ಯು.ಬಿ.ಎನ್.ಡಿ., ಫೆ.23: ಭಾನುವಾರ ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಹೈ ವೋಲ್ಟೇಜ್ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ದ 6 ವಿಕೆಟ್ ಗಳ ಅಭೂತಪೂರ್ವ ಗೆಲುವನ್ನು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 49.4 ಓವರ್ ಗಳಲ್ಲಿ 241 ಕ್ಕೆ ಆಲ್ ಔಟ್ ಆಗಿ ಭಾರತಕ್ಕೆ ಗೆಲ್ಲಲು 242 ರ ಗುರಿ ನೀಡಿತು. ಶಕೀಲ್ 62 ರನ್ ಗಳಿಸಿದರೆ, ರಿಜ್ವಾನ್ 46 ರನ್ ಗಳಿಸಿದರು. ಕುಲ್ದೀಪ್ ಯಾದವ್ 3 ವಿಕೆಟ್ ಪಡೆದರು.
ಭಾರತ ಉತ್ತಮ ಆರಂಭ ಪಡೆಯುವಷ್ಟರಲ್ಲಿ ನಾಯಕ ರೋಹಿತ್ ಶರ್ಮಾ 20 ರನ್ ಗಳಿಸಿ ಪೆವೆಲಿಯನ್ ಸೇರಿದರು. ನಂತರ ಆಗಮಿಸಿದ ವಿರಾಟ್ ಕೊಹ್ಲಿ ಶುಭ್ಮನ್ ಗಿಲ್ ಜತೆ ಸೇರಿ ಜತೆಯಾಟ ನೀಡುವಲ್ಲಿ ಮಗ್ನರಾದರು. ಗಿಲ್ 46 ರನ್ ಗಳಿಸಿ ಔಟ್ ಆದರು. ನಂತರ ಕೊಹ್ಲಿ-ಶ್ರೇಯಸ್ ಐಯ್ಯರ್ ಜೋಡಿ ಗೆಲುವಿನ ಜತೆಯಾಟ ನೀಡುವ ಸಲುವಾಗಿ ಜವಾಬ್ದಾರಿಯುತವಾಗಿ ಆಡಿದರು. ಕೊಹ್ಲಿ ಗೆಲುವಿನ ರನ್ ಮತ್ತು ಶತಕವನ್ನು ಒಟ್ಟಿಗೆ ಹೊಡೆದು ದಾಖಲೆ ನಿರ್ಮಿಸಿದರು. ಭಾರತ ಪಾಕ್ ವಿರುದ್ದ 6 ವಿಕೆಟ್ ಗಳ ಐತಿಹಾಸಿಕ ಗೆಲುವನ್ನು ದಾಖಲಿಸಿ ಅಜೇಯವಾಗಿ ಉಳಿದಿದೆ. ಅಜೇಯ 100 ರನ್ ಗಳಿಸಿದ ಗಳಿಸಿದ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.