ಕೋರ್ಸುಗಳ ಆಯ್ಕೆ ವಿಚಾರದಲ್ಲಿ ಗೊಂದಲದಲ್ಲಿ ಇರುವ ವಿದ್ಯಾರ್ಥಿಗಳಿಗೆ ‘ವಿದ್ಯಾರ್ಥಿಗಳ ಭವಿಷ್ಯಕ್ಕೊಂದು ಕಿವಿ ಮಾತು’ ಅಂಕಣ ಮಾರ್ಗದರ್ಶನ ನೀಡಲಿದೆ.
ಇಂದು ಹಲವಾರು ವಿದ್ಯಾರ್ಥಿಗಳು ಪೋಷಕರು ಕರೆ ಮಾಡಿ “ನನ್ನ ಮಗ/ಮಗಳ ಎಸ್.ಎಸ್.ಎಲ್.ಸಿ./ ಪಿಯುಸಿ ಆಗಿದೆ. ಯಾವ ವಿಷಯ ಆಯ್ಕೆ ಮಾಡಿಕೊಂಡರೆ ಸೂಕ್ತ? ಯಾವ ಕಾಲೇಜ್ ಉತ್ತಮ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುತ್ತಾ ಇರುತ್ತಾರೆ. ಮೇ/ಜೂನ್ ಮಾಸ ಬಂದಾಗ ಸಾಧಾರಣ ಮಟ್ಟಿಗೆ ಪ್ರತಿಯೊಬ್ಬ ಹೆತ್ತವರಿಗೂ ಈ ಪ್ರಶ್ನೆಗಳು ಕಾಡುವುದು ಸಹಜವೂ ಹೌದು. ಹಾಗಾಗಿ ಬಹುಮುಖ್ಯವಾಗಿ ವಿಷಯಗಳ ಆಯ್ಕೆ ಹೇಗಿರಬೇಕು ಅನ್ನುವುದರ ಮೇಲೆ ಬೆಳಕು ಚೆಲ್ಲುವ ಮಾಹಿತಿ ನಿಮ್ಮ ಜೊತೆ ಹಂಚಿಕೊಳ್ಳಲು ಬಯಸುತ್ತೇನೆ.
1. ಹೆತ್ತವರಿಗೆ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಹತ್ತಾರು ಕನಸುಗಳು ಆಸೆಗಳು ಇರುವುದು ಸಹಜ. ಆದರೆ ಇದರ ಜೊತೆಗೆ ತಮ್ಮ ಮಕ್ಕಳ ಅಭಿರುಚಿ ಸಾಮರ್ಥ್ಯದ ಬಗ್ಗೆಯೂ ಹೆಚ್ಚಿನ ಕಾಳಜಿ ಬೇಕು.
2. ಈ ನಿಟ್ಟಿನಲ್ಲಿ ತಮ್ಮ ಮಗುವಿನ ಹಿಂದಿನ ಸಮಗ್ರ ಪ್ರಗತಿಯ ವರದಿ (progress report) ತಮ್ಮ ಮನಸ್ಸಿನಲ್ಲಿ ಇರಬೇಕು. ಈ ನಿಟ್ಟಿನಲ್ಲಿ ನಿಮ್ಮ ಮಕ್ಕಳಿಗೆ ಕಲಿಸಿದ ಶಿಕ್ಷಕರ ಜೊತೆ ಸಮಾಲೋಚನೆ ಮಾಡಿದರೂ ತೊಂದರೆ ಇಲ್ಲ. ಹಾಗಂತ ಕೆಲವು ವಿದ್ಯಾರ್ಥಿಗಳಿಗೆ ಇದರ ಗೊಂದಲತೆ ಬರುವುದಿಲ್ಲ. ಅವರ ಸಾಮರ್ಥ್ಯ ಇದರ ಜೊತೆಗೆ ಗುರಿಯ ಸ್ವಷ್ಠತೆಯೂ ಅವರಲ್ಲಿಯೇ ಇರುತ್ತದೆ. ಇಲ್ಲಿ ಹೆತ್ತವರಿಗೆ ಹೆಚ್ಚಿನ ಸಮಸ್ಯೆ ಇಲ್ಲ.
