Thursday, November 21, 2024
Thursday, November 21, 2024

ಹೊಸ ಭರವಸೆಯ ಬೆಳಕು ಹೊತ್ತು ತರುವ ದೀಪಾವಳಿ

ಹೊಸ ಭರವಸೆಯ ಬೆಳಕು ಹೊತ್ತು ತರುವ ದೀಪಾವಳಿ

Date:

ಕೊರೊನಾ ಕಾಲಘಟ್ಟದ ಕಹಿನೆನಪುಗಳು ಮಾಸುತ್ತ ಹೊಸ ಮನ್ವಂತರದೆಡಗೆ ಮನಸುಗಳು ತೆರೆದುಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಹೊಸತೊಂದು ಭರವಸೆಯ ರೂಪದಲ್ಲಿ ಬೆಳಕಿನ ಹಬ್ಬ ದೀಪಾವಳಿ ಆಗಮಿಸಿದೆ. ಹೌದು. ದೀಪಾವಳಿ ಎಂದರೆ ಸಾಕು ಅದೊಂದು ವಿಶೇಷ ತೆರನಾದ ಸಂಭ್ರಮ ಮನಸಲ್ಲಿ ಮನೆ ಮಾಡುತ್ತದೆ.

ಮೂರು ದಿನಗಳ ಕಾಲ ಆಚರಿಸುವ ಈ ಹಬ್ಬ ಕೌಟುಂಬಿಕ ಪ್ರೀತಿ, ಬಾಂಧವ್ಯಗಳನ್ನು, ಆರೋಗ್ಯ ಕಾಳಜಿಯನ್ನು, ಮಾನವೀಯ ಮೌಲ್ಯಗಳನ್ನು, ಜೊತೆಗೂಡಿ ಸಂಭ್ರಮಿಸುವ ಸಂತೋಷದ ಸಂತೃಪ್ತಿಯನ್ನು ಎತ್ತಿ ಹಿಡಿಯುತ್ತಾ ಜೊತೆ ಜೊತೆಗೆ ನಮ್ಮಲ್ಲಿನ ಕೆಟ್ಟತನವನ್ನು, ಋಣಾತ್ಮಕ ಆಲೋಚನೆಗಳನ್ನು ನಾಶಗೊಳಿಸಿ ಧನಾತ್ಮಕ ಚಿಂತನೆಗಳೊಂದಿಗೆ ಒಳ್ಳೆಯತನದ ಬೆಳಕು ಮನೆ ಮನಗಳಲ್ಲಿ ತುಂಬಿಕೊಳ್ಳಲಿ ಎನ್ನುವ ಸದಾಶಯವನ್ನು ಹೊಂದಿದೆ.

ದೀಪಾವಳಿಯ ಮೂರು ದಿನಗಳ ಆಚರಣೆಗೆ ಅದರದ್ದೇ ಆದ ಹಿನ್ನೆಲೆಯಿದೆ. ಶ್ರೀಕೃಷ್ಣ ನರಕಾಸುರನನ್ನು ಸಂಹರಿಸಿ ಜನರನ್ನು ರಕ್ಷಿಸಿದ ಹಿನ್ನೆಲೆಯಲ್ಲಿ ನರಕ ಚತುದರ್ಶಿ ಆಚರಿಸಲಾಗುತ್ತದೆ. ಶ್ರೀರಾಮ ರಾವಣನನ್ನು ಗೆದ್ದು ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಹಿಂತಿರುಗಿದ ದಿನ ಮತ್ತು ಪಾಂಡವರು ವನವಾಸ ಮತ್ತು ಅಜ್ಞಾತವಾಸ ಮುಗಿಸಿ ಹಸ್ತಿನಾವತಿಗೆ ಮರಳಿದ ದಿನ ಕೂಡ ಇದೇ ಎನ್ನಲಾಗಿದೆ.

