ಉಡುಪಿ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕಾವ್ರಾಡಿ ಗ್ರಾಮ ಪಂಚಾಯತ್ ಮತ್ತು ಬ್ರಹ್ಮಾವರ ತಾಲೂಕಿನ ಮಂದಾರ್ತಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ನಡೂರು ಗ್ರಾಮಗಳಲ್ಲಿನ ಶೇ. 100 ರಷ್ಟು ಜನತೆ ಕೋವಿಡ್ ಲಸಿಕೆ ಪಡೆದು ಕೋವಿಡ್ ನಿಯಂತ್ರಣದಲ್ಲಿ ಮಾದರಿ ಗ್ರಾಮಗಳಾಗಿ ಗುರುತಿಸಿಕೊಂಡಿವೆ.
ಈ ಗ್ರಾಮಗಳಲ್ಲಿನ 18 ವರ್ಷ ಮೇಲ್ಪಟ್ಟ ಎಲ್ಲಾ ಸಾರ್ವಜನಿಕರೂ ಕೋವಿಡ್ ಪ್ರಥಮ ಡೋಸ್ ಲಸಿಕೆ ಪಡೆಯುವಲ್ಲಿ 100% ಯಶಸ್ವಿಯಾಗಿದ್ದು, ಹಲವು ಮಂದಿ ಎರಡನೇ ಹಂತದ ಲಸಿಕೆಯನ್ನೂ ಸಹ ಪಡೆದಿದ್ದಾರೆ. ಕಾಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಡೂರು ಗ್ರಾಮದಲ್ಲಿ 1888 ಮಂದಿ 18 ವರ್ಷ ಮೇಲ್ಪಟ್ಟವರಿದ್ದು, ಇವರೆಲ್ಲರೂ ಮೊದಲ ಹಂತದ ಕೋವಿಡ್ ಲಸಿಕೆ ಪಡೆದಿದ್ದಾರೆ. ಈ ಗ್ರಾಮದಲ್ಲಿ ಪಂಚಾಯತ್ ನ ಎಲ್ಲಾ ಸದಸ್ಯರು, ಪಂಚಾಯತ್ ಪಿಡಿಓ ಮತ್ತು ಸಿಬ್ಬಂದಿ ಹಾಗೂ ಮಂದಾರ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಸಿಬ್ಬಂದಿ ವರ್ಗ ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಗ್ರಾಮಸ್ಥರಿಗೆ ಕೋವಿಡ್ ನ ಕುರಿತು ಅರಿವು ಮೂಡಿಸುವುದರ ಜೊತೆಗೆ ಲಸಿಕೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದರ ಪರಿಣಾಮ ಎಲ್ಲಾ ಗ್ರಾಮಸ್ಥರೂ ಯಾವುದೇ ಭಯವಿಲ್ಲದೆ ಕೋವಿಡ್ ಲಸಿಕೆಯನ್ನು ಪಡೆದಿದ್ದಾರೆ.
ಅಲ್ಲದೇ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ, ಲಸಿಕೆ ಪಡೆದಿರುವ ಮತ್ತು ಪಡೆಯದಿರುವ ಅರ್ಹ ನಾಗರೀಕರ ಮಾಹಿತಿ ಸಂಗ್ರಹಿಸಿ ಲಸಿಕೆ ಕಾರ್ಯ ಸಂಪೂರ್ಣವಾಗಲು ಸಹಕರಿಸಿದ್ದಾರೆ. ಅಶಕ್ತರು ಮತ್ತು ಲಸಿಕಾ ಕೇಂದ್ರಗಳಿಗೆ ಬರಲು ಸಾಧ್ಯವಾಗದ ವೃದ್ದರಿಗೆ ಮನೆಗೆ ತೆರಳಿ ಲಸಿಕೆ ನೀಡಲಾಗಿದೆ. ನಿರಂತರವಾಗಿ ವ್ಯಾಕ್ಸಿನೇಶನ್ ಶಿಬಿರಗಳನ್ನು ಆಯೋಜಿಸುವ ಮೂಲಕ 18 ವರ್ಷ ಮೇಲ್ಪಟ್ಟ ಯಾವುದೇ ಗ್ರಾಮಸ್ಥರು ಲಸಿಕೆಯಿಂದ ವಂಚಿತರಾಗದಂತೆ ಕಾರ್ಯನಿರ್ವಹಿಸಲಾಗಿದೆ.
