Monday, November 25, 2024
Monday, November 25, 2024

ಮಾನ್ಯತೆ ಸಿಗಲಿ ತುಳುನಾಡು ತುಳು ಭಾಷೆಗೆ

ಮಾನ್ಯತೆ ಸಿಗಲಿ ತುಳುನಾಡು ತುಳು ಭಾಷೆಗೆ

Date:

ತುಳುನಾಡು, ತುಳು ದೇಶ, ತುಳು ರಾಜ್ಯ, ತುಳುವ, ತೌಳವ ದೇಶ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ತುಳುನಾಡಿನ ಎಲ್ಲೆ ಕಟ್ಟುಗಳನ್ನು ಚಾರಿತ್ರಿಕವಾಗಿ ಗುರುತಿಸುವುದು ಸ್ವಲ್ಪ ಕಷ್ಟದ ಕೆಲಸ. ಏಕೆಂದರೆ ತುಳುನಾಡು ಒಂದು ಆಡಳಿತ ಘಟಕ ಅದರ ವ್ಯಾಪ್ತಿ ವಿಶಾಲವಾಗಿದ್ದು, ಕನ್ನಡ ಮಾತನಾಡುವ ಪ್ರದೇಶಗಳನ್ನೂ ಒಳಗೊಂಡಿತ್ತು (ಆಳುಪರು ಆಳಿದ ತುಳುನಾಡು ಹಲವಾರು ಕನ್ನಡ ಪ್ರದೇಶಗಳನ್ನು ಒಳಗೊಂಡಿದೆ).

ಪ್ರಾಚೀನ ತುಳುನಾಡಿನ ಮೇರೆಗಳನ್ನು ತಿಳಿಯಲು ತಮಿಳಿನ ಪ್ರಾಚೀನ ಸಂಗಮ ಸಾಹಿತ್ಯ, ಗ್ರಾಮ ಪದ್ದತಿ, ಸಹ್ಯಾದ್ರಿ ಖಂಡ, ಕೇರಳೋತ್ಪತ್ತಿ ಹಾಗೂ ತುಳುನಾಡಿನ ಪಾಡ್ದನಗಳು ನೆರವಾಗುತ್ತದೆ.

ಭಾರತ ಸ್ವಾತಂತ್ರ್ಯಗೊಂಡು ಭಾಷಾವಾರು ಹಿನ್ನೆಲೆಯಲ್ಲಿ ರಾಜ್ಯಗಳು ಪುನರ್ ರಚನೆಗೊಳ್ಳುವಾಗ ತುಳುನಾಡಿನ ಗಡಿರೇಖೆಗಳು ಮತ್ತೊಮ್ಮೆ ಚರ್ಚೆಯ ವಸ್ತುವಾದವು. ಕನ್ನಡ ಮಾತನಾಡುವ ಪ್ರದೇಶವನ್ನೆಲ್ಲ ಒಟ್ಟುಗೂಡಿಸಿ ನವೆಂಬರ್ 1956 ರಂದು ಮೈಸೂರು (1973 ರಲ್ಲಿ ಕರ್ನಾಟಕ ಎಂದು ಮರು ನಾಮಕರಣ ಮಾಡಲಾಯಿತು) ರಾಜ್ಯವು‌ ಅಸ್ತಿತ್ವಕ್ಕೆ ಬಂದಿತು. ಆದರೆ ಪ್ರಾಚೀನ ಕಾಲದಿಂದಲೂ ತುಳುನಾಡನ್ನು ಆಳಿದ ಅರಸು ಮನೆತನಗಳ ಅಧೀನದಲ್ಲಿದ್ದ ಹಾಗೂ ತುಳು ಭಾಷಿಕರಿರುವ ಕಾಸರಗೋಡು ಕೇರಳ ರಾಜ್ಯಕ್ಕೆ‌ ಸೇರಿತು.