ಮರುದಿನ ಅಮಾವಾಸ್ಯೆಯಂದು ಸಿರಿ ಸಂಪತ್ತು ಸಮೃದ್ಧಿಯ ಅಧಿದೇವತೆಯಾದ ಲಕ್ಷ್ಮೀದೇವಿಯನ್ನು ಪೂಜಿಸಲಾಗುತ್ತದೆ. ಮೂರನೇ ದಿನ ಬಲಿಪಾಡ್ಯಮಿ. ತ್ಯಾಗದ ಸಾರ್ಥಕತೆ ಮತ್ತು ಅಹಂಕಾರ ದಮನದ ಬಲಿವಾಮನರ ಕತೆ ನಮ್ಮ ಜೀವನಕ್ಕೆ ಆದರ್ಶವಾಗಿರುವಂತಾದ್ದು.

ದೀಪಾವಳಿ ಎಂದರೆ ದೀಪ ಹಚ್ಚುವುದು ಮತ್ತು ಪಟಾಕಿ ಹೊಡೆಯುವ ಹಬ್ಬವಷ್ಟೇ ಅಲ್ಲ. ದೀಪಾವಳಿ ನಿಜಾರ್ಥದಲ್ಲಿ ಬೆಳಕನ್ನು ಪಸರಿಸುವ ಹಬ್ಬ. ನೀರು ತುಂಬುವ ಆಚರಣೆಯಿಂದ ಶುರುವಾಗುವ ಈ ಹಬ್ಬದಲ್ಲಿ ಮೈಗೆಲ್ಲಾ ಎಣ್ಣೆ ಲೇಪಿಸಿಕೊಂಡು ನಸುಕಿನ ವೇಳೆಯಲ್ಲಿ ಬಿಸಿನೀರ ಸ್ನಾನ ಮಾಡುವುದು, ಶುಭ್ರವಾದ ಹೊಸ ಬಟ್ಟೆ ಧರಿಸುವುದು, ದೇವರ ಪೂಜೆ ಮಾಡಿ ಮನೆಯವರೊಂದಿಗೆ ಸೇರಿಕೊಂಡು ದೀಪಗಳನ್ನು ಮನೆಯ ಸುತ್ತೆಲ್ಲಾ ಹಚ್ಚಿ ದೀಪಗಳ ಬೆಳಕಿನಲ್ಲಿ ಸಂಭ್ರಮಿಸುವುದು, ಸಿಹಿ ತಿನಿಸುಗಳನ್ನು ಮನೆಯಲ್ಲಿಯೇ ತಯಾರಿಸಿ ತಿನ್ನುವುದು, ಲಕ್ಷ್ಮೀಪೂಜೆಯ ದಿನ ಮನೆಯನ್ನು ಸ್ವಚ್ಛಗೊಳಿಸಿ ಶೃಂಗರಿಸುವುದು, ನೆರೆಹೊರೆಯವರಿಗೆ ಶುಭಾಶಯಗಳನ್ನು ಅರ್ಪಿಸುವುದು, ಪ್ರಸಾದ ಹಂಚುವುದು, ಅಂಗಡಿ ಪೂಜೆ ಮಾಡುವುದು, ಗೋ ಪೂಜೆ ಮಾಡುವುದು ಹೀಗೆ ಪ್ರತಿಯೊಂದು ಆಚರಣೆಗಳ ಹಿಂದೆ ಇರುವ ನಂಬಿಕೆ, ಕಾಳಜಿ, ಮಾನವೀಯತೆ, ಪ್ರೀತಿ, ಆತ್ಮೀಯತೆ, ಭಕ್ತಿ, ಧನ್ಯತಾ ಭಾವ ಎಲ್ಲವೂ ಕೂಡ ಒಂದು ಆರೋಗ್ಯಪೂರ್ಣ ಜೀವನ ಸಂಸ್ಕಾರ ಮತ್ತು ಸಂಸ್ಕೃತಿಯ ಪ್ರತೀಕಗಳಾಗಿವೆ. ಇದು ಮನುಷ್ಯ ಜೀವನದ ಅಗತ್ಯ.