ಗ್ರಾಮ ಮಟ್ಟದ ಕೋವಿಡ್ ಟಾಸ್ಕ್ ಪೋರ್ಸ್ ತಂಡ ಕೂಡ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಿದ ಕಾರಣ ಜಿಲ್ಲೆಯಲ್ಲಿ ಈ ಹಿಂದೆ ಪಾಸಿಟಿವ್ ಪ್ರಮಾಣ ಹೆಚ್ಚಿರುವ ಗ್ರಾಮಗಳನ್ನು ಸೀಲ್ ಡೌನ್ ಮಾಡುವ ಸಂದರ್ಭದಲ್ಲಿ ಸಹ ಈ ಗ್ರಾಮ ಸೀಲ್ಡೌನ್ ಗೆ ಒಳಪಟ್ಟಿರಲಿಲ್ಲ. ಹೆಚ್ಚಿನ ಪಾಸಿಟಿವ್ ಪ್ರಕರಣಗಳು ವರದಿಯಾಗಿರಲಿಲ್ಲ.
ಕಾವ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾವ್ರಾಡಿ ಮತ್ತು ಹಳ್ನಾಡು ಗ್ರಾಮದಲ್ಲಿ 4032 ಮಂದಿ 18 ವರ್ಷ ಮೇಲ್ಪಟ್ಟವರಿದ್ದು ಇವರೆಲ್ಲರೂ ಮೊದಲ ಹಂತದ ಕೋವಿಡ್ ಲಸಿಕೆ ಪಡೆದಿದ್ದಾರೆ. 45 ವರ್ಷ ಮೇಲ್ಪಟ್ಟವರಲ್ಲಿ ಈ ಮೊದಲೇ 100% ಸಾಧನೆ ಮಾಡಿದ ಇಲ್ಲಿ, 18 ವರ್ಷ ಮೇಲ್ಪಟ್ಟವವರು ತಾವೇ ಉತ್ಸಾಹದಿಂದ ಬಂದು ಲಸಿಕೆ ಪಡಿದಿದ್ದಾರೆ. ಲಸಿಕೆ ಪಡೆಯದೇ ದೂರ ಉಳಿದಿದ್ದವರನ್ನು ಗುರುತಿಸಿ, ವೈದ್ಯರ ತಂಡದೊಂದಿಗೆ ಅವರ ಮನೆಗಳಿಗೆ ತೆರಳಿ, ಕೋವಿಡ್ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿ ಲಸಿಕೆ ನೀಡಲಾಗಿದೆ.
“ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಈಗಾಗಲೇ 78% ಲಸಿಕೆ ನೀಡಲಾಗಿದ್ದು, ಎಲ್ಲಾ ಗ್ರಾಮ ಪಂಚಾಯತ್ ಗಳು ತಮ್ಮ ವ್ಯಾಪ್ತಿಯ ಗ್ರಾಮಸ್ಥರು ಶೇ.100 ಲಸಿಕೆ ಪಡೆದು ಕೋವಿಡ್ 3 ನೇ ಅಲೆಗೆ ಸಿಲುಕದಂತೆ ಎಚ್ಚರವಹಿಸಬೇಕು. ಯಾವುದೇ ಗ್ರಾಮಸ್ಥರು ಲಸಿಕೆಯಿಂದ ದೂರ ಉಳಿಯದಂತೆ, ಎಲ್ಲಾ ಗ್ರಾಮೀಣ ಕೋವಿಡ್ ಟಾಸ್ಕ್ ಫೋರ್ಸ್ಗಳು ಯೋಜನೆ ರೂಪಿಸಿ ಕಾರ್ಯನಿರ್ವಹಿಸಬೇಕು. ಆ ಮೂಲಕ ತಮ್ಮ ಗ್ರಾಮದ ಜನತೆಯನ್ನು ಕೋವಿಡ್ ನ ಅಪಾಯದಿಂದ ಪಾರು ಮಾಡಬೇಕು“ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ಹೇಳಿದ್ದಾರೆ.
