ಉಡುಪಿ: ಆಸರೆ ಚಾರಿಟೇಬಲ್ ಟ್ರಸ್ಟ್ (ರಿ) ಕಡಿಯಾಳಿ, ಉಡುಪಿ ಇದರ ನೇತೃತ್ವದಲ್ಲಿ ತಂದೆ ತಾಯಿ ಕಳೆದುಕೊಂಡ 25 ಅವಕಾಶ ವಂಚಿತ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನವಾಗಿ ವರ್ಷಂಪ್ರತಿ ನೀಡುವ ದತ್ತಿ ನಿಧಿಯನ್ನು ಕಡಿಯಾಳಿ ಕಾತ್ಯಾಯನಿ ಮಂಟಪದಲ್ಲಿ ನೀಡಲಾಯಿತು.
ಸಮಾರಂಭದ ಮುಖ್ಯ ಅತಿಥಿಯಾಗಿ ಬಾಳಿಗಾ ಫಿಶ್ ನೆಟ್ ನ ಮಾಲೀಕರಾದ ನಿಖಿಲ್ ಬಾಳಿಗಾ ವಿದ್ಯಾರ್ಥಿಗಳಿಗೆ ಚೆಕ್ ವಿತರಣೆ ಮಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಆಸರೆ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಪ. ವಸಂತ್ ಭಟ್ ವಹಿಸಿದ್ದರು. ಉಡುಪಿ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸಂಸ್ಥಾಪಕ ಸದಸ್ಯರಾದ ತೋನ್ಸೆ ದೇವದಾಸ್ ಪೈ ಮತ್ತು ಸಮಿತಿಯ ಸದಸ್ಯರಾದ ಹೆಚ್. ಸುದೀರ್ ಭಟ್ ರಿಗೆ ಗಣೇಶೋತ್ಸವ ಸಮಿತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ. ರಾಘವೇಂದ್ರ ಕಿಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಆಸರೆ ಚಾರಿಟೇಬಲ್ ಟ್ರಸ್ಟ್ ಈಗಾಗಲೇ ಉಡುಪಿ ನಗರದ 92 ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ ನೀಡಿದ್ದು ಇನ್ನು ಹಲವರ ಮನೆಗಳಿಗೆ ಶೀಘ್ರದಲ್ಲೇ ಉಚಿತ ವಿದ್ಯುತ್ ಸಂಪರ್ಕ ನೀಡಲಾಗುವುದು ಎಂದು ಹೇಳಿದರು. ಬಸ್ ನಿಲ್ದಾಣಗಳಲ್ಲಿ, ದೇವಸ್ಥಾನದ ಜಗಲಿಗಳಲ್ಲಿ ದಿನಕಳೆಯುವ ಆಧಾರ್ ಕಾರ್ಡ್ ರಹಿತ ನಿರ್ಗತಿಕ ಕೂಲಿ ಕಾರ್ಮಿಕರಿಗೆ ಕೋವಿಡ್ ಲಸಿಕೆ ನೀಡಲು ಆಸರೆ ಚಾರಿಟೇಬಲ್ ಟ್ರಸ್ಟ್ ಜಿಲ್ಲಾಡಳಿತಕ್ಕೆ ಸಹಕಾರ ನೀಡಲಿದೆ ಎಂದರು.
ಉಡುಪಿ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಗಿರೀಶ್ ಎಂ. ಅಂಚನ್, ಕಡಿಯಾಳಿ ನಗರಸಭಾ ಸದಸ್ಯರಾದ ಗೀತಾ ಶೇಟ್ ಉಪಸ್ಥಿತರಿದ್ದರು. ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಕೋಶಾಧಿಕಾರಿ ಎಂ. ವಲ್ಲಬ್ ಭಟ್ ಸ್ವಾಗತಿಸಿ, ಆಸರೆ ಚಾರಿಟೇಬಲ್ ಟ್ರಸ್ಟ್ ನ ಕೋಶಾಧಿಕಾರಿ ಸತೀಶ್ ಕುಲಾಲ್ ವಂದಿಸಿದರು.