Sunday, January 19, 2025
Sunday, January 19, 2025

ನಾಗಾರಾಧನೆ: ನಮ್ಮ ನಂಬಿಕೆ

ನಾಗಾರಾಧನೆ: ನಮ್ಮ ನಂಬಿಕೆ

Date:

ಡುವಣ ಅರಬ್ಬೀ ಕಡಲ ತಡಿಯಿಂದ, ಮೂಡಣದ ಸಹ್ಯಾದ್ರಿ ತಪ್ಪಲು, ಬಡಗಣ ಕಲ್ಯಾಣಪುರದಿಂದ, ತೆಂಕಣ ಕಾಸರಗೋಡಿನ ಚಂದ್ರಗಿರಿಯವರೆಗಿನ ಭೂಭಾಗವನ್ನು ತುಳುನಾಡು ಎಂದು ಹೆಸರಿಸುತ್ತಾರೆ. ಇದನ್ನು ನಾಗಲೋಕ ಸಹ ಎಂದೂ ಕರೆಯುತ್ತಿದ್ದರು ಎಂಬುದಕ್ಕೆ ಹರಿವಂಶ, ಸ್ಕಂದ ಪುರಾಣ, ಪ್ರಪಂಚ ಹೃದಯ, ನಾಗನಂದ ಎಂಬ ಗ್ರಂಥಗಳು, ಐತಿಹ್ಯಗಳು ಇಂಬು ನೀಡುತ್ತದೆ. ತುಳು ಎಂಬ ಹೆಸರು ಇಲ್ಲಿನ‌ ಮಣ್ಣಿನ ಗುಣದಿಂದ ಬಂದಿದೆ. ತುಳು ಎಂದರೆ ಆರ್ದ್ರ, ಮೆತ್ತಗಿನ ಎಂಬ ಅರ್ಥವಿದೆ. ಪರ್ವತದ ಸಾಲಿಂದ ಹುಟ್ಟಿಕೊಂಡ ನದಿಗಳು ಇನ್ನೊಂದು ಕಡೆಯ ಸಮುದ್ರಕ್ಕೆ ಸೇರುವ ದೃಶ್ಯ, ಮುಗಿಲೆತ್ತರಕ್ಕೆ ಬೆಳೆದು ನಿಂತ ದಟ್ಟ ಕಾಡು, ಈ ಕಾಡಿನಲ್ಲಿ ಸ್ವೇಚ್ಛೆಯಾಗಿ ಅಲೆದಾಡುವ ಪ್ರಾಣಿ-ಪಕ್ಷಿಗಳು, ನಿರ್ಭಯವಾಗಿ ಸಂಚರಿಪ ಸರೀಸೃಪಗಳು- ಹೀಗೆ ತುಳುನಾಡು ಹಿಂದೊಮ್ಮೆ ಇತ್ತೆಂದು ಹೇಳಲು ಈಗ ವಿಷಾದವಾಗುತ್ತಿದೆ.

ಭೂಮಿಯ ಮೇಲೆ ಸುಮಾರು 6000 ಜಾತಿಯ ಸರೀಸೃಪಗಳಿದ್ದು, ಬೆನ್ನೆಲುಬಿನ‌ ಆಧಾರದಿಂದ ಕಾಲುಗಳೇ‌‌ ಇಲ್ಲದೆ, ನೆಲಕ್ಕೆ ಉದರವನ್ನೊತ್ತಿ ಮುಂದಕ್ಕೆ ಚಲಿಸುವ ಜೀವಿಗಳನ್ನು “ಉರಗ”ಗಳೆಂದು ಹಾಗೂ ಸೂಕ್ಷ್ಮ ಕಾಲುಗಳ ಜೊತೆ ನೆಲಕ್ಕೆ‌ ಉದರವನ್ನೊತ್ತಿ ಮುಂದೆ‌ ಚಲಿಸುವ ಜೀವಿಗಳನ್ನು ಸರೀಸೃಪಗಳೆನ್ನುತ್ತಾರೆ.‌ ಆರಂಭ ಕಾಲದಲ್ಲಿ ಮನುಷ್ಯರು ಅಲೆಮಾರಿಗಳು ಆಗಿದ್ದು, ಆಲೋಚನಾ ಶಕ್ತಿ ಅಷ್ಟೊಂದು ಬೆಳೆದಿರಲಿಲ್ಲ. ಹಾಗಾಗಿಯೇ ಹೆಚ್ಚಾಗಿ ಕಾಡುಗಳೇ ಇವರ ವಾಸಸ್ಥಾನವಾಗಿತ್ತು. ಈ ಸಂದರ್ಭದಲ್ಲಿ ಸರೀಸೃಪಗಳು ಅದರಲ್ಲೂ “ಸಂಕಪಾಲ’ (ಶಂಖಪಾಲ, ಸಂಕಮಾಲೆ ಎಂದರೆ ಶಂಖಾಕೃತಿಯ ಹೆಡೆ ಇರುವ ಸರ್ಪ ಎಂದರ್ಥ). ಹಾವಿನ ಕಡಿತದಿಂದ ಹೆಚ್ಚಾಗಿ ಜೀವಿಗಳು ಹಾಗೂ ತನ್ನ ಸಹಚರರು ಸಾಯುವುದನ್ನು ಕಂಡ ಈತನಿಗೆ ಹಾವು ಎಂದರೆ ಮೃತ್ಯು ಎಂಬ ಕಲ್ಪನೆ ಬೆಳೆದಿರಬೇಕು. ಮುಂದೆ ಇದುವೇ ಹಾವಿನ‌ ಬಗ್ಗೆ ಭಯಭಕ್ತಿ ಮೂಡಲು ಮತ್ತು ಕಾಲ ಕ್ರಮೇಣವಾಗಿ ಸರ್ಪಗಳ ಬಗ್ಗೆ ಪುರಾಣ ಐತಿಹ್ಯಗಳು ಬೆಳೆಯಲು ಕಾರಣವಾಗಿರಬೇಕು.

