ಬರ್ಮಿಂಗ್ಹ್ಯಾಮ್: ಇಂದು ನಡೆದ ಕಾಮನ್ವೆಲ್ತ್ ಕ್ರೀಡಾಕೂಟದ ಮಹಿಳೆಯರ ವೇಯ್ಟ್ ಲಿಫ್ಟಿಂಗ್ 49 ಕೆಜಿ ವಿಭಾಗದಲ್ಲಿ ಭಾರತದ ಮೀರಾಬಾಯಿ ಚಾನು ಚಿನ್ನದ ಪದಕ ಗೆದ್ದಿದ್ದಾರೆ. ಒಟ್ಟು 201 ಕೆಜಿ ಭಾರವನ್ನು ಯಶಸ್ವಿಯಾಗಿ ಎತ್ತುವ ಮೂಲಕ ಚಾನು ನೂತನ ಕೂಟ ದಾಖಲೆಯನ್ನೂ ನಿರ್ಮಿಸಿ ಮಿಂಚಿದ್ದಾರೆ.
ಟೋಕ್ಯೋ ಒಲಿಂಪಿಕ್ಸ್ ನಲ್ಲಿ ರಜತ ಪದಕ ವಿಜೇತರಾಗಿದ್ದ 28ರ ಹರೆಯದ ಮೀರಾಭಾಯಿ ಚಾನು, ಇಂದು ಸ್ನ್ಯಾಚ್ ವಿಭಾಗದ ಮೊದಲ ಪ್ರಯತ್ನದಲ್ಲೇ ಅದ್ಭುತ ಪ್ರದರ್ಶನ ನೀಡಿದ್ದರು.
ಮೊದಲ ಯತ್ನದಲ್ಲಿ 84 ಕೆಜಿಯನ್ನು ಯಶಸ್ವಿಯಾಗಿ ಎತ್ತುವ ಮೂಲಕ ಚಾನು ತನ್ನ ಅದಮ್ಯ ಆತ್ಮವಿಶ್ವಾಸದೊಂದಿಗೆ ಎರಡನೆಯ ಪ್ರಯತ್ನದಲ್ಲಿ 88 ಕೆಜಿ ಭಾರ ಎತ್ತಿ ಪದಕದ ಆಸೆ ಜೀವಂತವಾಗಿರಿಸಿದರು.
ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿಯೂ ಶಕ್ತಿಶಾಲಿ ಪ್ರದರ್ಶನ ನೀಡಿದ ಮೀರಾಭಾಯಿ ಚಾನು ಮೊದಲ ಪ್ರಯತ್ನದಲ್ಲಿ 109 ಕೆಜಿ ಎತ್ತಿದರು. ಎರಡನೆಯ ಪ್ರಯತ್ನದಲ್ಲಿ 113 ಕೆಜಿ ಎತ್ತುವ ಮೂಲಕ ಬಂಗಾರ ಬೇಟೆಗೆ ನಾಂದಿ ಹಾಡಿದರು.
ಇದು ಭಾರತಕ್ಕೆ ಇಂದು ಸಿಕ್ಕಿದ ಮೂರನೇ ಪದಕ ಮತ್ತು ಮೊದಲ ಚಿನ್ನದ ಪದಕವಾಗಿದೆ. ಚಾನು ಸಾಧನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.