ಟೋಕಿಯೊ, ಜ.1: ಸೋಮವಾರ ಮಧ್ಯ ಜಪಾನ್‌ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ದೇಶದ ಪಶ್ಚಿಮ ಕರಾವಳಿಗೆ ಸುನಾಮಿ ಎಚ್ಚರಿಕೆಯನ್ನು ನೀಡಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ. ಜಪಾನ್‌ನ ಅನಾಮಿಜು ಪ್ರದೇಶದ ಈಶಾನ್ಯಕ್ಕೆ ಸುಮಾರು 42 ಕಿಮೀ ದೂರದಲ್ಲಿ ಸಂಜೆ 4.10 ಗಂಟೆಗೆ (ಸ್ಥಳೀಯ ಕಾಲಮಾನ) ಭೂಕಂಪ ಸಂಭವಿಸಿದೆ. 10 ಕಿ.ಮೀ. ಆಳದಲ್ಲಿ ಭೂಕಂಪ ಸಂಭವಿಸಿದ್ದು, ಟೋಕಿಯೊದಲ್ಲಿನ ಕಟ್ಟಡಗಳೂ ಅಲುಗಾಡಿವೆ. ಇಶಿಕಾವಾ, ನಿಗಾಟಾ, ಟೊಯಾಮಾ ಮತ್ತು ಯಮಗಾಟಾ ಪ್ರಾಂತ್ಯಗಳ ಕರಾವಳಿ ಪ್ರದೇಶಗಳನ್ನು ತ್ವರಿತವಾಗಿ ತೊರೆಯುವಂತೆ ಸುನಾಮಿ ಎಚ್ಚರಿಕೆ ಜನರಿಗೆ ನೀಡಲಾಗಿದೆ. ಇಶಿಕಾವಾದಲ್ಲಿನ ನೋಟೊ ಪೆನಿನ್ಸುಲಾದ ವಾಜಿಮಾ ಬಂದರಿನಲ್ಲಿ 1.2 ಮೀಟರ್ ಅಲೆಗಳು ಎದ್ದಿವೆ ಎಂದು ಎನ್‌ಎಚ್‌ಕೆ ವರದಿ ಮಾಡಿದೆ.
ಸುನಾಮಿ ಮತ್ತು ಸ್ಥಳಾಂತರಿಸುವಿಕೆಯ ಬಗ್ಗೆ ಸಾರ್ವಜನಿಕರಿಗೆ ಸಮಯೋಚಿತ ಮತ್ತು ನಿಖರವಾದ ಮಾಹಿತಿಯನ್ನು ಒದಗಿಸಿ ಮತ್ತು ಹಾನಿಯನ್ನು ತಡೆಗಟ್ಟಲು ಸಂಪೂರ್ಣ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಸ್ಥಳೀಯ ಅಧಿಕಾರಿಗಳಿಗೆ ಸೂಚನೆಗಳನ್ನು ಜಪಾನ್ ಪ್ರಧಾನಿ ಕಚೇರಿ ನೀಡಿದೆ.