ಉಡುಪಿ: ಕೊಡಿಬೆಟ್ಟು ಗ್ರಾಮ ಪಂಚಾಯತ್ ವಠಾರದಲ್ಲಿ ಆಯೋಜನೆಗೊಂಡ ಕ್ಲೀನ್ ಇಂಡಿಯಾ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ ಅವರು ನೆರವೇರಿಸಿದರು.
ಪ್ಲಾಸ್ಟಿಕ್ ಕಸ ಹೆಕ್ಕುವ ಮೂಲಕ ಅವರು ಚಾಲನೆ ನೀಡಿ ಮಾತನಾಡುತ್ತಾ, ಸ್ವಚ್ಛತೆಯನ್ನು ಕಾಪಾಡುವ ಸಲುವಾಗಿ ಪ್ರತಿಯಿಬ್ಬರೂ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು. ಘನ, ದ್ರವ ತ್ಯಾಜ್ಯಗಳ ವಿಲೇವಾರಿಯಲ್ಲಿ ಸಾರ್ವಜನಿಕರ ಪಾತ್ರ ಕೂಡ ಬಹುಮುಖ್ಯವಾಗಿದೆ. ತಮ್ಮ ಮನೆಯವರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮಕ್ಕಳು ನಾಂದಿ ಹಾಡಿದರೆ ಕ್ಲೀನ್ ಇಂಡಿಯಾ ಪರಿಕಲ್ಪನೆ ಸಾಕಾರಗೊಳ್ಳುವುದು ಎಂದರು.
ಕೊಡಿಬೆಟ್ಟು ಗ್ರಾಮ ಪಂಚಾಯತ್ ವತಿಯಿಂದ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿ ಇದೇ ರೀತಿ ಮುಂದುವರೆಸಿಕೊಂಡು ಹೋಗಬೇಕು ಎಂದು ಹೇಳಿದರು.
ಕೊಡಿಬೆಟ್ಟು ಗ್ರಾಮದಿಂದ ಆರಂಭವಾದ ಸ್ವಚ್ಛತಾ ಜಾಥಾದಲ್ಲಿ ಸ್ವಚ್ಛತೆಯ ಬಗ್ಗೆ ಸುತ್ತಮುತ್ತಲಿನ ಅಂಗಡಿ ಮುಂಗಟ್ಟು ಹಾಗೂ ಸ್ಥಳೀಯರಲ್ಲಿ ಜಾಗೃತಿ ಮೂಡಿಸಲಾಯಿತು. ಜಾಥಾದಲ್ಲಿ ಸುಮಾರು 300ಕ್ಕೂ ಹೆಚ್ಚಿನ ಜನರು ಭಾಗವಹಿಸಿದರು. ಕೊನೆಯಲ್ಲಿ ಸುಮಾರು 100ಕ್ಕಿಂತಲೂ ಹೆಚ್ಚು ಪ್ಲಾಸ್ಟಿಕ್ ಚೀಲ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಲು ನೀಡಲಾಯಿತು.
ಜಾಥಾದ ಕೊನೆಯಲ್ಲಿ ಮಾತನಾಡಿದ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಸಮರ್ಪಕ ತ್ಯಾಜ್ಯ ವಿಲೇವಾರಿಗೆ ಮೊದಲ ಆದ್ಯತೆ ನೀಡಬೇಕು. ಇದಕ್ಕೆ ಸರಕಾರ ಹೊಣೆ ಎಂದು ಸುಮ್ಮನೆ ಕೂರಿದರೆ ಪ್ರಯೋಜನವಿಲ್ಲ.
ಎಲ್ಲರೂ ಸಹಭಾಗಿತ್ವದೊಂದಿಗೆ ಕ್ಲೀನ್ ಇಂಡಿಯಾ ಪರಿಕಲ್ಪನೆ ಸಾಕಾರಗೊಳಿಸಲು ಕ್ರಿಯಾಶೀಲ ಪ್ರಯತ್ನಗಳನ್ನು ಮಾಡಬೇಕು. ಸ್ವಚ್ಛತಾ ಜಾಥಾವನ್ನು ಅರ್ಥಪೂರ್ಣವಾಗಿ ಸಂಘಟಿಸಿರುವುದು ಶ್ಲಾಘನೀಯ ಎಂದರು.
ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿ.ಪಂ. ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ವಿಲ್ಫ್ರೆಡ್ ಡಿಸೋಜ, ಕೊಡಿಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರು, ಪಿಡಿಓ, ಉಪಾಧ್ಯಕ್ಷರು, ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ರವೀಂದ್ರ ಬೋರ್ಕರ್, ಪಂಚಾಯತ್ ಸದಸ್ಯರು ಮುಂತಾದವರು ಉಪಸ್ಥಿತರಿದ್ದರು.
ಕೊಡಿಬೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸದಾನಂದ ಪ್ರಭು ಸ್ವಾಗತಿಸಿ, ಗ್ರಾ. ಪಂ. ಅಧ್ಯಕ್ಷೆ ಆಶಾ ಡಿ ಶೆಟ್ಟಿ ವಂದನಾರ್ಪಣೆಗೈದರು. ಕೊಡಿಬೆಟ್ಟು ಪಂಚಾಯತ್ ನ ಉದಯ ಕಾರ್ಯಕ್ರಮ ನಿರೂಪಿಸಿದರು.