Tuesday, January 21, 2025
Tuesday, January 21, 2025

ಐತಿಹಾಸಿಕ ಕ್ಷೇತ್ರ- ಪೆರ್ಣಂಕಿಲ‌

ಐತಿಹಾಸಿಕ ಕ್ಷೇತ್ರ- ಪೆರ್ಣಂಕಿಲ‌

Date:

ಡುಪಿ ಜಿಲ್ಲೆಯಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಪೆರಣಂಕಿಲ ಅಥವಾ ‌ಪೆರ್ಣಂಕಿಲ ಗ್ರಾಮವು ಶ್ರೀ‌ ಮಹಾಲಿಂಗೇಶ್ವರ ಹಾಗೂ ಶ್ರೀ ಸ್ವಯಂಭೂ ಗಣಪತಿ‌ ದೇವಾಲಯಗಳಿರುವ ಇತಿಹಾಸ ಪ್ರಸಿದ್ಧ ಸ್ಥಳವಾಗಿದೆ‌.

ಸ್ಥಳ ಐತಿಹ್ಯದ ಪ್ರಕಾರ, ಪೆರ್ಣ ಎಂಬ ವ್ಯಕ್ತಿಯು ಗದ್ದೆಯನ್ನು‌ ಉಳುಮೆ ಮಾಡುವಾಗ, ನೇಗಿಲಿಗೆ ಶಿರೋಭಾಗವಷ್ಟೇ ಇರುವ ಗಣೇಶ ವಿಗ್ರಹ ಸಿಕ್ಕಿಕೊಂಡಿತು. ಆ ರಾತ್ರಿ ಪೆರ್ಣನಿಗೆ ಸ್ವಪ್ನದಲ್ಲಿ ಅಗೋಚರ ಶಕ್ತಿಯೊಂದು ನೀನು ಇಲ್ಲಿಯೇ ದೇವರಿಗೆ ಗುಡಿಯನ್ನು ಕಟ್ಟಬೇಕೆಂದು ತಿಳಿಸಿದಾಗ ‌ಶ್ರೀ ಮಹಾಲಿಂಗೇಶ್ವರ ದೇವಾಲಯದ ಬದಿಯಲ್ಲಿಯೇ ಪೆರ್ಣನು ಗುಡಿ ನಿರ್ಮಾಣ ‌ಮಾಡಿದನು. ಅಂಕಿಲ ಎಂದರೆ “ನೇಗಿಲು” ಎಂಬ ಅರ್ಥ ಬರುವುದರಿಂದ, ಪೆರ್ಣನು ಕಟ್ಟಿಸಿದ ಈ ಕ್ಷೇತ್ರವು “ಪೆರ್ಣಂಕಿಲ” ಎಂದು ಪ್ರಸಿದ್ಧಿಯನ್ನು ಪಡೆಯಿತು.

ಶಾಸನ: ಶ್ರೀ ಮಹಾಲಿಂಗೇಶ್ವರ ದೇವಾಲಯದ‌ ನಂದಿಮಂಟಪದ ಬಲಭಾಗದಲ್ಲಿ ಆಳುಪ ದೊರೆ ಒಂದನೇ ವೀರ ಪಾಂಡ್ಯದೇವನ ಮಡದಿಯಾದ ಬಲ್ಲಮಹಾದೇವಿಯ (ಸಾ.ಶ 1275-1292) ಶಾಸನವಿದೆ.‌ ಕಣ‌ ಶಿಲೆಯ (ಗ್ರಾನೈಟ್ ಶಿಲೆ) ಈ ಶಾಸನವು 29 ಸಾಲುಗಳನ್ನು ಒಳಗೊಂಡಿದ್ದು, 13ನೇ ಶತಮಾನದ ‌ಕನ್ನಡ‌ ಲಿಪಿ ಮತ್ತು ಭಾಷೆಯಲ್ಲಿದೆ. ಶಾಸನದ ಹೆಚ್ಚಿನ ಅಕ್ಷರಗಳು ತೃಟಿತಗೊಂಡಿದ್ದು, ಉಳಿದ ಸಾಲಿನ ಮಾಹಿತಿಯ ಪ್ರಕಾರ ಬಾರಕೂರಿನ ಹಿರಿಯ ಅರಮನೆಯಲ್ಲಿ ಬಲ್ಲಮಹಾದೇವಿ ಆಳ್ವಿಕೆ ಮಾಡುತ್ತಿರುವಾಗ ಶ್ರೀ ಕೋಟಿಶ್ವರ ದೇವರ ಸಮ್ಮುಖದಲ್ಲಿ ‌ಇಲ್ಲಿಯ ದೇವರಿಗೆ ಅಕ್ಕಿ ಹಾಗೂ 23 ಗದ್ಯಾಣಗಳನ್ನು (ಚಿನ್ನದ ನಾಣ್ಯ) ದಾನ ಕೊಟ್ಟ ‌ಉಲ್ಲೇಖವನ್ನು ಈ ಶಾಸನವು ತಿಳಿಸುತ್ತದೆ.

