ಬರ್ಮಿಂಗ್ಹ್ಯಾಮ್: ಇಂದು ನಡೆದ ಕಾಮನ್ವೆಲ್ತ್ ಕ್ರೀಡಾಕೂಟದ ಪುರುಷರ 55 ಕೆಜಿ ವಿಭಾಗದ ವೇಟ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ ಸಂಕೇತ್ ಸರ್ಗಾರ್ ರಜತ ಪದಕ ಗೆದ್ದಿದ್ದಾರೆ. ತನ್ಮೂಲಕ ಭಾರತಕ್ಕೆ ಈ ವರ್ಷದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮೊಟ್ಟಮೊದಲ ಪದಕ ನೀಡಿದ್ದಾರೆ.
ಕಠಿಣ ಅಭ್ಯಾಸ ನಡೆಸುತ್ತಿದ್ದ 21 ಹರೆಯದ ಸಂಕೇತ್ ಸರ್ಗಾರ್, ಬಿಡುವಿನ ಸಮಯದಲ್ಲಿ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ತಂದೆಯ ಚಹಾ ಅಂಗಡಿಯಲ್ಲಿಯೂ ಸಹಕರಿಸುತ್ತಿದ್ದರು.
55 ಕೆಜಿ ವಿಭಾಗದ ಸ್ಯಾನ್ಚ್ ನಲ್ಲಿ 113 ಕೆಜಿ, ಕ್ಲೀನ್ ಮತ್ತು ಜರ್ಕ್ ನಲ್ಲಿ 135 ಕೆಜಿ ಭಾರವನ್ನು ಯಶಸ್ವಿಯಾಗಿ ಎತ್ತುವ ಮೂಲಕ ಒಟ್ಟು 248 ಕೆಜಿ ಭಾರವನ್ನು ಎತ್ತುವ ಮೂಲಕ ಬೆಳ್ಳಿ ಪದಕ ಗೆದ್ದರು.
ಆಂಗ್ಲರ ನೆಲದಲ್ಲಿ ಮಿಂಚಿದ ’ಕುಂದಾಪ್ರ ಗಂಡ್’
ಇಂದು ನಡೆದ ಕಾಮನ್ವೆಲ್ತ್ ಕ್ರೀಡಾಕೂಟದ ಪುರುಷರ 61 ಕೆಜಿ ವಿಭಾಗದ ವೇಟ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ ಭರವಸೆಯ ತಾರೆ ಕುಂದಾಪುರದ ಗುರುರಾಜ ಪೂಜಾರಿ ಕಂಚಿನ ಪದಕ ಗೆದ್ದಿದ್ದಾರೆ.
ಒಟ್ಟು 269 ಕೆಜಿ ಭಾರವನ್ನು ಯಶಸ್ವಿಯಾಗಿ ಎತ್ತುವ ಮೂಲಕ ಭಾರತದ ಪದಕ ಬೇಟೆಗೆ ಇಂಧನ ನೀಡಿದ ಗುರುರಾಜ ಪೂಜಾರಿ, 2018ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ವಿಚಾರವನ್ನು ಇಲ್ಲಿ ಸ್ಮರಿಸಬಹುದು.
ಸಂಕೇತ್ ಮಹಾದೇವ್ ಸರ್ಗಾರ್ ಹಾಗೂ ಗುರುರಾಜ ಪೂಜಾರಿ ಸಾಧನೆಗೆ ದೇಶಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಉಭಯ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.