ಓವಲ್/ಲಂಡನ್: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ನ ಮೂರನೆಯ ದಿನವಾದ ಶನಿವಾರ, ಆರಂಭಿಕ ಆಟಗಾರ ರೋಹಿತ್ ಶರ್ಮಾ ಭರ್ಜರಿ ಶತಕದೊಂದಿಗೆ ಆಂಗ್ಲರನ್ನು ಕಾಡಿದರು.
256 ಎಸೆತಗಳನ್ನು ಎದುರಿಸಿದ ರೋಹಿತ್, 14 ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿಸಿ ಅತ್ಯಾಕರ್ಷಕ ಬ್ಯಾಟಿಂಗ್ ಮೂಲಕ 127 ರನ್ ಕಲೆ ಹಾಕಿದರು. 94 ರನ್ ಗಳಿಸಿದ ಸಂದರ್ಭದಲ್ಲಿ ರೋಹಿತ್ ಶರ್ಮಾ ಕ್ರೀಸ್ ಬಿಟ್ಟು ಮುನ್ನುಗ್ಗಿ ಗಗನಚುಂಬಿ ಹೊಡೆತದೊಂದಿಗೆ ಸಿಕ್ಸರ್ ಬಾರಿಸಿ ಶತಕ ಗಳಿಸಿದಾಗ ಭಾರತ ತಂಡ ಮಾತ್ರವಲ್ಲದೇ ಇಡೀ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಎದ್ದು ನಿಂತು ರೋಹಿತ್ ರನ್ನು ಅಭಿನಂದಿಸಿದರು.
ಮೊದಲ ವಿಕೆಟಿಗೆ ರಾಹುಲ್-ರೋಹಿತ್ ಜೋಡಿ 83 ರನ್ ಜೊತೆಯಾಟ ನೀಡಿ ಭಾರತಕ್ಕೆ ದ್ವಿತೀಯ ಇನ್ನಿಂಗ್ಸ್ ನಲ್ಲಿ ಒಳ್ಳೆಯ ಆರಂಭ ಸಿಗುವಂತೆ ನೆರವಾದರು. ಕೆ.ಎಲ್. ರಾಹುಲ್ 46 ರನ್ ಗಳಿಸಿ ಆಂಡರ್ಸನ್ಗೆ ವಿಕೆಟ್ ಒಪ್ಪಿಸಿದರು.
ದ್ವಿತೀಯ ವಿಕೆಟ್ಗೆ ಚೇತೇಶ್ವರ ಪೂಜಾರ-ರೋಹಿತ್ ಶರ್ಮಾ ಜೋಡಿ 153 ರನ್ ಜೊತೆಯಾಟ ನೀಡುವ ಮೂಲಕ ಇಂಗ್ಲೆಂಡ್ ಬೌಲರುಗಳನ್ನು ಬಲವಾಗಿ ಕಾಡಿದರು. ಪೂಜಾರ 127 ಎಸೆತಗಳನ್ನು ಎದುರಿಸಿ 9 ಬೌಂಡರಿಗಳೊಂದಿಗೆ 61 ರನ್ ಗಳಿಸಿ ರಾಬಿನ್ಸನ್ಗೆ ವಿಕೆಟ್ ಒಪ್ಪಿಸಿದರು.
ಈ ಸುದ್ಧಿ ಪ್ರಕಟಗೊಳ್ಳುವ ಸಮಯ (ಭಾ.ಕಾ. ರಾತ್ರಿ 10.07) ನಾಯಕ ವಿರಾಟ್ ಕೊಹ್ಲಿ (21*) ಜೊತೆಗೆ ರವೀಂದ್ರ ಜಡೇಜಾ (5*) ಆಡುತ್ತಿದ್ದಾರೆ. 90 ಓವರುಗಳಲ್ಲಿ ಭಾರತ ಮೂರು ವಿಕೆಟ್ ನಷ್ಟಕ್ಕೆ 263 ರನ್ ಗಳಿಸಿ 164 ರನ್ನುಗಳ ಮುನ್ನಡೆ ಪಡೆದುಕೊಂಡಿದೆ.
ಮೊದಲು ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ದುಕೊಂಡಿತು. ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 191 ರನ್ನುಗಳಿಗೆ ಸರ್ವಪತನಗೊಂಡಿತು. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 290 ರನ್ನುಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಅಲ್ಪಮೊತ್ತದ ಮುನ್ನಡೆ ಕಾಯ್ದುಕೊಂಡಿತು. ಇದೀಗ ಭಾರತ ದ್ವಿತೀಯ ಇನ್ನಿಂಗ್ಸ್ ನಲ್ಲಿ ಪ್ರಬಲ ಹೋರಾಟ ನೀಡುತ್ತಿದ್ದು ಇನ್ನೂ ಎರಡು ದಿನಗಳ ಆಟ ಬಾಕಿಯಿದೆ. ಸರಣಿ 1-1 ಸಮಬಲದಲ್ಲಿದೆ.