ಕುಕ್ಕೆಹಳ್ಳಿ ವ್ಯಾಪ್ತಿಯಲ್ಲಿ ಹೆಚ್ಚಿನ ರೀತಿಯಲ್ಲಿ ವಿದ್ಯುತ್ ಸಮಸ್ಯೆ ಸಂಭವಿಸುತ್ತಿದ್ದು ಈ ಬಗ್ಗೆ ಹಲವು ದಿನಗಳಿಂದ ಸಾರ್ವಜನಿಕರಿಂದ ದೂರುಗಳು ಬರುತ್ತಿದೆ. ಈ ನಿಟ್ಟಿನಲ್ಲಿ ಸೋಮವಾರ ಕುಕ್ಕೆಹಳ್ಳಿ ಪಂಚಾಯತ್ ನಲ್ಲಿ ಶಾಸಕ ಲಾಲಾಜಿ ಆರ್ ಮೆಂಡನ್ ಮೆಸ್ಕಾಂ ಅಧಿಕಾರಿಗಳ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು. ಸಭೆಯಲ್ಲಿ ಪೆರ್ಡೂರು, ಬೈರಂಪಳ್ಳಿ, ಕುಕ್ಕೆಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರುಗಳು, ಸದಸ್ಯರು ದಿನನಿತ್ಯ ಆಗುತ್ತಿರುವ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರು.
ಹಲವೆಡೆ ಲೊ ವೋಲ್ಟೇಜ್ ಸಮಸ್ಯೆ ಇದ್ದು ರಾತ್ರಿ ಸಮಯದಲ್ಲಿ ವಿದ್ಯುತ್ ಕಡಿತವಾಗುತ್ತಿರುವ ಕುರಿತು ಚರ್ಚೆ ನಡೆಯಿತು. ಒಂದು ವಾರದಲ್ಲಿ ಪರ್ಕಳ ಸಬ್ ಸ್ಟೇಷನ್ ನಿಂದ ಹೆರ್ಗ -ಹಾವಂಜೆ ವಿದ್ಯುತ್ ಲೈನ್ ಕುಕ್ಕೆಹಳ್ಳಿ ಪಂಚಾಯತ್ ವ್ಯಾಪ್ತಿಗೆ ಸಂಪರ್ಕಿಸಿ ವಿದ್ಯುತ್ ಸಮಸ್ಯೆಗೆ ತಾರ್ಕಿಕ ಅಂತ್ಯ ನೀಡುವಂತೆ ನಿರ್ಧಾರಕ್ಕೆ ಬರಲಾಯಿತು. ಕುಕ್ಕೆಹಳ್ಳಿ, ಬೈರಂಪಳ್ಳಿ, ಪೆರ್ಡೂರು ಪಂಚಾಯತ್ ವ್ಯಾಪ್ತಿಯು ಗ್ರಾಮೀಣ ಪ್ರದೇಶವಾಗಿರುವುದರಿಂದ ಆದಷ್ಟು ಜನರ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸಿ, ಯಾವುದೇ ದೂರುಗಳು ಬಾರದಂತೆ ಕಾರ್ಯನಿರ್ವಹಿಸುವಂತೆ ಶಾಸಕ ಮೆಂಡನ್ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಬೈರಂಪಳ್ಳಿ ಪಂಚಾಯತ್ ಅಧ್ಯಕ್ಷ ಜಿಯಾನಂದ ಹೆಗ್ಡೆ, ಪೆರ್ಡೂರು ಪಂಚಾಯತ್ ಅಧ್ಯಕ್ಷ ದೇವು ಪೂಜಾರಿ, ಕುಕ್ಕೆಹಳ್ಳಿ ಪಂಚಾಯತ್ ಅಧ್ಯಕ್ಷ ಪುರಂದರ್ ಕೋಟ್ಯಾನ್, ಉಪಾಧ್ಯಕ್ಷೆ ಹೇಮಲತಾ ಶೆಟ್ಟಿ, ಪಂಚಾಯತ್ ಸದಸ್ಯರುಗಳಾದ ಶಂಕರ್ ಸಾಲ್ಯಾನ್, ಜಯಕರ ನಾಯಕ್, ಸೌಮ್ಯ ಶೆಟ್ಟಿ, ಉಷಾ ಪೂಜಾರಿ, ಪೆರ್ಡೂರು ಪಂಚಾಯತ್ ಸದಸ್ಯ ತುಕಾರಾಂ ನಾಯಕ್, ಪ್ರವೀಣ್ ಶೆಟ್ಟಿ, ಸತೀಶ್ ಶೆಟ್ಟಿ ಬೈರಂಪಳ್ಳಿ, ಪ್ರಸಾದ್ ಹೆಗ್ಡೆ, ಹರಿಜೀವನ್ ಹೆಗ್ಡೆ, ಪ್ರಕಾಶ್ ಕುಕ್ಕೆಹಳ್ಳಿ, ಸುಭಾಸ್ ಪೆರ್ಡೂರು ಹಾಗೂ ಮಣಿಪಾಲ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಶಾಂತ್ ಪುತ್ರನ್, ಬ್ರಹ್ಮಾವರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಹಾಗೂ ಮೆಸ್ಕಾಂ ಇಲಾಖೆ ಇತರ ಅಧಿಕಾರಿಗಳು, ಅರಣ್ಯ ಇಲಾಖೆ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.