Sunday, January 19, 2025
Sunday, January 19, 2025

ಪಾಂಗಾಳ ರಬೀಂದ್ರ ನಾಯಕರಿಗೆ ಭಾವಪೂರ್ಣ ಶೃದ್ಧಾಂಜಲಿ

ಪಾಂಗಾಳ ರಬೀಂದ್ರ ನಾಯಕರಿಗೆ ಭಾವಪೂರ್ಣ ಶೃದ್ಧಾಂಜಲಿ

Date:

ರಾವಳಿ ಜಿಲ್ಲೆಗಳ ಮಹೋನ್ನತ ಸಾರಿಗೆ ಉದ್ಯಮಿ ಮತ್ತು ಸಮಾಜ ಸೇವಕರಾದ ಪಾಂಗಾಳ ರಬೀಂದ್ರ ನಾಯಕರು ಇಂದು ನಮ್ಮನ್ನು ಅಗಲಿದ್ದಾರೆ. ನಾಯಕರ ಸಾಧನೆ, ಸೇವಾ ಮನೋಭಾವ, ಅವರ ಸಾಮಾಜಿಕ ಬದ್ಧತೆ, ದೂರದೃಷ್ಠಿ, ಶಿಸ್ತುಬದ್ಧ ಜೀವನ ಇವುಗಳನ್ನೆಲ್ಲ ನೋಡುವಾಗ ನಮಗೆ ನಿಜವಾಗಿಯೂ ರೋಮಾಂಚನ ಆಗುತ್ತದೆ.

ಪಾಂಗಾಳ ನಾಯಕರ ಕುಟುಂಬ ಎಂದರೆ ಅದು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ. ಅವರು ದೊಡ್ಡ ಲ್ಯಾಂಡ್ ಲಾರ್ಡಗಳು. ಆಗರ್ಭ ಶ್ರೀಮಂತರು. ರಬೀಂದ್ರ ನಾಯಕರ ಅಜ್ಜ, ಅಪ್ಪ ಮೊದಲಾದವರು ಕಟಪಾಡಿಯ ಬಹು ಪ್ರಸಿದ್ಧವಾದ ಎಸ್.ವಿ.ಎಸ್. ವಿದ್ಯಾಸಂಸ್ಥೆಗಳ ಸ್ಥಾಪನೆಗೆ ಶಕ್ತಿ ತುಂಬಿದವರು ಮತ್ತು ತುಂಬಾ ಬೆಲೆ ಬಾಳುವ ಜಾಗವನ್ನು ಶಾಲೆಗೆ ಸಂಪೂರ್ಣ ಉಚಿತವಾಗಿ ನೀಡಿ ದಾನಿಯಾಗಿ ನೆರವಿಗೆ ನಿಂತವರು. ಅದೇ ರೀತಿಯಲ್ಲಿ ಕಟಪಾಡಿಯ ಬಹು ಪ್ರಸಿದ್ಧವಾದ ಶ್ರೀ ವೆಂಕಟರಮಣ ದೇವಸ್ಥಾನ ಮತ್ತು ಅಷ್ಟೇ ಪ್ರಸಿದ್ಧ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಗಳ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದವರು.

ಅದೇ ರೀತಿಯಾಗಿ ತಮ್ಮ ಹಿರಿಯರ ಹಾದಿಯಲ್ಲಿ ಸಾಗಿ ಬಂದ ರಬೀಂದ್ರ ನಾಯಕರು ತನ್ನ ಊರಿನ ಸುತ್ತ ಮುತ್ತ ಇರುವ ಹಲವು ವಿದ್ಯಾಸಂಸ್ಥೆಗಳ, ಆಸ್ಪತ್ರೆಗಳ ಮತ್ತು ದೇವಾಲಯಗಳ ಅಭಿವೃದ್ಧಿಗಾಗಿ ಗಟ್ಟಿಯಾದ ಸಂಕಲ್ಪವನ್ನು ತೊಟ್ಟರು. ಕಟಪಾಡಿಯಲ್ಲಿ ಇರುವ ಎಸ್.ವಿ.ಎಸ್. ಶಿಕ್ಷಣ ಸಂಸ್ಥೆ ಗಳ ಸಂಚಾಲಕರಾಗಿ ಬಹು ದೀರ್ಘವಾದ ಅವಧಿಗೆ ಅವರು ದುಡಿದರು. ಅದೇ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮದ ವಿಭಾಗದ ಕಟ್ಟಡವನ್ನು ಅವರ ಶ್ರೇಷ್ಟ ನಾಯಕತ್ವದಲ್ಲಿ ಸಂಸ್ಥೆಯು ಪಡೆಯಿತು.

ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಅಭಿವೃದ್ಧಿಯ ಮಂಡಳಿಯ ಅಧ್ಯಕ್ಷರಾಗಿ ಆ ಆಸ್ಪತ್ರೆಯನ್ನು ನಾಡಿನ ಪ್ರಮುಖ ಆಸ್ಪತ್ರೆಯನ್ನಾಗಿ ಅವರು ಮಾಡಿದರು. ತನ್ನ ಸಂಪಾದನೆಯ ಬಹುದೊಡ್ಡ ಭಾಗವನ್ನು ಆಸ್ಪತ್ರೆಯ ಅಭಿವೃದ್ಧಿಗೆ ವಿನಿಯೋಗ ಮಾಡಿದರು. ಆಸ್ಪತ್ರೆಗೆ ಅಗತ್ಯವಾದ ಡಯಾಲಿಸಿಸ್ ಯಂತ್ರವನ್ನು ದಾನವಾಗಿ ನೀಡಿದರು. ಕೆ. ಎಂ. ಉಡುಪರ ಜೊತೆಗೆ ಉಡುಪಿ ಇಡೀ ಸುತ್ತಾಡಿ ಧನ ಸಂಗ್ರಹ ಮಾಡಿದರು. ನೂರಾರು ದಾನಿಗಳಿಂದ ಮೂಲಕ ಹರಿದು ಬಂದ ಒಂದೊಂದು ರೂಪಾಯಿ ಕೂಡ ಆಸ್ಪತ್ರೆಗೆ ಸದ್ವಿನಿಯೋಗ ಆಗುವ ಹಾಗೆ ನಾಯಕರು ನೋಡಿಕೊಂಡರು. ಹಾಗೆಯೇ ಉಡುಪಿ ಜಿಲ್ಲೆಯ ಹಲವು ಖಾಸಗಿ ಆಸ್ಪತ್ರೆಗಳಿಗೆ ಕೂಡ ಪ್ರಚಾರ ಬಯಸದೆ ನೆರವು ನೀಡಿದರು.

ಕರಾವಳಿ ಜಿಲ್ಲೆಗಳಲ್ಲಿ ದಶಕಗಳ ಹಿಂದೆ ಸಾರಿಗೆಯ ಉದ್ಯಮದ ಸ್ಥಾಪನೆಯನ್ನು ಮಾಡಿದ ಮೊದಲಿಗರಲ್ಲಿ ನಾಯಕರು ಒಬ್ಬರು. ಅವರೇ ಸ್ಥಾಪನೆ ಮಾಡಿದ ಹನುಮಾನ್ ಮೋಟಾರ್ಸ್ ಸಾರಿಗೆ ಸಂಸ್ಥೆಯು ಭಾರೀ ಜನಪ್ರಿಯವಾದ ಬಸ್ಸುಗಳನ್ನು ರಸ್ತೆಗೆ ಇಳಿಸಿತು. ಹಳ್ಳಿ ಹಳ್ಳಿಗೂ ಓಡಿಸಿತು. ಅವರಿಗೆ ಸಾರಿಗೆ ಉದ್ಯಮವು ಒಂದು ವ್ಯವಹಾರ ಆಗಿರದೆ ಅದೊಂದು ಪೂಜೆ ಆಗಿತ್ತು. ಲಾಭ ನಷ್ಟಗಳ ಬಗ್ಗೆ ಅವರು ಎಂದೂ ತಲೆ ಕೆಡಿಸಿದವರು ಅಲ್ಲ. ಯಾವ ಬಸ್ಸುಗಳು ಹೋಗದ ದುರ್ಗಮ ಹಾದಿಯಲ್ಲಿ, ಸಣ್ಣ ಸಣ್ಣ ಹಳ್ಳಿಗಳಿಗೂ ಅವರು ಹನುಮಾನ್ ಬಸ್ಸನ್ನು ಓಡಿಸಿದರು.