ಶ್ರೀಮನ್ಮಹಾಭಾರತದಲ್ಲಿ ಕಶ್ಯಪರ ಇಬ್ಬರು ಪತ್ನಿಯರು ಕದ್ರು ಮತ್ತು ವಿನತೆಯರು. ಇವರಲ್ಲಿ ಕದ್ರುವಿಗೆ ಸಾವಿರ ನಾಗಗಳು ಜನಿಸುತ್ತವೆ ಎಂಬ ಉಲ್ಲೇಖವಿದೆ. ಹೀಗೆ ನಾಗಗಳ ಮೇಲೆ ದೈವಿಕ ಹಾಗೂ ಅಂಧಶ್ರದ್ಧೆ ಹೆಚ್ಚಾಗಿಯೇ ಇದೆ ಎಂದರೆ ತಪ್ಪಾಗಲಾರದು. ಆದುದರಿಂದಲೇ ಜಗತ್ತಿನ ಬಹುತೇಕ ಭಾಗಗಳಲ್ಲಿ, ಪ್ರಾಚೀನ‌ ನಾಗರೀಕತೆಗಳಲ್ಲೂ ಜನರು ನಾಗರ ಹಾವುಗಳನ್ನು ಮನುಷ್ಯನ ಹಿತೈಷಿಗಳು ಎಂದು ನಂಬಿ ಆರಾಧಿಸಿಕೊಂಡು ಬಂದಿರುವುದನ್ನು ಗಮನಿಸಬಹುದು. ನಾವು ಆರಾಧಿಸುವ ನಾಗರ ಹಾವಿನ್ನು ಕನ್ನಡದಲ್ಲಿ ಸರ್ಪ, ದೇವರಹಾವು, ಹೆಡೆ ಹಾವು ಎಂದು ಕರೆದರೆ ತುಳುವಿನಲ್ಲಿ ನಾಗೆ, ಸರ್ಪೆ, ಎಡ್ಡೆಂತಿನವು, ಉಚ್ಚು, ಮರಿ ಎಂದು ಕರೆಯುತ್ತಾರೆ. ವೈಜ್ಞಾನಿಕವಾಗಿ “ನಜಾ ನಜಾ” ಎನ್ನುತ್ತಾರೆ.

