Sunday, January 19, 2025
Sunday, January 19, 2025

ನಾಗರಪಂಚಮಿಯ ಮಹತ್ವ

ನಾಗರಪಂಚಮಿಯ ಮಹತ್ವ

Date:

ಶ್ರಾವಣ ಮಾಸದ ಮೊದಲ ಹಬ್ಬವೇ ನಾಗರ ಪಂಚಮಿ. ನಾಗರ ಹಾವು, ಹುತ್ತಗಳಿಗೆ ಹಾಲು ಎರೆದು ಪೂಜೆ ಮಾಡುವುದರ ಮೂಲಕ ಬಹಳ ವಿಶೇಷವಾಗಿ ಈ ಹಬ್ಬ ಆಚರಿಸಲಾಗುತ್ತದೆ. ಒಂದೊಂದು ಪ್ರದೇಶದಲ್ಲಿ ಈ ಹಬ್ಬದ ಆಚರಣೆ ನಾನಾವಿಧದಲ್ಲಿ ನಡೆಯುತ್ತದೆ. ಪರಶುರಾಮ ಸೃಷ್ಟಿಯ ಈ ನಮ್ಮ ತುಳುನಾಡಿನಲ್ಲಿ ಒಂದು ವಿಧವಾದರೆ, ಬಯಲು ಸೀಮೆಯ ಬದಿಯಲ್ಲಿ ಇನ್ನೊಂದು ತರಹದ ಆಚರಣೆ. ಶ್ರಾವಣ ಶುಕ್ಲ ಪಂಚಮಿ ತಿಥಿಯಂದು ಆರಂಭವಾಗುವ ನಾಗರ ಪಂಚಮಿಯ ಎಲ್ಲ ಹಬ್ಬಗಳ ಮುನ್ನಡಿಯೆನ್ನಬಹುದೇನೋ.

ಪಂಚಮಿ ಇತಿಹಾಸವೇನು?
ಆಸ್ತಿಕ ಋಷಿಯು ಸರ್ಪಯಜ್ಞ ಮಾಡುವ ಜನಮೇಜಯ ರಾಜನನ್ನು ಪ್ರಸನ್ನಗೊಳಿಸಿಕೊಂಡನು. ಆಗ ಜನಮೇಜಯ ರಾಜನು ವರವನ್ನು ಕೇಳು ಎಂದು ನುಡಿಯುತ್ತಾನೆ. ಆ ಸಂದರ್ಭದಲ್ಲಿ ಆಸ್ತಿಕನು ಸರ್ಪ ಯಜ್ಞವನ್ನು ನಿಲ್ಲಿಸಬೇಕು ಎಂದು ಕೇಳುತ್ತಾನೆ. ಜನಮೇಜಯನು ಸರ್ಪಯಜ್ಞವನ್ನು ನಿಲ್ಲಿಸಿದ ದಿನ ಪಂಚಮಿ ಹಬ್ಬವಾಗುತ್ತದೆ.

ಏನಿದು ನಾಗರ ಪಂಚಮಿ?
ನಾಗರ ಪಂಚಮಿ ಸಾತ್ವಿಕತೆ ಗ್ರಹಿಸಲು ಉಪಯುಕ್ತ ಕಾಲ. ಪಂಚಪ್ರಾಣಗಳೇ ಪಂಚನಾಗಗಳಾಗಿವೆ. ನಾಗರ ಪಂಚಮಿಯ ದಿನದಲ್ಲಿ ವಾತಾವರಣವು ಸ್ಥಿರವಾಗಿರುತ್ತದೆ. ಸಾತ್ವಿಕತೆಯನ್ನು ಗ್ರಹಿಸಲು ಈ ಕಾಲವು ಅತ್ಯಂತ ಯೋಗ್ಯ ಮತ್ತು ಬಹಳ ಉಪಯುಕ್ತವಾಗಿದೆ.