ತುಳು ಭಾಷೆಯನ್ನು ದೈವ ಭಾಷೆ ಎಂದೂ ಸಹ ಕರೆಯಲಾಗುತ್ತದೆ. ತುಳು ಭಾಷೆಯು ಸುಮಾರು 2,000 ವರ್ಷಗಳ ಪ್ರಾಚೀನ ಇತಿಹಾಸವನ್ನು ಹೊಂದಿದ್ದು, ದಕ್ಷಿಣ ಭಾರತದ ಪಂಚದ್ರಾವಿಡ ಭಾಷೆಗಳಲ್ಲಿ ತುಳು ಭಾಷೆಯು ಒಂದು. ಈ ಭಾಷೆಯು ತನ್ನದೇ ಆದ ಲಿಪಿಯನ್ನು ಕೂಡ ಹೊಂದಿದ್ದು, ಹಲವಾರು ಶಾಸನಗಳು, ಹಸ್ತಪ್ರತಿಗಳು ಹಾಗೂ ಸಾಹಿತ್ಯಿಕ ರಚನೆಗಳು ಕಂಡುಬರುತ್ತದೆ.

ಆದರೆ ಇತ್ತೀಚೆಗೆ ಕರ್ನಾಟಕ ಹಾಗೂ ಕೇರಳ ರಾಜ್ಯಗಳಲ್ಲಿ ನಡೆಯುತ್ತಿರುವಂತಹ ಕನ್ನಡ ಹಾಗೂ ಮಲಯಾಳಂ ಭಾಷೆಗಳ ಹೇರಿಕೆಯಿಂದಾಗಿ ತುಳು ಭಾಷೆಯು ಅಳಿವಿನಂಚಿನತ್ತ ಸಾಗುತ್ತಿದೆ. ತುಳು ಭಾಷೆಯನ್ನು ರಕ್ಷಿಸಲು ಇರುವ ಒಂದು ಉತ್ತಮ ನಿರ್ಧಾರವೆಂದರೆ ತುಳು ಭಾಷೆಯನ್ನು ಕರ್ನಾಟಕ ಹಾಗೂ ಕೇರಳ ರಾಜ್ಯಗಳ 2ನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡುವುದು ಹಾಗೂ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವುದು. ಆದರೆ ಈ ಬೇಡಿಕೆ ಇಂದು ನಿನ್ನೆಯದ್ದಾಗಿರದೆ ಕರ್ನಾಟಕ ಏಕೀಕರಣದ ಸಂಧರ್ಭದಿಂದಲೇ ಕೇಳಿ ಬರುತ್ತಿರುವ ಕೂಗು. ಏಕೀಕರಣದ ಸಂದರ್ಭದಲ್ಲಿ ತುಳುನಾಡಿನ ಹಿರಿಯರಾದ ಕಯ್ಯಾರ ಕಿಞ್ಞಣ್ಣ ರೈ ಹಾಗೂ ಮತ್ತಿತರರು ಕಾಸರಗೋಡು ಪ್ರತ್ಯೇಕ ಆಗಬಾರದು ಹಾಗೂ ತುಳುನಾಡು ಅಖಂಡವಾಗಿರಬೇಕು ಎಂದು ಬೇಡಿಕೆಯನ್ನು ಇಟ್ಟಿದ್ದರು ಸಹ ಇಂದಿಗೂ ರಾಜ್ಯ ಸರಕಾರವು ಇದರಲ್ಲಿ ಯಾವುದೇ ಆಸಕ್ತಿಯನ್ನು ತೋರದೇ ಇರುವುದು ಬೇಸರದ ಸಂಗತಿ.