ಭಾರತದಲ್ಲಿ ಮೊತ್ತಮೊದಲಿಗೆ ನಾಗಾರಾಧನೆ ಆರಂಭಗೊಂಡದ್ದು ಪಂಜಾಬ್ ಮತ್ತು ಕಾಶ್ಮೀರದಲ್ಲಿ ಎಂಬುದು ಪ್ರತೀತಿ. ಪಂಜಾಬಿನಲ್ಲಿ ವರ್ಷದ ಸಪ್ಟೆಂಬರ್ ತಿಂಗಳಿನಲ್ಲಿ ‘ಮಿರಾಸನ್’ ಎಂಬ ಜಾತಿಯ ನಾಗಾರಾಧಕರು ಗೋಧಿ ಅಥವಾ ಜೋಳದ ಹಿಟ್ಟಿನಿಂದ ನಾಗನ ಮೂರ್ತಿಯನ್ನು ಮಾಡಿ ಅತ್ಯಂತ ವೈಭವದಿಂದ ನಾಗ ಪೂಜೆಯನ್ನು ಈಗಲೂ ನಡೆಸುತ್ತಾರೆ.
ಕಾಶ್ಮೀರ, ಸರೋವರಗಳ ನಾಡು ಎಂದು ಕರೆಯಲ್ಪಡುವುದರಿಂದ ಈ ಸರೋವರಗಳನ್ನು ನಾಗಗಳು ರಕ್ಷಣೆ ಮಾಡಿಕೊಂಡು ಬರುತ್ತಿವೆ ಎಂದು “ನೀಲಮತ” ಪುರಾಣವು ಉಲ್ಲೇಖಿಸುತ್ತದೆ.

ಬುದ್ಧನು ಹುಟ್ಟಿದಾಗ ಆತನನ್ನು ಸ್ತುತಿಸಲೆಂದು ನಂದ ಮತ್ತು ಉಪನಂದ ಎಂಬ ಹೆಸರಿನ ನಾಗರು ಬಂದರೆಂದು ಹಾಗೂ ಬುದ್ಧನ ಜಾತಕ ಕಥೆಗಳು ಸಹ ನಾಗನ ಬಗ್ಗೆ ಹಲವಾರು ವಿಷಯಗಳನ್ನು ತಿಳಿಸುತ್ತವೆ. ಆದ್ದರಿಂದ ಬೌದ್ಧ ಧರ್ಮದಲ್ಲಿಯೂ ನಾಗಾರಾಧನೆಯ ವಿಚಾರಗಳಿವೆ ಎಂಬುದು ಸ್ಪಷ್ಟವಾಗುತ್ತದೆ. ಜೈನ ಧರ್ಮದಲ್ಲಿ ಕೂಡ ನಾಗಾರಾಧನೆಗೆ ಅವಕಾಶವಿದೆ. ಜೈನರ 24 ತೀರ್ಥಂಕರರ ಮೂರ್ತಿಗಳ ಪಕ್ಕದಲ್ಲಿ ಅವರನ್ನು ಗುರುತಿಸಲು ನಾಗಯಕ್ಷರ ಮೂರ್ತಿಗಳನ್ನು ಸ್ಥಾಪಿಸಲಾಗಿದೆ.

ಬಂಗಾಳದಲ್ಲಿ ಕೂಡ ಮಾನಸ (ಪಾರ್ವತಿ ದೇವಿಯ ಮಗಳು) ಎಂಬ ನಾಗದೇವತೆಯ ಆರಾಧನೆ ನಡೆಯುತ್ತದೆ. ಕೇರಳದಲ್ಲಿ ನಾಗಾರಾಧನ ಪದ್ಧತಿ ಬಹಳ ಪ್ರಾಚೀನ ಕಾಲದಿಂದಲೂ ಇತ್ತು. ತುಳುನಾಡಿನಲ್ಲಿ ಭೂತಕೋಲ ನಡೆಯುವಂತೆ ಕೇರಳದಲ್ಲಿ ನಾಗಕೋಲ ನಡೆಯುತ್ತದೆ. ಇದಕ್ಕೆ ನಾಗಪಾತ್ರಿಗಳು ಕೇರಳದ ಮೂಲ ನಿವಾಸಿಗಳಾದ ‘ಪುಳ್ಳುವರ್’ ಎಂಬ ಜನಾಂಗ. ತುಳುನಾಡಿನ ನಾಗ ಮಂಡಲದಂತೆ ಇಲ್ಲಿ ಸರ್ಪತುಳ್ಳಲ್ ಆಚರಣೆ ನಡೆಯುತ್ತದೆ. ತಮಿಳುನಾಡು, ಆಂಧ್ರಪ್ರದೇಶ ಹೀಗೆ ಭಾರತದ ಅನೇಕ ರಾಜ್ಯಗಳಲ್ಲಿ ವಿವಿಧ ರೀತಿಯಲ್ಲಿ ನಾಗನ ಆರಾಧನೆ ನಡೆಯುತ್ತಾ ಬಂದಿದೆ.

