ತಾಲೂಕು ಕೇಂದ್ರವಾದ ಕಾಪುವಿನಿಂದ ಸುಮಾರು 9 ಕಿ.ಮೀ ದೂರದಲ್ಲಿರುವ ಕುರ್ಕಾಲು ಗ್ರಾಮವು ತನ್ನದೇ ಆದ ಐತಿಹ್ಯವನ್ನು ಒಳಗೊಂಡಿದೆ. ಐತಿಹ್ಯದ ಪ್ರಕಾರ ಜಗದ್ಗುರುಗಳಾದ ಮಧ್ವಾಚಾರ್ಯರ ಪಾದ ಅಥವಾ ಕಾಲಿನ ಕುರುಹು ಇಲ್ಲಿ ಕಾಣಸಿಗುವುದರಿಂದ ಈ ಪ್ರದೇಶಕ್ಕೆ ಕುರ್ಕಾಲು ಎಂಬ ಹೆಸರು ಬಂದಿದೆ. ಪ್ರಾಗೈತಿಹಾಸಿಕ ಕಾಲಕ್ಕೆ ಸಂಬಂಧಪಟ್ಟಂತೆ ಕುಂಜಾರುಗಿರಿಯಲ್ಲಿ ನೂತನ ಶಿಲಾಯುಗದ ಕಲ್ಲಿನ ಕೊಡಲಿ ಮತ್ತು ಬೃಹತ್ ಶಿಲಾಯುಗದ ಸಮಾಧಿಗಳು ಪತ್ತೆಯಾಗಿರುತ್ತದೆ. ಹಾಗಾಗಿ ಈ ಪ್ರದೇಶವು ಸುಮಾರು 6000 ವರ್ಷಗಳ ಹಿಂದೆಯೇ ಜನವಸತಿ ಇದ್ದ ಸ್ಥಳವಾಗಿತ್ತು ಎಂದು ಹೇಳಬಹುದು.
ಬಗ್ಗೇಡಿಕಲ್/ಬಗ್ಗ-ದುಗ್ಗ: ಜನಸಾಮಾನ್ಯರು ಹೇಳುವ ಪ್ರಕಾರ ಸುಮಾರು 500 ವರ್ಷಗಳ ಹಿಂದೆ ಕುರ್ಕಾಲಿನ ಹಿರಿ ಮನೆತನವಾದ ಬಗ್ಗೇಡಿ ಗುತ್ತಿನಲ್ಲಿ ಬಗ್ಗ- ದುಗ್ಗ ಎಂಬ ಸಹೋದರರಿದ್ದರು. ಇವರಿಬ್ಬರು ಪವಾಡ ಪುರುಷರಾಗಿದ್ದು ಈ ಪ್ರದೇಶದಲ್ಲಿ ಅನೇಕ ಪವಾಡಗಳನ್ನು ಮಾಡಿದ್ದಾರೆ ಎಂಬುದು ಜನರ ನಂಬಿಕೆ. ಇವರು ಕುರ್ಕಾಲಿನಲ್ಲಿ ಪ್ರದೇಶಕ್ಕೆ ಗಡಿಯನ್ನು ನಿರ್ಮಿಸಿ ರಕ್ಷಣೆಯನ್ನು ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ ಮಾತ್ರವಲ್ಲದೆ ಪ್ರಸ್ತುತ ಕುರ್ಕಾಲಿನಲ್ಲಿ 1.5 ಕಿ.ಮೀ ದೊಡ್ಡದಾದ ಕಣಿವೆಯಿದ್ದು, ಇದನ್ನು ಬಗ್ಗ-ದುಗ್ಗರು ಒಂದೇ ರಾತ್ರಿಯಲ್ಲಿ ನಿರ್ಮಿಸಿದರು ಎಂದು ಹೇಳಲಾಗುತ್ತದೆ. ಪ್ರಸ್ತುತ ಬಗ್ಗೇಡಿಕಲ್ ನಲ್ಲಿ ಇವರ ಸ್ಮರಣಾರ್ಥವಾಗಿ 2 ಸ್ಮಾರಕ ಶಿಲ್ಪವಿದ್ದು ಸ್ಥಳೀಯರು ಇದನ್ನು ‘ಬಗ್ಗೇಡಿಕಲ್’ ಎಂದು ಕರೆಯುತ್ತಾರೆ. ದೊಡ್ಡ ಶಿಲೆಯಿಂದ ಮಾಡಲ್ಪಟ್ಟ ಸ್ಮಾರಕ ಶಿಲ್ಪವನ್ನು ಬಗ್ಗ (ಹಿರಿಯವ) ಎಂದು ಹಾಗೂ ಕಿರಿದಾದ ಶಿಲೆಯಿಂದ ಮಾಡಲ್ಪಟ್ಟ ಸ್ಮಾರಕ ಶಿಲ್ಪವನ್ನು ದುಗ್ಗ (ಕಿರಿಯವ) ಎಂದೂ ಕರೆಯಲಾಗುತ್ತದೆ.
ಪುರಾತತ್ವಶಾಸ್ತ್ರದ ಪ್ರಕಾರ ಈ ಎರಡು ಸ್ಮಾರಕ ಶಿಲ್ಪಗಳು ಕಣ (ಗ್ರಾನೈಟ್) ಶಿಲೆಯಿಂದ ಮಾಡಲ್ಪಟ್ಟ ವೀರಗಲ್ಲುಗಳಾಗಿದ್ದು, ಸುಮಾರು 15 -16 ನೇ ಶತಮಾನಕ್ಕೆ ಸೇರಿದೆ. ಒಂದು ವೀರಗಲ್ಲು ಸುಮಾರು 7 ಅಡಿ ಎತ್ತರ ಮತ್ತು 2.5 ಅಡಿ ಅಗಲವಿದ್ದು ಮೇಲ್ಭಾಗದಲ್ಲಿ ಸೂರ್ಯ- ಚಂದ್ರರ ಕೆತ್ತನೆಯನ್ನು ಮಾಡಲಾಗಿದೆ. ಕೆಳಗಿನ ಪಟ್ಟಿಕೆಯಲ್ಲಿ ಕಿರೀಟಧಾರಿಯಾದ ವೀರನ ಕೈಗಳಲ್ಲಿ ಕತ್ತಿ-ಗುರಾಣಿಯನ್ನು ಹಿಡಿದಿರುವಂತೆ ಕೆತ್ತಲಾಗಿದ್ದು, ವೀರನ ಹಿಂಭಾಗದಲ್ಲಿ ಒಬ್ಬ ವ್ಯಕ್ತಿಯು ವೀರನಿಗೆ ತತ್ರವನ್ನು ಹಿಡಿದಿರುವಂತೆ ಚಿತ್ರಿಸಲಾಗಿದೆ. ಕೊನೆಯ ಪಟ್ಟಿಯಲ್ಲಿ ಗಜವನ್ನು ತೋರಿಸಲಾಗಿದೆ. ಇನ್ನೊಂದು ವೀರಗಲ್ಲು ಸುಮಾರು 5 ಅಡಿ ಎತ್ತರ ಮತ್ತು 2.5 ಅಡಿ ಅಗಲವಿದ್ದು, ಮೊದಲನೇ ವೀರನ ಲಕ್ಷಣವನ್ನೇ ಹೋಲುತ್ತಿದ್ದು ಕಿರೀಟ ಮತ್ತು ತತ್ರವನ್ನು ಹಿಡಿದಿರುವ ವ್ಯಕ್ತಿ, ಮತ್ತು ಕೊನೆಯ ಪಟ್ಟಿಕೆಯಲ್ಲಿರುವ ಗಜದ ಕೆತ್ತನೆ ಕಂಡುಬರುವುದಿಲ್ಲ.
ಈ ವೀರಗಲ್ಲುಗಳಿಂದ ಸುಮಾರು 200 ಮೀ. ದೂರದಲ್ಲಿ ಬೃಹತ್ ಶಿಲಾಯುಗದ ನಿಲಿಸುಗಲ್ಲು ಮಾದರಿಯ ಸಮಾಧಿಯನ್ನು ಹೋಲುವ ಕಲ್ಲುಗಳಿದ್ದು ಸ್ಥಳೀಯರು ಇದನ್ನು ವೀರರ ಸತಿಯರು ಎಂದು ಹೇಳುತ್ತಾರೆ. ಕುರ್ಕಾಲು ಗ್ರಾಮವು ಪ್ರಾಚೀನ ಕಾಲದಿಂದಲೂ ಜನವಸತಿಗೆ ಯೋಗ್ಯವಾದ ಪ್ರದೇಶವೆಂದು ಹಾಗೂ ಇಲ್ಲಿ ವೀರಯೋಧರು ಇದ್ದರೆಂದು ಐತಿಹ್ಯದಿಂದ ತಿಳಿದು ಬರುತ್ತದೆ.
-ಬಸವರಾಜ್, ಅಂತಿಮ ಬಿ.ಎ. ವಿದ್ಯಾರ್ಥಿ, ಎಂ.ಎಸ್.ಆರ್.ಎಸ್ ಕಾಲೇಜು ಶಿರ್ವ