ದೇವಾಲಯದ ವಾಸ್ತುಶೈಲಿ: ಒಂದೇ ಪ್ರಾಕಾರದಲ್ಲಿರುವ ಶ್ರೀ‌ ಮಹಾಲಿಂಗೇಶ್ವರ ಹಾಗೂ ಶ್ರೀ ಸ್ವಯಂಭೂ ಗಣಪತಿ‌ ದೇವಾಲಯಗಳ ವಾಸ್ತುಶೈಲಿಯ ಆಧಾರದ ಮೇಲೆ ಈ ದೇವಾಲಯಗಳು ಸುಮಾರು 11-12ನೆ ಶತಮಾನದ ವೇಳೆಗೆ ನಿರ್ಮಾಣವಾಗಿರಬಹುದೆಂದು ಹೇಳಬಹುದು.

ಪೂರ್ವಾಭಿಮುಖವಾಗಿ ‌ನಿರ್ಮಾಣವಾಗಿರುವ ಶ್ರೀ ಮಹಾಲಿಂಗೇಶ್ವರ ದೇವಾಲಯವು ಗರ್ಭಗೃಹ, ತೀರ್ಥಮಂಟಪ, ಬಲಿಪೀಠ, ಹಾಗೂ ಧ್ವಜಸ್ತಂಭವನ್ನು ಹೊಂದಿದೆ‌. ಚೌಕಾಕಾರದಲ್ಲಿರುವ ಗರ್ಭಗೃಹದಲ್ಲಿ ಶಿವನನ್ನು ಲಿಂಗ ರೂಪದಲ್ಲಿ ಆರಾಧನೆ‌ ಮಾಡಲಾಗುತ್ತಿದ್ದು ತೀರ್ಥಮಂಟಪದಲ್ಲಿ ಶಿವಲಿಂಗಕ್ಕೆ ‌ಅಭಿಮುಖ‌ವಾಗಿರುವ ನಂದಿಯನ್ನು ಕಾಣಬಹುದು. (ಇದು ನಂತರದ ಕಾಲದಲ್ಲಿ ಕೆತ್ತಲ್ಪಟ್ಟ ಶಿಲ್ಪವಾಗಿದೆ).

ದೇವಾಲಯ ‌ಹೊರ ಭಾಗದಲ್ಲಿ ಧ್ವಜಸ್ತಂಭ ಹಾಗೂ ಪುಷ್ಕರಣಿ ಇದೆ. ಶ್ರೀ ಉದ್ಭವ ಗಣಪತಿ ‌ದೇವಾಲಯವು ಮಹಾಲಿಂಗೇಶ್ವರ ‌ದೇವಾಲಯದ ಬಲ ಬದಿಯಲ್ಲಿ ಪಶ್ಚಿಮಾಭಿಮುಖವಾಗಿ ನಿರ್ಮಾಣಗೊಂಡಿದೆ.‌ ಮೂಲತಃ ಈ ದೇವಾಲಯ ಗರ್ಭಗೃಹವನ್ನು ಮಾತ್ರ ಹೊಂದಿದ್ದು, ಇತ್ತೀಚಿಗೆ ಇದರ ಮುಂಭಾಗದಲ್ಲಿ ಹೊಸ ಸೇರ್ಪಡೆಯನ್ನು ಮಾಡಲಾಗಿದೆ. ಈ‌ ಎರಡೂ ದೇವಾಲಯಗಳನ್ನು ಗ್ರಾನೈಟ್ (ಕಣ‌ ಶಿಲೆ) ‌ಶಿಲೆಯಿಂದ ನಿರ್ಮಾಣ‌‌ ಮಾಡಲಾಗಿದ್ದು, ಮಲೆನಾಡು ‌ಶೈಲಿಯ ಮಾಡಿನ ರಚನೆಯನ್ನು ಒಳಗೊಂಡಿರುತ್ತದೆ.

