ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮ್ಮ ಮೊದಲ ಶೃಂಗಸಭೆಯಲ್ಲಿ ಶಸ್ತ್ರಾಸ್ತ್ರ ನಿಯಂತ್ರಣ ಮಾತುಕತೆಗಳನ್ನು ಪುನರಾರಂಭಿಸಲು ಮತ್ತು ರಾಯಭಾರಿಗಳನ್ನು ಪರಸ್ಪರ ರಾಜಧಾನಿಗಳಿಗೆ ಹಿಂದಿರುಗಿಸಲು ಒಪ್ಪಿಗೆ ಸೂಚಿಸಿದ್ದಾರೆ.
ಜಿನೀವಾದಲ್ಲಿ ಉಭಯ ನಾಯಕರು ದ್ವಿಪಕ್ಷೀಯ ಮಾತುಕತೆಯನ್ನು ನಡೆಸಿದರು. ಅಮೆರಿಕ-ರಷ್ಯಾ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಈ ಮಾತುಕತೆಯು ಫಲಪ್ರದವಾಗಲಿದೆ ಎಂಬ ಆಶಾಭಾವನೆ ವ್ಯಕ್ತವಾಗಿದೆ. ಮಾತುಕತೆಯ ನಂತರ ಮಾತನಾಡಿದ ಪುಟಿನ್, ಬಿಡೆನ್ ಒಬ್ಬ ಅನುಭವಿ ರಾಜಕಾರಣಿ. ಸಭೆಯು ರಚನಾತ್ಮಕವಾಗಿತ್ತು ಎಂದು ಹೇಳಿದರು.
ನಂತರ ಮಾತನಾಡಿದ ಬಿಡೆನ್, ರಷ್ಯಾದೊಂದಿಗಿನ ಸಂಬಂಧವನ್ನು ಸುಧಾರಿಸುವ ನಿಟ್ಟಿನಲ್ಲಿ ಅಮೆರಿಕ ಉತ್ಸುಕವಾಗಿದೆ ಮತ್ತು ಪ್ರಾಮಾಣಿಕವಾಗಿ ಪ್ರಯತ್ನಿಸಲಿದೆ ಎಂದರು. ಪರಮಾಣು ಶಸ್ತ್ರಾಸ್ತ್ರ ನಿಯಂತ್ರಣ ಕುರಿತು ಸಂವಾದವನ್ನು ಪ್ರಾರಂಭಿಸಲು ಉಭಯ ನಾಯಕರು ಒಪ್ಪಿದರು.
ರಷ್ಯಾ ಮತ್ತು ಅಮೆರಿಕ ಪರಮಾಣು ಸ್ಥಿರತೆಯ ಜವಾಬ್ದಾರಿಯನ್ನು ಹಂಚಿಕೊಂಡಿವೆ ಮತ್ತು ಇತ್ತೀಚಿಗೆ ನಡೆದ ’ಸ್ಟಾರ್ಟ್’ ಶಸ್ತ್ರಾಸ್ತ್ರ ಮಿತಿ ಒಪ್ಪಂದದಲ್ಲಿ ಸಂಭವನೀಯ ಬದಲಾವಣೆಗಳ ಕುರಿತು ಮಾತುಕತೆ ನಡೆಸಲಿದೆ ಎಂದು ಉಭಯ
ನಾಯಕರು ಹೇಳಿದ್ದಾರೆ. ರಾಯಭಾರಿಗಳನ್ನು ಪರಸ್ಪರ ರಾಜಧಾನಿಗಳಿಗೆ ಹಿಂದಿರುಗಿಸುವುದಾಗಿಯೂ ಹೇಳಿದರು. ಸೈಬರ್-ಸೆಕ್ಯುರಿಟಿ, ಉಕ್ರೇನ್ ವಿಚಾರ ಮತ್ತು ರಷ್ಯಾದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಲ್ನಿ ಅವರ ಭವಿಷ್ಯ ಸೇರಿದಂತೆ ಇತರ ವಿಷಯಗಳ ಬಗ್ಗೆಯೂ ಅಲ್ಪಸ್ವಲ್ಪ ಚರ್ಚೆಗಳು ನಡೆದವು.