ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೊ? ರಾಜೀನಾಮೆ ನೀಡುತ್ತಾರೊ ಎಂಬ ಊಹಾಪೋಹಗಳಿಗೆ ಒಂದು ತಾರ್ಕಿಕವಾದ ಅಂತಿಮ ನಿರ್ಧಾರ ಹೊರಬಿದ್ದಂತಿದೆ. ಅದೇನೆಂದರೆ ಮುಖ್ಯಮಂತ್ರಿ ಯಡಿಯೂರಪ್ಪ ನವರು ಇದೇ 26ನೇ ತಾರೀಖಿನಂದು ರಾಜೀನಾಮೆ ನೀಡಲಿದ್ದಾರೆ ಅನ್ನುವ ಸುದ್ದಿ ಬಲ್ಲ ಮೂಲಗಳಿಂದ ಖಚಿತವಾಗುತ್ತಿರುವುದಂತೂ ಸತ್ಯ. ಇದಕ್ಕೂ ರಾಜಾ ಹುಲಿ ಯಡಿಯೂರಪ್ಪ ನವರು ಮಾನಸಿಕವಾಗಿ ಸಜ್ಜಾಗಿರುವುದು ಕೂಡ ಅವರ ಮಾತಿನ ಧ್ವನಿ ಯಲ್ಲಿಯೇ ಎದ್ದು ಕಾಣುತ್ತಿದೆ. ಈಗ ಕರ್ನಾಟಕದ ಜನತೆಯ ಮುಂದಿರುವ ಬಹುದೊಡ್ಡ ಕುತೂಹಲದ ನಿರೀಕ್ಷೆ ಅಂದರೆ ಕನ್ನಡ ನಾಡಿನ ರಾಜಾಹುಲಿ ಎಂದೇ ಖ್ಯಾತರಾದ ಯಡಿಯೂರಪ್ಪನವರ ಮುಂದಿನ ಹೆಜ್ಜೆ ಹೇಗಿರಬಹುದು? ಅನ್ನುವುದೇ ಬಹುಚರ್ಚಿತ ವಿಚಾರ.
ಇದುವರೆಗೆ ಯಡಿಯೂರಪ್ಪನವರು ತಮಗಾದ ನೋವನ್ನು ಯಾರ ಮುಂದೆ ಯಾವ ಸಂದರ್ಭದಲ್ಲೂ ಕೂಡ ಹೊರಗೆ ತೋರಿಸಿಕೊಳ್ಳಲೇ ಇಲ್ಲ. ಅಂದರೆ ಅವರಿಗಾದ ನೋವು ತಮ್ಮ ಮನಸ್ಸಿನೊಳಗೆ ತುಂಬಿಕೊಂಡು ಮುಖ್ಯಮಂತ್ರಿ ಅನ್ನುವುದನ್ನು ಮರೆಯದೆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ; ಮಾಧ್ಯಮದವರನ್ನು ಕೂಡ ಅಷ್ಟೇ ಸಲಿಸಾಗಿ ಎದುರಿಸುತ್ತಿದ್ದಾರೆ. ಅವರು ಎಲ್ಲಿಯೂ ಕೂಡ ತಾನು 26ಕ್ಕೆ ರಾಜಿನಾಮೆ ನೀಡುತ್ತೇನೆ ಅನ್ನುವುದನ್ನು ಹೇಳೊಲ್ಲ ಮಾತ್ರವಲ್ಲ ಕೊಡುವುದಿಲ್ಲ ಅನ್ನುವುದನ್ನು ಕೂಡಾ ಹೇಳುವುದಿಲ್ಲ. ಇದು ರಾಜಾಹುಲಿಯ ಗಂಭೀರದ ಆಶ್ಚರ್ಯದ ನಡೆಯೂ ಹೌದು. ಎಲ್ಲದಕ್ಕೂ ರಾಷ್ಟೀಯ ನಾಯಕರುಗಳ ತೀರ್ಮಾನಕ್ಕೆ ಬಿಟ್ಟಿದ್ದೇನೆ ಅನ್ನುವ ಮಾತು ಅವರ ಮುಂದಿನ ನಡಿಗೆಯ ಹೆಜ್ಜೆಯನ್ನು ಇನ್ನಷ್ಟು ಕೌತುಕಮಯ ಮಾಡಿದೆ ಅನ್ನುವುದು ಅಷ್ಟೇ ಸ್ವಷ್ಟ.
