Sunday, January 19, 2025
Sunday, January 19, 2025

ಮೇಜರ್ ಸತೀಶ್ ದಹಿಯಾ ಎಂಬ ಸೈನಿಕನ ಹೋರಾಟದ ಕಥೆ

ಮೇಜರ್ ಸತೀಶ್ ದಹಿಯಾ ಎಂಬ ಸೈನಿಕನ ಹೋರಾಟದ ಕಥೆ

Date:

ಅಂದು 2017ರ ಫೆಬ್ರುವರಿ 14, ದೇಶದ ಬಹುತೇಕ ಯುವಜನತೆ ವಾಲೆಂಟೈನ್ ದಿನದ ಖುಷಿಯ ಆಚರಣೆಯಲ್ಲಿ ಮುಳುಗಿದ್ದರು. ಆದರೆ ರಾಜಸ್ಥಾನದ ಜೈಪುರದ ಆ ಮನೆಯಲ್ಲಿ ಆ ಸೈನಿಕನ ಹೆಂಡತಿಯಾದ ಸುಜಾತ ದಹಿಯಾ ತನ್ನ ಎರಡು ವರ್ಷಗಳ ಪುಟ್ಟ ಮಗು ಪ್ರಿಯಾಶಾ ಜೊತೆಗೆ ಬೆಂಕಿಯ ಮೇಲೆ ಕೂತಂತೆ ಚಡಪಡಿಸುತ್ತಿದ್ದರು. ಯಾಕೆಂದರೆ ಮೂರೇ ದಿನಕ್ಕೆ (ಫೆಬ್ರುವರಿ 17) ಅವರ ಮದುವೆಯ ವಾರ್ಷಿಕೊತ್ಸವ ಇತ್ತು ಮತ್ತು ಅವರ ಪತಿ ಮೇಜರ್ ಸತೀಶ್ ದಹಿಯಾ ಬೆಳಿಗ್ಗೆ ಕರೆ ಮಾಡಿ ಇಂದೆ ವಿಶೇಷ ಪಾರ್ಸೆಲ್ ಮೂಲಕ ಗಿಫ್ಟ್ ಕಳುಹಿಸುವೆ ಎಂದು ಹೇಳಿದ್ದರು. ಮತ್ತು ಅದರ ನಂತರ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ಗಂಡ ಎಂದೂ ಕೂಡ ಹಾಗೆ ಮಾಡಿದವರಲ್ಲ. ಇದೇನೋ ತೊಂದರೆ ಆಗಿದೆ ಎಂದು ಅವರ ಆರನೇ ಇಂದ್ರಿಯ ಚೀರಿ ಚೀರಿ ಹೇಳುತ್ತಿತ್ತು. ಮಗಳು ಅಮ್ಮನ ತೊಡೆಯ ಮೇಲೆ ಕುಳಿತು ಅಪ್ಪನ ಬಗ್ಗೆ ಪದೇ ಪದೇ ವಿಚಾರಣೆ ಮಾಡುತ್ತಿದ್ದಳು. ಅಮ್ಮ ಉತ್ತರ ಕೊಡುವ ಸ್ಥಿತಿಯಲ್ಲಿ ಇರಲಿಲ್ಲ.