3. ನಾನು ಆರ್ಟ್ಸ್ ತೆಗೆದು ಕೊಳ್ಳಬೇಕೋ, ವಿಜ್ಞಾನ ಆಯ್ಕೆ ಮಾಡಿದರೆ ಹೇಗೆ? ಕಾಮರ್ಸ್ ಒಳ್ಳೆಯಾದೀತೊ ಏನೋ.. ಗೊಂದಲದಲ್ಲಿರುವ ವಿದ್ಯಾರ್ಥಿಗಳು ಮೊದಲಿಗೆ ತಾವು ಮುಂದೆ ಏನಾಗಬೇಕು; ತನ್ನ ಬದುಕಿನ ಗುರಿ ಏನು ಅನ್ನುವುದನ್ನು ಮೊದಲು ಸ್ವಷ್ಥ ಮಾಡಿಕೊಂಡು ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕೇ ಹೊರತು ನನ್ನ ಸ್ನೇಹಿತರು ಹೀಗೆ ಹೇಳುತ್ತಿದ್ದಾರೆ, ಯಾವುದೋ ಕಾಲೇಜಿನ ಮೇಸ್ಟ್ರು ಹೀಗೆ ಹೇಳುತ್ತಿದ್ದಾರೆ ಅನ್ನುವುದು ಮುಖ್ಯವಲ್ಲ. ಇವತ್ತಿನ ಪರಿಸ್ಥಿತಿ ಏನಾಗಿದೆ ಅಂದರೆ ವಿದ್ಯಾರ್ಥಿಗಳ ಕೊರತೆ ಬಂದಾಗ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಜಾಹೀರಾತು ಮಾಡುವ ತಂತ್ರಗಾರಿಕೆಯನ್ನು ಬಳಸಿಕೊಳ್ಳುವುದನ್ನು ಕಾಣುತ್ತಿದ್ದೇವೆ. ತಾವು ಖುದ್ದಾಗಿ ವಿಷಯ/ಕೋರ್ಸುಗಳು ತನಗೆ ಮುಂದೆ ಯಾವ ರೀತಿಯಲ್ಲಿ ಉದ್ಯೋಗ ಭರವಸೆ ನೀಡೀತು ಅನ್ನುವುದನ್ನು ತಿಳಿದುಕೊಂಡು ಮುನ್ನಡೆಯುವುದು ಉತ್ತಮ.
4. ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಉನ್ನತ ಶಿಕ್ಷಣಕ್ಕೆ ಎಷ್ಟು ದಾರಿಗಳು ಇವೆ ಅನ್ನುವುದನ್ನು ನೋಡಿಕೊಂಡು ಇದರಿಂದ ಉದ್ಯೋಗಕ್ಕೆ ಎಷ್ಟು ಅವಕಾಶಗಳಿವೆ ಅನ್ನುವುದು ಮೊದಲೇ ತಿಳಿದುಕೊಳ್ಳುವುದು ಉತ್ತಮ ನಿರ್ಧಾರವಾಗಬಹುದು.
5. ವಿಷಯ ಯಾವುದೇ ಇರಲಿ ಮೇಲು ಕೀಳು ಅನ್ನುವುದಿಲ್ಲ. ಯಶಸ್ಸು ಸೋಲು ನಮ್ಮ ಅಭಿರುಚಿ ಪ್ರಯತ್ನದ ಮೇಲೆ ನಿಂತಿರುವುತ್ತದೆ ಅನ್ನುವುದು ಶತ ಸಿದ್ದ. ನೀವು ಎಷ್ಟರ ಮಟ್ಟಿಗೆ ವಿಷಯಗಳಿಗೆ ನ್ಯಾಯ ನೀಡುತ್ತಿರೋ ಅಷ್ಟರ ಮಟ್ಟಿನ ನ್ಯಾಯ ಸಿಕ್ಕಿಯೇ ಸಿಗುತ್ತದೆ.
6. ನೀವು ಯಾವುದೇ ವಿಷಯ ಆಯ್ಕೆ ಮಾಡಿಕೊಳ್ಳಿ, ಆ ವಿಷಯದ ಮೇಲೆ ಪ್ರೀತಿ ವಿಶ್ವಾಸ ಅಭಿಮಾನವಿರಲೇಬೇಕು.
