Sunday, January 19, 2025
Sunday, January 19, 2025

ಜ್ಞಾನ-ಮೋಕ್ಷಕ್ಕೆ ದಾರಿದೀಪ ಸಪ್ತ ಚಕ್ರಗಳು

ಜ್ಞಾನ-ಮೋಕ್ಷಕ್ಕೆ ದಾರಿದೀಪ ಸಪ್ತ ಚಕ್ರಗಳು

Date:

ಭೂಮಿಯಲ್ಲಿರುವ ಪ್ರತಿಯೊಂದು ಬುದ್ಧಿಜೀವಿಯು ಅದರಲ್ಲಿಯೂ ಮುಖ್ಯವಾಗಿ ಮನುಷ್ಯ ತನ್ನ ಜೀವನ ಅನ್ವೇಷಣೆಯಲ್ಲಿ ತೊಡಗಿರುತ್ತಾನೆ. ಆದರೆ ಈ ಅನ್ವೇಷಣೆ ಯಾವ ರೀತಿ ಸಾಧ್ಯ? ಚಕ್ರ…ಕೇಳಲು ವಿಶಿಷ್ಟವಾಗಿ ಅನಿಸಿದರೂ ಯೋಗ ಮತ್ತು ಧ್ಯಾನವು ಇದನ್ನು ತಿಳಿಸುತ್ತದೆ. ಸನಾತನ ಧರ್ಮದಲ್ಲಿ ಮನುಷ್ಯನ ದೇಹದಲ್ಲಿರುವ ಚಕ್ರಗಳಿಗೆ ತುಂಬಾ ಮಹತ್ವವಿದೆ. “ನಾನು‌ ನನ್ನದೇ ಇತಿಮಿತಿಗಳಿಂದ ಇದ್ದೇನೆ ಆದರೆ ಯಾವುದೇ ಇತಿಮಿತಿಗಳಿಲ್ಲದೆ’ ಎಂಬ ಮಾತು ವಿಚಿತ್ರವಾಗಿ ಅನಿಸಿದರೂ ಇದನ್ನು ಜೀವನದಲ್ಲಿ ಸಾಧಿಸಲು ಸಪ್ತ ಚಕ್ರಗಳು ಸಹಕಾರಿಯಾಗಿದೆ.

ಮಾನವನ ದೇಹದಲ್ಲಿ ಅಂದರೆ ಬೆನ್ನುಮೂಳೆಯ ಬುಡದಿಂದ ಹಿಡಿದು ತಲೆಯ ಕಿರೀಟದವರೆಗೆ ಕಾಮನಬಿಲ್ಲಿನ ಏಳು ಬಣ್ಣಗಳಲ್ಲಿರುವ ಶಕ್ತಿ ಇರುತ್ತದೆ. ಇದನ್ನು ಔರಾ ಎಂದು ಸರಳವಾಗಿ ಕರೆಯುತ್ತಾರೆ. ಈ ಶಕ್ತಿಗಳನ್ನು ದೇಹದಲ್ಲಿ ಕೇಂದ್ರಿಕೃತಗೊಳಿಸಿ ಪ್ರಾಣಿ ಮಾತ್ರನಾದ ಮಾನವನನ್ನು ದೈವತ್ವಕ್ಕೆ ಏರಿಸಲು ಮನಸ್ಸನ್ನು ಜಾಗೃತಿಗೊಳಿಸುವುದೇ ಈ ಸಪ್ತ ಚಕ್ರಗಳು. ಚಕ್ರ ಎಂಬ ಪದವು ಭಾರತದ ದೇವ ಭಾಷೆ ಎಂದು ಕರೆಯುವ ಸಂಸ್ಕೃತದಿಂದ ನಿಷ್ಪನ್ನವಾಗಿರುತ್ತದೆ.

