ಮಣಿಪಾಲ: ಚೈಲ್ಡ್ ಲೈನ್-1098 ಉಡುಪಿ ಮತ್ತು ಶ್ರೀ ಕೃಷ್ಣ ರೋಟರಾಕ್ಟ್ ಕ್ಲಬ್ ಉಡುಪಿ ಇವರ ಸಹಯೋಗದೊಂದಿಗೆ ದುಗ್ಲಿಪದವು ಮಂಚಿಯ ಅಂಗನವಾಡಿ ಕೇಂದ್ರದಲ್ಲಿ ಹದಿಹರೆಯದ ಹೆಣ್ಣು ಮಕ್ಕಳಿಗೆ ಚೈಲ್ಡ್ ಲೈನ್-1098ರ ಸೇವೆಗಳು, ಮಕ್ಕಳ ರಕ್ಷಣಾ ವ್ಯವಸ್ಥೆಗಳು, ಪೋಕ್ಸೋ ಇನ್ನಿತರ ಕಾಯಿದೆಗಳು, ಹದಿಹರೆಯದ ಮಕ್ಕಳ ಸಮಸ್ಯೆಗಳು, ವೈಯಕ್ತಿಕ ಸ್ವಚ್ಚತೆ ಮತ್ತು ಕೋವಿಡ್-19 ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಚೈಲ್ಡ್ ಲೈನ್-1098 ಉಡುಪಿಯ ನಿರ್ದೇಶಕರಾದ ರಾಮಚಂದ್ರ ಉಪಾಧ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೆಣ್ಣುಮಕ್ಕಳು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸುವ ಸಂದರ್ಭದಲ್ಲಿ ಅಡ್ಡ ದಾರಿಯನ್ನು ತುಳಿಯಬಾರದು. ಅಲ್ಲದೇ ಮಕ್ಕಳು ತಮ್ಮ ಭವಿಷ್ಯ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಮಾರಕವಾಗುವಂತಹ ಚಟುವಟಿಕೆಗಳಿಂದ ದೂರವಿರುವಂತೆ ತಿಳಿಸಿದರು.
ಚೈಲ್ಡ್ ಲೈನ್-1098 ಉಡುಪಿಯ ಸದಸ್ಯರಾದ ಸುನಿತಾ ಚೈಲ್ಡ್ ಲೈನ್-1098 ಇದರ ಸೇವೆಗಳ ಕುರಿತು ಮತ್ತು ಮಕ್ಕಳ ಹಕ್ಕುಗಳ ಕುರಿತು ಮಾಹಿತಿ ನೀಡಿದರು. ಚೈಲ್ಡ್ ಲೈನ್ ಸಹ ನಿರ್ದೇಶಕರಾದ ಗುರುರಾಜ್ ಭಟ್ ಕೋವಿಡ್ ಲಸಿಕೆಯ ಮಹತ್ವದ ಕುರಿತು ಮತ್ತು ಕರೋನಾ ಮುಂಜಾಗೃತಾ ಕ್ರಮಗಳ ಕುರಿತು ಮಾಹಿತಿಯನ್ನು ನೀಡಿದರು. ಶುಚಿತ್ವದ ಕುರಿತು ಮತ್ತು ಸ್ವಚ್ಛವಾಗಿ ಕೈ ತೊಳೆಯುವ ಕ್ರಮವನ್ನು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು. ಮಕ್ಕಳೆಲ್ಲರೂ ತಮ್ಮ ಸುತ್ತಮುತ್ತಲಿನ ಪರಿಸರದ ಕುರಿತು ಕಾಳಜಿಯನ್ನು ಹೊಂದಿರಬೇಕು ಮತ್ತು ಅದನ್ನು ಸ್ವಚ್ಛವಾಗಿಡಲು ಪ್ರಯತ್ನಿಸಬೇಕು ಎಂದರು.
ಚೈಲ್ಡ್ ಲೈನ್ ಆಪ್ತ ಸಮಾಲೋಚಕಿಯವರಾದ ಜ್ಯೋತಿ ಮಕ್ಕಳಿಗೆ ಬಾಲ್ಯ ವಿವಾಹ ನಿಷೇಧ ಕಾಯಿದೆ, ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯಿದೆ, ಬಾಲ ನ್ಯಾಯ ಕಾಯಿದೆ, ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯಿದೆ ಹಾಗೂ ಪೋಕ್ಸೋ ಕಾಯಿದೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡಿದರು. ಮಕ್ಕಳು ಅಪರಿಚಿತರ ಕುರಿತಾಗಿ ಸದಾ ಎಚ್ಚರದಿಂದ ಇರಬೇಕು ಎಂದು ಹೇಳಿದರು. ಯಾವುದೇ ರೀತಿಯಾದ ಸಮಸ್ಯೆ ಅಥವಾ ದೌರ್ಜನ್ಯಗಳಾದಲ್ಲಿ ಚೈಲ್ಡ್ ಲೈನ್-1098 ಇದಕ್ಕೆ ಕರೆ ಮಾಡಿ ಸಹಾಯವನ್ನು ಪಡೆಯಲು ತಿಳಿಸಿದರು. ಸ್ಯಾನಿಟರಿ ಪ್ಯಾಡ್ ಮತ್ತು ಮಾಸ್ಕ್ ಗಳನ್ನು ವಿತರಿಸಲಾಯಿತು.
ಚೈಲ್ಡ್ ಲೈನ್-1098 ಉಡುಪಿಯ ಸಹ ನಿರ್ದೇಶಕರಾದ ಸುಹಾನಿ ಕಾಮತ್, ಶ್ರುತಿ ಶೆಣೈ, ಶ್ರೀಕೃಷ್ಣ ರೋಟರ‍್ಯಾಕ್ಟ್ ಕ್ಲಬ್‌ನ ಅಧ್ಯಕ್ಷೆ ಮೇಘನಾ ರಾವ್, ಚೈಲ್ಡ್ ಲೈನ್-1098 ಉಡುಪಿ ಇದರ ಸ್ವಯಂಸೇವಕರಾದ ಮೋಹನ್, ಅಂಗನವಾಡಿ ಕಾರ್ಯಕರ್ತೆ ಶಕುಂತಳ, ಶ್ರೀಕೃಷ್ಣ ರೋಟರ‍್ಯಾಕ್ಟ್ ಕ್ಲಬ್‌ನ ಸದಸ್ಯರು, ಚೈಲ್ಡ್ ಲೈನ್ ಸಿಬ್ಬಂದಿಗಳು ಸ್ಥಳೀಯರು ಉಪಸ್ಥಿತರಿದ್ದರು.
ರಾಮಚಂದ್ರ ಉಪಾಧ್ಯಾಯ ಸ್ವಾಗತಿಸಿ, ಶ್ರೀಕೃಷ್ಣ ರೋಟರ‍್ಯಾಕ್ಟ್ ಕ್ಲಬ್‌ನ ಕಾರ್ಯದರ್ಶಿ ತನ್ವಿ ವಶಿಷ್ಠ ವಂದಿಸಿದರು. ಚೈಲ್ಡ್ ಲೈನ್-1098 ಉಡುಪಿ ಸಿಬ್ಬಂದಿ ನಯನ ಕಾರ್ಯಕ್ರಮ ನಿರೂಪಿಸಿದರು.