲೈನ್ 1098 ಇದಕ್ಕೆ ಕರೆ ಮಾಡಿ ಸಹಾಯವನ್ನು ಪಡೆಯುವಂತೆ ಕರೆ ನೀಡಿದರು.
ಉಡುಪಿ ಚೈಲ್ಡ್ ಲೈನ್-1098 ನಿರ್ದೇಶಕ ರಾಮಚಂದ್ರ ಉಪಾಧ್ಯಾಯ ಮಾತನಾಡುತ್ತಾ, ಹೆಣ್ಣುಮಕ್ಕಳು ತಮ್ಮ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಉತ್ತಮವಾಗಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ತಿಳಿಸಿದರು. ಅಲ್ಲದೇ ಒಂದು ನಿಶ್ಚಿತ ಗುರಿಯನ್ನು ತಲುಪುವ ಹಾದಿಯಲ್ಲಿ ತಪ್ಪು ದಾರಿ ತುಳಿಯಬಾರದು ಎಂದರು.
ನಂತರ ಸ್ಥಳೀಯ ಪ್ರತಿಭಾನ್ವಿತ ವಿದ್ಯಾರ್ಥಿನಿಯೋರ್ವಳಿಗೆ ಸ್ಥಳೀಯ ದಾನಿಗಳಾದ ಅಭಯ್ ಶ್ರೀನಗರ ಇವರ ವತಿಯಿಂದ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು. ಉಡುಪಿ ಚೈಲ್ಡ್ ಲೈನ್ -1098 ವತಿಯಿಂದ ಮಾಸ್ಕ್ ವಿತರಿಸಲಾಯಿತು.
ಅಂಗನವಾಡಿ ಕಾರ್ಯಕರ್ತೆಯವರಾದ ಸುಮಂಗಲ, ಚೈಲ್ಡ್ ಲೈನ್ ಸಹ ನಿರ್ದೇಶಕಿ ಸುಹಾನಿ ಕಾಮತ್, ಚೈಲ್ಡ್ ಲೈನ್ ಸಿಬ್ಬಂದಿ ನಯನ, ಸ್ಥಳೀಯ ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.
ಚೈಲ್ಡ್ ಲೈನ್ ನಿರ್ದೇಶಕ ಗುರುರಾಜ್ ಭಟ್ ಸ್ವಾಗತಿಸಿ, ಚೈಲ್ಡ್ ಲೈನ್ ಸಿಬ್ಬಂದಿ ಪ್ರಮೋದ್ ನಿರೂಪಿಸಿ, ವೃಶಾಕ್ ವಂದಿಸಿದರು.