ಹಬ್ಬಗಳ ಇಂತಹ ಆಚರಣೆಗಳೇ ಜೀವನದ ಜಂಜಾಟವನ್ನು ಮರೆಸಿ ನಮ್ಮ ಮನಸ್ಸಿಗೆ ನಿಜವಾದ ಆನಂದವನ್ನು ನೀಡುವಂತಾದ್ದು. ಇವುಗಳನ್ನು ನಾವು ಉಳಿಸಿ ಬೆಳೆಸಿ ಅನುಸರಿಸಿಕೊಂಡು ಹೋಗಬೇಕಾಗಿದೆ. ನಮ್ಮ ಸಂಸ್ಕೃತಿ ಸಂಪ್ರದಾಯಗಳ ಹಿನ್ನಲೆಯನ್ನು, ಪರಿಚಯವನ್ನು ಮತ್ತು ಪ್ರಾಮುಖ್ಯತೆಯನ್ನು ಕುರಿತು ನಾವು ಇಂದಿನ ಮಕ್ಕಳಿಗೆ ಅರಿವನ್ನು ಮೂಡಿಸಬೇಕಾಗಿದೆ. ನಮ್ಮ ಯಾಂತ್ರಿಕ ಜೀವನದ ಎಷ್ಟೆಲ್ಲಾ ಒತ್ತಡಗಳ ನಡುವೆಯೂ ಬಿಡುವು ಮಾಡಿಕೊಳ್ಳಬೇಕಿದೆ. ಅದು ಅಸಾಧ್ಯವಾದದ್ದಂತೂ ಖಂಡಿತಾ ಅಲ್ಲ.

ಹಬ್ಬದ ಸಂದರ್ಭದಲ್ಲಿಯೂ ಟಿ.ವಿ ವಾಹಿನಿಗಳಲ್ಲಿ ಬರುವ ಅದೇ ಹಳೆಯ ಮಾದರಿಯ ಕಾರ್ಯಕ್ರಮ, ಮಸಾಲೆ ಸಿನೆಮಾಗಳನ್ನು, ಧಾರಾವಾಹಿಗಳನ್ನು ನೋಡುತ್ತಾ ಸಮಯ ಹಾಳು ಮಾಡುವಂತಹ ಮೂರ್ಖತನ ಯಾವತ್ತಿಗೂ ಮಾಡಬಾರದು. ಮೊಬೈಲು, ಇಂಟರ್‌ನೆಟ್ಟು, ಟಿ.ವಿ, ಗ್ಯಾಜೆಟ್ಟುಗಳ ಗೀಳಿನಿಂದ ಹೊರಬಂದು ಅವುಗಳಿಗೆ ವಿಶ್ರಾಂತಿಯನ್ನು ಕೊಟ್ಟು ಹಬ್ಬಗಳ ಆಚರಣೆಯಲ್ಲಿನ ನಿಜವಾದ ಆನಂದವನ್ನು ನಮ್ಮ ಮಕ್ಕಳಿಗೆ ಉಣಬಡಿಸುವ ಜವಾಬ್ದಾರಿ ನಮ್ಮೆಲ್ಲರದ್ದೂ ಆಗಿದೆ.

