ಬೈಂದೂರು ತಾಲೂಕಿನ ಪ್ರಸಿದ್ಧ ದೇವಿ ಕ್ಷೇತ್ರಗಳಲ್ಲಿ ಉಪ್ಪುಂದ ದುರ್ಗಾಪರಮೇಶ್ವರಿ ಅಮ್ಮನವರ ದೇವಾಲಯವು ಒಂದು. ಲಿಂಗರೂಪಿಯಾದ ದುರ್ಗಾಪರಮೇಶ್ವರಿ ಇಲ್ಲಿನ ಪ್ರಧಾನ ದೇವತೆ.
ಇದು ಕುಂದಾಪುರ ಬೈಂದೂರು ರಾಷ್ಟ್ರೀಯ ಹೆದ್ದಾರಿ ಉಪ್ಪುಂದದ ಪೂರ್ವದಂಚಿನಲ್ಲಿದ್ದು ಬೈಂದೂರು ತಾಲೂಕು ಕೇಂದ್ರದಿಂದ 3 ಕಿ.ಮೀ ದೂರದಲ್ಲಿದೆ. ಇಲ್ಲಿನ ಸುಮನಾವತಿ ನದಿ ಉಪ್ಪುಂದದ ಉತ್ತರಕ್ಕೆ ಹರಿದು ತಾರಾಪತಿ, ಪಡುವರಿ, ದೊಂಬೆಯ ನಡುವೆ ಸಮುದ್ರ ಸೇರುತ್ತದೆ. ಈ ಸುಮನಾವತಿ ನದಿಯ ಎಡದಂಡೆಯಲ್ಲಿ ಪೂರ್ವಾಭಿಮುಖವಾಗಿ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಶಿಲಾಮಯ ದೇವಾಲಯವಿದೆ.
ಈ ದೇವರ ಪಕ್ಕದಲ್ಲಿ ಮಹಾಕಾಳಿ, ಮಹಾಲಕ್ಷ್ಮೀ ಮತ್ತು ಮಹಾಸರಸ್ವತಿ (ವಾಗ್ದೇವತೆ)ಯ ಲಿಂಗಗಳಿವೆ. ಶಾಸನಗಳಲ್ಲಿ ಈ ಕ್ಷೇತ್ರವನ್ನು ಉಪ್ಪುಗುಂದ ಎಂದು ಹೆಸರಿಸಲಾಗಿದೆ. ಪಂಚಲೋಹದ ಗಣಪತಿ, ವೀರಭದ್ರ ಮೊದಲಾದ ದೇವಾಲಯಗಳು ಅಮ್ಮನವರ ದೇವಾಲಯದ ಆವರಣದಲ್ಲಿವೆ.
ಸ್ಕಂದ ಪುರಾಣದಲ್ಲಿ ಮಾತಂಗ ಮುನಿ ಶ್ರೇಷ್ಠರು ಇಲ್ಲಿಗೆ ಆಗಮಿಸಿದ್ದು ಸುಮನಾವತಿ ನದಿ ದಂಡೆಯಲ್ಲಿ ದುರ್ಗಾದೇವಿಯನ್ನು ಆರಾಧಿಸಿದರೆಂಬ ಉಲ್ಲೇಖವಿದೆ. ಸೈಂಧವ ರಾಜನು ಈ ಪ್ರದೇಶವನ್ನು ಆಳುತ್ತಿದ್ದ ಎಂಬುದಾಗಿಯು ರಾಮಾಯಣದಲ್ಲಿ ಉಲ್ಲೇಖವಿದೆ. ಈ ದೇವಾಲಯವನ್ನು ಗೋಕರ್ಣದಂತೆ “ಭಾಸ್ಕರ ಕ್ಷೇತ್ರವೆಂದೂ ಕರೆಯುತ್ತಾರೆ.
ಸುಮನಾ ನದಿ ಸಮುದ್ರವನ್ನು ಸಂಗಮಿಸುವ ಸ್ಥಳ ಬಹಳ ಪವಿತ್ರವಾದುದು. ಕೆಲವು ಶಾಸನಗಳು ಉಪ್ಪುಂದ ದುರ್ಗಾಪರಮೇಶ್ವರಿ ದೇವಿಯನ್ನು “ಶಾಂತಿಕಾ ದುರ್ಗಾಪರಮೇಶ್ವರಿ” ಅಂತಲೂ ಉಲ್ಲೇಖಿಸಿದ್ದು ಒಟ್ಟಾರೆ ಈ ಪ್ರದೇಶವನ್ನು “ತ್ರಿಗರ್ತ ದ್ರಾವಿಡ” ರಾಜ್ಯವೆಂದು ಕರೆದಿರುತ್ತಾರೆ.
ಬೈಂದೂರು ತಾಲೂಕಿನಲ್ಲಿರುವ ರಾಜ್ಯದ ಇನ್ನೊಂದು ಪ್ರಸಿದ್ಧ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆಗೂ ಉಪ್ಪುಂದ ದುರ್ಗಾಪರಮೇಶ್ವರಿ ಅಮ್ಮನವರಿಗೂ ಸಹೋದರಿತನದ ಸಂಭಂದವಿದೆ. ಉಪ್ಪುಂದ ದೇವಾಲಯದ ಪೂಜಾ ವಿಧಾನಗಳು, ಸಂಪ್ರದಾಯ ಶ್ರೀ ಕ್ಷೇತ್ರ ಕೊಲ್ಲೂರಿನಂತೆಯೆ ಇದೆ.