ವಿದೇಶಗಳಲ್ಲಿಯೂ ನಾಗನ ಆರಾಧನೆಯನ್ನು ನೋಡುಬಹುದು. ಮೆಕ್ಸಿಕೋದ ಪುರಾಣವು ಉಲ್ಲೇಖಿಸುವಂತೆ ಸಿಹೂಕೊಹಂಟೆ ಎಂಬ ನಾಗದೇವಿ ಒಂದು ಗಂಡು ಮತ್ತು ಹೆಣ್ಣು ಮಗುವಿಗೆ ಜನ್ಮನೀಡುತ್ತಾಳೆ. ಮುಂದೆ ಇವರಿಂದಲೇ ಮನುಕುಲ ಸೃಷ್ಟಿಯಾಯಿತು ಎನ್ನಲಾಗುತ್ತದೆ. ಪ್ರಾಚೀನ ಗ್ರೀಕರ ಶಿಲ್ಪಕಲೆಗಳಲ್ಲಿ, ಗ್ರೀಸ್ ವೀರರ ಚಿತ್ರದ ಜೊತೆ ನಾಗನ ಅಥವಾ ನಾಗನ ಹೆಡೆಯ ಚಿತ್ರಗಳು ಕಂಡು ಬರುತ್ತವೆ. ಈಜಿಪ್ಟಿನ ಸೂರ್ಯದೇವ ಹೆಲಿಯಸನು ನಾಗದೇವಿ ಓಪ್ಸಳನ್ನು ಮದುವೆಯಾದ ಎಂಬುದನ್ನು ಇಲ್ಲಿನ ಪುರಾಣವು ತಿಳಿಸುತ್ತದೆ. ರೋಮ್ ದೇಶದಲ್ಲಿನ ಎಪಿರಿಯಸ್ ಎಂಬ ಗುಹಾ ದೇವಾಲಯದಲ್ಲಿ ಮಹಿಳೆಯರು ನಾಗ ಪೂಜೆ ನಡೆಸುತ್ತಿದ್ದುದ್ದರ ಬಗ್ಗೆ ಉಲ್ಲೇಖವಿದೆ. ಆಫ್ರಿಕಾದ ಜನರು ಜಗತ್ತಿನ ಮೂಲಪುರುಷ ನಾಗನೇ ಆಗಿದ್ದಾನೆಂದು ಮತ್ತು ಇಡೀ ಭೂಮಂಡಲವನ್ನು ಸುತ್ತು ಹಾಕಿ ಯಾವ ವಸ್ತುವೂ ಕೆಳಗೆ ಬೀಳದಂತೆ ಹಿಡಿದಿಟ್ಟುಕೊಂಡಿದ್ದಾನೆಂದು ನಂಬುತ್ತಾರೆ.

ತುಳುನಾಡಿನ ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲಿನ ವಾತಾವರಣದಲ್ಲಿ ಆರ್ದ್ರತೆ ಮತ್ತು ದಟ್ಟವಾದ ಕಾಡು ಇರುವುದರಿಂದ ಪ್ರಾಚೀನ ಕಾಲದಿಂದಲೂ ಈ ಪ್ರದೇಶ ಸರೀಸೃಪಗಳ ಆವಾಸಸ್ಥಾನವಾಗಿತ್ತು. ಹಾಗಾಗಿಯೇ ನಮ್ಮ ಪೂರ್ವಜರು ತಾವು ನಂಬುವ ನಾಗನಿಗೆ ಕಾಡಿನ ತಂಪು ಜಾಗದಲ್ಲಿ ಒಂದು ಕಲ್ಲನ್ನು ಹಾಕಿ ಆರಾಧಿಸಿಕೊಂಡು ಬಂದರು‌. ಮುಂದೆ ಇಂತಹ ಸ್ಥಳಗಳು ಬನ, ವನ, ಹಾಡಿ, ನಾಗಬನ, ಕಾಪು, ದೇವರ ಕಾಡು/ಹಾಡಿಗಳೆಂದು ಕರೆಯಲ್ಪಟ್ಟವು. ಮಹಾಭಾರತ, ರಾಮಾಯಣ ಮಹಾಕಾವ್ಯಗಳಲ್ಲಿಯೂ ಸಹ ಖಾಂಡವ ವನ, ಅಶೋಕವನ, ಅಂಬಿಕಾವನ, ಕಾಮ್ಯಕಾವನ ಎಂಬ ವನಗಳ ಉಲ್ಲೇಖಗಳು ಬರುವುದನ್ನು ಕಾಣಬಹುದು.

