ನೇತಾಜಿ ಅವರ ಜನ್ಮ ಜಯಂತಿಯ 126ನೆಯ ವರ್ಧಂತಿಯನ್ನು ಇಂದು ಇಡೀ ದೇಶವು ಆಚರಿಸುತ್ತಿದೆ. ಕಳೆದ ವರ್ಷದಿಂದ ನೇತಾಜಿ ಅವರ ಜನ್ಮ ದಿನವನ್ನು (ಜನವರಿ 23) ಪ್ರತೀ ವರ್ಷವೂ ಪರಾಕ್ರಮ ದಿನವಾಗಿ ಆಚರಿಸಲು ಕೇಂದ್ರ ಸರ್ಕಾರವು ನಿರ್ಧಾರ ಮಾಡಿತ್ತು. ಇದು ನಿಜವಾಗಿಯೂ ಅತ್ಯಂತ ಸೂಕ್ತವಾದ ನಿರ್ಧಾರವಾಗಿತ್ತು. ನೇತಾಜಿ ಸುಭಾಸರನ್ನು ಇಂದಿನ ತಲೆಮಾರಿನ ಜನರು ನಿರಂತರವಾಗಿ ನೆನಪಿಸಿಕೊಳ್ಳಬೇಕು.
2004ರಲ್ಲಿ ಶಾಮ್ ಬೆನೆಗಲ್ ನಿರ್ದೇಶನ ಮಾಡಿದ ಶ್ರೇಷ್ಠ ಸಿನೆಮಾ ‘ನೇತಾಜಿ ಸುಭಾಸ್ ಚಂದ್ರ ಬೋಸ್ – ದ ಫಾರ್ಗೊಟನ್ ಹೀರೋ’ ನೋಡಿ ನಾನು ಧಾರೆಯಾಗಿ ಕಣ್ಣೀರು ಸುರಿಸಿದ್ದೆ. ಅವರು ಬದುಕಿದ ರೀತಿಯೇ ಹಾಗಿತ್ತು! ಸಾವನ್ನು ಎದುರಿಸುವ ಧೈರ್ಯವು ಅವರಿಗೆ ರಕ್ತಗತವಾಗಿ ಬಂದಿತ್ತು.
ಕಟಕ ನಗರದ ಅತ್ಯಂತ ಶ್ರೀಮಂತ ವಕೀಲನ ಮಗನಾಗಿ ಜನಿಸಿದ (1897 ಜನವರಿ 23) ಸುಭಾಷರು ತನ್ನ ಹೆತ್ತವರ ಆಸೆಯಂತೆ ಲಂಡನ್ನಿಗೆ ಹೋಗಿ ಕೇಂಬ್ರಿಜ್ ವಿವಿಯಲ್ಲಿ ನಾಲ್ಕನೇ ರಾಂಕ್ ಪಡೆದು ಐಸಿಎಸ್ ಪರೀಕ್ಷೆಯನ್ನು ಪಾಸ್ ಆಗಿದ್ದರು! ಅವರ ಪದವಿಗೆ ಅನುಗುಣವಾಗಿ ಬ್ರಿಟಿಷ್ ಸರಕಾರವು ಅವರಿಗೆ ಅತ್ಯಂತ ದೊಡ್ಡ ಹುದ್ದೆಯ ಆಫರ್ ನೀಡಿತ್ತು. ಆದರೆ ಆಗಲೇ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹರಡಿತ್ತು. ಭಾರತ ಅವರನ್ನು ಕೈ ಬೀಸಿ ಕರೆದಾಗ ಅವರು ಐಸಿಎಸ್ ಪದವಿಯನ್ನು ತ್ಯಜಿಸಿ ಭಾರತಕ್ಕೆ ಬಂದರು.
ಬಾಲ್ಯದಲ್ಲಿ ಅವರ ಮೇಲೆ ವಿವೇಕಾನಂದರ ದಟ್ಟ ಪ್ರಭಾವ ಆಗಿತ್ತು. ರಾಷ್ಟ್ರಪ್ರೇಮದ ಬೆಂಕಿಯು ಮೊದಲೇ ಅವರ ಒಳಗಿತ್ತು. ಭಾರತಕ್ಕೆ ಬಂದಾಗ ಅವರ ಮೇಲೆ ಆರಂಭದಲ್ಲಿ ಮಹಾತ್ಮ ಗಾಂಧೀಜಿಯವರ ಪ್ರಭಾವವು ಆಗಿತ್ತು. ಆದರೆ ಮುಂದೆ ಕಲ್ಕತ್ತಾದಲ್ಲಿ ಸ್ವರಾಜ್ ಎಂಬ ಪತ್ರಿಕೆಗೆ ಅವರು ಅಗ್ರ ಲೇಖನಗಳನ್ನು ಬರೆಯಲು ತೊಡಗಿದಾಗ ಮಹಾನ್ ಕ್ರಾಂತಿಕಾರಿ ಚಿತ್ತರಂಜನ ದಾಸ್ ಅವರ ಪರಿಚಯವು ಆಯಿತು. ಅದು ಅವರ ಜೀವನದ ಮೇಜರ್ ಟರ್ನಿಂಗ್ ಪಾಯಿಂಟ್ ಆಯಿತು.