ಏನೆಂದು ಪ್ರಾರ್ಥನೆ ಮಾಡಬೇಕು?
ಈ ದಿನದಂದು ಶೇಷನಾಗ ಮತ್ತು ಶ್ರೀ ವಿಷ್ಣುವಿಗೆ ಮುಂದಿನಂತೆ ಪ್ರಾರ್ಥನೆ ಮಾಡಬೇಕು. ತಮ್ಮ ಕೃಪೆಯಿಂದ ಈ ದಿನದಂದು ಶಿವ ಲೋಕದಿಂದ ಪ್ರಕ್ಷೇಪಿತವಾಗುವ ಲಹರಿಗಳು ನನ್ನಿಂದ ಹೆಚ್ಚೆಚ್ಚು ಗ್ರಹಣವಾಗಲಿ. ನನ್ನ ಆಧ್ಯಾತ್ಮಿಕ ಪ್ರಗತಿಗೆ ಎದುರಾಗುವ ಎಲ್ಲ ಅಡಚಣೆಗಳೂ ನಾಶವಾಗಲಿ. ದೇವತೆಗಳ ಶಕ್ತಿಯೂ ನನ್ನ ಪಂಚಪ್ರಾಣಗಳಲ್ಲಿ ಸಂಗ್ರಹವಾಗಿ ಅದು ಈಶ್ವರ ಪ್ರಾಪ್ತಿಗಾಗಿ ಮತ್ತು ರಾಷ್ಟ್ರ ರಕ್ಷಣೆಗಾಗಿ ಉಪಯೋಗವಾಗಲಿ. ನನ್ನ ಪಂಚಪ್ರಾಣ ಶುದ್ದಿಯಾಗಲಿ.

ನಾಗದೇವತೆಯು ಸಂಪೂರ್ಣ ಬ್ರಹ್ಮಾಂಡ ಕುಂಡಲಿಯಾಗಿದ್ದಾನೆ. ಪಂಚಪ್ರಾಣವೆಂದರೆ ಪಂಚಭೌತಿಕ ತತ್ತ್ವದಿಂದ ಉಂಟಾದ ಶರೀರದ ಸೂಕ್ಷಕಮ ರೂಪವಾಗಿದೆ. ಸ್ಥೂಲದೇಹವು ಪ್ರಾಣ ಹೀನವಾಗಿದೆ ಮತ್ತು ಸ್ಥೂಲ ದೇಹದಲ್ಲಿ ಚಲಿಸುವ ಪ್ರಾಣವಾಯುವು ಪಂಚಪ್ರಾಣದಿಂದ ಬರುತ್ತದೆ.

ನಾಗರಪಂಚಮಿಯಂದು ಮಾಡುವ ಉಪವಾಸದ ಮಹತ್ವವೇನು?
ಐದು ಯುಗಗಳ ಹಿಂದೆ ಸತ್ಯೇಶ್ವರಿ ಎಂಬ ಹೆಸರಿನ ದೇವಿಯಿದ್ದಳು. ಸತ್ಯೇಶ್ವರ ಅವಳ ಸಹೋದರನಾಗಿದ್ದನು. ಸತ್ಯೇಶ್ವರನು ನಾಗರ ಪಂಚಮಿಯ ಹಿಂದಿನ ದಿನ ಮೃತ್ಯು ಹೊಂದಿದನು. ಆಗ ಸಹೋದರನ ಮೃತ್ಯುವಿನ ಶೋಕದಲ್ಲಿ ಸತ್ಯೇಶ್ವರಿ ಆಹಾರ ಸ್ವೀಕರಿಸುವುದಿಲ್ಲ. ಆದುದರಿಂದ ಆ ದಿನ ಸ್ತ್ರೀಯರು ಸಹೋದರನ ಹೆಸರಿನಲ್ಲಿ ಉಪವಾಸ ಮಾಡುತ್ತಾರೆ.

ಸಹೋದರನಿಗೆ ಅಖಂಡ ಆಯುಷ್ಯವು ದೊರಕಲಿ, ಮತ್ತು ಅವನು ದುಃಖ ಸಂಕಟಗಳಿಂದ ಪಾರಾಗಲಿ ಎನ್ನುವುದು ಸಹ ಈ ಉಪವಾಸದ ಹಿಂದಿನ ಕಾರಣವಾಗಿದೆ. ನಾಗರ ಪಂಚಮಿ ದಿನದಂದು ಪ್ರತಿಯೊಬ್ಬ ಸಹೋದರಿ ದೇವರಲ್ಲಿ ಮೊರೆ ಇಡುವುದರಿಂದ ಅವಳ ಸಹೋದರನಿಗೆ ಲಾಭವಾಗುತ್ತದೆ ಮತ್ತು ಅವನ ರಕ್ಷಣೆಯಾಗುತ್ತದೆ. ಹಾಗಾಗಿ ಇದು ರಕ್ಷಾ ಬಂಧನದಂತೆ ಇದನ್ನು ಅಣ್ಣ ತಂಗಿಯರ ಹಬ್ಬವೆಂದೇ ಭಾವಿಸುವುದುಂಟು.

