ನವದೆಹಲಿ, ಸೆ.10: ಮಂಗಳವಾರ ನವದೆಹಲಿಗೆ ಹಿಂತಿರುಗಿದ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ರ ಭಾರತೀಯ ತಂಡವನ್ನು ಕೇಂದ್ರ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವ ಮನ್ಸುಖ್ ಮಾಂಡವಿಯಾ ಅಭಿನಂದಿಸಿದರು. ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ಪದಕ ವಿಜೇತರಿಗೆ ಸಚಿವರು ಚೆಕ್ ವಿತರಿಸಿದರು. ಚಿನ್ನದ ಪದಕ ವಿಜೇತರಿಗೆ ತಲಾ 75 ಲಕ್ಷ ರೂಪಾಯಿ, ಬೆಳ್ಳಿ ಪದಕ ವಿಜೇತರಿಗೆ 50 ಲಕ್ಷ ರೂಪಾಯಿ ಮತ್ತು ಕಂಚಿನ ಪದಕ ವಿಜೇತರಿಗೆ 30 ಲಕ್ಷ ರೂಪಾಯಿಗಳನ್ನು ನೀಡಲಾಯಿತು.
ಪ್ಯಾರಾಲಿಂಪಿಕ್ಸ್‌ನಲ್ಲಿನ ಸಾಧನೆಗಾಗಿ ಪದಕ ವಿಜೇತರನ್ನು ಶ್ಲಾಘಿಸಿದ ಸಚಿವ ಮಾಂಡವೀಯ ಅವರು, ಕಳೆದ ದಶಕದಲ್ಲಿ ದೇಶದ ಪ್ರದರ್ಶನ ಸುಧಾರಿಸಿದೆ. ಈ ವರ್ಷದ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿ 29 ಪದಕಗಳ ದಾಖಲೆಯ ಸಾಧನೆ ಇದಕ್ಕೆ ಹಿಡಿದ ಕನ್ನಡಿ ಎಂದರು. ಈ ಬಾರಿ ಭಾರತಕ್ಕೆ 7 ಚಿನ್ನ, 9 ಬೆಳ್ಳಿ ಮತ್ತು 13 ಕಂಚು ಲಭಿಸಿದೆ. ಕ್ರೀಡಾಪಟುಗಳು ಮತ್ತು ತರಬೇತುದಾರರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ, ಇದರಿಂದ ಆಟಗಾರರು ಉತ್ತಮ ತರಬೇತಿಯನ್ನು ಪಡೆಯಬಹುದು ಎಂದು ಅವರು ಹೇಳಿದರು.