ಅಲ್ಲಿಂದ ಅವರು ಮಹಾ ಕ್ರಾಂತಿಕಾರಿ ಆದರು. ಮಹಾತ್ಮ ಗಾಂಧಿಯವರ ಪ್ರಭಾವ ಕಡಿಮೆ ಆಯಿತು. ಅವರ ಬೆಂಕಿ ಉಗುಳುವ ಭಾಷಣಗಳು ಇನ್ನಷ್ಟು ಪ್ರಖರ ಆದವು.
‘ನನಗೆ ಗಾಂಧೀಜಿ ಮೇಲೆ ಗೌರವ ಇದೆ. ಆದರೆ ತಕಲಿಯನ್ನು ನೂಲುವುದರಿಂದ, ಉಪವಾಸ ಕೂರುವುದರಿಂದ ಭಾರತಕ್ಕೆ ಸ್ವಾತಂತ್ರ್ಯವು ಖಂಡಿತವಾಗಿ ದೊರೆಯಲು ಸಾಧ್ಯವೇ ಇಲ್ಲ. ಸ್ವಾತಂತ್ರ್ಯವು ಭಿಕ್ಷೆ ಅಲ್ಲ! ಅದಕ್ಕೆ ಅಪ್ರತಿಮ ತ್ಯಾಗ ಮತ್ತು ಹೋರಾಟದ ಅಗತ್ಯ ಇದೆ ‘ಎಂದು ಅವರು ಹೇಳಿದ್ದರು.
ಕಲ್ಕತ್ತಾದಲ್ಲಿ ಸರಣಿ ಕ್ರಾಂತಿಕಾರೀ ಚಟುವಟಿಕೆ, ರಾಲಿಗಳು, ಅಸಹಕಾರ ಚಳುವಳಿಗಳು ನಿರಂತರ ನಡೆದಾಗ ಬ್ರಿಟಿಷ್ ಸರಕಾರ ಅವರನ್ನು ಬಂಧಿಸಿ ಸೆರೆಮನೆಗೆ ತಳ್ಳಿತು. ಆಗಲೂ ಗಾಂಧೀಜಿಯವರು ಸುಭಾಸ್ ಬೋಸ್ ಅವರನ್ನು ಕರೆದು ಪ್ರೀತಿಯಿಂದ ಮಾತಾಡಿಸಿದರು.
ಆಗ ಕೂಡಾ ಬೋಸರು ಹೇಳಿದ್ದು – ಮಹಾತ್ಮ, ನಿಮ್ಮ ದಾರಿ ನಿಮಗೆ. ನನ್ನ ದಾರಿ ನನಗೆ. ನನಗೆ ನಿಮ್ಮ ಬಗ್ಗೆ ಗೌರವವಿದೆ. ನಮ್ಮಿಬ್ಬರ ಗುರಿಯೂ ಒಂದೇ. ಆದರೆ ದಾರಿ ಬೇರೆ ಬೇರೆ!
ಮುಂದೆ ಸುಭಾಸರು ಕೋಲ್ಕತ್ತಾ ನಗರದ ಮೇಯರ್ ಆಗಿ ಆಯ್ಕೆ ಆದರು. 1923ರಲ್ಲೀ ಅಖಿಲ ಭಾರತ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ಕೂಡ ಆಯ್ಕೆ ಆದರು. ಆಗೆಲ್ಲವೂ ಸುಭಾಷರನ್ನು ಬ್ರಿಟಿಷ್ ಸರಕಾರವು ಬಂಧಿಸಿ ಮತ್ತೆ ಮತ್ತೆ ಸೆರೆಮನೆಗೆ ಹಾಕುತ್ತಿತ್ತು. ಒಮ್ಮೆ ಕ್ಷಯ ರೋಗ ಉಲ್ಬಣಿಸಿ ಬದುಕಿದ್ದೆ ಒಂದು ಪವಾಡ!
