ತಾಲೂಕು ಕೇಂದ್ರವಾದ ಕಾರ್ಕಳದಿಂದ ಸುಮಾರು 16 ಕಿ.ಮೀ ದೂರದಲ್ಲಿರುವ ಗ್ರಾಮವೇ ಪಳ್ಳಿ. ದಂತಕಥೆಯ ಪ್ರಕಾರ ಒಬ್ಬ ರಾಜನು ತನ್ನ ಎರಡು ಹೆಣ್ಣು ಮಕ್ಕಳಿಗೆ (ಅಕ್ಕ – ತಂಗಿ) ತುಳುನಾಡಿನ ಒಂದು ಊರನ್ನು ಎರಡು ವಿಂಗಡನೆ ಮಾಡಿ ಆಳ್ವಿಕೆಗೆ ಕೊಡುತ್ತಾನೆ. ಅಕ್ಕ ಎಂದರೆ ತುಳುವಿನಲ್ಲಿ ‘ಪಲಿ/ಪಲ್ದಿ’ ಎಂದರ್ಥ. ಈ ಕಾರಣದಿಂದಾಗಿ ಅಕ್ಕ ಆಳುತ್ತಿದ್ದ ಊರಿಗೆ ಪಳ್ಳಿ ಎಂಬ ಹೆಸರು ಬಂತು. ಪ್ರಾಗೈತಿಹಾಸಿಕ ಕಾಲಕ್ಕೆ ಸಂಬಂಧಪಟ್ಟಂತೆ ಮದ್ಮಲ್ ಪಾದೆ ಎಂಬ ಸ್ಥಳದಲ್ಲಿ ಬೃಹತ್ ಶಿಲಾಯುಗದ (ಸಾ.ಶ.ವ 3000) ಕಲ್ಮನೆ (ಕಲ್ಲು ಕೋಣೆ) ಸಮಾಧಿ, ನೆಲ ಸಮಾಧಿಗಳು ಪತ್ತೆಯಾಗಿರುತ್ತದೆ. ಹಿಸ್ಟರಿ ಸಂಬಂಧಪಟ್ಟಂತೆ 15 -16 ನೇ ಶತಮಾನಕ್ಕೆ ಸೇರಿದ ವಾಮನ ಮುದ್ರೆ ಕಲ್ಲನ್ನು ಪಳ್ಳಿ ಪ್ರದೇಶದಲ್ಲಿ ಕಾಣಬಹುದು.
ಮದ್ಮಲ್ ಪಾದೆ: ಈ ಸ್ಥಳಕ್ಕೆ ಒಂದು ದಂತಕಥೆ ಇದ್ದು, ಇದರ ಪ್ರಕಾರ ಹಿಂದಿನ ಕಾಲದಲ್ಲಿ ಬಡ ಕುಟುಂಬದ ಹೆಣ್ಣು ಮಕ್ಕಳ ಮದುವೆಗೆ ಇಲ್ಲಿರುವ ಕಲ್ಲಿನ ಕೋಣೆಯೊಳಗಡೆ ವೀಳ್ಯದೆಲೆ, ಅಡಿಕೆಯನ್ನಿಟ್ಟು ಪೂಜಿಸುತ್ತಿದ್ದರು. ಮಾರನೇ ದಿನ ಮದುಮಗಳಿಗೆ ಬೇಕಾದ ಚಿನ್ನವು ಈ ಕಲ್ಲು ಕೋಣೆಯ ಒಳಗಡೆ ಸಿಗುತ್ತಿತ್ತು. ಮದುವೆಗೆ ಈ ಚಿನ್ನವನ್ನು ಉಪಯೋಗಿಸಿ, ಮದುವೆ ಮುಗಿದ ನಂತರದಲ್ಲಿ ಚಿನ್ನವನ್ನು ಕಲ್ಲು ಕೋಣೆಗೆ ಮರು ಒಪ್ಪಿಸುತ್ತಿದ್ದರು. ಹಾಗಾಗಿ ಈ ಸ್ಥಳಕ್ಕೆ “ಮದ್ಮಲ್ ಪಾದೆ ” ಎಂದು ಹೆಸರು ಬಂತು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ: ಈ ದೇವಸ್ಥಾನವು ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದೊಂದಿಗೆ ವಿಶೇಷವಾದ ನಂಟನ್ನು ಹೊಂದಿದ್ದು, ನಂದಳಿಕೆಯ ಸಿರಿ ಜಾತ್ರೆ ನಡೆಯಬೇಕಾದರೆ ಪಳ್ಳಿಯ ಮಹಾಲಿಂಗೇಶ್ವರ ದೇವಸ್ಥಾನದ ಗಂಧ ಪ್ರಸಾದವು ಅಲ್ಲಿ ತಲುಪಬೇಕೆಂಬ ಪ್ರತೀತಿ ಇದೆ. ಪಳ್ಳಿಯಲ್ಲಿ ದೇವಸ್ಥಾನಕ್ಕಿಂತ ದೈವಸ್ಥಾನಗಳು ಹೆಚ್ಚಾಗಿ ಕಂಡುಬರುವುದರಿಂದ ಪಳ್ಳಿಯನ್ನು ‘ದೈವಗಳ ಬೀಡು’ ಎಂದು ಹೇಳಬಹುದು. ಇಲ್ಲಿರುವ ಪ್ರಮುಖ ದೈವಸ್ಥಾನಗಳೆಂದರೆ ವರ್ತೆ ಕಲ್ಕುಡ, ಬಬ್ಬುಸ್ವಾಮಿ, ತನ್ನಿಮಾನಿಗ, ಜುಮಾದಿ ಬಂಟ, ಸತ್ಯ ಸಾರಮಾಣಿ, ಕೋಟಿ-ಚೆನ್ನಯ (ಕೋಟಿ – ಚೆನ್ನಯರು ನೆಲೆಯೂರಿದ ಪಾದಗಳ ಗುರುತನ್ನು ಬಂಡೆಯ ಮೇಲೆ ಕಾಣಬಹುದು).
ಪಳ್ಳಿ ಪ್ರದೇಶವು ಮೂಲಭೂತ ಸೌಕರ್ಯಗಳಾದ ಶಾಲೆ, ಆಸ್ಪತ್ರೆ, ಗ್ರಾಮ ಪಂಚಾಯತ್ ಹಾಗೂ ಇನ್ನು ಅನೇಕ ಜನೋಪಯೋಗಿ ಕೇಂದ್ರಗಳನ್ನು ಹೊಂದಿದ್ದು, ಇಂದಿಗೂ ಸಾಂಸ್ಕೃತಿಕವಾಗಿ ತನ್ನ ಕಟ್ಟುಪಾಡುಗಳನ್ನು ಉಳಿಸಿ ಬೆಳೆಸಿಕೊಂಡು ಸಾಗುತಿದೆ.
-ಶಶಾಂತ್, ಅಂತಿಮ ಬಿ.ಎ ವಿದ್ಯಾರ್ಥಿ, ಎಂ.ಎಸ್.ಆರ್.ಎಸ್ ಕಾಲೇಜು ಶಿರ್ವ