ದೇವಾಲಯದ ವಿಶೇಷತೆ: ಪೆರ್ಣಂಕಿಲ ಕ್ಷೇತ್ರದಲ್ಲಿ ಗಣಪತಿಗೆ ಸಲ್ಲಿಸುವ ಅಪ್ಪಸೇವೆಯು ಬಹಳ ಜನಪ್ರಿಯ ಸೇವೆಯಾಗಿದ್ದು, ಕೊಪ್ಪರಿಗೆ ಅಪ್ಪ ಸೇವೆಯು ಗಣಪತಿಗೆ ಇಷ್ಟವಾದ ಹರಕೆಯಾಗಿದೆ. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಈ ಹರಕೆಯನ್ನು ಹೇಳಿಕೊಳ್ಳುತ್ತಾರೆ. ಹಾಗೆಯೇ ಲಿಂಗ ಸ್ವರೂಪಿಯಾಗಿರುವ ಈಶ್ವರನಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ ಅತ್ಯಂತ ಪ್ರಿಯವಾದ ಸೇವಗಳಾಗಿವೆ. ಪ್ರತಿ ಸಂಕ್ರಮಣದಂದು ಹಾಗೆಯೇ ದೀಪಾವಳಿ, ಗಣೇಶ ಚತುರ್ಥಿ, ಶಿವರಾತ್ರಿ ಮೊದಲಾದ ಪರ್ವಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತದೆ. ಈ ದೇವಸ್ಥಾನಗಳ ಆಡಳಿತ ವ್ಯವಸ್ಥೆಯನ್ನು ಉಡುಪಿ ಅಷ್ಟಮಠಗಳ್ಲಲಿ ಒಂದಾದ ಪೇಜಾವರ ಮಠವು ನೋಡಿಕೊಳ್ಳುತ್ತಿದೆ.

ಬರಹ: ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ
(ಪುರಾತತ್ವ ‌ಮತ್ತು‌‌ ಇತಿಹಾಸ ಸಂಶೋಧನಾರ್ಥಿ)

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಯಾ: ಗ್ರಾಮೀಣ ಕ್ರೀಡಾಕೂಟ

ಕಾರ್ಕಳ, ಜ.20: ಭಾರತ ಸರಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ, ಮೈ...

ಕೆ.ಎಂ.ಸಿ ಮಣಿಪಾಲ: ಕಾರ್ಪೊರೇಟ್ ಕ್ರಿಕೆಟ್ ಲೀಗ್ 2025 ಸಂಪನ್ನ

ಮಣಿಪಾಲ, ಜ.20: ಕಾರ್ಪೊರೇಟ್ ಸಂಸ್ಥೆಗಳು, ಬ್ಯಾಂಕ್‌ಗಳು, ವೈದ್ಯಕೀಯ ಸಂಘಗಳು, ಆಸ್ಪತ್ರೆಗಳು ಮತ್ತು...

‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಚುನಾವಣಾ ಆಯೋಗವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಜ.20: ಜನರ ಶಕ್ತಿಯನ್ನು ಬಲಪಡಿಸಲು ತಂತ್ರಜ್ಞಾನದ ಶಕ್ತಿಯನ್ನು ಚುನಾವಣಾ ಆಯೋಗ...

ವೈವಾಹಿಕ ಜೀವನಕ್ಕೆ ಕಾಲಿಟ್ಟ ನೀರಜ್ ಚೋಪ್ರಾ

ಯು.ಬಿ.ಎನ್.ಡಿ., ಜ.20: ಪ್ರಸಿದ್ಧ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ವೈವಾಹಿಕ ಜೀವನಕ್ಕೆ...
error: Content is protected !!