ಟೋಕಿಯೊ: ಶನಿವಾರ ನಡೆದ ಪ್ಯಾರಾಲಿಂಪಿಕ್ಸ್ ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ಎಸ್.ಎಲ್.3 ಫೈನಲ್ ನಲ್ಲಿ ಭಾರತದ ಪ್ರಮೋದ್ ಭಗತ್ ಅವರು ಬ್ರಿಟನ್ ನ ಡೇನಿಯಲ್ ಬೆಥೆಲ್ ವಿರುದ್ಧ 21-14, 21-17 ನೇರ ಸೆಟ್ ಗಳಿಂದ ಗೆಲ್ಲುವ ಮೂಲಕ ಚಿನ್ನದ ಪದಕವನ್ನು ಪಡೆದು ದೇಶಕ್ಕೆ ಪ್ಯಾರಾಲಿಂಪಿಕ್ಸ್ ನಲ್ಲಿ ನಾಲ್ಕನೇ ಚಿನ್ನದ ಪದಕವನ್ನು ನೀಡಿದ್ದಾರೆ. ಯೊಯೊಗಿ ನ್ಯಾಶನಲ್ ಸ್ಟೇಡಿಯಮ್ ನಲ್ಲಿ ನಡೆದ ಈ ರೋಚಕ ಪಂದ್ಯ 45 ನಿಮಿಷಗಳ ಕಾಲ ಸಾಗಿತು.
ಮನೋಜ್ ಸರ್ಕಾರ್ ಗೆ ಕಂಚು:
ಪ್ಯಾರಾಲಿಂಪಿಕ್ಸ್ ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ಎಸ್.ಎಲ್.3 ಕಂಚಿನ ಪದಕದ ಪಂದ್ಯದಲ್ಲಿ ಭಾರತದ ಮನೋಜ್ ಸರ್ಕಾರ್ ಜಪಾನಿನ ಡೈಸುಕೆ ಫ್ಯೂಜಿಹರ ವಿರುದ್ಧ 22-20, 21-13 ನೇರ ಸೆಟ್ ಗಳಿಂದ ಗೆಲುವು ಸಾಧಿಸಿ ಕಂಚಿನ ಪದಕ ಗೆದ್ದರು.
ಇದರೊಂದಿಗೆ ಭಾರತಕ್ಕೆ ಈ ಪ್ಯಾರಾಲಿಂಪಿಕ್ಸ್ ನಲ್ಲಿ 4 ಚಿನ್ನ, 7 ಬೆಳ್ಳಿ ಮತ್ತು 6 ಕಂಚಿನ ಪದಕ ಲಭಿಸಿದ್ದು ಒಟ್ಟು 17 ಪದಕಗಳೊಂದಿಗೆ ಭಾರತ ಪದಕ ಪಟ್ಟಿಯಲ್ಲಿ 26ನೇ ಸ್ಥಾನದಲ್ಲಿದೆ.
ಪ್ರಧಾನಿ ಅಭಿನಂದನೆ: ಪದಕ ವಿಜೇತರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ನಿಮ್ಮ ಅವಿರತ ಪ್ರಯತ್ನ ಮತ್ತು ಸಾಧನೆಯು ಮುಂದಿನ ದಿನಗಳಲ್ಲಿ ಪ್ರೇರಣೆ ಮತ್ತು ಸ್ಪೂರ್ತಿದಾಯಕವಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.