ಈ ಹಕ್ಕಿಯ ವಿಶೇಷತೆ ಏನೆಂದರೆ ಇದು ಆಕಾರದಲ್ಲಿ ಪಾರಿವಾಳವನ್ನೇ ಹೋಲುತ್ತದೆ. ಮೈನಾ ಹಕ್ಕಿಗಿಂತ ದೊಡ್ಡದಾಗಿರುವ ಚೋರೆ ಹಕ್ಕಿ/ ಹೊರಸಲು ಹಕ್ಕಿ ಪಾರಿವಾಳಕ್ಕಿಂತಲೂ ಗಾತ್ರದಲ್ಲಿ ಚಿಕ್ಕದಾಗಿದೆ. ಕೆಂಪು ಮಿಶ್ರಿತ ಕಂದು ಬಣ್ಣದ ರೆಕ್ಕೆ ಹೊಂದಿರುವ ಸ್ಪಾಟೆಡ್ ಡವ್ ಬೆನ್ನಿನ ಮೇಲೆ ಕಪ್ಪು ಚುಕ್ಕಿಗಳಿವೆ.
ಈ ಹಕ್ಕಿಯ ರೆಕ್ಕೆಗಳ ತುದಿಯಲ್ಲಿ ಬೂದಿ ಬಣ್ಣದ ಪಟ್ಟೆಗಳಿವೆ. ಸ್ಪಾಟೆಡ್ ಡವ್ ಹಕ್ಕಿಗಳಲ್ಲಿ ಒಂದು ವಿಶೇಷತೆಯೇನೆಂದರೆ, ಗಂಡು ಹೆಣ್ಣುಗಳಲ್ಲಿ ವ್ಯತ್ಯಾಸವಿರದಿರುವುದು. ಕಾಡಿನ ನಡುವೆ ಇರುವ ಮೈದಾನಗಳಲ್ಲಿ ಹೆಚ್ಚಾಗಿ ಜೋಡಿಗಳಲ್ಲಿ ಇಲ್ಲವೇ ಚಿಕ್ಕ ಗುಂಪುಗಳಲ್ಲಿ ಕಂಡುಬರುವ ಚೋರೆ ಹಕ್ಕಿಗಳು ಗದ್ದೆಗಳಲ್ಲಿಯೂ ಕಾಣಸಿಗುತ್ತವೆ.
ಚೋರೆ ಹಕ್ಕಿ (ಸ್ಪಾಟೆಡ್ ಡವ್) ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ಬರ್ಮಾ ಹಾಗೂ ಪಾಕಿಸ್ತಾನಗಳಲ್ಲಿ ಅಧಿಕವಾಗಿ ಕಾಣಸಿಗುತ್ತವೆ. ಧಾನ್ಯ, ಕಾಳುಗಳನ್ನೂ ತಿನ್ನುವ ಈ ಹಕ್ಕಿಗಳಿಗೆ ಸರಿಯಾಗಿ ರಕ್ಷಣೆ ಕೊಟ್ಟಲ್ಲಿ ಸಾಕಿದ ಹಕ್ಕಿಗಳಂತೆಯೇ ಮನೆಗಳ ಬಳಿ ಮೇಯುತ್ತವೆ.
ಮನೆಯಲ್ಲಿ ಅನಾವಶ್ಯಕವಾಗಿ ಹಕ್ಕಿಗಳನ್ನು ಬಂಧಿಸುವ ಬದಲು ಇಂತಹ ನೈಸರ್ಗಿಕ ಆನಂದವನ್ನು ಪಡೆಯಬಹುದು. ಹಲವು ಪಕ್ಷಿಪ್ರಿಯರ ಮನೆಯಂಗಳದಲ್ಲಿ ನಿರ್ಭೀತಿಯಿಂದ ಸ್ಪಾಟೆಡ್ ಡವ್ ಅತ್ತಿತ್ತ ಹೋಗುವುದನ್ನು ಕಾಣಬಹುದು.
ಬಹಳ ಚುರುಕು ಸ್ವಭಾವದ ಈ ಹಕ್ಕಿಗಳು ಬಹಳ ವೇಗವಾಗಿ ಹಾರುತ್ತವೆ. ಸ್ಪಾಟೆಡ್ ಡವ್ ಹಾರುವ ಶೈಲಿಯೇ ಅತ್ಯದ್ಭುತ. ಪಟಪಟ ರೆಕ್ಕೆ ಸದ್ದನ್ನು ಮಾಡುತ್ತ ಟೇಕ್ ಆಫ್ ಆಗುವ ಸಂದರ್ಭದಲ್ಲಿ ಹಾರುವ ವೇಗಕ್ಕೆ ಸಿಳ್ಳು ಹೊಡೆದಂತೆ ಸದ್ದಾಗುತ್ತದೆ.
ಮಧ್ಯಾಹ್ನದ ಹೊತ್ತಿಗೆ ಕೊಂಬೆಗಳ ಮೇಲಿನಿಂದ “ಕರ‍್ರೂರೂ” ಎಂದು ಕೂಗುವ ಸ್ಪಾಟೆಡ್ ಡವ್ ಕಡ್ಡಿಗಳನ್ನು ಬಳಸಿ ಮರಗಳ ಕವಲಿನಲ್ಲಿ ಅಸ್ತವ್ಯಸ್ತವಾಗಿ ಗೂಡನ್ನು ನಿರ್ಮಿಸುತ್ತವೆ.
-ಗಣೇಶ್ ಪ್ರಸಾದ್