Sunday, January 19, 2025
Sunday, January 19, 2025

ನಂದಳಿಕೆ

ನಂದಳಿಕೆ

Date:

ತಾಲೂಕು ಕೇಂದ್ರ ಕಾರ್ಕಳದಿಂದ ಸುಮಾರು 14 ಕಿ.ಮೀ ದೂರದಲ್ಲಿರುವ ನಂದಳಿಕೆ ಗ್ರಾಮವು ಹಲವಾರು ಐತಿಹ್ಯಗಳಿಗೆ ಪ್ರಸಿದ್ಧವಾಗಿದೆ. ನಂದ ಎಂಬ ಅರಸನು ಇಲ್ಲಿ ಆಳ್ವಿಕೆ ಮಾಡಿದ್ದರಿಂದ ಮುಂದೆ ಈ ಪ್ರದೇಶವು ನಂದಳಿಕೆ ಆಯಿತು‌‌‌ ಎಂಬುದು‌ ಈ ಪ್ರದೇಶದ ಸ್ಥಳ‌ ಐತಿಹ್ಯ. ಪ್ರಾಗೈತಿಹಾಸ ಕಾಲಕ್ಕೆ ಸಂಬಂಧಪಟ್ಟಂತೆ ಬೃಹತ್ ಶಿಲಾಯುಗದ 2 ಸಮಾಧಿಗಳು ( ಸಾ.ಶ. 3000 ವರ್ಷ) ಪತ್ತೆಯಾಗಿದ್ದು, ಹಿಸ್ಟರಿಗೆ ಸಂಬಂಧಪಟ್ಟಂತೆ ಈ ಪ್ರದೇಶದಲ್ಲಿ 14 ನೇ ಶತಮಾನದ, ನಾಗಶಿಲ್ಪಗಳು ಮತ್ತು 19 ನೇ ಶತಮಾನದ ಮರಣ ಶಾಸನವು ಪತ್ತೆಯಾಗಿರುತ್ತದೆ.

ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ: ಈ ದೇವಾಲಯಕ್ಕೆ ಸುಮಾರು 700 ವರ್ಷಗಳ ಇತಿಹಾಸವಿದ್ದು ಸೋದೆ ಮಠದ ಶ್ರೀ ವಾದಿರಾಜ ಸ್ವಾಮೀಜಿಯವರು ನಂದಳಿಕೆಯಲ್ಲಿ ವಾಸ್ತವ್ಯ ಹೂಡಿದ ಸಂದರ್ಭದಲ್ಲಿ ಗ್ರಾಮಕ್ಕೆ ದೇವಸ್ಥಾನದ ಕೊರತೆ ಇದೆ ಎಂಬ ಕಾರಣಕ್ಕೆ ಭಿಕ್ಷೆ ಸ್ವೀಕರಿಸಲು ನಿರಾಕರಿಸುತ್ತಾರೆ. ಬ್ರಹ್ಮಕುಮಾರ, ಭೂತರಾಜ, ವೀರಭದ್ರ ಸ್ವಾಮಿಗಳ ಪರಮಭಕ್ತರಾಗಿದ್ದ ಚಾವಡಿ ಮನೆಯ ಹೂವಯ್ಯ ಹೆಗ್ಗಡೆಯವರನ್ನು ಈ ಘಟನೆ ಬಹಳವಾಗಿ ಚಿಂತಿಸಿತು. ಅದೇ ರಾತ್ರಿ ಅವಳಿ ಸಹೋದರಿಯರಾದ ಅಬ್ಬಗ-ದಾರಗ ಹೆಗ್ಗಡೆಯವರ ಸ್ವಪ್ನದಲ್ಲಿ ಕಾಣಿಸಿಕೊಂಡು ಪಕ್ಕದ ಗ್ರಾಮವಾದ ಪಿಲರ್ಕಾನದಲ್ಲಿ ಋಷಿ ಭಾರ್ಗವರಿಂದ ಪೂಜಿಸಲ್ಪಟ್ಟ ಭಗವಾನ್ ಶ್ರೀ ಮಹಾಲಿಂಗೇಶ್ವರನ ಪಂಚಲೋಹದ ವಿಗ್ರಹವನ್ನು ಸ್ಥಾಪಿಸಲು ಆದೇಶಿಸಿದರು. ಈ ಮೂರ್ತಿಯನ್ನು ತಾತ್ಕಾಲಿಕವಾಗಿ ಗ್ರಾಮದ ಜಿನ ದೇವಸ್ಥಾನದಲ್ಲಿ ಸ್ಥಾಪಿಸಲಾಯಿತು ಮತ್ತು ನಂತರ ಕಾಲದಲ್ಲಿ ಶ್ರೀ ವಾದಿರಾಜ ಸ್ವಾಮೀಜಿಯವರಿಂದ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು.

