ಉಡುಪಿ: ಕನ್ನಡ ಸಾಹಿತ್ಯ ಮತ್ತು ಜಾನಪದ ಅಧ್ಯಯನಕ್ಕೆ ಡಾ. ಎ. ಕೆ. ರಾಮಾನುಜನ್ ಅವರ ಕೊಡುಗೆ ಅಪೂರ್ವವಾದುದು. ಕನ್ನಡ ಜಾನಪದ ಅಧ್ಯಯನದಲ್ಲಿ ಸೈದ್ದಾಂತಿಕ ನೆಲೆಗಟ್ಟನ್ನು ನೀಡುವಲ್ಲಿ ರಾಮಾನುಜನ್ ಕೊಡುಗೆಯನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಅವರ ಶರಣರ ವಚನಗಳ ಕುರಿತಾದ “ದಿ ಸ್ಪೀಕಿಂಗ್ ಆಫ್ ಶಿವ” ಅಂಗ್ಲ ಕೃತಿಯು ವಚನ ಸಾಹಿತ್ಯವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಖ್ಯಾತ ವಿದ್ವಾಂಸರು, ವಿಶ್ರಾಂತ ಕುಲಪತಿಗಳು ಮತ್ತು ಜರ್ಮನಿಯ ವುರ್ಜ್ಬರ್ಗ್ ಇಂಡಸ್ ವಿಶ್ವವಿದ್ಯಾನಿಲಯದ ಅತಿಥಿ ಪ್ರಾಧ್ಯಾಪಕರಾದ ಪ್ರೊ. ಬಿ.ಎ. ವಿವೇಕ್ ರೈ ಹೇಳಿದರು.
ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಮತ್ತು ಉಡುಪಿಯ ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ನಡೆದ ’ಎ.ಕೆ. ರಾಮಾನುಜನ್ ಅವರ ಕೊಡುಗ” ಸಂವಾದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮವನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಡಿ.ಬಿ. ನಾಯಕ್ ಅವರು ಉದ್ಘಾಟಿಸಿದರು.
ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಎಸ್. ಎ. ಕೃಷ್ಣಯ್ಯ ಅವರು ಮಾತನಾಡಿ ಜಾಗತಿಕವಾಗಿ ಜಾನಪದಕ್ಕೆ ಕೊಡುಗೆ ನೀಡಿದ ೧೮ ವಿದ್ವಾಂಸರ ಸಂದರ್ಶನವನ್ನು ನಡೆಸಲಾಗಿದೆ. ಅವರಲ್ಲಿ ಎ.ಕೆ. ರಾಮಾನುಜನ್ ಅವರು ಜಾನಪದ ಸಂಶೋಧನೆ ತನಗೆ ತೆರೆದುಕೊಂಡ ರೀತಿಯನ್ನು ವಿವರಿಸಿದ್ದಾರೆಂದು ಸಂದರ್ಶನವನ್ನು ಅಧಾರವಾಗಿಟ್ಟುಕೊಂಡು ರಾಮಾನುಜನ್ ಅವರ ಕೊಡುಗೆಯನ್ನು ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಗಣನಾಥ ಎಕ್ಕಾರು ಅವರು ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಐ.ಕ್ಯೂ.ಎ.ಸಿ. ಮುಖ್ಯಸ್ಥರಾದ ಡಾ. ಸುರೇಶ್ ರೈ. ಕೆ. ಉಪಸ್ಥಿತರಿದ್ದರು. ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ಟ್ರಸ್ಟಿ ಮ್ಯೂಸಿಕಾ ಸುಪ್ರೀಯ ವಂದಿಸಿದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಶರ್ಮಿಳಾ ಹಾರಾಡಿ ಕಾರ್ಯಕ್ರಮ ನಿರೂಪಿಸಿದರು.