ಮನುಷ್ಯ ದೇಹದಲ್ಲಿ 1,72,000 ನಾಡಿಗಳಿವೆ. ಪ್ರತಿಯೊಂದು ನಾಡಿಯು ಜೀವ ಶಕ್ತಿಯ ವಾಹಕಗಳಾಗಿದ್ದು ಈ 1,72,000 ನಾಡಿಗಳಲ್ಲಿ ಪ್ರಮುಖವಾಗಿ 109 ಮುಖ್ಯ ನರಕೇಂದ್ರಗಳಿವೆ. ಈ 109 ನರಕೇಂದ್ರಗಳಲ್ಲಿ 9 ಅತ್ಯಂತ ಪ್ರಮುಖವಾದ ಕೇಂದ್ರಗಳಿದ್ದು ಇದರಲ್ಲಿ ಏಳು ಪ್ರಾಥಮಿಕ ನರಕೇಂದ್ರಗಳು ಅಥವಾ ಚಕ್ರಗಳು ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ. ಈ ಏಳು ಚಕ್ರಗಳು ಪ್ರಜ್ಞೆ, ಭಾವನೆ, ಸಂವೇದನೆ ಮತ್ತು ಅನುಭವಗಳಂತಹ ಸಂಗತಿಗಳನ್ನು ಒಳಗೊಂಡಿದೆ. ಈ ಏಳು ಚಕ್ರಗಗಳನ್ನು ವಿಶೇಷ ಹೆಸರುಗಳಿಂದ ಕರೆಯಲಾಗುವುದು. ಅವುಗಳೆಂದರೆ- ಮೂಲಾಧಾರ ಚಕ್ರ, ಸ್ವಾಧಿಷ್ಠಾನ ಚಕ್ರ, ಮಣಿಪೂರ ಚಕ್ರ, ಅನಾಹತ ಚಕ್ರ, ವಿಶುದ್ಧಿ ಚಕ್ರ, ಆಜ್ಞಾ ಚಕ್ರ, ಸಹಸ್ರಾರ ಚಕ್ರ.

ಪ್ರತಿಯೊಂದು ಚಕ್ರವು ಕಾಮನಬಿಲ್ಲಿನ 7 ಬಣ್ಣಗಳನ್ನು ಒಳಗೊಂಡಿದ್ದು, ಇಂದ್ರಿಯ, ಧ್ಯಾನ ಹಾಗೂ ಯೋಗದ ಪ್ರಮುಖ ತತ್ವಗಳನ್ನು ಮಾತ್ರವಲ್ಲದೇ ಯಾವ ವಯಸ್ಸಿನಲ್ಲಿ ಯಾವ ಚಕ್ರದ ಫಲವು ಲಭಿಸುತ್ತದೆ ಎಂಬುದನ್ನೂ ಸಹ ತಿಳಿಸಿಕೊಡುತ್ತದೆ.

ಮೂಲಧಾರ ಚಕ್ರ: ಮೂಲ ಎಂದರೆ ಬೇರು. ಈ ಚಕ್ರವು ಶರೀರದ ಅಡಿಪಾಯವಾಗಿದ್ದು ಸಾಂಕೇತಿಕವಾಗಿ ಕೆಂಪು ವರ್ಣವನ್ನು ಸೂಚಿಸುತ್ತದೆ‌‌. ಇದು ಮನುಷ್ಯನ ಮನಸ್ಸು, ಬುದ್ಧಿ, ಚಿತ್ತ ಮತ್ತು ಅಹಂಕಾರ ಎಂಬ ನಾಲ್ಕು ಗುಣಗಳನ್ನು ತಿಳಿಸುತ್ತದೆ. ಧ್ಯಾನದಲ್ಲಿ “ಲಂ’ ಎಂಬ ಬೀಜ ಮಂತ್ರವನ್ನು ಪಠಿಸುವುದರ ಮೂಲಕ ಇವುಗಳನ್ನು ನಿಯಂತ್ರಣದಲ್ಲಿ ಇಡಬಹುದು. ಇಂದ್ರಿಯದಲ್ಲಿ ವಾಸನೆ, ಯೋಗದಲ್ಲಿ ಪದ್ಮಾಸನ ಮತ್ತು ಹುಟ್ಟಿನಿಂದ 7 ವರ್ಷ ಹಾಗೂ 50-56 ವರ್ಷಗಳಲ್ಲಿ ಈ ಚಕ್ರದ ಪ್ರಭಾವವು ಇರುತ್ತದೆ.