ಪರಶುರಾಮ ಸೃಷ್ಟಿಯ ಸಪ್ತ ಕ್ಷೇತ್ರಗಳಲ್ಲೊಂದಾದ ಕೊಲ್ಲೂರಿಗೆ ಹೋಗಲು ಈ ಹಿಂದೆ ಇದೇ ಮುಖ್ಯ ಕೊಂಡಿಯಾಗಿತ್ತು. ಮೂಕಾಂಬಿಕಾ ಸನ್ನಿಧಿಗೆ ಬರುವ ಭಕ್ತರು ಕೆರ್ಗಾಲು ಭಗವತಿ ಹಾಗೂ ಉಪ್ಪುಂದ ಅಮ್ಮನವರ ದರ್ಶನ ಪಡೆದು ಮುಂದೆ ಸಾಗುತ್ತಿದ್ದರೆಂಬ ಪ್ರತೀತಿ ಇದೆ.
ಈ ದೇವಾಲಯದಲ್ಲಿರುವ ಅಲಂಕಾರದ ಮೂರ್ತಿಗೆ ಎಂಟು ಕೈಗಳಿದ್ದು ಶಂಕ, ಚಕ್ರ, ಬಿಲ್ಲು ,ಬಾಣ, ಖಡ್ಗ, ತ್ರಿಶೂಲ ಮುಂತಾದ ಆರು ಆಯುಧಗಳಿದೆ. ಇನ್ನೆರಡು ಕೈಗಳಲ್ಲಿ ಅಭಯ ಮತ್ತು ವರದ ಮುದ್ರೆಯಿದೆ. ಲಿಂಗ ಸ್ವರೂಪಿಯಾಗಿ ನೆಲೆ ನಿಂತು ಭಕ್ತರನ್ನು ತನ್ನತ್ತ ಸೆಳೆಯುತ್ತಿರುವ ಅಮ್ಮನವರು ಸಂತಾನ ಭಾಗ್ಯ ಕರುಣಿಸುವ ದೇವಿ ಎಂದೇ ಜನಜನಿತಳಾಗಿದ್ದು ಇಲ್ಲಿನ ಮೀನುಗಾರರ ಆರಾಧ್ಯ ದೇವಿಯಾಗಿ ಪೂಜಿಸಲ್ಪಡುತ್ತಿದ್ದಾಳೆ.
ದೀಪೋತ್ಷವ, ನವರಾತ್ರಿ, ಸಿಂಹ ಸಂಕ್ರಮಣ, ಗಣೇಶ ಚತುರ್ಥಿ, ಚಾಂದ್ರಮಾನ ಯುಗಾದಿ ಇತ್ಯಾದಿ ಹಬ್ಬ,ಆಚರಣೆಗಳನ್ನು ಇಲ್ಲಿ ಆಚರಿಸಲಾಗುತ್ತಿದೆ. ಪ್ರತಿ ವರ್ಷ ಕಾರ್ತಿಕ ಬಹುಳ ಪ್ರತಿಪದೆಯ ದಿನದಂದು ಇಲ್ಲಿ ರಥೋತ್ಸವ ಜರುಗುತ್ತದೆ. ಈ ಬಾರಿ ನವೆಂಬರ್ 20 ರಂದು ರಥೋತ್ಸವ ಜರುಗಲಿದೆ.
ಇದು ಬೈಂದೂರು ತಾಲೂಕಿನ ಮೊದಲ ರಥೋತ್ಸವವಾಗಿದ್ದು ಇದನ್ನು ಉಪ್ಪುಂದ ಕೊಡಿ ಹಬ್ಬ ಎಂದೇ ಕರೆಯಲಾಗುತ್ತದೆ. ಈ ದಿನ ಹಬ್ಬಕ್ಕೆ ಬರುವ ನವವಿವಾಹಿತರು ಕಬ್ಬಿನ ಕೊಡಿಯನ್ನು ಸಂಪ್ರದಾಯದಂತೆ ಹಬ್ಬದಲ್ಲಿ ಖರೀದಿಸಿ ಮನೆಗೆ ಕೊಂಡೊಯ್ಯುದು ವಿಶೇಷವಾಗಿದೆ.
ಉಪ್ಪುಂದ ಕೊಡಿ ಹಬ್ಬ ಬೈಂದೂರು ತಾಲೂಕಿನ ಅತಿ ದೂಡ್ಡ ಜಾತ್ರೆಯಾಗಿದೆ. ಕ್ಷೇತ್ರದೆಲ್ಲಡೆಯಿಂದ ಶ್ರೀ ದೇವಿಯ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಸಂಜೆ ರಥೋತ್ಸವದ ಸಂದರ್ಭದಲ್ಲಂತೂ ಜನಜಾತ್ರೆಯೆ ನೆರೆದಿರುತ್ತದೆ.
ನೆರೆದ ಅಪಾರ ಭಕ್ತರು ರಥದಲ್ಲಿ ವಿರಾಜಮಾನಳಾದ ಶ್ರೀ ದುರ್ಗಾಪರಮೇಶ್ವರಿಗೆ ನಮಿಸಿ ಪುನಿತರಾಗುತ್ತಾರೆ. ಶ್ರೀ ದೇವಿಯು ನಂಬಿದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವಳು ಎಂಬ ನಂಬಿಕೆ ಇಲ್ಲಿನ ಭಕ್ತರದ್ದು.
ಬನ್ನಿ ‘ಉಪ್ಪುಂದ ಕೊಡಿ ಹಬ್ಬ’ಕ್ಕೆ ಹೋಗಿ ದೇವಿಯ ರಥೋತ್ಸದಲ್ಲಿ ಭಾಗಿಗಳಾಗೋಣ.