ಲಾಕ್ ಡೌನ್ ಸಂದರ್ಭದಲ್ಲಿ ಸಂಘ ಸಂಸ್ಥೆಗಳು ಹಾಗೂ ಹಲವರು ವೈಯಕ್ತಿವಾಗಿ ಹತ್ತು ಹಲವು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಂತಹದೇ ಒಂದು ಉತ್ತಮ ಕಾರ್ಯ ಸೇವಾ ಭಾರತಿ ಕುಂದಾಪುರದ ವತಿಯಿಂದ ನಡೆದಿದೆ. ರಾ.ಹೆ.66 ರಲ್ಲಿ ಸಂಚರಿಸುವ ವಾಹನಗಳ ಚಾಲಕರಿಗೆ ಪ್ರತಿದಿನ 300 ಊಟದ ಪೊಟ್ಟಣಗಳನ್ನು ಉಚಿತವಾಗಿ ನೀಡುವ ಕಾರ್ಯ 36 ದಿನಗಳಿಂದ ನಡೆಯುತ್ತಿದ್ದು ಭಾನುವಾರ ಮುಕ್ತಾಯಗೊಂಡಿತು.
ಕೋಟೇಶ್ವರದ ರಾ.ಹೆ.66 ರ ಬೀಜಾಡಿಯಲ್ಲಿ 200 ಹಾಗೂ ತೆಕ್ಕಟ್ಟೆಯಲ್ಲಿ 100 ಆಹಾರದ ಪೊಟ್ಟಣಗಳೊಂದಿಗೆ ಬನ್ ಹಾಗೂ ನೀರಿನ ಬಾಟಲ್‌ಗಳನ್ನು ನೀಡುತ್ತಿದ್ದರು. ಕೇವಲ 30 ಪೊಟ್ಟಣಗಳೊಂದಿಗೆ ಆರಂಭಗೊಂಡ ಈ ಕಾರ್ಯ, ದಾನಿಗಳ ಸಹಾಯದಿಂದ ಹೆಚ್ಚಿನ ಚಾಲಕರಿಗೆ ನೀಡಲು ಸಾಧ್ಯವಾಯಿತು. ಧನ ಸಹಾಯದ ಮೂಲಕ ಇನ್ನು ಕೆಲವರು ಅಕ್ಕಿ, ತರಕಾರಿ ಮುಂತಾದ ವಸ್ತು ರೂಪದಲ್ಲಿ ಕಾರ್ಯಕ್ಕೆ ಕೈಜೋಡಿಸಿದ್ದಾರೆ.
ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಪ್ರಾಕಾರದಲ್ಲಿರುವ ರಮೇಶ ಮಂಜ ಅವರ ಮನೆಯಲ್ಲಿ ಪಲಾವ್, ಚಿತ್ರಾನ್ನ ಮುಂತಾದ ಸಸ್ಯಹಾರಿ ರೈಸ್ ಬಾತನ್ನು ತಯಾರಿಸಿ, ಪೊಟ್ಟಣಗಳಲ್ಲಿ ಪ್ಯಾಕ್ ಮಾಡಿ ನೀಡಲಾಗುತ್ತಿತ್ತು. ಆಹಾರ ಪಧಾರ್ಥ ತಯಾರಿಸಿಲು, ತಯಾರಾದ ಊಟವನ್ನು ಪೊಟ್ಟಣದಲ್ಲಿ ತುಂಬಿಸಿ ಪ್ಯಾಕ್ ಮಾಡಲು ಹಾಗೂ ಸರಿಯಾದ ಸಮಯಕ್ಕೆ ಚಾಲಕರಿಗೆ ನೀಡಲು ಸೇವಾ ಭಾರತಿ ಸಂಸ್ಥೆ ತಮ್ಮ ಸ್ವಯಂ ಸೇವಕರನ್ನು ಮೂರು ತಂಡವಾಗಿ ವಿಂಗಡಿಸಿಕೊಂಡಿತು. ಬೇರೆ ರಾಜ್ಯಗಳಿಂದ ಬರುವ ಚಾಲಕರು, ಆಸ್ಪತ್ರೆಗೆ ತೆರಳುವ ರೋಗಿಗಳು ಯಾ ಅವರ ಮನೆಯವರಿಗೆ ಈ ಕಾರ್ಯದಿಂದ ಉಪಯೋಗವಾಗಿದೆ.
ಲಾಕ್ ಡೌನ್ ಸಮಯದಲ್ಲಿ ಸರಕು ಸಾಮಾಗ್ರಿ, ತರಕಾರಿಗಳನ್ನು ಕೊಂಡು ಹೋಗಲು ಯಾವುದೇ ನಿರ್ಬಂಧಗಳಿಲ್ಲ. ಅಲ್ಲದೇ ತೀರಾ ಅಗತ್ಯದ ಔಷಧಿ, ಆಕ್ಸಿಜನ್ ಸಾಗಾಟ ಮಾಡುವ ವಾಹನ ಚಾಲಕರು ಎಲ್ಲಿಯೂ ನಿಲ್ಲಿಸದೇ ನಿರಂತರವಾಗಿ ಚಲಿಸಿ ಶೀಘ್ರವಾಗಿ ತಲುಪಬೇಕು. ಚಾಲಕರಿಗೆ ಊಟಕ್ಕೆ ಯಾವುದೇ ಹೋಟೇಲ್‌ಗಳು ಸಿಗುವುದಿಲ್ಲ ಹಾಗೂ ಈ ಎಲ್ಲ ಸಾಮಾಗ್ರಿಗಳು ಎಲ್ಲರಿಗೂ ದಿನ ನಿತ್ಯದ ಅಗತ್ಯದ ವಸ್ತುಗಳಾಗಿದ್ದರಿಂದ ಚಾಲಕರು ಯಾವುದೇ ತೊಂದರೆಗೆ ಒಳಗಾಗಬಾರದು ಎಂದು ಈ ಕಾರ್ಯ ಆರಂಭಿಸಿರುವ ಉದ್ದೇಶ ಎಂದು ಸೇವಾ ಭಾರತಿ ಕುಂದಾಪುರ ಇದರ ಸುಹಾಸ್ ಪೈ ಹೇಳಿದರು. ಮುಂದಿನ ದಿನಗಳಲ್ಲಿ ವಾರಾತ್ಯಂದ ಲಾಕ್ ಡೌನ್ ಸಂದರ್ಭದಲ್ಲಿ ಅಗತ್ಯವಿದ್ದ ಕಡೆಗಳಲ್ಲಿ ಈ ಕಾರ್ಯವನ್ನು ಮುಂದುವರೆಸುವ ಇರಾದೆ ಹೊಂದಿದ್ದೇವೆ ಎನ್ನುತ್ತಾರೆ ಸುಹಾಸ್.