ಪುಣೆ, ಅ.19: (ಉಡುಪಿ ಬುಲೆಟಿನ್ ವರದಿ) ಇಲ್ಲಿಯ ಎಂ.ಸಿ.ಎ ಸ್ಟೇಡಿಯಂನಲ್ಲಿ ಗುರುವಾರ ನಡೆದ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಭಾರತ 7 ವಿಕೆಟ್ ಗಳ ಅಭೂತಪೂರ್ವ ಗೆಲುವನ್ನು ಸಾಧಿಸಿ ವಿಶ್ವಕಪ್ ನಲ್ಲಿ ತನ್ನ ಗೆಲುವಿನ ಯಾತ್ರೆ ಮುಂದುವರಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ, ಆರಂಭದಲ್ಲೇ ದೊಡ್ಡ ಮೊತ್ತದ ಭರವಸೆ ಹುಟ್ಟಿಹಾಕಿತು. ಆರಂಭಿಕ ಆಟಗಾರರಾದ ತನ್ಜಿದ್ ಹಸನ್ ಮತ್ತು ಲಿಟ್ಟನ್ ದಾಸ್ ಆಕರ್ಷಕ ಅರ್ಧಶತಕ ಸಿಡಿಸಿ ತಂದವನ್ನು ಆಧರಿಸಿದರು. ಮೊದಲ ವಿಕೆಟಿಗೆ 93 ರನ್ ಜತೆಯಾಟ ನೀಡಿದ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಕುಲ್ದೀಪ್ ಯಾದವ್ ಯಶಸ್ವಿಯಾದರು. ತನ್ಜಿದ್ ಹಸನ್ 51 ರನ್ ಗಳಿಸಿದರೆ, ಲಿಟ್ಟನ್ ದಾಸ್ 66 ರನ್ ಗಳಿಸಿ ಜಡೇಜಾ ಎಸೆತದಲ್ಲಿ ಔಟ್ ಆದರು. ನಂತರ ಮಂದಗತಿಯಲ್ಲಿ ಸಾಗಿದ ರನ್ ರೇಟ್ ಹೆಚ್ಚಿಸುವಲ್ಲಿ ಮುಷ್ಫಿಕುರ್ ರಹೀಮ್ ಮತ್ತು ಮಹಮ್ಮದುಲ್ಲಾ ತಕ್ಕ ಮಟ್ಟಿಗೆ ಯಶಸ್ಸು ಕಂಡರು. 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 256 ರನ್ ಗಳಿಸಿದ ಬಾಂಗ್ಲಾದೇಶ, ಭಾರತಕ್ಕೆ ಗೆಲುವು ಅಷ್ಟು ಸುಲಭವಲ್ಲ ಎಂಬ ಸಂದೇಶ ನೀಡಿತು.
ಬಾಂಗ್ಲಾ ನೀಡಿದ ಸವಾಲನ್ನು ಬೆನ್ನತ್ತಿದ ರೋಹಿತ್ ಪಡೆ, ಆರಂಭದಲ್ಲೇ ಬಾಂಗ್ಲಾ ಬೌಲರ್ ಗಳನ್ನು ದಂಡಿಸಲು ಆರಂಭಿಸಿದರು. ನಾಯಕ ರೋಹಿತ್ ಶರ್ಮಾ ಕೇವಲ 2 ರನ್ ಗಳಿಂದ ಅರ್ಧಶತಕ ವಂಚಿತರದರು. 7 ಬೌಂಡರಿ ಹಾಗೂ 2 ಬಾನೆತ್ತರದ ಸಿಕ್ಸರ್ ಒಳಗೊಂಡ ಅವರ ಆಟ ಹಸನ್ ಮಹಮೂದ್ ಕೊನೆಗೊಳಿಸಿದರು. ಶುಭ್ಮನ್ ಗಿಲ್ 53 ರನ್ ಗಳಿಸಿ ರೋಹಿತ್ ಶರ್ಮಾಗೆ ಸಾಥ್ ನೀಡಿದರು. ರೋಹಿತ್-ಗಿಲ್ ಜೋಡಿ 88 ರನ್ ಜತೆಯಾಟ ನೀಡಿ ಗೆಲುವಿಗೆ ಭದ್ರ ಬುನಾದಿ ಹಾಕಿಕೊಟ್ಟರು.
ಶತಕವೀರ ವಿರಾಟ್: ವಿರಾಟ್ ಕೊಹ್ಲಿ ಮತ್ತೊಮ್ಮೆ ಭರ್ಜರಿ ಪ್ರದರ್ಶನ ನೀಡಿದರು. 97 ಎಸೆತಗಳನ್ನು ಎದುರಿಸಿದ ಕೊಹ್ಲಿ 4 ಸಿಕ್ಸರ್ ಮತ್ತು 6 ಬೌಂಡರಿಗಳನ್ನು ಸಿಡಿಸಿ ಅಜೇಯ 103 ರನ್ ಗಳಿಸಿದರು. ಕೆ.ಎಲ್.ರಾಹುಲ್ ಅಜೇಯ 34 ರನ್ ಗಳಿಸಿದರು. 41.3 ಓವರ್ ಗಳಲ್ಲಿ ಭಾರತ ಗೆಲುವಿನ ದಡ ಸೇರಿತು.