ಉಡುಪಿ: ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಉಡುಪಿಯ ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಇವರ ವತಿಯಿಂದ 1947 ಆಗಸ್ಟ್ 15 ರಂದು ಸ್ವಾತಂತ್ರ್ಯ ದೊರಕಿದ ಸಂದರ್ಭದ ಉಡುಪಿಯ ಸಂಭ್ರಮದ ಆಚರಣೆಯ ಭಿತ್ತಿಪತ್ರ ಹಾಗೂ ಛಾಯಾಚಿತ್ರಗಳು ಮೊದಲಾದ ಐತಿಹಾಸಿಕ ದಾಖಲಾತಿಗಳನ್ನು ಇದುವರೆಗೂ ಸಂರಕ್ಷಿಸಿಕೊಂಡು ಬಂದಿರುವ ಉಡುಪಿಯ ಐಡಿಯಲ್ ಸ್ಟುಡಿಯೋ ಮಾಲೀಕರಾದ ರಮೇಶ್ ನಾಯಕ್ ಹಾಗೂ ಶಿವಾನಂದ್ ನಾಯಕ್ ಇವರನ್ನು ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ಅಧ್ಯಕ್ಷರಾದ ಇಂದ್ರಾಳಿ ಜಯಕರ ಶೆಟ್ಟಿಯವರು ಗೌರವಿಸಿದರು.
ಇದೇ ಸಂದರ್ಭದಲ್ಲಿ ಸಂಶೋಧಕ ಪ್ರೊ. ಕೃಷ್ಣಯ್ಯ ಅವರು ನಮ್ಮ ಪುರಾಣಗಳಲ್ಲಿ ಪಂಚವಟಿಯಲ್ಲಿ ಇತ್ತು ಎನ್ನಲಾದ ಅರವತ್ತು ನಾಲ್ಕು ವರ್ಷಗಳಿಗೊಮ್ಮೆ ಹೂ, ಕಾಯಿ ಬಿಡುವ ಅಪರೂಪದ ಔಷಧೀಯ ತಳಿ 75 ಶ್ರೀತಾಳೆ ಗಿಡಗಳನ್ನು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ಯು ವಿಶ್ವನಾಥ್ ಶೆಣೈ ಹಾಗೂ ಅಧ್ಯಕ್ಷ ಪ್ರೊ. ಶಂಕರ್ ಅವರಿಗೆ ನೀಡಿದರು. ಇದೇ ಸಂದರ್ಭದಲ್ಲಿ ಇತಿಹಾಸತಜ್ಞ ಶ್ರೀಧರ್ ಭಟ್ ಅವರು ಕೊಂಕಣಿ ತರ್ಜುಮೆಯ ಭಿತ್ತಿಪತ್ರವನ್ನು ವಾಚಿಸಿದರು.
ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಗೀತಂ ಗಿರೀಶ್ ಸ್ವಾಗತಿಸಿ, ಮರವಂತೆ ನಾಗರಾಜ್ ಹೆಬ್ಬಾರ್ ವಂದಿಸಿದರು. ಉಪಾಧ್ಯಕ್ಷೆ ಸಂಧ್ಯಾ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಾಲಕ ರವಿರಾಜ್ ಹೆಚ್. ಪಿ ಕಾರ್ಯಕ್ರಮ ನಿರೂಪಿಸಿದರು.