ಕರ್ನಾಟಕ ಏಕೀಕರಣ ಸಮಯದಲ್ಲಿ ಸಮಿತಿಯ ಮುಂದಿಟ್ಟ ಇನ್ನೊಂದು ಬೇಡಿಕೆ ಎಂದರೆ ತುಳು ಭಾಷೆಗೆ ರಾಜ್ಯದಲ್ಲಿ ಎರಡನೇ ಅಧಿಕೃತ ಸ್ಥಾನಮಾನ ನೀಡುವುದು. ಆದರೆ ಮೊದಲಿಗೆ ಈ ಬೇಡಿಕೆಗೆ ಒಪ್ಪಿಕೊಂಡ ಕರ್ನಾಟಕ ಏಕೀಕರಣ ಸಮಿತಿಯು ಕರ್ನಾಟಕ ರಾಜ್ಯ ರಚನೆಯಾದ ನಂತರ ಆಶ್ವಾಸನೆಯನ್ನು ಸುಳ್ಳು ಮಾಡಿ ನಂಬಿಕೆ ದ್ರೋಹ ಮಾಡಿತು. ಇದರಿಂದಾಗಿ ಮುಂದಿನ ದಿನಗಳಲ್ಲಿ ಅನ್ಯ ಭಾಷೆ ಹಾಗೂ ಸಂಸ್ಕೃತಿಯ ಹೇರಿಕೆಯ ಕಾರಣದಿಂದಾಗಿಯೇ ತುಳುನಾಡು ತನ್ನ ಹಲವಾರು ಸಂಸ್ಕೃತಿ, ಆಚರಣೆಗಳನ್ನು ಕಳೆದುಕೊಂಡಿತು.

ತುಳುನಾಡಿನ ಮೇಲೆ ಕೇವಲ ಭಾಷೆಯ ಆಧಾರದಲ್ಲಿ ಮಾತ್ರವಲ್ಲದೆ ರಾಜಕೀಯ ದಬ್ಬಾಳಿಕೆಯು ವರ್ಷಗಳಿಂದ ನಡೆಯುತ್ತಾ ಬಂದಿದೆ. ಅದು ಯಾವ ರೀತಿ ಎಂದರೆ, ತುಳುನಾಡು ಕರ್ನಾಟಕದ ಎರಡನೇ ಅತೀ ಹೆಚ್ಚು ತೆರಿಗೆ ಪಾವತಿಸುವ ಪ್ರದೇಶವಾಗಿದ್ದು, ಇಲ್ಲಿ ಸಮರ್ಪಕ ಸೌಲಭ್ಯಗಳ ಕೊರತೆಯಿದ್ದು, ಇದು ತುಳುನಾಡಿನ ಜನತೆಗೆ ಮಾಡುತ್ತಿರುವ ಮಲತಾಯಿ ಧೋರಣೆಯಾಗಿದೆ.

ಇದೇ ರೀತಿ ಭಾಷಾ ಹಾಗೂ ರಾಜಕೀಯ ದಬ್ಬಾಳಿಕೆಯನ್ನು ತುಳುನಾಡಿನ ಮೇಲೆ ನಡೆಸಿದರೆ ತುಳುನಾಡು ಪ್ರತ್ಯೇಕ ರಾಜ್ಯವಾಗಬೇಕೆನ್ನುವ ಕೂಗು ಜೋರಾಗುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಅದಕ್ಕಿಂತ ಮೊದಲು ಎಚ್ಚೆತ್ತುಕೊಂಡು ಕರ್ನಾಟಕ ಹಾಗೂ ಕೇರಳ ರಾಜ್ಯ ಸರ್ಕಾರಗಳು ಆದಷ್ಟು ಬೇಗನೆ ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡಲಿ ಹಾಗೂ ತುಳುನಾಡಿನ ರಾಜಕಾರಣಿಗಳು ಈ ವಿಚಾರದಲ್ಲಿ ತಮ್ಮ ರಾಜಕೀಯ ಭಿನ್ನಾಭಿಪ್ರಾಯವನ್ನು ಮರೆತು ತುಳುನಾಡಿಗಾಗಿ ಹಾಗೂ ತುಳು ಭಾಷೆಗಾಗಿ ಒಗ್ಗಟ್ಟಾಗಿ ಧ್ವನಿ ಎತ್ತಲಿ ಎಂಬುದು ತುಳುನಾಡಿನ ಜನರ ಆಶಯ.

– ವಿಶಾಲ್ ರೈ ಕೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ: 231ನೇ ಪರಿಸರಸ್ನೇಹಿ ಅಭಿಯಾನ

ಕೋಟ. ನ.25: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ...

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...
error: Content is protected !!