ಅಬುಧಾಬಿ: ಟಿ20 ಕ್ರಿಕೆಟ್ ವಿಶ್ವಕಪ್ ಸೂಪರ್ 12 ಮೊದಲ ಪಂದ್ಯದಲ್ಲೇ ಆಸ್ಟ್ರೇಲಿಯ ಗೆಲುವಿನ ಸಿಹಿಯನ್ನು ಕಂಡಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಇಂದು ಅಬುಧಾಬಿಯ ಶೇಖ್ ಜಾಯೇದ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 5 ವಿಕೆಟ್ ಗಳ ಭರ್ಜರಿ ಜಯದೊಂದಿಗೆ ಶುಭಾರಂಭ ಮಾಡಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾವನ್ನು ಆರಂಭದಲ್ಲೇ ಕಟ್ಟಿಹಾಕಿತು. 13 ರನ್ ಆಗುವಷ್ಟರಲ್ಲಿ ದಕ್ಷಿಣ ಆಫ್ರಿಕಾಗೆ ಮೊದಲ ಆಘಾತವನ್ನು ಮ್ಯಾಕ್ಸ್ವೆಲ್ ನೀಡಿದರು. 20 ಓವರುಗಳಲ್ಲಿ ದಕ್ಷಿಣ ಆಫ್ರಿಕಾ 9 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿ ಕಾಂಗರೂಗಳಿಗೆ ಸುಲಭ ಗುರಿಯನ್ನು ನೀಡಿತು.
ಚೆಂಡಿನೊಂದಿಗೆ ಪ್ರಬಲ ಹೋರಾಟ ನೀಡಿದ ದಕ್ಷಿಣ ಆಫ್ರಿಕಾ, ಅಭೂತಪೂರ್ವ ಕ್ಷೇತ್ರರಕ್ಷಣೆಯ ಮೂಲಕ ಆಸ್ಟ್ರೇಲಿಯಾಗೆ ಆರಂಭಿಕ ಆಘಾತವನ್ನು ನೀಡುವಲ್ಲಿ ಯಶಸ್ವಿಯಾಯಿತು. 38 ರನ್ ಆಗುವಷ್ಟರಲ್ಲಿ ಮೂರು ಪ್ರಮುಖ ಕಾಂಗರೂ ದಾಂಡಿಗರು ಪೆವಿಲಿಯನ್ ಹಾದಿ ಹಿಡಿದರು.
ಎಂದಿನ ರಕ್ಷಣಾತ್ಮಕ ಮತ್ತು ಜವಾಬ್ದಾರಿಯುತ ಶೈಲಿಯಲ್ಲಿ ಆಡಿದ ಅನುಭವಿ ಆಟಗಾರ ಸ್ಟೀವ್ ಸ್ಮಿತ್, ತಂಡವನ್ನು ಅಪಾಯದಿಂದ ಪಾರು ಮಾಡಿ ಅಗತ್ಯವಿದ್ದ ಜೊತೆಯಾಟವನ್ನು ನೀಡಿದರು. 34 ಎಸೆತಗಳಿಂದ 35 ರನ್ ಗಳಿಸಿದ ಸ್ಮಿತ್ ನಿರ್ಗಮಿಸಿದ ನಂತರ ಮ್ಯಾಕ್ಸ್ವೆಲ್, ಸ್ಟೋಯ್ನಿಸ್, ವೇಡ್ ತಂಡವನ್ನು ಗೆಲುವಿನ ದಡ ಸೇರಿಸಿದರು.
2 ಎಸೆತಗಳು ಬಾಕಿ ಇರುವಾಗಲೇ ಆಸ್ಟ್ರೇಲಿಯ ಗೆಲುವಿನ ಗುರಿಯನ್ನು ದಾಟಿ ತನ್ನ ಮೊದಲ ಸೂಪರ್ 12ರ ಪಂದ್ಯದಲ್ಲಿ ಸೂಪರ್ ಗೆಲುವನ್ನು ದಾಖಲಿಸಿದೆ.
ಶಿಸ್ತುಬದ್ಧ ಬೌಲಿಂಗ್ ನಡೆಸಿ 2 ವಿಕೆಟ್ ಪಡೆದ ಆಸ್ಟ್ರೇಲಿಯದ ಜೋಶ್ ಹೇಜಲ್ವುಡ್ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.
ಇಂಗ್ಲೆಂಡ್ ಮಾರಕ ದಾಳಿಗೆ ವಿಂಡೀಸ್ ಧೂಳೀಪಟ
ಸೂಪರ್ 12ರ ಮತ್ತೊಂದು ಪಂದ್ಯದಲ್ಲಿ ಕಳೆದ ಬಾರಿಯ ಟಿ20 ವಿಶ್ವಕಪ್ ಚ್ಯಾಂಪಿಯನ್ ವೆಸ್ಟ್ ಇಂಡೀಸ್, ಆರಂಭಿಕ ಪಂದ್ಯದಲ್ಲೇ ಮುಗ್ಗರಿಸಿದೆ. ವಿಂಡೀಸ್ ವಿರುದ್ಧ ಇಂಗ್ಲೆಂಡ್ 6 ವಿಕೆಟ್ ಗಳ ಗೆಲುವನ್ನು ಸಾಧಿಸಿದೆ.
ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ದುಕೊಂಡಿತು. ಇಂಗ್ಲೆಂಡ್ ಬೌಲರ್ ಗಳು ಮಾರಕ ದಾಳಿಯಿಂದ ವಿಂಡೀಸ್ ದಾಂಡಿಗರಲ್ಲಿ ನಡುಕ ಹುಟ್ಟಿಸಿದರು.
ಕ್ರಿಸ್ ಗೇಲ್ (13) ಹೊರತುಪಡಿಸಿ ಉಳಿದೆಲ್ಲರೂ ಒಂದಂಕಿಗೆ ನಿರ್ಗಮಿಸಿದರು. ಒಂದು ರೀತಿಯಲ್ಲಿ ಹೇಳುವುದಾದರೆ ವೆಸ್ಟ್ ಇಂಡೀಸ್ ದಾಂಡಿಗರು ಪೆವಿಲಿಯನ್ ನಿಂದ ಹಾಜರಾತಿ ಹಾಕಲು ಮೈದಾನಕ್ಕೆ ಬಂದು ಹೋದ ಹಾಗಿತ್ತು ಇಂಗ್ಲೆಂಡ್ ಬೌಲಿಂಗ್.
14.2 ಓವರ್ ಗಳಲ್ಲಿ ಕೇವಲ 55 ರನ್ ಗಳಿಗೆ ಸರ್ವಪತನವಾದ ವಿಂಡೀಸ್ ಆಟಗಾರರಲ್ಲಿ ಕಳೆದ ಬಾರಿಯ ವಿಶ್ವಕಪ್ ನಲ್ಲಿದ್ದ ಹೋರಾಟದ ಕಿಚ್ಚು ನಶಿಸಿ ಹೋದ ಹಾಗಿತ್ತು. ಇಂಗ್ಲೆಡಿನ ಭರವಸೆಯ ಬೌಲರ್ ಅದಿಲ್ ರಶೀದ್ 2.2 ಓವರ್ ಗಳಲ್ಲಿ ಕೇವಲ 2 ರನ್ ನೀಡಿ 4 ವಿಕೆಟ್ ಪಡೆದರು.
ಸುಲಭದ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್, 8.2 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಗುರಿಯನ್ನು ದಾಟಿತು. ಬಟ್ಲರ್ ಅಜೇಯ 24 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.