ಸಂಜೆ ಹೊತ್ತಿಗೆ ಪಾರ್ಸೆಲ್ ಬಂದೇ ಬಿಟ್ಟಿತು. ಆದರೆ ಪತಿ ಹಿಂದೆ ಬರಲಿಲ್ಲ. ಸಂಜೆ ಹೊತ್ತು ಪಾರ್ಸೆಲ್ ಬಾಯ್ ಅವರ ಮನೆಯ ಮುಂದೆ ಕೆಂಪು ಗುಲಾಬಿ ಹೂಗಳ ಒಂದು ಗುಚ್ಛ ಮತ್ತು ಕೆಂಪು ಬಣ್ಣದ ರಾಪರನಲ್ಲಿ ನೀಟ್ ಆಗಿ ಪ್ಯಾಕ್ ಮಾಡಿದ ಒಂದು ಹೃದಯದ ಆಕಾರದ ಒಂದು ಕೇಕ್ ಜೊತೆಗೆ ಒಂದಿಷ್ಟು ಕ್ಯಾಂಡಲ್ ಇದ್ದವು. ಅದನ್ನು ಪತಿಗೆ ತಿಳಿಸೋಣ ಎಂದು ಕಾಲ್ ಮಾಡಿದರೆ ಅದು ಮತ್ತೆ ಸ್ವಿಚ್ ಆಫ್. ಅವರ ಮೇಲಾಧಿಕಾರಿಗೆ ಕಾಲ್ ಮಾಡಿದಾಗ ಅವರು ನಡುಗುವ ಧ್ವನಿಯಲ್ಲಿ ಏನೋ ಅಸ್ಪಷ್ಟ ಹೇಳಿದರು. ಸೈನಿಕನ ಹೆಂಡತಿಯು ಜೋರಾಗಿ ಅಳಲು ಆರಂಭ ಮಾಡಿದರು. ಸ್ವಲ್ಪ ಹೊತ್ತಿನಲ್ಲಿ ಅದೇ ಮೇಲಾಧಿಕಾರಿ ಮತ್ತೆ ಫೋನ್ ಮಾಡಿ ಅಳುತ್ತ ಅವರಿಗೆ ಕಟುಸತ್ಯವನ್ನು ಹೇಳಿದ್ದರು, – ಭಾಭೀಜಿ, ಮೇಜರ್ ಸತೀಶ್ ದಹಿಯಾ ಅಬ್ ಇಸ್ ದುನಿಯಾ ಮೆ ನಹಿ ರಹೇ. ಅದನ್ನು ಕೇಳಿದ ಸೈನಿಕನ ಹೆಂಡತಿ ಮೂರ್ಛೆ ಹೋಗಿ ನೆಲಕ್ಕೆ ಬಿದ್ದರು. ಅವರ ಕೈಯಲ್ಲಿದ್ದ ಕೆಂಪು ಗುಲಾಬಿ ಹೂಗಳ ಗುಚ್ಛ ಮಣ್ಣಲ್ಲಿ ಸೇರಿ ಹೋಗಿತ್ತು.

ಯಾರು ಈ ಮೇಜರ್ ಸತೀಶ್ ದಹಿಯಾ?: ಅವರು ಹರ್ಯಾಣ ಮೂಲದವರು. ಅಪ್ಪ ಅಮ್ಮನಿಗೆ ಒಬ್ಬನೇ ಪುತ್ರ. ಪದವಿ ಪಡೆದಾದ ನಂತರ ಸ್ವಂತ ಇಚ್ಛೆಯಿಂದ ಸೈನಿಕ ತರಬೇತಿ ಪಡೆದು ಸೈನ್ಯಕ್ಕೆ ಸೇರಿದವರು. ಸೈನ್ಯದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತ ಧೈರ್ಯ, ಪರಾಕ್ರಮಕ್ಕೆ ಹೆಸರು ಪಡೆಯುತ್ತ ಮುನ್ನಡೆದರು. ಉಗ್ರ ನಿಗ್ರಹ ಪಡೆಗೆ ನಿಯುಕ್ತರಾದ ಅವರು ಜಮ್ಮು ಕಾಶ್ಮೀರದಲ್ಲಿ ಕೆಲಸ ಮಾಡುತ್ತಿದ್ದ ‘ಜಂಗಲ್’ ಎಂಬ ಹೆಸರಿನ ಸೇನಾ ಪಡೆಯ ಮುಖ್ಯಸ್ಥರಾಗಿದ್ದರು.