ಒಂದು ಲೆಕ್ಕಚಾರದ ಪ್ರಕಾರ ತುಳುನಾಡಿನಲ್ಲಿ ಸರಿಸುಮಾರು 60000 ನಾಗಬನಗಳು ಇದ್ದವೆಂದು ಹೇಳಲಾಗುತ್ತದೆ. ಇಲ್ಲಿನ ಪ್ರತಿ ಗ್ರಾಮ-ಗ್ರಾಮದಲ್ಲಿ ನಾಗಬನಗಳನ್ನು ಸಂರಕ್ಷಿಸಿವುದರ ಮೂಲಕ ನಾಗನ ರಕ್ಷಣೆಗಾಗಿ ನಮ್ಮ ಪೂರ್ವಜರು ಕೈಗೊಂಡ ಕ್ರಮ ಶ್ಲಾಘನೀಯ. ಇದನ್ನು ಸೂಕ್ಷ್ಮವಾಗಿ ಅರ್ಥೈಸಿಕೊಂಡರೆ ನಮ್ಮ ಪೂರ್ವಜರ ವೈಚಾರಿಕತೆ ತಿಳಿಯಲು ಸಾಧ್ಯವಾಗುತ್ತದೆ. ಹೆಚ್ಚಾಗಿ ಬನಗಳಲ್ಲಿ ಅಶ್ವತ್ಥ, ರೆಂಜೆ, ಕೇದಗೆ, ಪಾಲೆ, ಅತ್ತಿ, ಗಂಧ, ಸುರಗಿ, ಸರಳಿ ಮರಗಳಿದ್ದು ಇವುಗಳ ಬುಡದಲ್ಲಿ ಒಂದು ಕಲ್ಲನ್ನು ಸ್ಥಾಪಿಸಿ ನಾಗ ಎಂದು ಪೂಜಿಸಲಾಯಿತು. ಮರದ ಸುತ್ತಲೂ ಬೇಲಿಯನ್ನು ಹಾಕುವುದರ ಜೊತೆಗೆ ನಾಗನ ರಕ್ಷಣೆಯನ್ನು ಮಾಡಿಕೊಂಡು ಬಂದಿರುತ್ತಾರೆ. ಕೆಲವೊಂದು ಸಂದರ್ಭದಲ್ಲಿ ಬರಿಯ ಹುತ್ತಗಳಿರುವ ಜಾಗವನ್ನು ಕೂಡ ಬನಗಳನ್ನಾಗಿ ನಿರ್ಮಾಣ ಮಾಡುವ ಪದ್ಧತಿಯೂ ಇದೆ. ಬನಗಳು ಹೆಚ್ಚಾಗಿ ನದಿ, ಹಳ್ಳಗಳ ದಂಡೆಗಳಲ್ಲಿ, ಗದ್ದೆಯ ಬದುಗಳಲ್ಲಿರುವುದರಿಂದ ನಾಗ-ವೃಕ್ಷ-ಜಲ ಇವುಗಳ ಸಂಬಂಧ ಬಹಳ ಪ್ರಾಚೀನವಾದುದು ಎಂಬುದನ್ನು ಗಮನಿಸಬಹುದು. ಮುಂದೆ ಇಲ್ಲಿ ಇನ್ನಷ್ಟು ಜಾತಿಯ ಮರಗಳು, ಸಸ್ಯವರ್ಗಗಳು ಬೆಳೆಯುತ್ತಾ ಆ ಪ್ರದೇಶವು ಬನ ಎಂದೆನಿಸಿಕೊಳ್ಳುತ್ತದೆ. ಮುಂದೆ ವರ್ಷಕ್ಕೊಮ್ಮೆ ಒಂದು ನಿರ್ದಿಷ್ಟ ದಿನದಂದು ಇಂತಹ ಬನಗಳ ಒಳಗೆ ಪ್ರವೇಶಿಸಲು ತಡೆಯೊಡ್ಡುವ ಪೊದೆ ಗಂಟಿಗಳನ್ನು ಕಡಿದು ಎಲ್ಲರಿಗೂ ಇದರೊಳಗೆ ಪ್ರವೇಶಿಸಲು ದಾರಿ ಮಾಡಲಾಗುತ್ತದೆ. ಆ ಸಂದರ್ಭದಲ್ಲಿ ಇಲ್ಲಿ ಪ್ರಾಕೃತಿಕ ನಾಗಬನದ ಪೂಜೆ ನಡೆಯುತ್ತದೆ. ಹೀಗೆ ನಮ್ಮ ಪ್ರಾಚೀನರು ನಿಸರ್ಗ ಆರಾಧನೆಯ ಜೊತೆಗೆ ಜೀವಿಗಳ ಸಂರಕ್ಷಣೆಯನ್ನು ಕಾಪಾಡುತ್ತ ಬಂದಿರುತ್ತಾರೆ.

ರಾಜಮನೆತನದ ಅವಧಿಯಲ್ಲಿ ನಾಗ ಶಿಲ್ಪಗಳನ್ನು ಮಾಡುವುದರ ಮೂಲಕ ನಾಗನ ಆರಾಧನೆಯನ್ನು ಮೊದಲಿಗಿಂತಲೂ ಶಾಸ್ತ್ರೋಕ್ತವಾಗಿ ಮಾಡಲು ಆರಂಭಿಸಿದರು. ಇದಕ್ಕೆ ಸಂಬಂಧಿಸಿದಂತೆ ತುಳುನಾಡಿನ ಅನೇಕ ನೆಲೆಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಪ್ರಾಚೀನ ನಾಗಶಿಲ್ಪಗಳು ಪತ್ತೆಯಾಗಿವೆ‌.

ಆದರೆ ಪ್ರಸ್ತುತ ನಾವು ಮಾಡುತ್ತಿರುವುದಾದರೂ ಏನು? ಅಭಿವೃದ್ಧಿ, ನಗರೀಕರಣಗಳ ನೆಪವೊಡ್ಡಿ ಕಾಡುಗಳ ನಾಶ ಮಾಡಿ, ನಾಗಬನಗಳನ್ನು ಕಾಂಕ್ರೀಟಿಕರಣಗೊಳಿಸುವ ಮೂಲಕ, ಪೂರ್ವಜರ ಚಿಂತನೆ, ನಂಬಿಕೆಗಳನ್ನು ಮೌಢ್ಯ ಎಂದು ಬದಿಗೊತ್ತಿ, ಅಜ್ಞಾನವನ್ನು‌ ಮೈಗಂಟಿಸಿಕೊಂಡು ನಮ್ಮದೇ ಆಡಂಭರದ ನಾಗರಾಧನೆಯನ್ನು ಮಾಡಿಕೊಳ್ಳುವ ಮೂಲಕ ಪರಿಸರವನ್ನು ಅವನತಿಯತ್ತ ತಳ್ಳುತ್ತಿದ್ದೇವೆ ಎಂದೆನಿಸುವುದಿಲ್ಲವೇ?

ನಾಗಬನವೆಂದರೆ ಇಲ್ಲಿ ಸುಮಾರು 108 ಜಾತಿಯ ವೃಕ್ಷ ಪ್ರಬೇಧಗಳಿರಬೇಕೆಂಬ ಮಾತಿದೆ. ಇಂತಹ ಬನಗಳಲ್ಲಿ ನಮ್ಮ ಜೀವವನ್ನು ಉಳಿಸುವ ಗಿಡಮೂಲಿಕೆಯ ಸಸ್ಯಸಂಪತ್ತುಗಳು, ನಾನಾ ಜಾತಿಯ ಪ್ರಾಣಿ-ಪಕ್ಷಿಗಳು, ಸರೀಸೃಪಗಳು ಸ್ವೇಚ್ಛೆಯಿಂದ ಬದುಕುತ್ತಿರುತ್ತವೆ. ಆದರೆ ನಮ್ಮ ಮಹತ್ವಾಕಾಂಕ್ಷೆ, ದುರಾಸೆಯ ಪರಿಣಾಮವಾಗಿ ಈಗಾಗಲೇ ಪ್ರಕೃತಿಯನ್ನು ನಾಶಗೊಳಿಸಿದ್ದೇವೆ. ಅದರ ಫಲವನ್ನು ಅನುಭವಿಸುತ್ತಲೂ ಬರುತ್ತಿದ್ದೇವೆ. ಆದ್ದರಿಂದ ಇನ್ನು ಮುಂದಾದರೂ ಅಳಿದುಳಿದ ನಿಸರ್ಗದತ್ತ ಬನಗಳನ್ನು‌ ಸಂರಕ್ಷಿಸುತ್ತ ಜೀವಸಂಕುಲ ಹಾಗೂ ನಮ್ಮದೇ ಮುಂದಿನ ಪೀಳಿಗೆಯ ಉಳಿವಿಗೆ ಆರೋಗ್ಯಪೂರ್ಣ ನಿರ್ಧಾರ ಕೈಗೊಳ್ಳುವ ಅಗತ್ಯವಿದೆ.

ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!