ಸ್ವಾಧಿಷ್ಠಾನ: ಈ ಚಕ್ರವು ಮನುಷ್ಯ ದೇಹದ ನಾಭಿಯ ತಳಭಾಗದಲ್ಲಿ ಕಿತ್ತಳೆ ಹಣ್ಣಿನ ಬಣ್ಣದಿಂದ ರೂಪುಗೊಂಡಿದ್ದು ಜಲಾಧಿಪತಿಯಾದ ಈ ಚಕ್ರವು ಸೃಜನ ಶೀಲತೆ, ಉತ್ಸಾಹ, ಆಸೆ ಮತ್ತು ಪ್ರಣಯದ ವಿಷಯಕ್ಕೆ ಸಂಬಂಧಿಸಿದ್ದು “ವಂ’ ಎಂಬ ಬೀಜ ಮಂತ್ರವನ್ನು ಧ್ಯಾನದಲ್ಲಿ ಪಠಿಸುವುದರ ಮೂಲಕ ನಿಗ್ರಹಿಸಬಹುದು. ಇಂದ್ರಿಯದಲ್ಲಿ ರುಚಿ, ಪಶ್ಚಿಮೋತ್ತಾಸನವನ್ನು ಯೋಗದಲ್ಲಿ ಹೊಂದಿರುತ್ತದೆ. 8-14 ಮತ್ತು 57-63 ವರ್ಷಗಳಲ್ಲಿ ಈ ಚಕ್ರದ ಪ್ರಭಾವವು ಇರುತ್ತದೆ.

ಮಣಿಪೂರ: ಸ್ವಾಧಿಷ್ಠಾನ ಚಕ್ರದ ಮೇಲ್ಭಾಗದ ನಾಭಿಯ ಕೇಂದ್ರ ಬಿಂದುವಿನಲ್ಲಿ ಹಳದಿ ಬಣ್ಣವನ್ನು ಹೊಂದಿರುವ ಈ ಚಕ್ರವನ್ನು ಅಗ್ನಿ ತತ್ವ ನಿಗ್ರಹಿಸುತ್ತದೆ. ಇಂದ್ರಿಯದಲ್ಲಿ ದೃಷ್ಟಿ, ಯೋಗದಲ್ಲಿ ಭುಜಂಗಾಸನ ತತ್ವಗಳನ್ನು ಹೊಂದಿರುವ ಈ ಚಕ್ರದ ಅರಿವು ಹಠಯೋಗಿಗಳಿಗೆ, ದೈವಜ್ಞರುಗಳಿಗೆ ಮತ್ತು ಕಾಲಜ್ಞಾನಿಗಳಿಗೆ ಹೆಚ್ಚಾಗಿರುತ್ತದೆ. ಧ್ಯಾನದಲ್ಲಿ ‘ರಂ’ ಎಂಬ ಬೀಜ ಮಂತ್ರವನ್ನು ಪಠಿಸುವುದರ ಮೂಲಕ ಅಸೂಯೆ, ಔದಾರ್ಯ, ಸಂತೋಷ ಮತ್ತು ದುರಾಸೆ ಎಂಬ ಗುಣಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಬಹುದು. 15-21 ಹಾಗೂ 64-70 ವರ್ಷಗಳಲ್ಲಿ ಇದರ ಪ್ರಭಾವವನ್ನು ಕಾಣಬಹುದು.

