2020 ನವೆಂಬರಲ್ಲಿ ಮೊದಲೇ ಯಾವುದೇ ಪ್ಲಾನ್ ಮಾಡದೆ ಭಾನುವಾರ ಬೆಳಿಗ್ಗೆ ಎದ್ದ ತಕ್ಷಣ ಕೊಡಚಾದ್ರಿ ಹೋಗಬೇಕೆಂದು ನನ್ನ ಯಜಮಾನರಿಗೆ ಮನಸ್ಸಾಯಿತು. ಅವರು ಹೇಳಿದ್ದೆ ತಡ ನಾನು ಮಕ್ಕಳಿಗೆ ಎಬ್ಬಿಸಿ ರೆಡಿಯಾದೆ. ಕಾರ್ಕಳದಿಂದ 130 ಕಿಲೋಮೀಟರ್ ದೂರವಿರುವ ಸುಂದರ ಪರ್ವತ ಶ್ರೇಣಿ ಕೊಡಚಾದ್ರಿ. ನಾವು ನಮ್ಮ ಕಾರಿನಲ್ಲಿ ಹೊರಟೆವು. ಸುಂದರ ಪ್ರಕೃತಿ ನೋಡುವುದೆಂದರೆ ನನಗೆ ಖುಷಿ. ನೆನೆಸಿಕೊಂಡೆ ಆನಂದವಾಗುತ್ತದೆ. ಸುಂದರವಾದ ವಿಡಿಯೋ ಫೋಟೋ ತೆಗೆಯಬಹುದೆಂದು ಇನ್ನಷ್ಟು ಸಂತಸ. ಎಲ್ಲಿ ಹೊರಟರು ನನ್ನ ಮೊಬೈಲ್ ನನ್ನ ಕೈಯಲ್ಲಿ ಇರುವುದು. ವಿಡಿಯೋ ತೆಗೆಯುವ ಹುಚ್ಚು ಇರುವುದರಿಂದ. ನೋಡಿ ಬಂದ ಮೇಲೆ ವಿಡಿಯೋ ಎಡಿಟ್ ಮಾಡಿ ನೋಡುದೆಂದರೆ ಆದರಷ್ಟು ಸಂತಸ ಬೇರೊಂದಿಲ್ಲ. ಯಾವಾಗ ಬೇಕಾದರೂ ನೋಡಬಹುದು ಅಲ್ಲವೇ.
ಕೊಡಚಾದ್ರಿಯು ಶಿವಮೊಗ್ಗ ಜಿಲ್ಲೆಯಲ್ಲಿದೆ. ಹೋಗುವ ದಾರಿ ಘಾಟಿ ನೋಡಲು ಬಲು ಚಂದ. ತಲುಪಿದ ಮೇಲೆ ಪರ್ವತದ ಮೇಲೆ ಹೋಗಲು ಜೀಪು ವ್ಯವಸ್ಥೆ ಮಾಡಲಾಗಿದೆ. ಹಲವರು ಟ್ರೆಕ್ಕಿಂಗ್ ಕೂಡ ಮಾಡುತ್ತಾರೆ. ಟ್ರಕ್ಕಿಂಗ್ ಹೋದರೆ ಒಂದು ದಿನ ಬೇಕಾಗುತ್ತದೆ. ನಾವು ಜೀಪಿನಲ್ಲಿ ಹೊರಟೆವು.ಒಬ್ಬರಿಗೆ ರೂ.300 ಕೊಟ್ಟ ನೆನಪು. ಒಂದು ಗಂಟೆ ಮೇಲೆ ಹೋಗಲು ಹಾಗು ಒಂದು ಗಂಟೆ ಕೆಳಗೆ ಇಳಿಯಲು ಬೇಕು. ಆದರೆ ಹೋಗುವ ದಾರಿ ಉಂಟಲ್ಲಾ ಆ ದೇವರಿಗೆ ಪ್ರೀತಿ. ಹೋಗಿ ಬರುವ ದಾರಿಯಲ್ಲಿ ದೊಡ್ಡ ದೊಡ್ಡ ಕಲ್ಲುಗಳು ನಮ್ಮ ಜೀಪು ಯಾವಾಗ ಕೆಳಗೆ ಬೀಳುತ್ತೋ ಎನ್ನುವ ಭಯ. ಜೀಪು ಕುಣಿಯುತ್ತ ಜಿಗಿಯುತ್ತ ನನ್ನ ಎಲ್ಲಾ ಮೈಯೆಲ್ಲಾ ಪುಡಿ ಪುಡಿ ಮಾಡಿದಂತಹ ಅನುಭವವಾಯಿತು. ಇದು ಬೇಡ ಇತ್ತು ನಮಗೆ ಅನಿಸಿತು. ಪ್ರಾಯ ಆದವರು ಹೋಗುವುದು ಕಷ್ಟ. ಬೆನ್ನು ಮೂಳೆ ಗಟ್ಟಿ ಇರಬೇಕಷ್ಟೇ.