ಹಾಗಾದರೆ ಮುಖ್ಯಮಂತ್ರಿ ಸ್ಥಾನ ಕಳಚಿಕೊಂಡ ರಾಜಾಹುಲಿ ಯಡಿಯೂರಪ್ಪ ಸರ್ಕಾರ ಎಂಬ ಬೋನಿನಿಂದ ಹೊರಗೆ ಬಂದ ಮೇಲೆ ಅವರ ನಡೆ ನುಡಿ ಘರ್ಜನೆ ಹೇಗಿರಬಹುದು? ಇದು ಖಂಡಿತವಾಗಿಯೂ ಅಪಾಯದ ಹುಲಿ ಅನ್ನುವುದು ಹೈಕಮಾಂಡಿಗೆ ಮೊದಲೇ ತಿಳಿದಿದೆ ಹಾಗಾಗಿ ಯಾವುದಾರೂ ಒಂದು ಪಂಜರದಲ್ಲಿ ಕಟ್ಟಿ ಹಾಕಿ ಗರ್ಜಿಸದ ಹಾಗೇ ನೋಡಿಕೊಳ್ಳಬೇಕೆಂಬ ತಂತ್ರಗಾರಿಕೆ ಬಿಜೆಪಿಯ ಉನ್ನತ ಮಟ್ಟದಲ್ಲಿ ನಡೆಯುತ್ತಿರುವುದು ಅಷ್ಟೇ ಸತ್ಯ. ಗರ್ಜಿಸಲಾಗದ ಚಿನ್ನದ ಪಂಜರ ನನಗೆ ಬೇಡ, ಇದರ ಬದಲಿಗೆ ತಾನು ನಿರ್ಮಾಳವಾಗಿ ಕಾಡಿನಲ್ಲಿ ಸುತ್ತಾಡಿ ಕೊಂಡಿರುತ್ತೇನೆ ಅನ್ನುವ ಮನದ ನಿರ್ಧಾರವನ್ನು ರಾಜಾಹುಲಿ ತೆಗೆದುಕೊಂಡ ಹಾಗಿದೆ.
ಆದರೂ ಹೈಕಮಾಂಡಿಗೂ ತಿಳಿದಿದೆ ಹುಲಿಗೆ ಪ್ರಾಯವಾಗಿದೆ ಹಾಗಾಗಿ ಪ್ರತಿಷ್ಠೆಯನ್ನು ಬದಿಗಿಟ್ಟು ತನ್ನ ಮರಿಗಳ ಸುರಕ್ಷತೆಗಾಗಿಯಾದರೂ ಬಾಲ ಮಡಚಿ ಕುಳಿತುಕೊಳ್ಳಬಹುದು ಅನ್ನುವ ಆಲೋಚನೆ ಬಿಜೆಪಿ ಉನ್ನತ ನಾಯಕರುಗಳದ್ದು. ಆದರೆ ಅದು ಅವರು ಎಣಿಸಿದಷ್ಟು ಸುಲಭವಲ್ಲ. ಅಂದರೆ ಪೆಟ್ಟು ತಿಂದ ಹುಲಿ ಕಾಡಿನಲ್ಲಿ ಸ್ವಚ್ಛಂದವಾಗಿ ತಿರುಗಿಕೊಂಡು ಬೇಕಾದಲ್ಲಿ ಬೇಟೆಯಾಡಿಕೊಂಡು ದ್ರೋಹ ಬಗೆದವರಿಗೆ ಪೆಟ್ಟಿನ ರುಚಿ ತೋರಿಸಿ ತನ್ನ ಇರುವಿಕೆಯನ್ನು ಮತ್ತೆ ಮತ್ತೆ ಪರಿಚಯಿಸುವ ಕಾರ್ಯತಂತ್ರದಲ್ಲಿ ರಾಜಾಹುಲಿ ಮುಖ್ಯಮಂತ್ರಿ ಪಂಜರದಿಂದ ವಿರಮಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.
ಒಂದಂತೂ ಸತ್ಯ, ಹಲ್ಲು ಕಿತ್ತ ಹುಲಿಯನ್ನು ಮಡಿಲಲ್ಲಿ ಮಲಗಿಸಿಕೊಂಡು ನಿದ್ದೆ ಮಾಡುತ್ತೇನೆ ಅನ್ನುವ ಮುಂದಿನ ಮುಖ್ಯಮಂತ್ರಿಗಳಿಗೆ ಮತ್ತು ಹಲ್ಲು ಕೀಳಲು ತೆರೆಮರೆಯಲ್ಲಿ ಆಟವಾಡಿದವರಿಗೆ ಸುಖನಿದ್ರೆ ಮಾಡಲು ಹಳೆ ಹುಲಿ ಖಂಡಿತವಾಗಿಯೂ ಬಿಡಲಿಕ್ಕಿಲ್ಲ ಅನ್ನುವುದು ಅಷ್ಟೇ ನಿಜ. ಒಂದು ವೇಳೆ ಅಂದಿನ ಯಡಿಯೂರಪ್ಪ ಇಂದಾಗಿದ್ದರೆ ಬಿಜೆಪಿಯನ್ನು ತುದಿಗಾಲಿನಲ್ಲಿ ನಿಲ್ಲಿಸುವ ಅವಕಾಶ ಇಂದು ಸಾಕಷ್ಟು ಇತ್ತು. ಅದು ಹೇಗೆ ನೋಡಿ. ಒಂದು ವೇಳೆ ಯಡಿಯೂರಪ್ಪನವರೇ ರಾಜೀನಾಮೆ ಕೊಡಿ ಅಂದು ಬಿಜೆಪಿ ಹೈಕಮಾಂಡ್ ಹೇಳಿದಾಗ ಇಲ್ಲ ನಾನು ಕೊಡುವುದಿಲ್ಲ. ನನಗೆ ಸದನದಲ್ಲಿ ಬಹುಮತವಿದೆ ಸಾಬೀತು ಪಡಿಸುತ್ತೇನೆ ಅಂದ್ರೆ ಇಂದಿನ ಪರಿಸ್ಥಿತಿಯಲ್ಲಿ ಯಡಿಯೂರಪ್ಪನವರನ್ನು ಬೆಂಬಲಿಸುವ ಬಿಜೆಪಿಯನ್ನು ಮಣಿಸಬೇಕೆಂಬ ಕಾಂಗ್ರೆಸ್ ಇದೆ, ಜೆಡಿಎಸ್ ಇದೆ. ಮಾತ್ರವಲ್ಲ, ಸಾಕಷ್ಟು ಲಿಂಗಾಯಿತ ಶಾಸಕರು ಇದ್ದಾರೆ. ಜೊತೆಗೆ ಅವರದ್ದೇ ಮಿತ್ರ ಮಂಡಳಿಯೂ ಇದೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಪರಿಸ್ಥಿತಿ ಏನಾಗಬಹುದು ಊಹಿಸಿ?