ನಿಜ. ಪಟಾಕಿ ಹೊಡೆಯದಿದ್ದರೆ ಅದು ದೀಪಾವಳಿಯೇ ಅಲ್ಲ ಎನ್ನುವಷ್ಟರ ಮಟ್ಟಿಗೆ ಪಟಾಕಿ ದೀಪಾವಳಿಯೊಂದಿಗೆ ಬೆರೆತು ಹೋಗಿದೆ. ಹಿತಮಿತವಾಗಿ ಪಟಾಕಿಗಳನ್ನು ಹೊಡೆಯೋಣ. ಜೊತೆಯಲ್ಲಿಯೇ ಮುನ್ನೆಚ್ಚರಿಕಾ ಕ್ರಮಗಳನ್ನು ಮರೆಯದಿರೋಣ. ಹಸಿರು ಪಟಾಕಿ ಬಳಕೆ ಕಡಿಮೆ ಶಬ್ದದ ಪಟಾಕಿಗಳ ಬಳಕೆ ಆರೋಗ್ಯಕ್ಕೂ ಒಳ್ಳೆಯದು. ಜೇಬಿಗೂ ಒಳ್ಳೆಯದು. ನಮ್ಮೊಂದಿಗೆ ಇರುವ ಪ್ರಾಣಿ ಪಕ್ಷಿಗಳ ಆರೋಗ್ಯದ ಬಗೆಗೂ ಕೊಂಚ ಕಾಳಜಿಯಿರಲಿ. ಹಬ್ಬವೆಂದರೆ ನಮ್ಮೊಂದಿಗೆ ಸುತ್ತ ಮುತ್ತಲಿನವರ ಮನಸುಗಳು ಸಂಭ್ರಮಿಸಬೇಕು. ಅವರ ಮನೆಯ ಅಂಗಳದಲ್ಲಿಯೂ ದೀಪಗಳು ಬೆಳಗಬೇಕು. ಹೃದಯದಲ್ಲಿ ಸಂತೋಷ ಅರಳಬೇಕು. ಹಾಗಾದಾಗ ಮಾತ್ರ ಹಬ್ಬದ ಆಚರಣೆಗೆ ನಿಜವಾದ ಅರ್ಥ ಬರುತ್ತದೆ.

ಈ ನಿಟ್ಟಿನಲ್ಲಿ ನಮ್ಮ ಸುತ್ತಲಿನಲ್ಲಿ ತೀರಾ ದುಸ್ಥಿತಿಯಲ್ಲಿರುವ ಬಡ ಜನರಿಗೆ ಕಿಂಚಿತ್ತಾದರೂ ಸಹಾಯವನ್ನು ಮಾಡಲು ಮರೆಯದಿರೋಣ. ನಮ್ಮ ಖುಷಿ ಅವರದ್ದೂ ಆಗಲಿ. ಮನಸುಗಳು ಜೊತೆಯಾಗಿ ಸಂಭ್ರಮಿಸಲಿ. ಈ ದೀಪಾವಳಿಯ ಬೆಳಕು ನಮ್ಮೆಲ್ಲರ ಮನೆ ಮನಗಳಲ್ಲಿ ಸದಾಕಾಲ ತುಂಬಿಕೊಂಡಿರಲಿ, ಬದುಕು ಸುಂದರವಾಗಲಿ ಎನ್ನುವುದು ಆಶಯ.

ನರೇಂದ್ರ ಎಸ್ ಗಂಗೊಳ್ಳಿ
ವಾಣಿಜ್ಯಶಾಸ್ತ್ರ ಉಪನ್ಯಾಸಕರು.
ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜು, ಗಂಗೊಳ್ಳಿ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪ್ರಧಾನಿ ನರೇಂದ್ರ ಮೋದಿಯವರಿಗೆ ಗಯಾನಾದ ಅತ್ಯುನ್ನತ ಪ್ರಶಸ್ತಿ ‘ಆರ್ಡರ್ ಆಫ್ ಎಕ್ಸಲೆನ್ಸ್’ ಪ್ರದಾನ

ಯು.ಬಿ.ಎನ್.ಡಿ., ನ.21: ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಗಯಾನಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯಾದ...

ಮಣಿಪಾಲ ಕೆ.ಎಂ.ಸಿ: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ ಮತ್ತು ಕಿಮೊಥೆರಪಿ ಡೇ ಕೇರ್ ಕೇಂದ್ರದ ಉದ್ಘಾಟನೆ

ಮಣಿಪಾಲ, ನ.21: ಪ್ರಮುಖ ಆರೋಗ್ಯ ಸಂಸ್ಥೆಯಾದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ತನ್ನ...

ಬಾರಕೂರು ಕಾಲೇಜು: ಕನಕದಾಸ ಜಯಂತಿ

ಬಾರಕೂರು, ನ.21: ಬಾರಕೂರಿನ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರಕಾರಿ...
error: Content is protected !!