ಭಾರೀ ಭರ್ಜರಿ ಬೇಟೆಗೆ ಅವರು ಹೊರಟಿದ್ದರು. ಅದೇ ಫೆಬ್ರುವರಿ ಹದಿನಾಲ್ಕರಂದು ಅವರು ಒಂದು ದೊಡ್ಡ ಬೇಟೆಗೆ ಹೊರಟಿದ್ದರು. ಜಮ್ಮು ಕಾಶ್ಮೀರದ ಕುಪ್ವಾರದಲ್ಲಿ ಸ್ಥಳೀಯರಿಂದ ಮಾಹಿತಿ ಪಡೆದಾಗ ಉಗ್ರರ ಒಂದು ದೊಡ್ಡ ಪಡೆಯು ಒಂದೇ ಗ್ರಾಮದ ಎರಡು ಮನೆಗಳಲ್ಲಿ ವಾಸವಾಗಿದ್ದಾರೆ ಎಂದು ಖಚಿತವಾಗಿತ್ತು. ಅದು ತರಬೇತು ಪಡೆದ ಉಗ್ರರ ಪಡೆ. ಅದರ ಹೆಸರು ‘ಅಫ್ಜಲ್ ಗುರು ಸ್ಕ್ವಾಡ್!

ಜೈಷ್ ಎ ಮೊಹಮ್ಮದ್ ಎಂಬ ಉಗ್ರರ ಸಂಸ್ಥೆಯಿಂದ ತರಬೇತು ಪಡೆದಿದ್ದ ಉಗ್ರರ ಪಡೆ ಅದು. ಅವರ ಹತ್ತಿರ ಎಲ್ಲಾ ಆಧುನಿಕ ಆಯುಧಗಳು ಇದ್ದವು. ಅವರು ಕಮಾಂಡೋ ಶೈಲಿಯ ತರಬೇತು ಪಡೆದಿದ್ದು ಒಬ್ಬೊಬ್ಬ ಉಗ್ರನೂ ಅತ್ಯಂತ ಅಪಾಯಕಾರಿ ಆಗಿದ್ದನು. ಅಂತಹ ಉಗ್ರ ಪಡೆಯ ಬೇಟೆಗೆ ಮೇಜರ್ ಸತೀಶ್ ಅವರು ಸಂಜೆ ಹೊತ್ತು ಅವರಿದ್ದ ಎರಡು ಮನೆಗಳ ಹತ್ತಿರ ಬಂದು ಕಾಯುತ್ತ ಕುಳಿತಿದ್ದರು. ಡ್ರೋನ್ ಕ್ಯಾಮೆರಾ ಮೂಲಕ ಉಗ್ರರ ಇರುವು ಖಾತ್ರಿ ಆಗಿತ್ತು. ಮುಂದೆ ನಡೆದದ್ದು ಭಾರೀ ಗುಂಡಿನ ಮಳೆ.

ಸೈನಿಕರು ತಮ್ಮ ಮನೆಗಳ ಹತ್ತಿರ ಬಂದಿರುವುದನ್ನು ಗಮನಿಸಿದ ಉಗ್ರರು ತಮ್ಮ ಏಕೆ 47 ಗನ್ನುಗಳಿಂದ ಗುಂಡು ಹಾರಿಸುತ್ತ ಮನೆಗಳಿಂದ ಹೊರಗೆ ಧಾವಿಸಿದರು. ಮೇಜರ್ ಸತೀಶ್ ಅವರು ತನ್ನ ಸೈನಿಕರ ಜೊತೆ ಗುಂಡಿನ ಪ್ರತಿಧಾಳಿ ನಡೆಸಿದರು. ನೆಲದ ಮೇಲೆ ತೆವಳಿಕೊಂಡು ಹೋಗಿ ಉಗ್ರರ ಮೇಲೆ ಅವರು ಘಾತಕವಾಗಿ ಎರಗಿದರು. ಮೂವರೂ ಉಗ್ರರು ಹತರಾಗುವ ತನಕ ಅವರ ಬಂದೂಕು ಘರ್ಜಿಸುತ್ತಲೆ ಇತ್ತು. ಅಫ್ಜಲ್ ಗುರು ಸ್ಕ್ವಾಡ್ ಪೂರ್ತಿ ನಾಶವಾಗಿ ಹೋಗಿತ್ತು. ಆದರೆ ಈ ಮಿಷನ್ ಪೂರ್ತಿ ಆದಾಗ ಮೂವರು ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಮೇಜರ್ ಸತೀಶ್ ದಹಿಯಾ ತೀವ್ರವಾಗಿ ಗಾಯಗೊಂಡಿದ್ದರು. ಅದೇ ದಿನ ರಾತ್ರಿ ಅವರು ಮಿಲಿಟರಿ ಆಸ್ಪತ್ರೆಯಲ್ಲಿ ತನ್ನ ಕೊನೆಯುಸಿರು ಎಳೆದರು.