ಆದರೆ ಈ ಪರಿಸ್ಥಿತಿಯಲ್ಲಿ ಇಂದಿನ ಯಡಿಯೂರಪ್ಪ ಹಾಗೇ ಮಾಡಲು ತಯಾರಿಲ್ಲ. ಇದಕ್ಕೆ ಬಹುಮುಖ್ಯ ಕಾರಣ ಇದು ಯಡಿಯೂರಪ್ಪನವರಿಗೆ ರಾಜಕೀಯ ಪ್ರಯೋಗ ಮಾಡುವ ಪ್ರಾಯವೂ ಅಲ್ಲ ಮಾತ್ರವಲ್ಲ ಜೊತೆಗೆ ಪುತ್ರ ವಾತ್ಸಲ್ಯವೂ ಅವರನ್ನು ಪಕ್ಷದ ಒಳಗೆ ಬಂಧಿಸಿ ಬಿಟ್ಟಿದೆ ಅಂದರೂ ತಪ್ಪಾಗಲಾರದು. ಯಡಿಯೂರಪ್ಪನವರ ಬಗ್ಗೆ ಯಾರು ಏನೇ ಹೇಳಲಿ ಒಂದಂತೂ ಸತ್ಯ ಬಿಜೆಪಿಗೆ ದಕ್ಷಿಣ ಭಾರತದಲ್ಲಿ ಅದರಲ್ಲೂ ಕರುನಾಡಿನಲ್ಲಿ ನೆಲೆ ಕಾಣುವಂತೆ; ಅಧಿಕಾರ ಹಿಡಿಯುವಂತೆ ಮಾಡಿದ್ದರೆ ಅದು ಈ ರಾಜಾಹುಲಿ ಅನ್ನುವುದರಲ್ಲಿ ಎರಡು ಮಾತಿಲ್ಲ. ಬಿಜೆಪಿಗೆ ರಾಜ್ಯದಲ್ಲಿ ಸರಕಾರ ಬೇಕು ಅನ್ನುವಾಗ ಇದೇ ಯಡಿಯೂರಪ್ಪನವರನ್ನು ಬಳಸಿಕೊಂಡು ಅಧಿಕಾರ ಹಿಡಿದಿದ್ದಾರೆ; ಅದೇ ಪಕ್ಷ ಗಟ್ಟಿಯಾಯಿತು ಅನ್ನುವಾಗ ಭ್ರಷ್ಟಾಚಾರ ನೈತಿಕತೆ ಎಲ್ಲವೂ ನೆನಪಾಗಿ ಅಧಿಕಾರ ಮುಗಿಯಲು ಒಂದು ವರ್ಷ ಒಂಬತ್ತು ತಿಂಗಳು ಇರುವಾಗಲೇ ಹೆತ್ತು ಹೊತ್ತ ತಾಯಿಯನ್ನೇ ಮರೆಯುತ್ತೀರಿ ಅಂದರೆ ಇದು ನ್ಯಾಯವೇ ಅನ್ನುವ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಬೇರೆ ಪಕ್ಷಗಳಿಂದ ಚುನಾಯಿತ ಶಾಸಕರನ್ನು ತಂದು ಸರಕಾರ ಕಟ್ಟುವಾಗ ಈ ಭ್ರಷ್ಟಾಚಾರ ಅನೈತಿಕತೆಯ ನೆನಪಾಗಲಿಲ್ಲವೇ? ಮುಂದಿನ ಚುನಾವಣೆಯಲ್ಲಿ ಗೆಲ್ಲುವ ಇಚ್ಛೆ ಇದ್ದರೆ ಇದಕ್ಕೆಲ್ಲ ಉತ್ತರಿಸಬೇಕಾದ ಜವಾಬ್ದಾರಿ ಬಿಜೆಪಿಯ ಮುಂದಿದೆ.
-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