ಮೇಲೆ ಹೋಗುವ ದಾರಿಯ ಮಧ್ಯದಲ್ಲಿ ಸಮತಟ್ಟಾದ ಜಾಗದಲ್ಲಿ ಜೀಪ್ ನಿಂತಿತು. ಇಲ್ಲಿ ಗಾಳಿಪಟ ಕನ್ನಡ ಸಿನಿಮಾ ಶೂಟಿಂಗ್ ಇಲ್ಲೇ ನಡೆದದ್ದು ಎಂದು ಜೀಪಿ ಡ್ರೈವರ್ ತೋರಿಸಿದರು. ಪರ್ವತದ ಮೇಲೆ ಹೋಗಲು ಜೀಪಿನಲ್ಲಿ ಎಷ್ಟು ಕಷ್ಟವಾಗಿತ್ತೋ ಅದರ ನಾಲ್ಕು ಪಟ್ಟು ಖುಷಿ ಅಲ್ಲಿ ಮೇಲೆ ತಲುಪಿದ ಮೇಲೆ ಆಯಿತು. ಹೇಗೆ ಮೇಲೆ ಬಂದೆವು ಎಂಬುದನ್ನು ಮರೆತು ಪ್ರಕೃತಿಯನ್ನು ಸವಿದೆವು. ಜೀಪ್ ನಿಂದ ಕೆಳಗೆ ಇಳಿದ ತಕ್ಷಣ ಚಿಕ್ಕಮಂದಿರ ಇದೆ. ದೇವರಿಗೆ ಕೈ ಮುಗಿದು ಅಲ್ಲೇ ಪಕ್ಕದಲ್ಲಿದ್ದ ಚಿಕ್ಕ ಕ್ಯಾಂಟೀನ್ ನಲ್ಲಿ ಚಹಾ ಬಿಸ್ಕೆಟ್ಟು ಸವಿದೆವು. ನಂತರ ನಡೆಯುವ ದಾರಿ ಶುರುವಾಯಿತು. ಸ್ವಲ್ಪ ದೂರ ನಡೆದು ಒಂದು ಅಥವಾ ಎರಡು ಕಿಲೋಮೀಟರ್ ಇರಬಹುದು ಪರ್ವತದ ತುದಿಗೆ ಹೋಗಿ ತಲುಪಿದೆವು. ಅಲ್ಲಿ ಕುಳಿತು ಬೇಕಾದಷ್ಟು ಫೋಟೋಗಳನ್ನು ತೆಗೆದೆವು.
ಪರ್ವತದ ಮೇಲೆ ತಲುಪಿದಾಗ ತಂಪು ಗಾಳಿ. ನೋಟ ಬೀರಿದಷ್ಟು ಪರ್ವತವೇ ಪರ್ವತಗಳು. ಈ ಪ್ರಕೃತಿ ಎಷ್ಟು ಚೆಂದ. ಎಲ್ಲವನ್ನು ಬಿಟ್ಟು ಇಲ್ಲೇ ಧ್ಯಾನ ಮಾಡುವ ಆಸೆಯಾಗಿದ್ದು ಸುಳ್ಳಲ್ಲ. ಆದರೆ ಮನೆಗೆ ವಾಪಸ್ ಬರಬೇಕಲ್ಲವೇ ಅಲ್ಲಿ ಧ್ಯಾನಕ್ಕೆ ಕುಳಿತರೆ ಜನರು ನಕ್ಕರು ಎಂದು ನನ್ನ ವಿಡಿಯೋ ಶೂಟ್ ಮಾಡುವುದನ್ನು ಮುಂದುವರಿಸಿದೆ. ಇಷ್ಟವಿದ್ದರೆ ಪಕ್ಕದ ಬೆಟ್ಟ ಕೂಡ ಹತ್ತಬಹುದು. ಆದರೆ ನಾನು ಹೋಗಲಿಲ್ಲ ಇವರು ಮತ್ತು ನನ್ನ ಮಕ್ಕಳು ಸ್ವಲ್ಪ ದೂರ ಹೋಗಿ ವಾಪಸ್ ಬಂದರು. ಅಲ್ಲೇ ಗಟ್ಟಿ ನಿದ್ದೆ ಮಾಡುವ ಅನಿಸುತ್ತಿತ್ತು. ಒಂದಿಬ್ಬರು ಮಲಗಿದ್ದರೂ ಕೂಡ. ಜೀವನದಲ್ಲಿ ಬೇರೇನೂ ಬೇಕು ಎರಡು ಹೊತ್ತು ಊಟ ಹಾಗೂ ಒಳ್ಳೆಯ ನೆಮ್ಮದಿಯ ನಿದ್ದೆ.
ಮೋಡಗಳು ನಮಗೆ ಹತ್ತಿರದಿಂದ ನೋಡುತ್ತಿತ್ತು. ಅಲ್ಲಿ ಒಂದು ಗಂಟೆಗಳ ಕಾಲ ಕುಳಿತು ಪೃಕೃತಿಯ ಸೌಂದರ್ಯ ನೋಡಿ ಧನ್ಯನಾದೆನು. ನಂತರ ವಾಪಸ್ ಜೀಪಿನಲ್ಲಿ ಕುಳಿತು ಕೆಳಗೆ ಬಂದೆವು. ಅಲ್ಲಿಂದ ಸ್ವಲ್ಪ ದೂರದಲ್ಲಿ ನಗರ ಫೋರ್ಟ್, ಶ್ರೀ ವೆಂಕಟರಮಣ ದೇವಸ್ಥಾನ, ಗೌರಿ ತೀರ್ಥ ನೋಡಿ ಕಾರ್ಕಳಕ್ಕೆ ತೆರಳಿದೆವು. ಅಂತು ಭೂಮಿಯ ಮೇಲಿನ ಸ್ವರ್ಗ ವೀಕ್ಷಿಸಿ ದೇವರು ಕಣ್ಣು ಕೊಟ್ಟಿದ್ದಕ್ಕೆ ಧನ್ಯವಾದಗಳನ್ನು ಮನಸ್ಸಿನಲ್ಲಿ ಹೇಳಿದೆ.
-ಡಾ. ಹರ್ಷಾ ಕಾಮತ್