1930ರಲ್ಲೀ ಯುರೋಪ್ ಖಂಡದ ಪ್ರವಾಸ ಮಾಡಿ ಅಲ್ಲಿನ ಭಾರತೀಯರನ್ನು ಸಂಘಟನೆ ಮಾಡಿ ಬಂದರು. ಅದೇ ಸಂದರ್ಭದಲ್ಲಿ ವರ್ಚಸ್ವೀ ನಾಯಕ ಮುಸೊಲಿನಿಯ ಭೇಟಿ ಮಾಡಿದರು. ಸುಭಾಸರ ವರ್ಚಸ್ವಿ ವ್ಯಕ್ತಿತ್ವ ಮತ್ತು ನೇರಾ ನೇರವಾದ ಮಾತುಗಳು ಅವರಿಗೆ ಯುರೋಪನಲ್ಲಿ ಭಾರೀ ಹೆಸರು, ಕೀರ್ತಿ ಮತ್ತು ಜನಪ್ರಿಯತೆಯನ್ನು ತಂದುಕೊಟ್ಟವು.
1938ರಲ್ಲೀ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಅವರು ಆಯ್ಕೆ ಆದರು. ಆಗ ಅವರಿಗೆ ಕೇವಲ 41 ವರ್ಷ ಪ್ರಾಯ ಆಗಿತ್ತು! ಆಗ ಅವರು ತುರುಸಿನ ಚುನಾವಣೆಯಲ್ಲಿ ಸೋಲಿಸಿದ್ದು ಗಾಂಧೀಜಿಯವರ ಕಟ್ಟಾ ಅನುಯಾಯಿ ಆದ ಪಟ್ಟಾಭಿ ಸೀತಾರಾಮಯ್ಯ ಅವರನ್ನು! ಅಂದು ಬೋಸರು ಮಾಡಿದ ಚಾರಿತ್ರಿಕ ಭಾಷಣ ಹೀಗಿತ್ತು- ನನ್ನ ಭಾರತಕ್ಕೆ ಸ್ವಾತಂತ್ರ್ಯವು ಕ್ರಾಂತಿ ಮತ್ತು ಸಂಘರ್ಷದ ಮೂಲಕವೇ ಬರುತ್ತದೆ. ಅದನ್ನು ಯಾವ ಪ್ರಬಲ ಶಕ್ತಿಯೂ ತಡೆಯಲು ಸಾಧ್ಯವೇ ಇಲ್ಲ. ಆದರೆ ನಮ್ಮಲ್ಲಿ ಈಗಲೇ ತುಷ್ಟೀಕರಣ ನೀತಿಯು ನುಸುಳಲು ಆರಂಭವಾಗಿದೆ. ಮುಂದೆ ಭಾರತವು ಸ್ವಾತಂತ್ರ್ಯ ಪಡೆಯುವಾಗ ವಿಭಜನೆ ಆಗುವ ಸಾಧ್ಯತೆ ಇದೆ! ಎಂದಿದ್ದರು.
ಮುಂದೆ ಅವರ ಮಾತು ಎಷ್ಟೊಂದು ನಿಜ ಆಯ್ತು ನೋಡಿ! ರಾಷ್ಟ್ರೀಯ ಅಧ್ಯಕ್ಷರಾದರೂ ಅವರಿಗೆ ಆಂತರಿಕ ಕಿರುಕುಳ ತಪ್ಪಲಿಲ್ಲ. ಅದರಿಂದ ತುಂಬಾ ನೊಂದುಕೊಂಡ ಬೋಸರು ತಮ್ಮ ಕಾಂಗ್ರೆಸ್ ಪಕ್ಷದ ಅಧ್ಯಕ್ಷನ ಹುದ್ದೆಗೆ ರಾಜೀನಾಮೆ ನೀಡಿ ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ಎಂಬ ಪಕ್ಷ ಕಟ್ಟಿದರು. ಬಂಗಾಳದ ಮೂಲೆ ಮೂಲೆಯಲ್ಲಿ ಬಿಸಿ ರಕ್ತದ ಯುವಕ ಯುವತಿಯರನ್ನು ದೊಡ್ಡ ಮಟ್ಟದಲ್ಲಿ ಸಂಘಟನೆ ಮಾಡಿ ಹೋರಾಟಕ್ಕೆ ಸಜ್ಜುಗೊಳಿಸಿದರು.