ಮುಂಬೈ ಮಹಾನಗರಕ್ಕೆ ಕೂಡ ಇಲ್ಲಿಂದ ಹಲವು ಹನುಮಾನ್ ಬಸ್ಸುಗಳು ಓಡಿದವು. ಹನುಮಾನ್ ಮೋಟಾರ್ಸ್ ಬಸ್ಸುಗಳು ಕರ್ನಾಟಕದ ಕರಾವಳಿಯಲ್ಲಿ ಮಾಡಿದ ಸಾರಿಗೆ ಕ್ರಾಂತಿಯು ನಿಜಕ್ಕೂ ಅದ್ಭುತವೇ! ವಿದ್ಯಾರ್ಥಿಗಳಿಗೆ ಅರ್ಧ ದರದ ರಿಯಾಯಿತಿಯನ್ನು ಸರಕಾರವು ಘೋಷಿಸುವ ಮೊದಲೇ ಅವರು ತಮ್ಮ ಬಸ್ಸುಗಳಲ್ಲಿ ಜಾರಿ ಮಾಡಿದ್ದರು.

ಅವರ ಸಾಮಾಜಿಕ ಬದ್ಧತೆ ಬಗ್ಗೆ ನಾನಿಂದು ಒಂದೆರಡು ಘಟನೆಗಳನ್ನು ಬರೆಯಬೇಕು. ಒಮ್ಮೆ ಅವರು ಕೂತು ಯೋಚನೆ ಮಾಡುತ್ತಿರುವಾಗ ಥಟ್ಟನೆ ಅವರಿಗೆ ಪಾಪ ಪ್ರಜ್ಞೆಯು ಕಾಡಿತಂತೆ. ಅದಕ್ಕೆ ಕಾರಣ ಏನೆಂದರೆ ತಮ್ಮ ಹನುಮಾನ್ ಬಸ್ಸುಗಳು ನಿತ್ಯವೂ ಉಂಟು ಮಾಡುತ್ತಿರುವ ಪರಿಸರ ಮಾಲಿನ್ಯದ ಬಗ್ಗೆ! ತಮ್ಮ ನೂರಾರು ಬಸ್ಸುಗಳು ಹೊಗೆ ಉಗುಳುತ್ತಾ ಪರಿಸರದ ಸಮತೋಲನ ಕೆಡಿಸುತ್ತವೆ!

ಆಗ ಎಮಿಷನ್ ಟೆಸ್ಟ್ ಇತ್ಯಾದಿ ಎಲ್ಲವೂ ಇರಲಿಲ್ಲ. ಅಥವಾ ಅವರಿಗೆ ಯಾರೂ ನೋಟಿಸ್ ಕೊಟ್ಟಿರಲಿಲ್ಲ. ಆದರೂ ನಾಯಕರು ಕಂಗೆಟ್ಟರು. ನಿದ್ದೆಯು ಹೊರಟು ಹೋಯಿತು. ಅದಕ್ಕಾಗಿ ಅವರು ತಜ್ಞರ ಅಭಿಪ್ರಾಯ ಪಡೆದರು. ಪ್ರತೀ ಬಸ್ಸು ಹೊರ ಹಾಕುವ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣವನ್ನು ಲೆಕ್ಕ ಹಾಕಿದರು. ಅದನ್ನು ಸಮ ತೂಗಿಸಲು ಎಷ್ಟು ಕಾಡು ಬೆಳೆಸಬೇಕು ಎಂದು ನಿಖರವಾಗಿ ಲೆಕ್ಕ ಮಾಡಿದರು. ಒಂದಿಷ್ಟು ಎಕರೆಯಷ್ಟು ಖಾಲೀ ಭೂಮಿಯನ್ನು ಖರೀದಿ ಮಾಡಿ ನಾಯಕರೇ ಮುಂದೆ ನಿಂತು ಸಾಮಾಜಿಕ ಅರಣ್ಯವನ್ನು ತಮ್ಮ ಸ್ವಂತ ಖರ್ಚಿನಲ್ಲಿ ನಿರ್ಮಾಣ ಮಾಡಿದರು. ಈ ರೀತಿಯ ಬದ್ಧತೆ ಬೇರೆ ಯಾವ ಉದ್ಯಮಿಯಲ್ಲಿ ನೋಡಲು ಸಿಗಬಹುದು?