“ಕೋವಿಡ್ 3ನೇ ಅಲೆಯು ಮಕ್ಕಳಿಗೆ ಮಾತ್ರ ಭಾದಿಸಲಿದೆ ಎನ್ನುವುದು ತಪ್ಪು, ಇದು ಎಲ್ಲರಿಗೂ ಬಾಧಿಸಲಿದೆ ಎನ್ನುವ ತಜ್ಞರ ಅಭಿಪ್ರಾಯಗಳು ಕೇಳಿ ಬರುತ್ತಿದೆ. 3ನೇ ಅಲೆಯ ಅಪಾಯದಿಂದ ತಪ್ಪಿಸಿಕೊಳ್ಳಲು ಪ್ರತಿಯೊಬ್ಬರೂ ಕನಿಷ್ಠ 1 ಡೋಸ್ ಕೋವಿಡ್ ಲಸಿಕೆ ಪಡೆಯಬೇಕು” ಎಂದು ಜಿಲ್ಲಾ ಕೋವಿಡ್ ಲಸಿಕಾ ನೋಡೆಲ್ ಅಧಿಕಾರಿ ಡಾ. ಎಂ.ಜಿ.ರಾಮ ಹೇಳಿದ್ದಾರೆ.
ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ. ಲತಾ ನಾಯಕ್ ಮತ್ತು ಅವರ ತಂಡ ಹಾಗೂ ಗ್ರಾಮದ ಅಧ್ಯಕ್ಷರು ಮತ್ತು ಎಲ್ಲಾ ಸದಸ್ಯರು ಹಾಗೂ ಪಿಡಿಓ, ಮಂದಾರ್ತಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ವೈದ್ಯರಾದ ಡಾ. ಅನಿಲ್ ಮತ್ತು ಅವರ ತಂಡ ಹಾಗೂ ಗ್ರಾಮದ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಪಿಡಿಓ ಈ ಮಾದರಿ ಕಾರ್ಯದಲ್ಲಿ ಪರಸ್ಪರ ಸಮನ್ವಯದಿಂದ ಯೋಜನೆ ರೂಪಿಸಿ ಕರ್ತವ್ಯನಿರ್ವಹಿಸಿದ್ದಾರೆ.
ಜಿಲ್ಲೆಯ ಜನಸಂಖ್ಯೆಯಲ್ಲಿ ಕೋವಿಡ್ ಲಸಿಕೆ ಪಡೆಯಲು ಒಟ್ಟು 10,02,762 ಮಂದಿಯನ್ನು ಗುರುತಿಸಿದ್ದು, ಆಗಸ್ಟ್ 31 ರ ವರೆಗೆ 7,51,150 ಮಂದಿ ಲಸಿಕೆ ಪಡೆದಿದ್ದು 75% ಸಾಧನೆ ಆಗಿದೆ. ಇದೇ ಅವಧಿಯಲ್ಲಿ 2 ನೇ ಡೋಸ್ ಗೆ ಗುರುತಿಸಲಾಗಿರುವ 3,08,326 ಮಂದಿಯಲ್ಲಿ 2,81,820 ಮಂದಿ ಲಸಿಕೆ ಪಡೆದಿದ್ದು ಇದರಲ್ಲಿ 91% ಸಾಧನೆ ಮಾಡಲಾಗಿದೆ. ಇದು ರಾಜ್ಯದಲ್ಲೇ ಅತ್ಯಧಿಕವಾಗಿದೆ.