ಬ್ರಿಟಿಷ್ ಸರಕಾರವು ಈ ಬಾರಿ ಅವರನ್ನು ಗೃಹ ಬಂಧನ ಮಾಡಿತು. ಆದರೆ ಸಿಂಹವನ್ನು ಗುಹೆಯಲ್ಲಿ ಬಂಧಿಸಿ ಇಡಲು ಸಾಧ್ಯವೇ ಇರಲಿಲ್ಲ! 1941ರಲ್ಲೀ ಅವರು ತನ್ನ ವೇಷವನ್ನು ಮರೆಸಿಕೊಂಡು ಮನೆಯಿಂದ ಹೊರಬಂದರು. ರಶಿಯಾ ಮೂಲಕ ಜರ್ಮನಿಗೆ ಬಂದು ತಲುಪಿದರು. ಹಿಟ್ಲರನನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಹಿಟ್ಲರ್ ಸುಭಾಸರ ವ್ಯಕ್ತಿತ್ವಕ್ಕೆ ಮಾರು ಹೋದರು.
ಬ್ರಿಟಿಷ್ ವಿರೋಧಿಗಳನ್ನು ಒಗ್ಗೂಡಿಸುವ ಅವರ ಪ್ರಯತ್ನಕ್ಕೆ ಭಾರೀ ಬೆಂಬಲ ದೊರೆಯಿತು. ಜರ್ಮನಿಯ ಬರ್ಲಿನನಲ್ಲಿ 4,500 ದೇಶಭಕ್ತ ಸೈನಿಕರ ಬಹಳ ದೊಡ್ಡದಾದ ಪಡೆಯನ್ನು ಕಟ್ಟಲು ಅವರಿಗೆ ಸಾಧ್ಯವಾಯಿತು. ಮುಂದೆ ಸುಭಾಸರು ಸಿಂಗಾಪುರ್, ಬರ್ಮಾ, ಜಪಾನ್ ದೇಶಗಳನ್ನು ತಿರುಗಿದರು. ಅಲ್ಲೆಲ್ಲ ಅವರು ಮಾಡಿದ ಐತಿಹಾಸಿಕ ಭಾಷಣದ ಕೊನೆಯ ವಾಕ್ಯ ಹೀಗಿರುತ್ತಿತ್ತು – ನನಗೆ ನಿಮ್ಮ ರಕ್ತ ಕೊಡಿ. ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ!
‘ಜೈ ಹಿಂದ್’ ಎಂದು ಸಿಂಹನಾದವನ್ನು ಮಾಡಿದ್ದು, ಜಪಾನ್ ಸರಕಾರವನ್ನು ಬೆಂಬಲಕ್ಕೆ ಆಗ್ರಹಿಸಿದ್ದು, ಜಪಾನ್ ದೇಶದಲ್ಲಿ 40,000 ಬಲಿಷ್ಟ ಸೈನಿಕರ ಇಂಡಿಯನ್ ನ್ಯಾಷನಲ್ ಆರ್ಮಿ ಎಂಬ ಮಹಾ ಸೈನ್ಯವನ್ನು ಕಟ್ಟಿ ಅವರಿಗೆ ಶಸ್ತ್ರಾಸ್ತ್ರಗಳ ತರಬೇತಿಯನ್ನು ಕೊಟ್ಟದ್ದು, ಚಲೋ ದಿಲ್ಲಿ ಎಂಬ ಮಹಾ ಘೋಷಣೆಯನ್ನು ಕೂಗಿದ್ದು, ಹೀಗೆ ಹತ್ತು ಹಲವು ರೀತಿ ಸುಭಾಸಚಂದ್ರ ಬೋಸರು ವಿದೇಶದ ನೆಲದಲ್ಲಿ ಕುಳಿತು ಬ್ರಿಟಿಷರನ್ನು ಮಣಿಸುವ ಎಲ್ಲಾ ಪ್ರಯತ್ನವನ್ನು ಮಾಡಿದರು.
1943ರ ಅಕ್ಟೋಬರ್ 21ರಂದು ಸಿಂಗಾಪುರದಲ್ಲಿ ಅವರು ‘ಸ್ವತಂತ್ರ ಭಾರತದ ಪ್ರಾವಿಷನಲ್ ಸರಕಾರವನ್ನು’ ಭಾರೀ ಧೈರ್ಯವಾಗಿ ರಚಿಸಿಯೆ ಬಿಟ್ಟರು! ಈ ಭಾರತ ಸರಕಾರದ ಪ್ರಸ್ತಾವನೆಗೆ ಅತ್ಯಂತ ಬಲಿಷ್ಟ ರಾಷ್ಟ್ರಗಳಾದ ಜರ್ಮನಿ, ಇಟೆಲಿ, ಜಪಾನ್ ಮತ್ತು ಮಯನ್ಮಾರಗಳು ಮಾನ್ಯತೆ ಕೂಡ ಕೊಟ್ಟವು.