ಇನ್ನೊಮ್ಮೆ ಒಬ್ಬ ಸಾಮಾನ್ಯ ಬಸ್ಸಿನ ಡ್ರೈವರ್ ಅವರಿಗೆ ತಪ್ಪು ಲೆಕ್ಕವನ್ನು ತೋರಿಸಿ ಮೋಸ ಮಾಡಿದ್ದ. ಜಾಸ್ತಿ ಹಣವನ್ನು ದೋಚಿದ್ದ. ಇದು ನಾಯಕರಿಗೆ ಕೂಡಲೇ ಗೊತ್ತಾಯಿತು. ಹಣಕಾಸು ನಿರ್ವಹಣೆಯಲ್ಲಿ ಅವರಿಗೆ ಅವರೇ ಸಮ ಎಂದು ಸಾಬೀತಾಗಿತ್ತು. ಹಿಂದೆ ಮುಂದೆ ನೋಡದೆ ಆ ಡ್ರೈವರನನ್ನು ಅವರು ವಜಾ ಮಾಡಿ ಮನೆಗೆ ಕಳುಹಿಸಿದರು. ಒಂದೆರಡು ದಿನದಲ್ಲಿ ಅವರಿಗೆ ಗೊತ್ತಾದ ಸತ್ಯವು ಏನೆಂದರೆ ಆ ಡ್ರೈವರನ ಮನೆಯಲ್ಲಿ ಭಾರೀ ಬಡತನ ಇತ್ತು. ಹೆಂಡತಿ ಮತ್ತು ಮಕ್ಕಳಿಗೆ ತೀವ್ರ ಅನಾರೋಗ್ಯ ಬೇರೆ ಕಾಡುತಿತ್ತು. ನಾಯಕರಿಗೆ ಬೇಜಾರು ಆಯಿತು. ಆಗ ಅದೇ ನಾಯಕರು ಆ ಡ್ರೈವರನ ಮನೆಗೆ ಹೋಗಿ ಅವನನ್ನು ಕರೆದುಕೊಂಡು ಬಂದು ಪುನಃ ಕೆಲಸವನ್ನು ಕೊಟ್ಟರು. “ದುಡ್ಡಿನ ಆವಶ್ಯಕತೆ ಇದ್ದರೆ ಬಾಯಿ ಬಿಟ್ಟು ಕೇಳು. ಆದರೆ ಕಳ್ಳತನ ಮಾಡಬೇಡ” ಎಂದು ಅವರು ಬುದ್ದಿ ಹೇಳಿದ್ದರು. ಆ ಡ್ರೈವರ್ ಮುಂದೆ ಯಾವತ್ತೂ ಕಳ್ಳತನ ಮಾಡಲಿಲ್ಲ!

ಅಂತಹ ಹೃದಯ ಶ್ರೀಮಂತ, ಹೃದಯವಂತ, ಮಹಾ ಸ್ವಾಭಿಮಾನಿ, ರಾಷ್ಟ್ರಾಭಿಮಾನಿ ಉದ್ಯಮಿ ಆಗಿದ್ದ ಶ್ರೀ ಪಾಂಗಾಳ ರಬೀಂದ್ರ ನಾಯಕರು ಇಂದು ತಮ್ಮ ಶತ ಸಂವತ್ಸರದ ಬದುಕಿಗೆ ವಿದಾಯವನ್ನು ಹೇಳಿ ನಮ್ಮನ್ನು ಅಗಲಿದ್ದಾರೆ. ಅವರಿಗೆ ನಮ್ಮ ಭಾವಪೂರ್ಣ ಶ್ರದ್ಧಾಂಜಲಿ.

– ರಾಜೇಂದ್ರ ಭಟ್ ಕೆ. (ಜೇಸಿಐ ರಾಷ್ಟ್ರಮಟ್ಟದ ತರಬೇತುದಾರರು)

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!