ಅನಾಹತ: ಈ ಚಕ್ರವು ಹೃದಯದ ಮೇಲ್ಭಾಗದ ಅಂಚಿನಲ್ಲಿ ಸ್ಥಿರಪಟ್ಟಿರುತ್ತದೆ. ವಾಯು ಈ ಚಕ್ರದ ಕೇಂದ್ರವಾಗಿದ್ದು, ಹಸಿರು ಬಣ್ಣವನ್ನು ಹೊಂದಿರುತ್ತದೆ. ಇಂದ್ರಿಯದಲ್ಲಿ ಸ್ಪರ್ಶ, ಯೋಗದಲ್ಲಿ ವೀರಭದ್ರಾಸನ ತತ್ವವನ್ನು ಹೊಂದಿರುವ ಈ ಚಕ್ರ ಹೃದಯ, ಶ್ವಾಸಕೋಶಗಳು ಮತ್ತು ನರಗಳ ಭೌತಿಕ ಮತ್ತು ರಾಸಾಯನಿಕ ಕ್ರಿಯೆಗಳನ್ನು ನಿಗ್ರಹಿಸುತ್ತದೆ. ಭಯ, ಪ್ರೀತಿ ಮತ್ತು ದ್ವೇಷ ಎಂಬ ಗುಣಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಧ್ಯಾನ ಸಂದರ್ಭದಲ್ಲಿ ‘ಯಂ’ ಬೀಜ ಮಂತ್ರವನ್ನು ಪಠಿಸಬೇಕು. ಇದರ ಪ್ರಭಾವವು 22-28 ಹಾಗೂ 71-77 ವಯಸ್ಸಿನಲ್ಲಿ ಅಗಾಧವಾಗಿರುತ್ತದೆ.

ವಿಶುದ್ಧಿ: ಗಂಟಲಿನ ಮಧ್ಯಭಾಗದಲ್ಲಿ ಸ್ಥಿರ ಪಟ್ಟಿರುವ ನೀಲಿ ಬಣ್ಣದ ಐದನೇ ವಿಶಿಷ್ಟ ಚಕ್ರ ಇದಾಗಿದ್ದು, ಪಂಚೇಂದ್ರಿಯಗಳ ನಭೋ ಪ್ರಭಾವವನ್ನು ದೇಹಕ್ಕೆ ಪ್ರಸರಿಸುವ ಕೇಂದ್ರ ಬಿಂದು. ಇಂದ್ರಿಯದಲ್ಲಿ ಕರ್ಣ, ಯೋಗದಲ್ಲಿ ಹಲಾಸನ ಮತ್ತು ಮತ್ಸ್ಯಾಸನ ತತ್ವವನ್ನು ಹೊಂದಿದ್ದು, ಸತ್ಯದ ಗುಣವನ್ನು ಹೊಂದಿರುವ ಈ ಚಕ್ರದ ಫಲವನ್ನು ಧ್ಯಾನದಲ್ಲಿ ‘ಹಂ’ ಎಂಬ ಬೀಜ ಮಂತ್ರವನ್ನು ಜಪಿಸುವ ಮೂಲಕ ಪಡೆಯಬಹುದು ಮತ್ತು ಪಂಚೇಂದ್ರಿಯಗಳ ಭೌತಿಕ ಕ್ರಿಯೆಗಳಾದ ಗಂಧ, ರಸ, ರೂಪ, ಸ್ಪರ್ಶ ಮತ್ತು ಶಬ್ದಗಳನ್ನು ನಿಯಂತ್ರಣದಲ್ಲಿ ಇಡಬಹುದು. 29-35 ಹಾಗೂ 78-84ನೇ ವಯಸ್ಸಿನಲ್ಲಿ ಈ ಚಕ್ರದ ಪ್ರಭಾವವನ್ನು ಕಾಣಬಹುದು.

ಆಜ್ಞಾ: ಬ್ರಹ್ಮಾಂಡನ ಭೌತಿಕ ಛಾಯಾರೂಪದ ಸಿದ್ಧಾಂತವನ್ನು ಮೂರನೇ ಕಣ್ಣಿನಿಂದ ನೋಡಲು ಸಹಕರಿಸುವ ವಿಶಿಷ್ಟ ಚಕ್ರ. ಇಂಡಿಗೊ ನೀಲಿ ಬಣ್ಣದಿಂದ ಕೂಡಿರುವ ಈ ಚಕ್ರವು ಹಣೆಯ ಭಾಗದಲ್ಲಿದ್ದು ಜ್ಞಾನ ಮತ್ತು ಕರ್ಮದ ಅರಿವನ್ನು ಪ್ರಕಟ ಮಾಡುತ್ತದೆ. ಧ್ಯಾನದಲ್ಲಿ ‘ಓಂ’ ಬೀಜ ಮಂತ್ರದ ಪಠಣೆಯನ್ನು ಮಾಡುವುದರ ಮೂಲಕ, ಇಂದ್ರಿಯದಲ್ಲಿ ಮೂರನೇ ಕಣ್ಣು ಮತ್ತು ಯೋಗದಲ್ಲಿ ನಟರಾಜಾಸನ ತತ್ವವನ್ನು ಹೊಂದಿರುವುದರಿಂದ 36-42 ಹಾಗೂ 85-91 ನೆಯ ವಯಸ್ಸಿನಲ್ಲಿ ಭಕ್ತಿ-ಯೋಗಗಳಿಂದ ಈ ಚಕ್ರದ ಫಲ ದೊರೆಯುತ್ತದೆ.

