Saturday, January 18, 2025
Saturday, January 18, 2025

ನವಶಕ್ತಿ

ನವಶಕ್ತಿ

Date:

ಹಿಂದೂ ಹಬ್ಬಗಳಲ್ಲಿ ನವರಾತ್ರಿಯು ಪ್ರಸಿದ್ಧವಾದ ಹಬ್ಬವಾಗಿದೆ. ನವರಾತ್ರಿಯು ಪಾರ್ವತಿ ದೇವಿಯ ಒಂಬತ್ತು ವಿವಿಧ ರೂಪಗಳನ್ನು ಆರಾಧಿಸುವ ಹಬ್ಬವಾಗಿದ್ದು, ಇಲ್ಲಿ ಪಾರ್ವತಿ ಯಾ ದುರ್ಗೆಯು ನವ ಅವತಾರಗಳಲ್ಲಿ ಜನ್ಮ ತಾಳಿ ದುಷ್ಟಸಂಹಾರ ಮಾಡಿ ಲೋಕ ಕಲ್ಯಾಣವನ್ನು ಮಾಡಿದ್ದಳು ಎಂಬ ಪ್ರತೀತಿಯಿದೆ. ನವಮಿ ಮುಗಿದ ನಂತರ ದಿನವಾದ ದಶಮಿಯಂದು ದೇವಿಯು ವಿಜಯಗೊಂಡಿರುವುದರಿಂದ ಈ ದಿನವನ್ನು ವಿಜಯದಶಮಿ ಎಂದು ಆಚರಿಸಲಾಗುತ್ತದೆ.

ನವರಾತ್ರಿ ಹಬ್ಬವನ್ನು ಭಾರತದ ವಿವಿಧ ರಾಜ್ಯಗಳಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದೇವಿಯ ನವ ಅವತಾರಗಳಾದ ಶೈಲ ಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ್ಟ, ಕೂಷ್ಮಾಂಡ, ಸ್ಕಂದಮಾತ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ, ಸಿದ್ಧಿದಾತ್ರಿ ತನ್ನದೇ ಆದ ಕಥೆಯನ್ನು ಹೊಂದಿವೆ. ಮಾತ್ರವಲ್ಲದೇ ನವ ದಿನವೂ ನವ ಬಣ್ಣವನ್ನು ಹೊಂದಿರುತ್ತದೆ.

ಶೈಲ ಪುತ್ರಿ: ಪರ್ವತರಾಜ ಹಿಮಾವಂತನ ಪುತ್ರಿಯೆ ಶೈಲ ಪುತ್ರಿ. ಪ್ರಜಾಪತಿ ಬ್ರಹ್ಮನ ಮಗನಾದ ದಕ್ಷನು ತನ್ನ 27 ಪುತ್ರಿಯರನ್ನು ಚಂದ್ರನಿಗೆ ಮದುವೆ ಮಾಡಿ ಕೊಟ್ಟಿದ್ದ. ಉಳಿದವರಲ್ಲಿ ಒಬ್ಬಳಾದ ದಾಕ್ಷಾಯಿಣಿ ಶಿವನನ್ನು ವರಿಸಿದಳು. ದಕ್ಷ ಮಹಾರಾಜನಿಗೆ ಶಿವನನ್ನು ಕಂಡರೆ ಆಗುತ್ತಿರಲಿಲ್ಲ. ಸ್ಮಶಾನದಲ್ಲಿ ವಾಸ ಮಾಡುವ, ಕುತ್ತಿಗೆಯಲ್ಲಿ ನಾಗರಹಾವನ್ನು ಸುತ್ತಿಕೊಂಡಿರುವ ಶಿವನಿಗಿಂತ ಉತ್ತಮ ವರ ತನ್ನ ಮಗಳಿಗೆ ಸಿಗುತ್ತಿದ್ದ ಎಂದು ದಕ್ಷ ಹೇಳಿಕೊಳ್ಳುತ್ತಿದ್ದ. ಶಿವನ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದ ದಕ್ಷನು ಒಂದು ದೊಡ್ಡ ಯಜ್ಞವನ್ನು ಆಯೋಜಿಸಿದ್ದ. ಈ ಯಜ್ಞಕ್ಕೆ ಆಗಮಿಸುವಂತೆ ತನ್ನ ಎಲ್ಲಾ ಮಕ್ಕಳಿಗೆ, ಬಂಧು-ಮಿತ್ರರಿಗೆ ಆಹ್ವಾನ ನೀಡಿದ್ದ. ಈ ಸಮಾರಂಭಕ್ಕೆ ದಕ್ಷ ಪ್ರವೇಶಿಸುತ್ತಿದ್ದಂತೆ ಬ್ರಹ್ಮ ಮತ್ತು ಶಿವ ಬಿಟ್ಟು ಉಳಿದವರೆಲ್ಲರೂ ಎದ್ದುನಿಂತು ಗೌರವ ಸೂಚಿಸಿದರು. ಶಿವ ದೇವರಾಗಿರಬಹುದು, ಆದರೆ ಅವನಿಗೆ ನಾನು ಮಾವ. ಸಂಬಂಧದಲ್ಲಿ ಆತನಿಗಿಂತ ದೊಡ್ಡವ, ಶಿವ ಎದ್ದುನಿಂತು ನನಗೆ ಗೌರವ ನೀಡಬಹುದಿತ್ತು, ಈ ರೀತಿ ಅಗೌರವ ಸಲ್ಲಿಸಿದ್ದು ಸರಿಯಲ್ಲ ಎಂದು ಮನಸ್ಸಿನಲ್ಲಿ ಹೇಳಿಕೊಳ್ಳುತ್ತಿದ್ದನು. ಇದಕ್ಕೆ ಪ್ರತೀಕಾರ ಎಂಬಂತೆ ದಕ್ಷನು ಶಿವನಿಗೆ ಅವಮಾನ ಮಾಡಬೇಕೆಂದು ಇನ್ನೊಂದು ಯಜ್ಞವನ್ನು ಆಯೋಜಿಸಿದನು. ಆದರೆ ಮಗಳು ದಾಕ್ಷಾಯಿಣಿ ಹಾಗೂ ಅಳಿಯ ಶಿವನಿಗೆ ಆಹ್ವಾನ ನೀಡದೆ ಉಳಿದ ಎಲ್ಲಾ ಮಕ್ಕಳಿಗೂ ಆಹ್ವಾನ ನೀಡಿದ. ತಂದೆಯು ಯಾಗವನ್ನು ಆಯೋಜಿಸಿರುವುದನ್ನು ತಿಳಿದ ದಾಕ್ಷಾಯಿಣಿ ಶಿವನೊಂದಿಗೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗೋಣವೇ ಎಂದು ಕೇಳುತ್ತಾಳೆ. ಅದಕ್ಕೆ ಶಿವನು ಯಾವುದೇ ಶುಭಾರಂಭಕ್ಕೆ ಆಹ್ವಾನವಿಲ್ಲದೆ ಹೋಗಬಾರದು ಎಂದು ಹೇಳುತ್ತಾನೆ. ಅದಕ್ಕೆ ದಾಕ್ಷಾಯಿಣಿ ಯಾವುದೋ ಅನಿವಾರ್ಯ ಕಾರಣದಿಂದಾಗಿ ತಂದೆಗೆ ಮರೆತು ಹೋಗಿರಬಹುದು, ತವರು ಮನೆಗೆ ಹೋಗಲು ಮಗಳಿಗೆ ಏಕೆ ಆಹ್ವಾನ ಬೇಕೆಂದು ಪ್ರಶ್ನಿಸುತ್ತಾಳೆ. ತೆರಳುವುದು ಬೇಡ ಎಂದು ಹೇಳಿದರು ದಾಕ್ಷಾಯಿಣಿ ಹಠಕ್ಕೆ ಕರಗಿ ಶಿವನು ಅನುಮತಿ ನೀಡುತ್ತಾನೆ. ಇವನಿಂದ ಅನುಮತಿ ಪಡೆದು ದಾಕ್ಷಾಯಿಣಿಯು ತಂದೆಯ ಯಾಗಕ್ಕೆ ಹೋಗುತ್ತಾಳೆ. ಯಜ್ಞ ಆರಂಭವಾದ ಬಳಿಕ ದಕ್ಷ ಶಿವನನ್ನು ಅವಮಾನಿಸುತ್ತಾನೆ. ಎಲ್ಲರ ಮುಂದೆ ಪತಿಗೆ ಆದ ಅವಮಾನವನ್ನು ಸಹಿಸದ ದಕ್ಷಣೆಯು ಮುಂದಿದ್ದ ಯಜ್ಞ ಕುಂಡಕ್ಕೆ ಹಾರಿ ಪ್ರಾಣ ತ್ಯಾಗ ಮಾಡುತ್ತಾಳೆ. ಹೀಗೆ ತನ್ನ ಶರೀರವನ್ನು ಭಸ್ಮವಾಗಿಸಿ ಮುಂದಿನ ಜನ್ಮದಲ್ಲಿ ಹಿಮವಂತನ ಪುತ್ರಿಯಾಗಿ ಜನಿಸಿದವಳೇ ಶೈಲ ಪುತ್ರಿ.

ಬ್ರಹ್ಮಚಾರಿಣಿ: ಕನ್ಯೆ ಪಾರ್ವತಿಯು ಶಿವನನ್ನು ಮದುವೆಯಾಗಲು ನಿರ್ಧರಿಸಿ ಸುಮಾರು ಐದು ಸಾವಿರ ವರ್ಷಗಳ ಕಾಲ ತಪಸ್ಸು ಮಾಡುತ್ತಾಳೆ. ಈ ಮಧ್ಯೆ ದೇವತೆಗಳು ಪ್ರೀತಿ ಮತ್ತು ಕಾಮದ ದೇವರಾದ ಕಾಮದೇವರನ್ನು ಸಂಪರ್ಕಿಸುತ್ತಾರೆ ಮತ್ತು ಪಾರ್ವತಿಗಾಗಿ ಶಿವನಲ್ಲಿ ಬಯಕೆಯನ್ನು ಹುಟ್ಟು ಹಾಕಲು ಕೇಳುತ್ತಾರೆ. ಶಿವನ ಮಗುವಿನಿಂದ ಮಾತ್ರ ಕೊಲ್ಲಲ್ಪಡುವ ತಾರಕಾಸುರನು ಅವರನ್ನು ಓಡಿಸುತ್ತಾನೆ. ಕಾಮದೇವನು ಶಿವನನ್ನು ಆಸೆಯ ಬಾಣದಿಂದ ಹೊಡೆದಾಗ ಶಿವನು ತನ್ನ ಮೂರನೇ ಕಣ್ಣನ್ನು ತೆರೆದು ಕಾಮನನ್ನು ಸುಟ್ಟು ಬೂದಿ ಮಾಡುತ್ತಾನೆ. ಆದರೆ ಪಾರ್ವತಿ ಶಿವನನ್ನು ಗೆಲ್ಲುವ ತನ್ನ ಸಂಕಲ್ಪ ಮತ್ತು ಭರವಸೆಯನ್ನು ಕಳೆದುಕೊಳ್ಳುವುದಿಲ್ಲ. ಅವಳು ಶಿವನಿರುವಂತಹ ಪರ್ವತಗಳಲ್ಲಿ ಇರಲು ಪ್ರಾರಂಭಿಸುತ್ತಾಳೆ ಹಾಗೂ ಅವನು ಮಾಡುವ ಚಟುವಟಿಕೆಗಳಲ್ಲಿ ತೊಡಗುತ್ತಾಳೆ. ಆಕೆಯ ತಪಸ್ವಿ ಅನ್ವೇಷಣೆಯು ಶಿವನ ಗಮನ ಸೆಳೆಯುತ್ತದೆ. ಈ ಸಮಯದಲ್ಲಿ ಪ್ರಖಂಡಾಸುರನು ತನ್ನ ಹಲವಾರು ಅಸುರರೊಂದಿಗೆ ಪಾರ್ವತಿಯ ಮೇಲೆ ಆಕ್ರಮಣವನ್ನು ಮಾಡುತ್ತಾನೆ. ಪಾರ್ವತಿಯು ತನ್ನ ತಪಸ್ಸನ್ನು ಪೂರ್ಣಗೊಳಿಸುವ ಕೊನೆಯ ಹಂತದಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಅಸಮರ್ಥಳಾಗಿದ್ದಳು. ಆಗ ಲಕ್ಷ್ಮೀ ಹಾಗೂ ಸರಸ್ವತಿ ದೇವತೆಗಳು ಮಧ್ಯ ಪ್ರವೇಶಿಸುತ್ತಾರೆ. ಅನೇಕ ದಿನಗಳ ನಡುವೆ ಹೋರಾಟ ನಡೆಯುತ್ತದೆ. ಆಗ ಪಾರ್ವತಿಯ ಪಕ್ಕದಲ್ಲಿರುವ ಕಮಂಡಲವು ಬೀಳುತ್ತದೆ. ಪರಿಣಾಮವಾಗಿ ಉಂಟಾಗುವ ಪ್ರವಾಹದಲ್ಲಿ ಎಲ್ಲಾ ರಾಕ್ಷಸರು ಕೊಚ್ಚಿಕೊಂಡು ಹೋಗುತ್ತಾರೆ. ಕೊನೆಗೆ ಪಾರ್ವತಿಯು ತನ್ನ ಕಣ್ಣನ್ನು ತೆರೆಯುತ್ತಾಳೆ, ಬೆಂಕಿಯನ್ನು ಹೊರ ಸೂಸುತ್ತಾಳೆ ಮತ್ತು ರಾಕ್ಷಸನನ್ನು ಬೂದಿ ಮಾಡುತ್ತಾಳೆ. ಕೊನೆಗೆ ಶಿವನು ಬ್ರಹ್ಮಚಾರಿಯ ವೇಷದಲ್ಲಿ ಪಾರ್ವತಿಯ ದರ್ಶನ ಪಡೆಯುತ್ತಾನೆ. ನಂತರ ಅವನು ಪಾರ್ವತಿಗೆ ಒಗಟುಗಳನ್ನು ನೀಡುವ ಮೂಲಕ ಪರೀಕ್ಷಿಸುತ್ತಾನೆ ಅದಕ್ಕೆ ಅವಳು ಸರಿಯಾಗಿ ಉತ್ತರಿಸುತ್ತಾಳೆ. ಕೊನೆಗೆ ಶಿವನು ತನ್ನ ನೈಜ ರೂಪದಲ್ಲಿ ಕಾಣಿಸಿಕೊಂಡನು ಮತ್ತು ಅಂತಿಮವಾಗಿ ಪಾರ್ವತಿಯನ್ನು ಸ್ವೀಕರಿಸುತ್ತಾನೆ ಅವಳ ತಪಸ್ಸನ್ನು ಮುರಿಯುತ್ತಾನೆ.

ಚಂದ್ರಘಂಟ್ಟ: ಶಿವ ಮತ್ತು ಪಾರ್ವತಿಯ ವಿವಾಹದ ಸಂದರ್ಭದಲ್ಲಿ ಕೈಲಾಸದ ಗಣಗಳೊಂದಿಗೆ ಶಿವನು ಪಾರ್ವತಿಯ ಅರಮನೆಯನ್ನು ಪ್ರವೇಶಿಸುತ್ತಾನೆ. ಅತಿ ಭಯಂಕರನಾಗಿ ಕಾಣುತ್ತಿದ್ದ ಶಿವನನ್ನು ನೋಡಿ ಪಾರ್ವತಿಯ ತಾಯಿ ಮೂರ್ಛೆ ಹೋಗುತ್ತಾಳೆ. ಆಗ ಪಾರ್ವತಿಯು ಚಂದ್ರಘಂಟ್ಟ ರೂಪದಲ್ಲಿ ಶಿವನ ಮುಂದೆ ಪ್ರತ್ಯಕ್ಷವಾಗಿ ಶಿವನು ರಾಜಕುಮಾರನ ರೂಪವನ್ನು ತಾಳಬೇಕಾಗಿ ವಿನಂತಿಸಿಕೊಳ್ಳುತ್ತಾಳೆ. ಹೀಗಾಗಿ ಶಿವನು ಸುಂದರ ವರನ ರೂಪವನ್ನು ತಾಳಿದ ನಂತರ ಶಿವ ಪಾರ್ವತಿಯ ಮದುವೆ ನೆರವೇರುತ್ತದೆ.

ಕೂಷ್ಮಾಂಡ: ಸೂರ್ಯನ ಒಳಭಾಗದಲ್ಲಿ ದೇವಿ ಕೂಷ್ಮಾಂಡ ವಾಸಿಸುತ್ತಾಳೆ ಮತ್ತು ಅಲ್ಲಿಂದ ಶಕ್ತಿಯನ್ನು ಪಡೆದುಕೊಳ್ಳುತ್ತಿದ್ದಾಳೆ. ಜನಪ್ರಿಯ ವೇದಾಂತ ಪ್ರಕಾರ, ಸೂರ್ಯ ಮತ್ತು ಸಂಪೂರ್ಣ ಸೌರ ವ್ಯವಸ್ಥೆಯನ್ನು ಆಕೆಯು ನಿಯಂತ್ರಿಸುತ್ತಿದ್ದಾಳೆ ಎಂದು ಉಲ್ಲೇಖಿಸಲಾಗಿದೆ.

ಸ್ಕಂದಮಾತಾ: ಇದು ಜಗತ್ ಕಲ್ಯಾಣ ರೂಪವಾಗಿದೆ. ತಾರಕಾಸುರನ ಉಪಟಳದಿಂದ ದೇವತೆಗಳು, ಭೂಮಿಯ ಜನರು ದುಃಖ ಪೀಡಿತರಾಗಿರುತ್ತಾರೆ. ತಾರಕಾಸುರನು ಬ್ರಹ್ಮನ ವರಬಲದಿಂದ ಕೊಬ್ಬಿರುತ್ತಾನೆ. ಶಿವ ಪಾರ್ವತಿಯರ ಪುತ್ರನಿಂದ ಮಾತ್ರವೇ ತನಗೆ ಮರಣ ಎಂದು ಅವನು ವರ ಪಡೆದಿರುತ್ತಾನೆ. ಪಾರ್ವತಿ ಹಾಗೂ ಶಿವನ ಮದುವೆಯಾದ ಬಳಿಕ ಸ್ಕಂದ ಅಥವಾ ಷಣ್ಮುಖನು ಜನ್ಮತಾಳುತ್ತಾನೆ. ಷಣ್ಮುಖನನ್ನೇ ತಮ್ಮ ದೇವ ಸೈನ್ಯಕ್ಕೆ ದೇವತೆಗಳು ಸೇನಾಧಿಗಳಾಗಿಸಿಕೊಳ್ಳುತ್ತಾರೆ. ದೇವಿಯು ಸೇರಿದಂತೆ ಸರ್ವರೂ ಈತನಿಗೆ ತಮ್ಮ ಶಕ್ತಿಗಳನ್ನು ನೀಡುತ್ತಾರೆ. ಸ್ಕಂದನು ದೇವಸೇನಾ ಸಮೇತನಾಗಿ ತೆರಳಿ ತಾರಕಾಸುನನನ್ನು ಘೋರ ಯುದ್ಧದಲ್ಲಿ ಕೊಂದು ಮರಳುತ್ತಾನೆ. ಹೀಗೆ ಜಗತ್ ಕಲ್ಯಾಣ ಕಾರಕನಾದ ಸ್ಕಂದನನ್ನು ಹೆತ್ತು ಕೊಟ್ಟ ಈಕೆ ಸ್ಕಂದ ಮಾತೆ ಎನಿಸಿಕೊಳ್ಳುತ್ತಾಳೆ.

ಕಾತ್ಯಾಯಿನಿ: ಮಹರ್ಷಿ ಕಾತ್ಯಾಯನರು ದೇವಿ ಆದಿಶಕ್ತಿಗಾಗಿ ತೀವ್ರ ತಪಸ್ಸು ಮಾಡಿದರು. ಪರಿಣಾಮವಾಗಿ ಅವರು ದೇವಿಯನ್ನು ತಮ್ಮ ಮಗಳಾಗಿ ಪಡೆದರು. ದೇವಿ ಪಾರ್ವತಿಯು ಅಶ್ವಿನಿ ತಿಂಗಳ ಕೃಷ್ಣ ಪಕ್ಷದ ಚತುರ್ದಶಿಯಂದು ಮಹರ್ಷಿ ಕಾತ್ಯಾಯನರ ಆಶ್ರಯದಲ್ಲಿ ಜನಿಸಿದಳು. ಕಾತ್ಯಾಯನರ ಮಗಳಾದ ಕಾರಣದಿಂದ ಅವಳನ್ನು ಕಾತ್ಯಾಯಿನೆಂದು ಕರೆಯಲಾಗುತ್ತದೆ. ದೇವಿ ಜನಿಸುವ ಮುನ್ನ ಮಹಿಷಾಸುರನೆಂಬ ರಾಕ್ಷಸನ ದೌರ್ಜನ್ಯವು ಲೋಕದಲ್ಲಿ ಬಹಳಷ್ಟು ಹೆಚ್ಚಾಗಿತ್ತು ಇವರು ಸ್ವರ್ಗ ಹಾಗೂ ಭೂಮಿಯಲ್ಲಿ ಗದ್ದಲ ಸೃಷ್ಟಿಸಿದ್ದರು. ನಂತರ ಮಹಿಷಾಸುರನನ್ನು ಕಾತ್ಯಾಯಿನಿ ದೇವಿಯು ಸಂಹಾರ ಮಾಡಿದಳು.

ಕಾಳರಾತ್ರಿ: ಮಾತೆ ಕಾಳರಾತ್ರಿಯು ಕಪ್ಪು ಮೈಬಣ್ಣವನ್ನು ಹೊಂದಿರುತ್ತಾರೆ. ಒಮ್ಮೆ ಶುಂಭ ಮತ್ತು ನಿಶುಂಭ ಎಂಬ ಇಬ್ಬರು ರಾಕ್ಷಸರು ದೇವಲೋಕವನ್ನು ಆಕ್ರಮಿಸಿಕೊಂಡಿದ್ದರು. ಅದಕ್ಕಾಗಿ ದೇವತೆಯರು ಮಾತೆ ಪಾರ್ವತಿಯನ್ನು ಪ್ರಾರ್ಥಿಸಿದರು. ಅವಳು ದೇವತೆಗಳಿಗೆ ಸಹಾಯ ಮಾಡಲು ಚಂಡಿ ಎಂಬ ಮತ್ತೊಂದು ದೇವತೆಯನ್ನು ಸೃಷ್ಟಿಸಿದಳು. ಚಂಡ ಮುಂಡ ಶುಂಭ ನಿಶುಂಭ ಅವರು ಅವಳೊಂದಿಗೆ ಯುದ್ಧಕ್ಕೆ ಬಂದಾಗ ಚಂಡಿ ದೇವಿಯು ಕಾಳಿ ಕಡು ದೇವತೆಯನ್ನು ಸೃಷ್ಟಿಸಿದಳು. ಕಾಳಿ/ಕಾಳರಾತ್ರಿ ದೇವಿಯು ಅವರನ್ನು ಕೊಂದು ಆ ಮೂಲಕ ಚಾಮುಂಡಿ ಎಂದು ಹೆಸರನ್ನು ಪಡೆದರು.

ಮಹಾಗೌರಿ: ಗೌರಿ ದೇವಿಯು ಕನ್ಯೆಯಾಗಿದ್ದು ತನ್ನ ಪತಿಯಾಗಿ ಶಿವನನ್ನು ಪಡೆಯಲು ಕಠಿಣ ತಪಸ್ಸು ಮಾಡಿದಳು. ಇದರಿಂದಾಗಿ ಅವಳ ಚರ್ಮದ ಮೇಲೆ ಧೂಳು ನೆಲೆಸಿಕೊಂಡು ಅವಳು ಕಪ್ಪಾಗಿದ್ದಳು. ಶಿವನು ಅವಳ ತಪಸ್ಸಿಗೆ ಸಂತೋಷಪಟ್ಟನು ಮತ್ತು ಅವಳಿಗೆ ಮದುವೆಯ ಭರವಸೆ ನೀಡಿದರು. ಗಂಗಾ ನದಿಯ ಪವಿತ್ರ ನೀರನ್ನು, ಪಾರ್ವತಿ ದೇವಿಯ ಮಣ್ಣು ಮತ್ತು ಧೂಳು ತೊಳೆಯಲು ಬಳಸಲಾಗಿತ್ತು. ಆಗ ಆಕೆಯ ಚರ್ಮವು ಬಿಳಿ ಬಣ್ಣಕ್ಕೆ ತಿರುಗಿತ್ತು ಅವಳು ಮಹಾಗೌರಿ ಎಂದು ಕರೆಯಲ್ಪಟ್ಟಳು.

ಸಿದ್ಧಿದಾತ್ರಿ: ಪರಮದೇವಿ ತ್ರಿಮೂರ್ತಿಗಳಾದ ಬ್ರಹ್ಮ ವಿಷ್ಣು ಮತ್ತು ಶಿವನಿಗೆ ಜನ್ಮ ನೀಡಿದಳು. ಜಗತ್ತಿಗೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಅವರ ಪಾತ್ರಗಳನ್ನು ಅರ್ಥಮಾಡಿಕೊಳ್ಳಲು, ಆಲೋಚಿಸಲು ಅವರು ಮೂವರು ಪ್ರಭುಗಳಿಗೆ ಸಲಹೆ ನೀಡಿದಳು. ಮಹಾ ಶಕ್ತಿ ದೇವಿಯ ಮಾತಿನಂತೆ ವರ್ತಿಸುತ್ತಾ ತ್ರಿಮೂರ್ತಿಗಳು ಸಮುದ್ರದ ಬಳಿ ಕುಳಿತು ಅನೇಕ ವರ್ಷಗಳ ಕಾಲ ತಪಸ್ಸು ಮಾಡಿದರು. ಪ್ರಸನ್ನಳಾದ ದೇವಿಯು ಸಿದ್ದಿಧಾತ್ರಿ ರೂಪದಲ್ಲಿ ಅವರ ಮುಂದೆ ಕಾಣಿಸಿಕೊಂಡರು ನಂತರ ಅವಳು ಲಕ್ಷ್ಮೀ, ಸರಸ್ವತಿ ಮತ್ತು ಪಾರ್ವತಿಯನ್ನು ಸೃಷ್ಟಿಸಿದಳು. ಸಿದ್ದಿಧಾತ್ರಿಯು ಬ್ರಹ್ಮನಿಗೆ ಪ್ರಪಂಚವನ್ನು ಸೃಷ್ಟಿಸಲು, ವಿಷ್ಣುವಿಗೆ ಸೃಷ್ಟಿ ಮತ್ತು ಅದರ ಜೀವಿಗಳನ್ನು ಸಂರಕ್ಷಿಸುವ ಪಾತ್ರ ಹಾಗೂ ಶಿವನಿಗೆ ಸಮಯ ಬಂದಾಗ ಸೃಷ್ಟಿಯನ್ನು ನಾಶಗೊಳಿಸುವ ಪಾತ್ರವನ್ನು ನೀಡಿದಳು.

ಹೀಗೆ ದೇವಿಯು ಪ್ರಪಂಚದ ಸೃಷ್ಟಿಗೆ ಕಾರಣವಾಗಿದ್ದಾರೆ. ದೇವಿಯ ಅದ್ಭುತ ನವಶಕ್ತಿಗಳು ಪ್ರಪಂಚದ ರಕ್ಷಣೆಯನ್ನು ಮಾಡಿತ್ತು ಹಾಗೂ ಸ್ತ್ರೀಯರಿಗೆ ಈ ನವಶಕ್ತಿಯು ಧೈರ್ಯ ಹಾಗೂ ಶೌರ್ಯವನ್ನು ಹೆಚ್ಚಿಸಲು ಸಹಾಯ ಮಾಡುತಿತ್ತು.

ವೇದ್ಯಾಶ್ರೀ ತಂತ್ರಿ

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!