7. ಕಾಲೇಜು ಆಯ್ಕೆ ಮಾಡಿಕೊಳ್ಳುವಾಗ ನುರಿತ ಅನುಭವಿ ಉಪನ್ಯಾಸಕರು ಆ ಸಂಸ್ಥೆಯಲ್ಲಿ ಇದ್ದಾರೆಯೇ ಅನ್ನುವುದು ಕೇಳಿ ತಿಳಿದುಕೊಳ್ಳಿ. ಪಾಠ ಪ್ರವಚನಗಳು ಸರಿಯಾಗಿ ನಡೆಯುತ್ತವೆ ಅನ್ನುವುದನ್ನು ಕೂಡಾ ಖುದ್ದಾಗಿ ನೋಡಿ ಕೇಳಿ ತಿಳಿದುಕೊಳ್ಳಿ.
8. ಉತ್ತಮ ಗುಣಮಟ್ಟದ ಶಿಕ್ಷಣ ಸಂಪಾದಿಸುವುದು ನಿಮ್ಮ ಮೊದಲ ಆದ್ಯತೆ ಆಗಬೇಕು. ಬಡತನ ಇಂದಿನ ಶಿಕ್ಷಣ ಸಂಪಾದನೆಗೆ ಅಡ್ಡಿ ಬರುವುದಿಲ್ಲ. ಈ ನಿಟ್ಟಿನಲ್ಲಿ ಬ್ಯಾಂಕ್ ಗಳಿಂದ ಕಡಿಮೆ ಬಡ್ಡಿಯ ಸಾಲದ ವ್ಯವಸ್ಥೆ; ಸರಕಾರ ಮತ್ತು ಸರಕಾರೇತರ ಸಂಘ ಸಂಸ್ಥೆಗಳಿಂದ ವಿದ್ಯಾರ್ಥಿವೇತನಗಳು ಸಾಕಷ್ಟು ಲಭ್ಯವಿದೆ. ಆದರೆ ನಮ್ಮ ವಿದ್ಯಾರ್ಥಿಗಳಿಗೆ ಈ ಕುರಿತಾಗಿ ಮಾಹಿತಿ ತುಂಬ ಕಡಿಮೆ ಇದೆ.
9. ಈ ಒಂದೆರಡು ವರ್ಷದ ಶೈಕ್ಷಣಿಕ ವರ್ಷ ವಿದ್ಯಾರ್ಥಿಗಳ ಮತ್ತು ಹೆತ್ತವರ ಪಾಲಿಗೆ ದೊಡ್ಡ ಸವಾಲೂ ಹೌದು. ಕೊರೊನ ಇನ್ನೂ ತಣ್ಣಗಾಗದ ಕಾರಣ ದೂರದ ಊರುಗಳಿಗೆ ತಮ್ಮ ಮಕ್ಕಳನ್ನು ವಿದ್ಯಾರ್ಜನೆಗೆ ಕಳುಹಿಸುವುದು ಕಷ್ಟ. ಹಾಗಾಗಿ ಮನೆಯ ಹತ್ತಿರದ ಶಾಲೆ/ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ಆದರೆ ತಮ್ಮ ಅಭಿರುಚಿಗೆ ತಕ್ಕ ವಿಷಯ ಅಲ್ಲಿ ಸಿಗಬಹುದೇ ನೋಡಿಕೊಂಡು ಸೇರ್ಪಡೆ ಮಾಡಿಕೊಳ್ಳಿ.
10. ವಿಷಯಗಳ ಆಯ್ಕೆ ಮಾಡಿಕೊಳ್ಳುವ ಸಂದರ್ಭದಲ್ಲಿ ಯಾವುದೇ ಫಲಾಪೇಕ್ಷವಿಲ್ಲದ ನುರಿತ ವಿಷಯ ತಜ್ಞರಿಂದಲೇ ಮಾಹಿತಿ ಪಡೆದು ಮತ್ತೆ ನಿಮ್ಮದೇ ನಿರ್ಣಯ ತೆಗೆದುಕೊಳ್ಳಿ. ಅನಂತರ ನೀವು ಸೋತು ಅಸಹಾಯಕರಾಗಿ ನಿಂತಾಗ ನಿಮಗೆ ಸಹಾಯ ಮಾಡಲು ಯಾರೂ ಬರುವುದಿಲ್ಲ. ಯಶಸ್ಸು ನಿಮ್ಮದಾಗಲಿ ಅನ್ನುವುದು ನಮ್ಮ ಹಾರೈಕೆಯೂ ಹೌದು.
ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಉಡುಪಿ