ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅದರಲ್ಲೂ ವಿಶೇಷವಾಗಿ ಅನುವಾದ ಕ್ಷೇತ್ರದಲ್ಲಿ ಅಮೂಲ್ಯ ಕೃತಿ ರಚನೆಗಳ ಮೂಲಕ ತಮ್ಮದೇ ಆದ ಛಾಪನ್ನು ಮೂಡಿಸಿರುವ ಕರಾವಳಿಯ ಸೃಜನಶೀಲ ಬಹುಬಾಷಾ ಲೇಖಕಿ ಡಾ. ಪಾರ್ವತಿ ಜಿ. ಐತಾಳರು ಕನ್ನಡ ಸಾಹಿತ್ಯ ಲೋಕ ಕಂಡ ಅಪರೂಪದ ಪ್ರತಿಭೆ.
ಕನ್ನಡ ಇಂಗ್ಲೀಷ್ ಹಿಂದಿ ಮಲಯಾಳಂ ಮತ್ತು ತುಳು ಹೀಗೆ ಐದು ಭಾಷೆಗಳಲ್ಲಿ ಪ್ರಭುತ್ವ ಸಾಧಿಸಿ ಆಯಾ ಭಾಷೆಗಳಲ್ಲಿ ಕೃತಿ ರಚನೆ ಮಾಡಿದ್ದು ಮಾತ್ರವಲ್ಲದೆ ಆಯಾ ಭಾಷೆಗಳ ನಡುವೆ ಅನುವಾದದ ಕೆಲಸವನ್ನೂ ಮಾಡುತ್ತಾ ಆಯಾ ಭಾಷೆಗಳ ಅತ್ಯುತ್ತಮ ಕೃತಿಗಳನ್ನು ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತವಾಗಿಸಿದಂತಹ ಅಪೂರ್ವ ಸಾಧನೆ ಪಾರ್ವತಿ ಮೇಡಂ ಅವರಿಗೆ ಸಲ್ಲುತ್ತದೆ.
ಅವರ ಅಪಾರ ಸಾಹಿತ್ಯ ಸಾಧನೆಯನ್ನು ಪುಸ್ತಿಕೆಯ ರೂಪದಲ್ಲಿ ಓದುಗರೆದುರು ಸಂಕ್ಷಿಪ್ತವಾಗಿ ತೆರೆದಿಡುವ ಪ್ರಯತ್ನವೇ ಸುರಗಂಗೆ ಕೃತಿ. ಯುವ ಲೇಖಕ ನರೇಂದ್ರ ಎಸ್ ಗಂಗೊಳ್ಳಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಮೂಡಿಬಂದಿರುವ ಸುರಗಂಗೆ ಪುಸ್ತಕದಲ್ಲಿ ಏಳು ಭಾಗಗಳಿವೆ.
ಪ್ರಥಮ ಭಾಗದಲ್ಲಿ ಪಾರ್ವತಿ ಜಿ ಐತಾಳ್ ಅವರ ಆರವತ್ತೈದು ಕೃತಿಗಳ ಕಿರು ಪರಿಚಯದ ಜೊತೆಗೆ ಇತರ ಲೇಖಕರೊಂದಿಗೆ ಬರೆದ ಕೃತಿಗಳು, ಆಕಾಶವಾಣಿಗಾಗಿ ಅನುವಾದಿಸಿಕೊಟ್ಟ ರಾಷ್ಟ್ರೀಯ ನಾಟಕಗಳು ಮತ್ತು ಪ್ರಕಟಣೆಗೆ ಸಿದ್ಧವಾಗಿರುವ ಕೃತಿಗಳ ವಿವರಗಳಿವೆ.
ನೂರ ಮೂವತ್ತಕ್ಕೂ ಹೆಚ್ಚಿನ ಪುಟಗಳಿರುವ ಎರಡನೇ ಭಾಗದಲ್ಲಿ ಇವರ ವೈವಿಧ್ಯಮಯ ಕೃತಿಗಳಿಗೆ ಸಮಾಜದ ವಿವಿಧ ವಲಯಗಳಲ್ಲಿನ ಖ್ಯಾತನಾಮರಿಂದ ಒದಗಿ ಬಂದ ಪ್ರತಿಸ್ಪಂದನದ ಬರಹಗಳಿವೆ. ಈ ಎರಡೂ ಅಧ್ಯಾಯಗಳ ಓದು ಓದುಗರಿಗೆ ಹಲವಾರು ಭಿನ್ನ ಕೃತಿಗಳ ಓದಿನ ಸಂತೋಷವನ್ನು ಒಟ್ಟಿಗೆ ನೀಡುವುದರಲ್ಲಿ ಯಶಸ್ವಿಯಾಗುತ್ತವೆ. ಅದು ಈ ಪುಸ್ತಕದ ಧನಾತ್ಮಕ ಅಂಶ ಕೂಡ ಹೌದು.
ಮೂರನೇ ಭಾಗದಲ್ಲಿ ವಿವಿಧ ಮಾಧ್ಯಮಗಳಲ್ಲಿ ಮೂಡಿಬಂದಿರುವ ಪಾರ್ವತಿ ಜಿ ಐತಾಳ್ ಅವರ ಜೊತೆಗಿನ ಸಂದರ್ಶನದ ಕುರಿತಾದ ಬರಹಗಳಿವೆ. ನಾಲ್ಕನೇ ಅಧ್ಯಾಯದಲ್ಲಿ ಪ್ರಕಟಣೆಗೆ ಸಿದ್ಧವಾಗಿರುವ ಕೃತಿಗಳ ಕಿರು ಪರಿಚಯವನ್ನು ಸುಂದರವಾಗಿ ಮಾಡಲಾಗಿದೆ. ಐದನೇ ಭಾಗದಲ್ಲಿ ಪಾರ್ವತಿ ಮೇಡಂ ಬಗೆಗೆ ವಿವಿಧ ಪತ್ರಿಕೆಗಳಲ್ಲಿ ಮೂಡಿಬಂದ ಬರಹಗಳನ್ನು ಪ್ರಕಟಿಸಲಾಗಿದೆ.
ಆರನೇ ಭಾಗದಲ್ಲಿ ಇಬ್ಬರು ಹಿರಿಯ ಸಾಹಿತಿಗಳ ಅಭಿನಂದನಾ ಪತ್ರಗಳಿವೆ. ಏಳನೇ ಭಾಗದಲ್ಲಿ ಪಾರ್ವತಿ ಜಿ ಐತಾಳರ ವ್ಯಕ್ತಿತ್ವದ ಕಿರು ಪರಿಚಯವನ್ನು ನೀಡಲಾಗಿದೆ. ಕೊನೆಯ ಪುಟಗಳಲ್ಲಿ ಪಾರ್ವತಿ ಜಿ. ಐತಾಳರ ಬಹುಮುಖ ಪ್ರತಿಭೆಯ ಸಾಧನೆಯ ಪಯಣದ ಹಾದಿಯ ಪ್ರಮುಖ ಘಟ್ಟಗಳನ್ನು, ಪಡೆದ ಪ್ರಶಸ್ತಿಗಳು ಸೇರಿದಂತೆ ಇನ್ನಿತರ ವಿವರಗಳನ್ನು ನೀಡಲಾಗಿದೆ. ಸಮಗ್ರ ಕೃತಿಗಳನ್ನು ಕೊಲಾಜ್ ಮಾಡಿರುವ ಪುಸ್ತಕದ ಮುಖಪುಟವೂ ಅಕರ್ಷಕವಾಗಿ ಮೂಡಿಬಂದಿದೆ.
ಸಹಸಂಪಾದಕರಾಗಿ ನಾಗರಾಜ ವಂಡ್ಸೆ ಮತ್ತು ಶ್ರೀರಾಜ್ ಆಚಾರ್ಯ ಇರುವ ಈ ಪುಸ್ತಕವನ್ನು ಕುಂದಾಪುರದ ಜನಪ್ರತಿನಿಧಿ ಪ್ರಕಾಶನ ಪ್ರಕಟಿಸಿದೆ.
85ಕ್ಕೂ ಅಧಿಕ ಕೃತಿಗಳೂ ಸೇರಿದಂತೆ ತಮ್ಮ ನಿರಂತರವಾದ ಸಾಹಿತ್ಯ ಕೃಷಿಯ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ತನ್ನದೇ ಆದ ಕೊಡುಗೆ ನೀಡಿದಂತಹ ನಮ್ಮ ನಡುವಿನ ಅಪೂರ್ವ ಲೇಖಕಿ ಪಾರ್ವತಿ ಜಿ ಐತಾಳ್ ಅವರ ಸಾಧನೆಯನ್ನು ಪುಸ್ತಕದ ಮುನ್ನುಡಿಯಲ್ಲಿ ಹೇಳಿರುವಂತೆ ಈಗಿನ ಮತ್ತು ಮುಂದಿನ ತಲೆಮಾರಿಗೆ ತಿಳಿಯಪಡಿಸುವ ನಿಟ್ಟಿನಲ್ಲಿ ಮತ್ತು ಬರಹಗಾರರಿಗೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಇದೊಂದು ಖಂಡಿತಾ ಅತ್ಯಂತ ಉಪಯೋಗವಾಗುವ ಕೃತಿ ಎನ್ನುವುದರಲ್ಲಿ ಸಂದೇಹವಿಲ್ಲ.
ಸಾಹಿತ್ಯ ಪ್ರಿಯರಿಂದ ಮೆಚ್ಚುಗೆ ಗಳಿಸಿಕೊಂಡಿರುವ ಈ ಪುಸ್ತಕದ ಓದು ಹಲವು ಪುಸ್ತಕಗಳ ಓದಿನ ಅನುಭವವನ್ನು ಸಂತೋಷವನ್ನು ಕಟ್ಟಿಕೊಡುವುದು ಕೂಡ ಹೌದು.
-ರಾಘವೇಂದ್ರ ಬಿ. ಗಂಗೊಳ್ಳಿ
ಹವ್ಯಾಸಿ ಬರಹಗಾರರು
ಪುಸ್ತಕಕ್ಕಾಗಿ ಸಂಪರ್ಕಿಸಿ:
9242127307
ವಿಳಾಸ:
ಟೆಲಿಫೋನ್ ಎಕ್ಸ್ಚೇಂಜ್, ಗಂಗೊಳ್ಳಿ.
ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ.- 576216
ಮೊಬೈಲ್: 9449366585
ಕೃತಿ ವಿವರ:
ಕೃತಿ: ಸುರಗಂಗೆ
ಸಂಪಾದಕರು: ನರೇಂದ್ರ ಎಸ್ ಗಂಗೊಳ್ಳಿ.
ಪುಟಗಳು: 228
ಬೆಲೆ: ರೂ.250
ಪ್ರಕಾಶಕರು: ಜನಪ್ರತಿನಿಧಿ ಪ್ರಕಾಶನ. ಕುಂದಾಪುರ