ಹುತಾತ್ಮರಾಗುವಾಗ ಅವರ ವಯಸ್ಸು ಕೇವಲ 31 ವರ್ಷ: ಸತೀಶ್ ಮತ್ತು ಸುಜಾತ ಪ್ರೀತಿಸಿ ಮದುವೆ ಆದವರು. ತಾನು ಉಗ್ರರ ಪಡೆಯನ್ನು ಎದುರಿಸಲು ತೆರಳುವಾಗಲೂ ಅವರು ತನ್ನ ಪತ್ನಿಗೆ ಪುಷ್ಪಗುಚ್ಛ ಮತ್ತು ಕೇಕ್ ಕಳುಹಿಸಿಕೊಟ್ಟು ತನ್ನ ಪ್ರೀತಿಯನ್ನು ತೋರಿದ್ದರು. ವಿವಾಹ ವಾರ್ಷಿಕೋತ್ಸವದ ಕಾರಣಕ್ಕೆ ಮೇಜರ್ ಸತೀಶ್ ನಾಲ್ಕು ದಿನ ರಜೆ ಅಪಲೈ ಮಾಡಿದ್ದು ರಜೆ ಕೂಡ ಮಂಜೂರಾಗಿತ್ತು. ಗೋವಾದ ಮಹೋನ್ನತವಾದ ತಾಜ್ ವಿವಾಂಟ ಸ್ಟಾರ್ ಹೋಟೆಲಿನಲ್ಲಿ ವಿವಾಹ ವಾರ್ಷಿಕೋತ್ಸವದ ಆಚರಣೆಗೆ ಎಲ್ಲಾ ಮುಂಗಡ ವ್ಯವಸ್ಥೆಗಳನ್ನು ಆತನೇ ಪೂರ್ತಿ ಮಾಡಿಯಾಗಿತ್ತು. ಅದನ್ನು ಹೆಂಡತಿಗೆ ಸಸ್ಪೆನ್ಸ್ ಆಗಿ ಹೇಳಬೇಕು ಎಂದು ಆತನ ಆಸೆ ಆಗಿತ್ತು. ಆದರೆ ವಿಧಿ ಲೀಲೆ ಬೇರೆಯೇ ಇತ್ತು. ಮುಂದೆ ಮೇಜರ್ ಸತೀಶ್ ಅವರ ಶೌರ್ಯ, ಸಾಹಸಗಳನ್ನು ಪರಿಗಣಿಸಿ ಭಾರತ ಸರಕಾರವು ಅವರಿಗೆ ಶೌರ್ಯ ಚಕ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಅವರ ಗ್ರಾಮದ ರಸ್ತೆಗೆ ಮತ್ತು ಒಂದು ಕಾಲೇಜಿಗೆ ಅವರ ಹೆಸರನ್ನು ಗೌರವಪೂರ್ವಕವಾಗಿ ಇಡಲಾಗಿದೆ. ಸೈನಿಕರ ಬದುಕು ನಮಗೆ ಪ್ರೇರಣೆ ಕೊಟ್ಟಷ್ಟು ಬೇರೆ ಯಾವುದೂ ಕೊಡುವುದಿಲ್ಲ.

ಜೈ ಹಿಂದ್

-ರಾಜೇಂದ್ರ ಭಟ್ ಕೆ

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!