ಅಲ್ಲಿಗೆ ಭಾರತದ ಕಂಪೆನಿ ಸರಕಾರವು ನಡುಗಲು ಆರಂಭ ಆಗಿತ್ತು! ಬ್ರಿಟಿಷರು ಭಾರತವನ್ನು ಬಿಟ್ಟು ಹೋಗಲು ಇದು ಕೂಡ ಮುಖ್ಯ ಕಾರಣ ಎಂದು ಬ್ರಿಟಿಷ್ ಪ್ರಧಾನಿ ಮುಂದೆ ಒಪ್ಪಿಕೊಂಡಿದ್ದಾರೆ! ಆಗ ಭಾರತದ ಯುವಕರಲ್ಲಿ ಯಾವ ರೀತಿ ಬೋಸರ ಕ್ರೇಜ್ ಇತ್ತು ಅಂದರೆ ಭಾರತ ಸ್ವಾತಂತ್ರ್ಯ ಪಡೆಯುವುದು ಖಂಡಿತ, ಆಗ ನೇತಾಜಿ ಭಾರತದ ಮೊದಲ ಪ್ರಧಾನಿ ಆಗುತ್ತಾರೆ ಎಂದು ಅವರು ಗಾಢವಾಗಿ ನಂಬಿದ್ದರು!
ಆದರೆ ಸ್ವಾತಂತ್ರ್ಯದ ಮೊದಲ ಕಿರಣಗಳನ್ನು ನೋಡುವ ಭಾಗ್ಯವು ಅವರಿಗೆ ಬರಲೇ ಇಲ್ಲ. ಅಥವಾ ಸುಭಾಸರನ್ನು ಉಳಿಸಿಕೊಳ್ಳುವ ಭಾಗ್ಯವು ನಮಗೆ ದೊರೆಯಲಿಲ್ಲ. 1945ರ ಆಗಸ್ಟ್ 18ರಂದು ಭಾರತಕ್ಕೆ ಬರುತ್ತಿದ್ದ ವಿಮಾನ ಅಪಘಾತದಲ್ಲಿ ಅವರು ನಿಧನರಾದರು ಎಂದು ಬಿಬಿಸಿಯ ವಾರ್ತೆ ನುಡಿಯಿತು. ಆದರೆ ಅವರ ದೇಹದ ಅವಶೇಷಗಳು ದೀರ್ಘ ಅವಧಿಗೆ ದೊರೆಯಲಿಲ್ಲ. ಅವರು ಸತ್ತಿಲ್ಲ, ಇನ್ನೂ ಬದುಕಿದ್ದಾರೆ ಎಂಬ ಊಹೆಗಳು, ಸುದ್ದಿಗಳು ಎಲ್ಲೆಡೆಯಿಂದ ಕೇಳಿಬಂದವು.
ಆದರೆ ಮುಂದೆ ಬಂದ ಸ್ವತಂತ್ರ ಭಾರತದ ಮೊದಲ ಕೆಲವು ಸರಕಾರಗಳು ಈ ಬಗ್ಗೆ ತನಿಖೆಗೆ ಆಗ್ರಹವನ್ನು ಮಾಡಲಿಲ್ಲ. ಎಲ್ಲಕಿಂತ ಹೆಚ್ಚಾಗಿ ಇತಿಹಾಸದ ಪುಟಗಳಿಂದ ನೇತಾಜಿ ಹೆಸರನ್ನು ಅಳಿಸಿ ಹಾಕುವ ಎಲ್ಲಾ ಒಳಗಿನ ಪ್ರಯತ್ನಗಳೂ ನಡೆದವು. ಆದರೆ ನೇತಾಜಿಯವರ ಹೋರಾಟ, ಆಸೀಮ ತ್ಯಾಗ ಮತ್ತು ದಿಟ್ಟತನವನ್ನು ಭಾರತ ದೇಶವು ಎಂದಿಗೂ ಮರೆಯಲಿಲ್ಲ! ದೇಶಪ್ರೇಮಿಗಳಿಗೆ ಅವರು ಇಂದಿಗೂ ರಿಯಲ್ ಹೀರೋ! ಜನವರಿ 23ರಂದು ಅವರ ಜನ್ಮದಿನ. ಭಾರತದಲ್ಲಿ ಪರಾಕ್ರಮ ದಿನ.
ಭಾರತ ಮಾತೆಯ ಶ್ರೇಷ್ಟವಾದ ವರಪುತ್ರನಿಗೆ ನಮ್ಮ ಕೋಟಿ ನಮನಗಳು.
-ರಾಜೇಂದ್ರ ಭಟ್ ಕೆ. (ವಿಕಸನದ ರಾಷ್ಟ್ರಮಟ್ಟದ ತರಬೇತುದಾರರು)