ಚಾವಡಿ ಅರಮನೆ: ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಷ್ಟೇ ಪ್ರಾಚೀನತೆಯನ್ನು ಹೊಂದಿರುವ ಚಾವಡಿ ಅರಮನೆಯು ದೇವಾಲಯದಿಂದ ಪಶ್ಚಿಮಕ್ಕೆ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿದ್ದು, ದೇವಾಲಯದ ಹೆಗ್ಗಡೆಯವರ ಅನುವಂಶಿಕ ನಿವಾಸವಾಗಿದೆ. ವಿಶಾಲವಾದ ಚಾವಡಿ, ರಾಜಪೀಠ ಮತ್ತು ಖಡ್ಗ ಹೊಂದಿದ ಚಾವಡಿ ಅರಮನೆಯು ವಿಶೇಷವಾದ ಕಾಷ್ಟಶಿಲ್ಪಗಳಿಂದ ಕೂಡಿದೆ. ಚಾವಡಿಯಲ್ಲಿ ವಿವಿಧ ಆಕಾರದ ಬೋದಿಕ ಕಂಬಗಳು ಹಾಗೂ ಮೇಲ್ಚಾವಣಿಯಲ್ಲಿರುವ ವಿವಿಧ ಕೆತ್ತನೆಗಳು ನೋಡುಗರನ್ನು ಮನಸೆಳೆಯುತ್ತದೆ. ಇಲ್ಲಿನ ಇನ್ನೊಂದು ವಿಶೇಷವೆಂದರೆ ಚಾವಡಿಯಲ್ಲಿರುವ ಒಂದು ಗೂಟವನ್ನು ಎಳೆದರೆ ಉಳಿದ ಎಲ್ಲಾ ನವದ್ವಾರಗಳನ್ನು ತೆರೆಯಬಹುದು ಮತ್ತು ಮುಚ್ಚಬಹುದು ಇದು ಪ್ರಾಚೀನ ಕಾಲದ ಕುಶಲ ಕರ್ಮಿಗಳ ನೈಪುಣ್ಯತೆಯನ್ನು ನೆನಪಿಸುವಂತಿದೆ. ಮಾತ್ರವಲ್ಲದೆ ಅಬ್ಬಗ -ದಾರಗ ಬಾಲ್ಯದಲ್ಲಿ ಆಡುತ್ತಿದ್ದ ಉಯ್ಯಾಲೆಯನ್ನು ಇಂದಿಗೂ ಕಾಣಬಹುದು . ಶಿಥಿಲ ವ್ಯವಸ್ಥೆಯಲ್ಲಿದ್ದ ಈ ಚಾವಡಿ ಅರಮನೆಯನ್ನು 1992 ರಲ್ಲಿ ಜೀರ್ಣೊದ್ಧಾರ ಮಾಡಲಾಗಿದೆ.

ವಾರ್ಷಿಕ ಹಬ್ಬ: ನಂದಳಿಕೆ ಆಯನ ಅಥವಾ ‘ಸಿರಿಜಾತ್ರೆ’ ಎಂದೇ ಕರೆಯಲ್ಪಡುವ ದೇವಾಲಯದ ವಾರ್ಷಿಕೋತ್ಸವವು ಮಾರ್ಚ್ ಅಥವಾ ಎಪ್ರಿಲ್ ತಿಂಗಳಿನಂದು ನಡೆಯುತ್ತದೆ. ವಿಶೇಷವೆಂದರೆ ಜಾತ್ರಾ ಪ್ರಕಟನ ಫಲಕವನ್ನು ಜಾಗೃತಿ ಮೂಡಿಸುವ ವಿಷಯಗಳೊಂದಿಗೆ ಸೃಜನಾಶೀಲತೆಯಿಂದ ಮುದ್ರಿಸಿ ವಿವಿಧ ಕಡೆಯ ಜನರನ್ನು ಆಹ್ವಾನಿಸಲಾಗುತ್ತದೆ. ನಾಗ ಪೂಜೆ, ಬ್ರಹ್ಮ, ಇತರ ಉಪದೇವತೆಗಳು, ಅಣ್ಣಪ್ಪ ಸ್ವಾಮಿ ಮತ್ತು ಅಬ್ಬಗ-ದಾರಗರ ವಾರ್ಷಿಕೋತ್ಸವದ ನೆನಪಿಗಾಗಿ ಮೇ ತಿಂಗಳಲ್ಲಿ ಪೂಜೆಯನ್ನು ನಡೆಸಲಾಗುತ್ತದೆ.

ಪ್ರಾಗೈತಿಹಾಸ ಕಾಲದಿಂದ ಪ್ರಸ್ತುತದವರೆಗೂ ಜನ ಯೋಗ್ಯ ನೆಲೆಯಾಗಿರುವ ನಂದಳಿಕೆಯು ಪ್ರಾಚೀನ ಕಟ್ಟುಪಾಡುಗಳೊಂದಿಗೆ ತನ್ನ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಇಲ್ಲಿನ ಐತಿಹ್ಯದಿಂದ ತಿಳಿಯುತ್ತದೆ.

-ದಿಶಾಂತ್ ದೇವಾಡಿಗ, ಅಂತಿಮ ಬಿ.ಎ., ಎಂ.ಎಸ್.ಆರ್.ಎಸ್ ಕಾಲೇಜು, ಶಿರ್ವ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!