ಸಹಸ್ರಾರ: ಮುಕುಟ ಚಕ್ರ ಎಂದು ಕರೆಯಲ್ಪಡುವ ಈ ಚಕ್ರ ಶಿರಸ್ಸಿನ ಮೇಲ್ಭಾಗದ ಕೇಂದ್ರದಲ್ಲಿ, ಮೆದುಳಿನ ಸರಹದ್ದಿನಲ್ಲಿ ನೇರಳೆ (ವೈಲೆಟ್‌) ಬಣ್ಣವನ್ನು ಹೊಂದಿ ಸ್ಥಿರಪಟ್ಟಿರುತ್ತದೆ. ಆನಂದವನ್ನು ಪ್ರತಿನಿಧಿಸುವ ಈ ಚಕ್ರ ಜ್ಞಾನೋದಯದ ಸಂಕೇತವಾಗಿದೆ. ಧ್ಯಾನದಲ್ಲಿ “ಅಹೋಂ’ ಬೀಜ ಮಂತ್ರವನ್ನು ಪಠಣ ಮಾಡುವ ಮೂಲಕ, ಪಂಚ ಇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಯೋಗದಲ್ಲಿ ಬಕಾಸನ ಮತ್ತು ಶಿರಾಸನವನ್ನು ಮಾಡುವುದರ ಮೂಲಕ ಇದರ ಫಲವನ್ನು ಪಡೆಯಬಹುದು. 43-49 ಹಾಗೂ 92-98 ವಯಸ್ಸಿನಲ್ಲಿ ಸೂರ್ಯೋದಯ ಸಮಯದಲ್ಲಿ ಯೋಗ, ಧ್ಯಾನ, ಪೂಜೆಗಳು ಆಚರಿಸುವುದರಿಂದ ಇದರ ಫಲ ಪ್ರಾಪ್ತಿಯಾಗುತ್ತದೆ.

ಈ ಚಕ್ರಗಳ ಕಾರ್ಯಕ್ಷಮತೆ ಕಡಿಮೆಯಾದಾಗ ಮನುಷ್ಯನಲ್ಲಿ ಕೋಪ, ಪ್ರಜ್ಞಾ ಹೀನತೆ, ನಕಾರಾತ್ಮಕ ಚಿಂತನೆ, ದ್ವೇಷ, ಅಸೂಯೆ ಆತಂಕ, ಭಯ, ಜಡತ್ವ ಇನ್ನೂ ಮುಂತಾದ ಖಿನ್ನತೆಗಳು ಉಲ್ಬಣವಾಗುತ್ತದೆ. ಹಾಗಾಗಿ ಈ ಚಕ್ರಗಳನ್ನು ಸಕ್ರಿಯವಾಗಿ ಕೇಂದ್ರಿಕೃತ ಮಾಡಿಕೊಳ್ಳುವುದರ ಮೂಲಕ ಉತ್ತಮ ಆರೋಗ್ಯ ಮತ್ತು ಆನಂದದ ಜೀವನವನ್ನು ಜ್ಞಾನದಿಂದ ಕಂಡುಕೊಂಡು ಮುಕ್ತಿಯನ್ನು ಪಡೆದುಕೊಳ್ಳಬಹುದು.

-ಸುಶ್ಮಿತಾ ಎಸ್ ಆಚಾರ್ಯ, ಬೆಳಪು.

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!