ನ್ಯೂಯಾರ್ಕ್: ಇಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 76ನೇ ಅಧಿವೇಶನವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.
ಅಫ್ಘಾನಿಸ್ತಾನದ ಪ್ರದೇಶವನ್ನು ಭಯೋತ್ಪಾದನೆ ಹರಡಲು ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸದಂತೆ ನೋಡಿಕೊಳ್ಳುವುದು ಅತ್ಯಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅಫ್ಘಾನಿಸ್ತಾನದಲ್ಲಿನ ಸೂಕ್ಷ್ಮ ಪರಿಸ್ಥಿತಿಯ ಲಾಭವನ್ನು ಯಾವುದೇ ದೇಶವು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳದಂತೆ ನಾವು ನೋಡಿಕೊಳ್ಳಬೇಕು.
ಈ ಸಮಯದಲ್ಲಿ, ಅಫ್ಘಾನಿಸ್ತಾನದ ಜನರು, ಮಹಿಳೆಯರು ಮತ್ತು ಮಕ್ಕಳು, ಅಲ್ಪಸಂಖ್ಯಾತರಿಗೆ ಸಹಾಯದ ಅಗತ್ಯವಿದೆ. ಅವರಿಗೆ ಸಹಾಯವನ್ನು ಒದಗಿಸುವ ಮೂಲಕ ನಾವು ನಮ್ಮ ಕರ್ತವ್ಯಗಳನ್ನು ಪೂರೈಸಬೇಕು. ಜಗತ್ತು ಉಗ್ರವಾದದ ಬೆದರಿಕೆಯನ್ನು ಎದುರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಇಡೀ ಪ್ರಪಂಚವು ವಿಜ್ಞಾನ ಆಧಾರಿತ, ತರ್ಕಬದ್ಧ ಮತ್ತು ಪ್ರಗತಿಪರ ಚಿಂತನೆಯನ್ನು ಅಭಿವೃದ್ಧಿಯ ಆಧಾರವನ್ನಾಗಿಸಬೇಕು.
ಭಯೋತ್ಪಾದನೆಯನ್ನು ರಾಜಕೀಯ ಅಸ್ತ್ರವನ್ನಾಗಿಸುವ ರಾಷ್ಟ್ರಗಳು ಉಗ್ರವಾದ ಜಾಗತಿಕ ಪೀಡೆ ಮತ್ತು ಇದರಿಂದ ಅವರಿಗೂ ಬೆದರಿಕೆ ಇರಲಿದೆ ಎಂದು ಅವರು ಅರ್ಥೈಸಿಕೊಳ್ಳಬೇಕು ಎಂದು ಪಾಕಿಸ್ತಾನದ ಹೆಸರನ್ನು ಉಚ್ಛರಿಸದೇ ಪರೋಕ್ಷವಾಗಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದರು.
ವಿಜ್ಞಾನ ಆಧಾರಿತ ವಿಧಾನವನ್ನು ಬಲಪಡಿಸುವ ಸಲುವಾಗಿ ಭಾರತವು ಅನುಭವ ಆಧಾರಿತ ಕಲಿಕೆಯನ್ನು ಉತ್ತೇಜಿಸುತ್ತಿದೆ. ವಿನಾಶಕಾರಿ ಸಾಂಕ್ರಾಮಿಕದ ಬಗ್ಗೆ ಕಳೆದ ಒಂದೂವರೆ ವರ್ಷಗಳಲ್ಲಿ, ಇಡೀ ವಿಶ್ವವು 100 ವರ್ಷಗಳಲ್ಲಿ ಅತ್ಯಂತ ಭೀಕರ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಪ್ರಧಾನಿ ಹೇಳಿದರು.
ಕೋವಿಡ್ ನಿಂದ ಪ್ರಾಣ ಕಳೆದುಕೊಂಡ ಎಲ್ಲರಿಗೂ ಗೌರವ ಸಲ್ಲಿಸುತ್ತೇನೆ. ಕೋವಿಡ್ -19 ಲಸಿಕೆ ತಯಾರಕರು ಭಾರತದಲ್ಲಿ ತಮ್ಮ ಲಸಿಕೆಗಳನ್ನು ತಯಾರಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದರು.