ವಾಷಿಂಗ್ಟನ್ ಡಿಸಿ: ಕ್ವಾಡ್ ಸಭೆಯಲ್ಲಿ ಭಾಗವಹಿಸಲು ಅಮೆರಿಕದ ವಾಷಿಂಗ್ಟನ್ ಡಿಸಿಗೆ ಪ್ರಧಾನಿ ನರೇಂದ್ರ ಮೋದಿ ವಿಮಾನ ಲ್ಯಾಂಡ್ ಆಗಿದೆ.
ಅಮೆರಿಕ ಅಧ್ಯಕ್ಷ ಬೈಡನ್, ಕಮಲಾ ಹ್ಯಾರಿಸ್, ಆಸ್ಟ್ರೇಲಿಯ ಪ್ರಧಾನಿ ಸ್ಕಾಟ್ ಮಾರಿಸ್ಸನ್ ಹಾಗೂ ಜಪಾನ್ ಪ್ರಧಾನಿ ಯೊಶಿ ಸುಗಾರನ್ನು ಪ್ರಧಾನಿ ಮೋದಿ ಭೇಟಿ ಮಾಡಲಿದ್ದಾರೆ.
ವಾಷಿಂಗ್ಟನ್ ಡಿಸಿಯಲ್ಲಿ ಅಮೆರಿಕ ಅಧಿಕಾರಿಗಳು ಹಾಗೂ ಅನಿವಾಸಿ ಭಾರತೀಯರಿಂದ ಪ್ರಧಾನಿಯವರಿಗೆ ಭವ್ಯ ಸ್ವಾಗತ ನೀಡಲಾಯಿತು.
ಏನಿದು ಕ್ವಾಡ್ ಸಭೆ?
ಅಮೆರಿಕ, ಭಾರತ, ಜಪಾನ್ ಮತ್ತು ಆಸ್ಟ್ರೇಲಿಯ ನಡುವೆ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಮಿಲಿಟರಿ ಮತ್ತು ಆರ್ಥಿಕ ಪ್ರಾಬಲ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹಾಗೂ ಈ ಪ್ರದೇಶದಲ್ಲಿ ಮುಕ್ತ ವಾತಾವರಣ ನಿರ್ಮಿಸುವ ಉದ್ದೇಶದಿಂದ ನಡೆಯುವ ಮಹತ್ವದ ಸಭೆಯೇ ಕ್ವಾಡ್ರಿಲಾಟರಲ್ ಸೆಕ್ಯೂರಿಟಿ ಡೈಲಾಗ್ (ಕ್ವಾಡ್) ಸಭೆ.
ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಭದ್ರತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಅಮೆರಿಕ, ಭಾರತ, ಜಪಾನ್ ಮತ್ತು ಆಸ್ಟ್ರೇಲಿಯ ಸಮಾನವಾದ ದೂರದೃಷ್ಟಿಯುಳ್ಳ ಯೋಜನೆಗಳನ್ನು ಹಾಕಿಕೊಂಡಿವೆ.