ನಾಗ ಪೂಜೆಯ ಹಿಂದಿನ ಶಾಸ್ತ್ರವೇನು?
ಸತ್ಯೇಶ್ವರಿಗೆ ಅವಳ ಸಹೋದರನು ನಾಗನ ರೂಪದಲ್ಲಿ ಕಂಡನು. ಆಗ ಅವಳು ಆ ನಾಗರೂಪವನ್ನು ತನ್ನ ಸಹೋದರನೆಂದು ಭಾವಿಸಿದಳು. ಆಗ ನಾಗಬದೇವನು, ನನ್ನನ್ನು ಸಹೋದರನೆಂದು ಭಾವಿಸಿ ಪೂಜೆ ಮಾಡಿದ ಸಹೋದರಿಯ ರಕ್ಷಣೆಯನ್ನು ನಾನು ಮಾಡುವೆನು ಎಂದು ಅವಳಿಗೆ ವಚನ ನೀಡಿದನು. ಹಾಗಾಗಿ ಸ್ತ್ರೀಯರು ನಾಗರ ಪಂಚಮಿಯನ್ನು ಆಚರಿಸುತ್ತಾರೆ. [ನಾಗರ ಪಂಚಮಿ ನಿಮಿತ್ತ ಆಶ್ಲೇಷ ಬಲಿ, ನಾಗ ತನು ತರ್ಪಣ]

ನಾಗನ ಮಹಾತ್ಮೆ?
1. ಶೇಷನಾಗನು ಪಾತಾಳದಲ್ಲಿ ವಾಸಿಸುತ್ತಾನೆ. ಅವನು ತನ್ನ ಹೆಡೆಯ ಮೇಲೆ ಪೃಥ್ವಿಯನ್ನು ಧರಿಸಿದ್ದಾನೆ. ಅವನಿಗೆ ಸಹಸ್ರ ಹೆಡೆಗಳಿವೆ. ಪ್ರತಿಯೊಂದು ಹೆಡೆಯ ಮೇಲೆ ಒಂದು ವಜ್ರವಿದೆ. ಅವನು ಶ್ರೀ ವಿಷ್ಣುವಿನ ತಮೋಗುಣದಿಂದ ಉತ್ಪನ್ನವಾಗಿದ್ದಾನೆ. ಪ್ರತಿಯೊಂದು ಕಲ್ಪದ ಅಂತ್ಯದಲ್ಲಿ ಶ್ರೀ ವಿಷ್ಣು ಮಹಾಸಾಗರದಲ್ಲಿ ಶೇಷಾಸನದ ಮೇಲೆ ಶಯನ ಮಾಡುತ್ತಾನೆ. ತ್ರೇತಾಯುಗದಲ್ಲಿ ಶ್ರೀ ವಿಷ್ಣು ರಾಮನಾಗಿ, ಶೇಷನು ಲಕ್ಷ್ಮಣನಾಗಿ ಅವತಾರ ತೆಗೆದುಕೊಂಡರು. ದ್ವಾಪರ ಮತ್ತು ಕಲಿಯುಗದ ಸಂಧಿಕಾಲದಲ್ಲಿ ಕೃಷ್ಣನ ಅವತಾರವಾದಾಗ ಶೇಷನು ಬಲರಾಮನಾದನು.

2. ಶ್ರೀ ಕೃಷ್ಣನು ಯಮುನಾ ನದಿಯ ಆಳದಲಿದ್ದ ಕಾಳಿಂಗ ನಾಗನನ್ನು ಮರ್ದನ ಮಾಡಿದನು. ಆ ದಿನವು ಶ್ರಾವಣ ಶುಕ್ಲ ಪಂಚಮಿಯಾಗಿತ್ತು.

3. ನಾಗಗಳಲ್ಲಿ ಶ್ರೇಷ್ಠನಾದ ಅನಂತನೇ ನಾನು, ಎಂದು ಗೀತೆಯಲ್ಲಿ (10.20) ಶ್ರೀಕೃಷ್ಣ ತನ್ನ ವಿಭೂತಿಯನ್ನು ಹೇಳುತ್ತಾನೆ.

ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಮ್ |
ಶಂಖಪಾಲಂ ಧೃತರಾಷ್ಟ್ರಂ ತಕ್ಷಕಂ, ಕಾಲಿಯಂ ತಥಾ ||

ಅನಂತ ವಾಸುಕೀ, ಶೇಷ ಪದ್ಮನಾಭ ಕಂಬಲ, ಶಂಖಪಾಲ, ಧೃತರಾಷ್ಟ್ರ, ತಕ್ಷಕ ಮತ್ತು ಕಾಲಿಯಾ ಹೀಗೆ 9 ರೀತಿಯ ನಾಗಗಳ ಆರಾಧನೆ ಮಾಡುತ್ತಾರೆ. ಇದರಿಂದ ಸರ್ಪ ಭಯವಿರುವುದಿಲ್ಲ ಮತ್ತು ವಿಷದಿಂದ ತೊಂದರೆಯಾಗುವುದಿಲ್ಲ.

ಪೂಜೆ ಹೇಗೆ ಮಾಡುವುದು?
ನಾಗರ ಪಂಚಮಿಯ ದಿನ ಅರಿಶಿನ ಅಥವಾ ರಕ್ತ ಚಂದನದಿಂದ ಮಣೆಯ ಮೇಲೆ ನವನಾಗಗಳ ಆಕೃತಿಗಳನ್ನು ಬಿಡಿಸಿ ಅವುಗಳ ಪೂಜೆಯನ್ನು ಮಾಡಿ ಹಾಲು ಮತ್ತು ಅರಳಿನ ನೈವೇದ್ಯವನ್ನು ಅರ್ಪಿಸಬೇಕು. ನವನಾಗಗಳು ಪವಿತ್ರಕಗಳ ಒಂಬತ್ತು ಪ್ರಮುಖ ಗುಂಪುಗಳಾಗಿವೆ. ಪವಿತ್ರಕಗಳೆಂದರೆ ಸೂಕ್ಷ್ಮಾತಿಸೂಕ್ಷ್ಮ ದೈವೀ ಕಣಗಳು (ಚೈತನ್ಯ ಕಣಗಳು).

ನಮ್ಮ ಕರಾವಳಿ ತೀರದಲ್ಲಿ ನಾಗನಿಗೆ ಹಾಲೆರೆದು ತನು ಹಾಕುವುದು, ನಾಗತಂಬಿಲ ಎಂಬಿತ್ಯಾದಿ ರೀತಿಯಲ್ಲಿ ಸೇವೆ ನಡೆಯುತ್ತದೆ. ಈ ಸಂದರ್ಭದಲ್ಲಿ ನಾಗನಿಗೆ ಪ್ರಿಯವಾದ ನಾಗಸಂಪಿಗೆ, ಸಂಪಿಗೆ, ಕೇದಗೆ ಹೂವು ಮುಖ್ಯವಾದ ಪುಷ್ಪರಾಶಿಗಳು.

ಜಗತ್ತಿನಲ್ಲಿರುವ ಎಲ್ಲ ಜೀವ ಜಂತುಗಳು ಜಗತ್ತಿನ ಕಾರ್ಯಕ್ಕಾಗಿ ಪೂರಕವಾಗಿದೆ. ನಾಗರ ಪಂಚಮಿ ದಿನ ನಾಗಗಳನ್ನು ಪೂಜೆ ಮಾಡುವುದರಿಂದ ಭಗವಂತನು ಅವುಗಳ ಮೂಲಕ ಎಲ್ಲಾ ಕಾರ್ಯವನ್ನು ಮಾಡುತ್ತಿದ್ದಾನೆ ಎಂಬ ನಂಬಿಕೆ ಇದೆ.

ನಿಷೇಧ:
ನಾಗರ ಪಂಚಮಿ ದಿನ ಯಾವುದೇ ಪದಾರ್ಥಗಳನ್ನು ಹೆಚ್ಚಬಾರದು, ಕೊಯ್ಯಬಾರದು, ತಿಂಡಿಗಳನ್ನು ಕರಿಯಬಾರದು, ಒಲೆ ಮೇಲೆ ತವೆ ಇಡಬಾರದು, ಭೂಮಿ ಅಗೆಯಬಾರದು ಮುಂತಾದ ನಿಯಮಗಳನ್ನು ಈ ದಿನ ಪಾಲಿಸಲಾಗುತ್ತದೆ.

-ಮಂಜುನಾಥ್ ಶೆಣೈ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!