ಮುಂಬೈ, ನ.2: (ಉಡುಪಿ ಬುಲೆಟಿನ್ ವರದಿ) ಇಲ್ಲಿಯ ವಾಂಖೆಡೆ ಸ್ಟೇಡಿಯಮ್ ನಲ್ಲಿ ಗುರುವಾರ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತ 302 ರನ್ ಗಳಿಂದ ಭರ್ಜರಿ ಜಯ ಗಳಿಸಿ ಅಜೇಯ ಯಾತ್ರೆಯನ್ನು ಮುಂದುವರಿಸಿದೆ. ಟಾಸ್ ಗೆದ್ದ ಶ್ರೀಲಂಕಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಪ್ರಚಂಡ ಫಾರ್ಮ್ ನಲ್ಲಿದ್ದ ನಾಯಕ ರೋಹಿತ್ ಶರ್ಮಾ ಕೇವಲ ಎರಡು ಎಸೆತಗಳನ್ನು ಎದುರಿಸಿ 4 ರನ್ ಗಳಿಸಿ ಔಟಾದರು. ಬಳಿಕ ಜತೆಗೂಡಿದ ಶುಭ್ಮನ್ ಗಿಲ್-ವಿರಾಟ್ ಕೋಹ್ಲಿ ಜೋಡಿ ಎರಡನೆಯ ವಿಕೆಟಿಗೆ 189 ರನ್ ಜತೆಯಾಟ ನೀಡಿದರು. ಸಚಿನ್ ತೆಂಡೂಲ್ಕರ್ ಅವರ ಗರಿಷ್ಠ ಏಕದಿನ ಶತಕದ ದಾಖಲೆಯನ್ನು ಮುರಿಯಲು ಕೊಹ್ಲಿ ಮತ್ತೊಮ್ಮೆ ವಿಫಲರಾದರು. ಗಿಲ್ 92 ರನ್ ಗಳಿಸಿದರೆ, ಕೊಹ್ಲಿ 88 ರನ್ ಗಳಿಸಿದರು. ಶ್ರೇಯಸ್ ಐಯ್ಯರ್ ಕೇವಲ 56 ಎಸೆತಗಳಲ್ಲಿ 82 ರನ್ ಗಳಿಸಿದರು. 50 ಓವರ್ ಗಳಲ್ಲಿ ಭಾರತ 8 ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿ ಶ್ರೀಲಂಕಾಗೆ ದೊಡ್ಡ ಗುರಿಯನ್ನೇ ನೀಡಿತು.
ಬೃಹತ್ ಗುರಿಯನ್ನು ಬೆನ್ನತ್ತಲು ಬಂದ ಲಂಕಾ ಆರಂಭಿಕ ಆಟಗಾರರು ಖಾತೆ ತೆರೆಯದೇ ಇಬ್ಬರೂ ಮೊದಲ ಎಸೆತದಲ್ಲೇ ನಿರ್ಗಮಿಸಿದರು. ಆರಂಭದಲ್ಲೇ ಸಿರಾಜ್, ಬುಮ್ರಾ, ಶಮಿ ಶ್ರೀಲಂಕಾಗೆ ಕಡಿವಾಣ ಹಾಕಿದರು. ಒಟ್ಟು 14 ರನ್ ಆಗುವಷ್ಟರಲ್ಲಿ ಲಂಕಾದ 6 ವಿಕೆಟ್ ಪತನವಾಗಿತ್ತು. ಕೇವಲ 19.4 ಓವರ್ ಗಳಲ್ಲಿ ಲಂಕಾ 55 ರನ್ನುಗಳಿಗೆ ಸರ್ವಪತನವಾಯಿತು. ಶಮಿ 5 ವಿಕೆಟ್ ಪಡೆದರೆ, ಸಿರಾಜ್ 3 ವಿಕೆಟ್ ಪಡೆದರು. ಶ್ರೀಲಾಂಕಾದ ಐವರು ಆಟಗಾರರು ಶೂನ್ಯಕ್ಕೆ ಔಟಾದರು. 55 ರನ್ ಗಳಲ್ಲಿ 31 ರನ್ ಗಳನ್ನು ಲಂಕಾದ ಬೌಲರ್ ಗಳು ಗಳಿಸಿದ್ದರು.
ಆಡಿರುವ ಎಲ್ಲಾ 7 ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿದ ಭಾರತ 14 ಅಂಕಗಳನ್ನು ಪಡೆಯುವ ಮೂಲಕ ವಿಶ್ವಕಪ್ ಅಂಕಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರಸ್ಥಾನ ಪಡೆದುಕೊಂಡಿದೆ.
ಐದು ವಿಕೆಟ್ ಪಡೆದ ವೇಗಿ ಮಹಮ್ಮದ್ ಶಮಿ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು