ರಾಮೇಶ್ವರಮ್ ನಿಂದ ಸುಮಾರು ಇಪ್ಪತ್ತು ಕಿಮೀ ದೂರವಿರುವ ಧನುಷ್ಕೋಡಿಯ ರೈಲ್ವೇ ಸ್ಟೇಷನ್ ಮಾಸ್ಟರ್ ಸುಂದರ್ ರಾಜನ್ ಅಂದು ಡ್ಯೂಟಿ ಮುಗಿಸಿ ಮನೆಗೆ ಬಂದಾಗ ಅದು ಧನುಷ್ಕೋಡಿಯಲ್ಲಿ ತನ್ನ ಕೆಲಸದ ಕೊನೆಯ ದಿನವಾಗುತ್ತದೆಯೆಂದು ಅವರಿಗೆ ತಿಳಿದಿರಲಿಲ್ಲ.
ಅದು 1964ನೇ ಇಸವಿಯ ಡಿಸೆಂಬರ್ 22ನೇ ತಾರೀಕು. ರಾತ್ರಿ ಒಂಬತ್ತು ಗಂಟೆ ಹೊತ್ತಿಗೆ ಊಟಕ್ಕೆ ಕುಳಿತಾಗ ಹೊರಗೆ ಹೊಡೆಯುತ್ತಿದ್ದ ಸುಂಟರಗಾಳಿಗೆ ಅವರ ಮೂವರು ಪುಟ್ಟ ಮಕ್ಕಳು ಹೆದರಿ ಕುಳಿತಿದ್ದವು. ರಾತ್ರಿ ಹನ್ನೆರಡು ಗಂಟೆಗೆ ಅವರ ಐದು ವರ್ಷದ ಹಿರಿಮಗ ಎಬ್ಬಿಸಿದಾಗ ಮನೆಯ ಬಾಗಿಲಿನ ಸೆರೆಯಿಂದ ಒಳನುಗ್ಗುತ್ತಿದ್ದ ನೀರನ್ನು ನೋಡಿ ಬಾಗಿಲು ತೆರೆದವರೇ ಕಂಗಾಲಾದರು. ಮೂರ್ನಾಲ್ಕು ಅಡಿಗಳಷ್ಟಿದ್ದ ನೀರು ಮನೆಯೊಳಗೆ ನುಗ್ಗಿದಾಗ ಬೇರೆ ವಿಧಿಯಿಲ್ಲದೆ ಪುಟ್ಟ ಮಕ್ಕಳನ್ನು ಹೆಗಲ ಮೇಲೆ ಕೂರಿಸಿಕೊಂಡು ಕುತ್ತಿಗೆಯವರೆಗೆ ಮುಟ್ಟಿದ್ದ ನೀರಿನಲ್ಲಿ ನಡೆಯುತ್ತಲೇ ಕಷ್ಟಪಟ್ಟು ರೈಲ್ವೇ ಸ್ಟೇಷನ್ ತಲುಪಿದರು.
ಇದೇ ಹೊತ್ತಿಗೆ ರೈಲ್ವೇ ಸ್ಟೇಷನ್ನಿನ ಕೆಲವೇ ಫರ್ಲಾಂಗುಗಳ ಆಚೆ ದೊಡ್ಡ ದುರಂತವೊಂದು ನಡೆದುಹೋಗಿತ್ತು. ಪಂಬನ್ ಸ್ಟೇಷನ್ ನಿಂದ ಹೊರಟ ‘ಪಂಬನ್-ಧನುಷ್ಕೋಡಿ ಪ್ಯಾಸೆಂಜರ್ ಟ್ರೇನ್’ (No. 653) 11:55 ಕ್ಕೆ ಧನುಷ್ಕೋಡಿ ಸ್ಟೇಷನನ್ನು ತಲುಪಬೇಕಾಗಿತ್ತು. ಆದರೆ ಅಲ್ಲಿಂದ ಯಾವುದೇ ಸಿಗ್ನಲ್ ಬರದೇ ಇದ್ದಾಗ ಗಾಢ ಅಂಧಕಾರದಲ್ಲಿ ಏನು ಮಾಡಬೇಕೆಂದು ತೋಚದೆ ಡ್ರೈವರ್ ರೈಲನ್ನು ಮುಂದಕ್ಕೆ ತಂದೇಬಿಟ್ಟರು. ಅಷ್ಟರಲ್ಲೇ 280km/h ವೇಗದಲ್ಲಿ ಹೊಡೆದ ಸುಂಟರಗಾಳಿ ಸುಮಾರು 23 ಅಡಿಯಷ್ಟು ಎತ್ತರಕ್ಕೆ ಸುನಾಮಿ ರೀತಿಯ ಅಲೆಗಳನ್ನು ಎಬ್ಬಿಸಿ ಆ ರೈಲಿನ ಜೊತೆಗೆ ಧನುಷ್ಕೋಡಿಯೆಂಬ ಪಟ್ಟಣವನ್ನೇ ತನ್ನೊಳಗೆ ಸ್ವಾಹಾ ಮಾಡಿಬಿಟ್ಟಿತ್ತು.
ಅಂದಿನಿಂದ ಇಂದಿನವರೆಗೂ ಧನುಷ್ಕೋಡಿಯದ್ದು ಕರಾಳ ಕತೆಯೇ. ರಾಮೇಶ್ವರ (ಪಂಬನ್) ದ್ವೀಪದ ಆಗ್ನೇಯ ದಿಕ್ಕಿಗೆ ಇಪ್ಪತ್ತು ಕಿಮೀ ಉದ್ದಕ್ಕೆ ಸಮುದ್ರದಲ್ಲಿ ಚಾಚಿಕೊಂಡಿರುವ ಸಪೂರವಾದ ಭೂಭಾಗದ ತುದಿಯಲ್ಲಿದೆ ಧನುಷ್ಕೋಡಿ. ಎಡಭಾಗದಲ್ಲಿ ಹಸಿರು ಬಣ್ಣದ ಬಂಗಾಳಕೊಲ್ಲಿ ಮತ್ತು ಬಲಭಾಗದಲ್ಲಿ ನೀಲಿ ಹಿಂದೂ ಮಹಾಸಾಗರವನ್ನು ಹೊಂದಿದ್ದು, ಈ ಎರಡು ಜಲರಾಶಿಗಳ ಸಂಗಮವಾಗುವುದು ಕೂಡ ಇಲ್ಲೇ. ಶ್ರೀಲಂಕಾ ಇಲ್ಲಿಂದ ಕೇವಲ ಮೂವತ್ತೊಂದು ಕಿಮೀ ದೂರವಿರುದರಿಂದ ಇದು ಬ್ರಿಟಿಷರ ಕಾಲದಿಂದಲೂ ಬಿರುಸಿನ ಚಟುವಟಿಕೆಗಳ ಕೇಂದ್ರವಾಗಿತ್ತು.
ರೈಲ್ವೇ ಸ್ಟೇಷನ್, ಬಂದರು, ಹೈಯರ್ ಸೆಕೆಂಡರಿ ಶಾಲೆ, ಆಸ್ಪತ್ರೆ, ಪೋಸ್ಟ್ ಆಫೀಸು, ಕಸ್ಟಮ್ಸ್ ಆಫೀಸು, ಪಂಚಾಯತ್, ಹೋಟೆಲುಗಳು, ಚರ್ಚು, ದೇವಾಲಯವನ್ನು ಹೊಂದಿದ್ದು ಮೀನುಗಾರಿಕೆಗೂ ಹೆಸರುವಾಸಿಯಾಗಿತ್ತು. ಇಷ್ಟೇ ಅಲ್ಲದೆ ಧನುಷ್ಕೋಡಿಗೆ ರಾಮಾಯಣದ ಹಿನ್ನೆಲೆಯಿದೆ. ಸೀತೆಯನ್ನು ಹುಡುಕುತ್ತಾ ಬಂದ ರಾಮಲಕ್ಷ್ಮಣರು ವಾನರರ ಸಹಾಯದಿಂದ ರಾಮಸೇತುವನ್ನು ಕಟ್ಟಲು ಶುರು ಮಾಡಿದ್ದು ಇಲ್ಲಿಂದಲೇ ಅಂತೆ.
ರಾವಣನನ್ನು ಕೊಂದು ಹಿಂದಿರುವಾಗ ರಾಮಸೇತುವನ್ನು ಮುರಿದುಹಾಕಲು ವಿಭೀಷಣ ರಾಮನಿಗೆ ವಿನಂತಿಸುತ್ತಾನಂತೆ. ಆ ಸೇತುವೆಯ ಮೂಲಕ ರಾಕ್ಷಸರು ಬಂದು ಕಾಟ ಕೊಡುವರೆಂಬ ಸಂಶಯ ವಿಭೀಷಣನಿಗಿರಬಹುದು. ಆಗ ರಾಮ ಸೇತುವೆಯ ಮಧ್ಯಕ್ಕೆ ತನ್ನ ಬಿಲ್ಲಿನಿಂದ ಬಾಣವೊಂದನ್ನು ಬಿಟ್ಟು ಸೇತುವೆಯನ್ನು ಮುರಿಯುತ್ತಾನಂತೆ. ಹಾಗಾಗಿ ಆ ಸ್ಥಳಕ್ಕೆ ‘ಧನುಷ್ ಕೊಡಿ’ (ಬಿಲ್ಲಿನ ತುದಿ) ಎಂಬ ಹೆಸರು ಬಂತು ಎಂಬ ಕತೆಯಿದೆ.
ಮದರಾಸಿನ ಎಗ್ಮೋರಿನಿಂದ ಹೊರಡುತ್ತಿದ್ದ ‘ಬೋಟ್ ಮೇಯಿಲ್’ ಎಂದು ಕರೆಯಲ್ಪಡುತ್ತಿದ್ದ ಪ್ಯಾಸೆಂಜರ್ ರೈಲು ಧನುಷ್ಕೋಡಿಯ ಕೊನೆಯ ಸ್ಟಾಪ್ ನಲ್ಲಿ ಪ್ರಯಾಣ ಮುಗಿಸುತ್ತಿತ್ತು. ಅಲ್ಲಿಂದ ಶ್ರೀಲಂಕೆಗೆ ಜನರು ಬೋಟಿನಲ್ಲಿ ಪ್ರಯಾಣ ಮುಂದುವರೆಸುತ್ತಿದ್ದರು. 1964, ಡಿಸೆಂಬರ್ ಇಪ್ಪತ್ತೆರಡರಂದು ಆ ರೈಲಿನಲ್ಲಿ ಟಿಕೆಟ್ ಕೊಂಡವರ ಸಂಖ್ಯೆ ಒಂದು ನೂರ ಹತ್ತಾದರೂ, ರಾತ್ರಿ ಹೊತ್ತು ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಜನರ ಸಂಖ್ಯೆಯೂ ಜಾಸ್ತಿಯೇ ಇರುತ್ತಿತ್ತು. ಹಾಗಾಗಿ ಅಂದು ಕೊಚ್ಚಿ ಹೋದ ಆರು ಬೋಗಿಯ ರೈಲಿನಲ್ಲಿ ಐದು ಜನ ಸಿಬ್ಬಂದಿಯ ಸಹಿತ ಕಡಿಮೆಯೆಂದರೂ ಇನ್ನೂರು ಜನರಿರಬಹುದೆಂದು ಊಹಿಸಲಾಗಿದೆ. ಒಟ್ಟು 1500-2000 ಜನರ ಸಾವಾಗಿದೆಯೆಂದು ಊಹಿಸಲಾಗಿದೆ ಅಷ್ಟೇ. ನಿಖರವಾದ ಸಂಖ್ಯೆ ಎಷ್ಟೆಂದು ಗೊತ್ತಿಲ್ಲ.
ಈ ನಡುವೆ ನಾಲ್ಕು ಜನ ರೇಡಿಯೋ ಮೆಸೆಜ್ ಕಳುಹಿಸುವ ಸಿಬ್ಬಂದಿಗಳು ಆ ಸುಂಟರಗಾಳಿಯಲ್ಲೂ ಜೀವದ ಹಂಗು ತೊರೆದು ರೇಡಿಯೋ ಮೆಸೇಜ್ ಕಳುಹಿಸಿದ್ದರು. ನಂತರ ಮುರಿದು ಹೋದ ಪಂಬನ್ ಸೇತುವೆಗೆ ಹನ್ನೆರಡು ಗಂಟೆಗಳ ಕಾಲ ಅಂಟಿಕೊಂಡು ಜೀವ ಉಳಿಸಿಕೊಂಡಿದ್ದರು. ಇವರ ಸಾಹಸಕ್ಕೆ ಸರಕಾರದಿಂದ ಮೆಚ್ಚುಗೆ ದೊರಕಿದೆ. ಆದರೆ ದುಃಖದ ವಿಷಯವೆಂದರೆ ಈ ಘಟನೆ ನಡೆದು ನಲವತ್ತೆಂಟು ಗಂಟೆಗಳ ನಂತರ ರಕ್ಷಣಾ ಕೆಲಸ ಶುರುವಾದದ್ದು. ಶವಗಳು ತೇಲಿಕೊಂಡು ರಾಮೇಶ್ವರಮ್ ಕಿನಾರೆಗೆ ಬಂದು ಮುಟ್ಟಿದಾಗ, ಬೋಟುಗಳನ್ನು ಕಳಿಸಿ ಬದುಕಿದ್ದವರನ್ನು ರಕ್ಷಿಸಲಾಯಿತು. ಹಾಗೆ ಬದುಕಿದವರಲ್ಲಿ ಅಲ್ಲಿನ ಪೋಸ್ಟ್ ಮಾಸ್ಟರ್ ಕುಟುಂಬ ಕೂಡ ಒಂದು. ಊರಿಗೆ ಊರೇ ಕೊಚ್ಚಿಕೊಂಡು ಹೋಗಿ, ಅಲ್ಲಿಯ ಘೋರ ಪರಿಸ್ಥಿತಿಯನ್ನು ನೋಡಿ ಆಗಿನ ರಾಜ್ಯ ಸರ್ಕಾರ ಧನುಷ್ಕೋಡಿಯನ್ನು ‘ಘೋಸ್ಟ್ ಸಿಟಿ’ ಎಂದು ಘೋಷಿಸಿ ತೆಪ್ಪಗಾಯಿತು.
ಅಂದಿನಿಂದ ಇಂದಿನವರೆಗೂ ಧನುಷ್ಕೋಡಿ ಶಾಪಗ್ರಸ್ತ ಗಂಧರ್ವನಂತಿದೆ. ಹೋಗಲು ರಸ್ತೆಯೂ ಇಲ್ಲದೆ ಮೂಲೆಗುಂಪಾಗಿದ್ದಾಗ 2014ರ ನಂತರ ಕೇಂದ್ರ ಸರ್ಕಾರ ಆಸಕ್ತಿ ವಹಿಸಿ ಒಳ್ಳೆಯ ರಸ್ತೆಯನ್ನು ಮಾಡಿಕೊಟ್ಟಿದೆ. ಹಾಗಾಗಿ ಒಂದಿಷ್ಟು ಬೆಸ್ತರ ಕುಟುಂಬಗಳು ಪುನಃ ತಮ್ಮೂರಿಗೆ ತೆರಳಿ, ಪ್ರವಾಸಿಗರಿಗೆ ಮೀನಿನೂಟ ಬಡಿಸುತ್ತಿವೆ. ಇಲ್ಲಿ ವಿದ್ಯುಚ್ಛಕ್ತಿಯ ಸೌಲಭ್ಯ ಇವತ್ತಿಗೂ ಇಲ್ಲ . ಹಾಗಾಗಿ ಬೀದಿ ದೀಪಗಳೂ ಇಲ್ಲ. ಗುಡಿಸಲುಗಳಿಗೆ ಸೋಲಾರ್ ಪ್ಯಾನೆಲ್ ಹಾಕಿ ಬಲ್ಬು ಉರಿಸುವಷ್ಟು ವಿದ್ಯುತ್ ಪಡೆಯುತ್ತಾರೆ ಅಷ್ಟೇ.
ಕುಡಿಯುವ ನೀರು ರಾಮೇಶ್ವರಮ್ ನಿಂದ ಟ್ಯಾಂಕರ್ ನಲ್ಲಿ ಕಳಿಸಲಾಗುತ್ತದೆ. ಕೆಲವು ಕಡೆ ಜನರೇ ಮರಳಿನಲ್ಲಿ ಕುಳಿಗಳನ್ನು ತೋಡಿ ಸ್ವಲ್ಪ ಮಟ್ಟಿಗಿನ ಸಿಹಿನೀರನ್ನು ಪಡೆಯುತ್ತಾರೆ. ಇಲ್ಲಿ ಮೊಬೈಲ್ ನೆಟ್ವರ್ಕ್ ಕೂಡ ಸಿಗುವುದಿಲ್ಲ. ಎಳನೀರು, ಸೌತೆಕಾಯಿ, ಶಂಖ, ಚಿಪ್ಪಿನ ಆಭರಣಗಳ ಅಂಗಡಿಗಳು ಸಾಲಾಗಿ ಇದ್ದರೂ ಪ್ರವಾಸಿಗರಿಗೆ ಒತ್ತಾಯ ಮಾಡಿ ಕಾಟ ಕೊಡುವವರಿಲ್ಲ. ಈ ದುರಂತದಲ್ಲಿ ಮಡಿದವರ ನೆನಪಿಗಾಗಿ ಒಂದು ಕಂಬವನ್ನು ಇಲ್ಲಿ ನೆಡಲಾಗಿದೆ.
ದಾರಿಯುದ್ದಕ್ಕೂ ಎರಡೂ ಕಡೆ ಏರಿಳಿಯುವ ತೆರೆಗಳನ್ನು ನೋಡುತ್ತಾ, ಪ್ರಕೃತಿಯ ಸೌಂದರ್ಯವನ್ನು ಆರಾಧಿಸುತ್ತಾ ಡ್ರೈವ್ ಹೋಗುವುದು ಒಂದು ಸುಂದರವಾದ ಅನುಭವ. ಆದರೆ ಅದೇ ಪ್ರಕೃತಿ ಮುನಿದಾಗ ಏನಾಗುವುದೆಂಬುದಕ್ಕೆ ಸಾಕ್ಷಿ ಕೂಡ ಇಲ್ಲಿಯೇ ದೊರಕುವುದು. ಬ್ರಿಟಿಷರ ಕಾಲದ ಧನುಷ್ಕೋಡಿಯ ಫೋಟೋಗಳನ್ನು ಬೋರ್ಡ್ ಒಂದರಲ್ಲಿ ನೋಡಿ, ನಂತರದ ದುರಂತದ ಪಳೆಯುಳಿಕೆಗಳನ್ನು ನೋಡುವಾಗ ಮನದ ಮೂಲೆಯಲ್ಲಿ ಸಣ್ಣದೊಂದು ನೋವಿನ ಅನುಭವ.
ಆದರೆ ಇಲ್ಲಿ ಯಾವುದೂ ಶಾಶ್ವತ ಅಲ್ಲವಲ್ಲ.
-ವಾಣಿ ಸುರೇಶ್ ಕಾಮತ್